ಇಂದು ಅದೇನೋ ಅಪ್ಪನ ದಿನವಂತೆ.
ಅವನ ವಯಸ್ಸು ಎಂಟರಿಂದ ಹನ್ನೆರೆಡು. ಹೆಸರು ಕೇಳಿದರೆ ನಕ್ಕು
ತನ್ನ ಹೆಸರು ಹೇಳುತಿದ್ದ. ತುಂಬಾ ಅಂತರ್ಮುಖಿನಾ ಅನ್ನೋ ಡೌಟು ಬರೋವಷ್ಟು ಏಕಾಂತವನ್ನು ಬಯಸುತ್ತಿದ್ದೋನು.
ಹಂಗಾಗಿ ಅವನಿಗೆ ಸ್ನೇಹಿತರ ಸಂಖ್ಯೆ ಅಷ್ಟಕಷ್ಟೆ. ಅವನು ಬಿಡುವಿನ ವೇಳೆಯಲ್ಲಿ ಮೆಟ್ಟಿಲುಗಳ ಮೇಲೆ
ಒಬ್ಬನೇ ಕುಳಿತು, ಗೇಟಿನಾಚೆಯ ರಸ್ತೆಯನ್ನೇ ದಿಟ್ಟಿಸುತ್ತಾ ಆ ರಸ್ತೆಯಲ್ಲಿ ಹಾಯ್ದು ಹೋಗುತ್ತಿದ್ದ
ವಾಹನಗಳನ್ನು, ಪಾದಾಚಾರಿಗಳನ್ನೂ, ವ್ಯಾಪಾರಿಗಳನ್ನೂ, ವೃದ್ಧರನ್ನೂ, ಹೀಗೆ ಎಲ್ಲರನ್ನು ನೋಡುತ್ತಾ,
ಇಲ್ಲಿರುವ ಯಾರಿಗೂ ಹೇಳದೇ ಒಂದೇ ಒಂದು ದಿನವಾದ್ರೂ ನಾನು ಈ ಗೇಟನ್ನು ದಾಟಿ ಅದರಾಚೆಯ ಜಗತ್ತಿನೊಳಗೆ
ಕಳೆದುಬಿಡಬೇಕೆಂದು ಲೆಕ್ಕಿಸುತ್ತಿದ್ದ. ಅಂತೆಯೇ ಅದೊಂದು ದಿನ ಗೇಟನ್ನು ಜಿಗಿದಾಚೆ. ಒಂದು ದೊಡ್ಡ
ಗೇಟನ್ನು ದಾಟಿದ್ದಾಗಿದೆ ಮುಂದೇನು ? ಊಹ್ಞೂಂ ಅವನಿಗೂ ಗೊತ್ತಿಲ್ಲ. ಸರಿ, ಹೇಗೂ ಆಚೆ ಬಂದಾಗಿದೆ ನಾನು
ಇದುವರೆಗೂ ನೋಡಿಯೇ ಇರದ ಈ ನಗರವನ್ನಾದರೂ ಸುತ್ತಿಬಿಡೋಣ ಎಂದುಕೊಂಡು ಪುಟ್ ಪಾತ್ ಮೇಲೆ ಹೆಜ್ಜೆಹಾಕತೊಡಗಿದ.
ಸ್ವಲ್ಪ ಕ್ರಮಿಸಿದ ನಂತರ, ಕೆಲಸಕ್ಕೆಂದು ಹೊರಟಿದ್ದ ಮಹಿಳೆ ‘ನಂಗೆ ತವರು ಮತ್ತೆ ದೇವರಂಥಾ ಅಪ್ಪ ಇಲ್ಲದೇ
ಹೋಗಿದ್ದರೆ ನನ್ನ ಪಾಡು ದೇವರೇಬಲ್ಲ ಅನ್ನೋಥರಾ ಆಗೋಗ್ತಿತ್ತು. ಅಂಥಾ ಅಪ್ಪನನ್ನ ಪಡೆದ ನಾನೇ ಧನ್ಯ’
ಎಂದು ತನ್ನ ತಲೆಯೆತ್ತಿ ಮುಗಿಲು ನೋಡಿ ದೇವರೊಂದಿಗೆ ಏನೋ ಮಾತಾಡಿಕೊಂಡಳು.
