ಕರುಣಾ ತೋರು ಮಳೆರಾಯ...
ಕತ್ತಲು ಕವಿದೈತಿ
ಉರಿದೀಪ ಆರೈತಿ
ಮುಗಿಲಾಗ ಮಾಡುಗಳು
ಭರಗುಟ್ಟಿ ಗುಡುಗಿ
ಸುಳಿಗಾಳಿ ಹುಚ್ಚೆದ್ದು
ಯಾಕೋ ಕುಣದೈತಿ...
ಮುಗಿಲಗಲ ಮೈ ಚಾಚಿ
ಭೂತಾಯಿಗೆ ನಾಲಿಗಿ ಚಾಚಿ
ಕೋಲ್ಮಿಂಚು ಕೆಣಕೈತಿ
ಸಿಡಿಲು ಸಿಡಿಲಾಗಿ
ಭರಗುಟ್ಟಿ ಮಳಿ ಸುರದೈತಿ
ಬಡವನ ಗುಡಿಸಲಿಗೆ ತಾಗಿ…
ಹುಚ್ಚು ಗಾಳಿಗೆ
ಸಿಕ್ಕು ಗುಡಿಸಲ ಗರಿ ಕಿತ್ತು
ಹಾರಾಡ್ಯಾವು ದಿಕ್ಕುತಪ್ಪಿ
ಗಾಳಿಪಟದಾಂಗ
ಬೀಳೋ ಮಳಿಯೆಲ್ಲಾ
ಗುಡಿಸಲೊಳಗಾ ಸುರಿದೈತಿ…
ಮಳಿರಾಯ ನಿನಗೆದಿರಿ
ನನ್ನವ್ವ ಕುಂತಾಳೆ
ಮೂಲಿಗೆ ಹಾಸಿದ ಗೋಣಿಚೀಲದ
ಮ್ಯಾಗ ದುಂಡಾಗ
ನನ್ನ ಅಸುಮಕ್ಕಳು
ಹೆದರಿ ಸೇರ್ಯಾವು ಅಕಿ ಮಡಿಲ…
ಗುಡಿಸಲ ಮುಂದೊಂದು
ಕಬ್ಬಿಣದ ತುಂಡೆಸೆದು
ನನ್ನ ಮುಂಗೈಯನ್ನಿಡಿದು
ದುಂಡಾಗ ಕುಂತಾಳೋ
ನನ್ನ ಮಡದಿಯ ದುಗುಡವ
ನಾ ಯಾರಿಗೇಳಲಿ…
ಮನಿ ಮುಂದಲ ಬೈಲಾಗ
ಕಟ್ಟೀದ ದನಗಳು
ಮುದುಡಿ ನಿಂತಾವು
ಗುಡುಗು ಸಿಡಿಲಿಗೆ ಹೆದರಿ
ಬಾಯಿಲ್ಲದ ದನಗಳ
ಕಣ್ಣೀರು ಕಾಣಲೊಲ್ಲದು ಸುರಿಯ ಮಳಿಯಾಗ…
ಮೆಲ್ಲಕ ಬೀಸು ಗಾಳಿ,
ಗದ್ದಲ ಮಾಡಬ್ಯಾಡ ಗುಡುಗೇ
ಸಿಡಿಬ್ಯಾಡ ಸಿಡಿಲೇ
ಸತ್ತಾವು ನನ್ನಾಸ್ತಿ ದನಗೋಳು
ಕೈ ಬಿಟ್ಟಾರು ನನ್ನ
ನಂಬಿದ ಜೀವಗೋಳು…
ಕೈ ಮುಗಿದು ಕಾಯಿ
ಹೊಡಿತೀನಿ ಮಳಿರಾಯ
ಭೂತಾಯಿ ಮ್ಯಾಗ ಆಣಿ
ಮಾಡೇಳತೀನೋ ನಾ ಬಡವ
ಕರುಣಾ ತೋರೋ ದೊರಿಯೇ
ನೀನಾರ ನನಮ್ಯಾಗ …
ಶಿವು ಮೋರಿಗೇರಿ