ಅದನ್ನು ನೋಡಿದ ಈ ಹುಡುಗಾ, ‘ಹೋ ಹಿಂಗೂ ಇರ್ತದಾ ಬದುಕು
?’ ಅಂದ್ಕೊಂಡು ಮುಂದೆ ಸಾಗಿದ. ಅಲ್ಲೊಂದು ಹಣ್ಣಣ್ಣು ಮುದುಕಿ ದೇವರ ಪೋಟೋವನ್ನು ತನ್ನ ಕೊರಳಿಗೆ ಹಾಕಿಕೊಂಡು
ರಸ್ತೆಯ ಸಿಗ್ನೆಲ್ ಬಳಿ ನಿಲ್ಲುತ್ತಿದ್ದ ವಾಹನ ಸವಾರರಿಗೆ, ಪ್ರಯಾಣಿಕರ ಬಳಿ ಬಿಕ್ಷೆ ಬೇಡುತ್ತಿದ್ದಳು.
ಈ ಹುಡುಗ ಅವಳನ್ನು ಸಮೀಸುತ್ತಿದ್ದಂತೆಯೇ ತೂರಾಡುತ್ತಾ ಬಂದ ದಡಿಯನೊಬ್ಬ ಆ ಭಿಕ್ಷೆ ಬೇಡುವ ಮುದುಕಿಯ
ರೆಟ್ಟೆ ಹಿಡಿದು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ, ‘ಎಷ್ಟಾಯ್ತು ಕೊಡು ಕಲೆಕ್ಷನ್ನು. ಎಂದು ಪೀಡಿಸುತಿದ್ದನು.
ಪಾಪ ! ಆ ವೃದ್ಧೆ ಇಷ್ಟು ವಯಸ್ಸಿನ ಮಗನಾಗಿ ನನ್ನ ಸಾಕೋದು ಬಿಟ್ಟು ಹಿಂಗೆ ನನ್ನ ಭಿಕ್ಷೆಯ ದುಡ್ಡನ್ನೂ
ದೋಚುತ್ತೀಯಲ್ಲ ಮಗನೇನೋ ನೀನು ! ಎಂದು ಹೇಳಿದ ಮಾತಿಗೆ ಕುಡಿದು ತೂರಾಡುವ ಹಂತದಲ್ಲಿದ್ದ ಮಗ, ‘ಏನ್
ನಮ್ಮಪ್ಪ ದುಡ್ದು ಆಸ್ತಿ ಮಡಿಗೌನೆ ಆ್ಞಂ ? ನೀನು ನಿಯತ್ತಾಗಿ ಒಬ್ಬನಿಗೇ ಬಾಳ್ವೆ ಮಾಡಿದ್ರೆ ನಾನ್ಯಾಕೆ
ಹೀಗೆ ಬೀದಿ ಬಿಕಾರಿಥರಾ ಆಗ್ತಿದ್ದೆ ಸುರ ಸುಂದರಿ ಅನ್ನಂಗೆ ನಿಂಗೆ ದೇವರನ್ನ ಹೊರಿಸಿದ್ರಂತೆ ನೀನು
ಸುಮ್ಮ...ನಿದ್ದೆಯಂತೆ. ಎಷ್ಟು ಜನಾ ಅಪ್ಪಂದ್ರು ನಂಗೆ ? ಥೂ ನಿನ್ನ ಜನ್ಮಕ್ಕಿಷ್ಟು. ನಂಗೂ ಒಬ್ನೇ
ಒಬ್ಬ ಅಪ್ಪ ಇದ್ದಿದ್ರೆ ಇವತ್ತು ಇತ್ತು ಆ ನನ್ನ ಮಗನಿಗೆ’ ಅಂತ ಏನೇನೋ ಮಾತಾಡುವುದನ್ನೇ ಕೇಳಸಿಕೊಂಡ
ಈ ಬಾಲಕ,
ಓಹೋ,, ಎಷ್ಟು ತಂದೆಯರಿದ್ದರೂ ಎಲ್ಲರೂ ಒಳ್ಳೇವರೇ ಆಗಿರೊಲ್ಲ. ಅಪ್ಪ ಅಂದ್ರೆ ಕೆಟ್ಟೋನೂ
ಹೌದು. ಅಂದುಕೊಳ್ಳುತ್ತಾ ಮತ್ತೆ ನಗರ ಸಂಚಾರವನ್ನು ಮುಂದುವರಿಸಿದ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ
ಮೂಟೆ ಹೋರುವವನೊಬ್ಬನ ಬಳಿ ಮಗುವೊಂದು ಬಂದು ತಿನ್ನಲು ಏನನ್ನೋ ಕೇಳಿತು. ಅದನ್ನು ಬಡಿದು ಮನೆಗಟ್ಟಿದ,
ಮರು ಕ್ಷಣವೇ ಎದುರಿಗಿನ ಹೋಟೆಲ್ಲಿನ ಮಹಿಳೆ ನಕ್ಕು ಒಳ ಹೋದಳು ಇವನೂ ಅವಳನ್ನು ಅನುಸರಿಸಿದ. ಇದನ್ನು
ನೋಡಿದ ಹುಡುಗನಿಗೆ ಅಸಹ್ಯ ಅನ್ನಿಸಿತು.
ಮತ್ತು ಮುಂದೆ ನಡೆದ ಎರಡೂ ಕಾಲುಗಳಿಲ್ಲದ ಪುರುಷನೊಬ್ಬನನ್ನು
ದೇವಸ್ಥಾನದ ಬಾಗಿಲ ಮುಂದೆ ನಿಲ್ಲಿಸಿದ ಮಹಿಳೆಯೊಬ್ಬಾಕೆ ದೇವಸ್ಥಾನದ ಹಿಂದೆ ಇರುವ ಅಡುಗೆ ಕೋಣೆಯಲ್ಲಿ
ಭಟ್ಟನೊಂದಿಗೆ... ಆ ಅಡುಗೆ ಕೋಣೆಯ ಕಿಟಕಿ ರಸ್ತೆಗಂಟಿದೆ. ಈ ಮಗು ಕಿಟಕಿ ದಾಟುವಾಗಲೇ ಆಕೆ ‘ಹೊರಗೆ
ಬಿಕ್ಷೆಗೆ ಕುಳಿತ ಗಂಡಗೆ ಯಾರಾದ್ರೂ ಸುದ್ದಿ ಮುಟ್ಟಿಸಿದ್ರೆ...?’ ಧ್ವನಿ ಕೇಳುತ್ತಲೇ ಕಂಪಿಸಿದ ಹುಡುಗ
ನರಳುತ್ತಾ ಅಲ್ಲಿನ ಸುತ್ತು ಜನಗಳ ಬಾಯಲ್ಲಿ ಬರ್ತಾ ಇರೋದೆಲ್ಲಾ ಒಳ್ಳೇದು ಕೆಟ್ಟದ್ದರ ನಡುವೆಯೇ ಸುತ್ತುತ್ತಿದ್ದೆ.
ವಿಶೇಷವಗಿ ಹೆತ್ತವರ ಪರ ವಿರೋಧಗಳನ್ನೇ ಕೇಳಿಸಿಕೊಂಡ.
ಈ ಜಗತ್ತನ್ನು ನೋಡಿ ಇಲ್ಲಿಯ ಕಷ್ಟ ಕಾರ್ಪಣ್ಯದ ತಿದೆಯೊಳಗೆ ತೋರಿಕೆಯ ಹೂ ಜೀವನ ಸಾಗಿಸುವ ಅನಿವಾರ್ಯತೆಗಳನ್ನು
ಗಮನಿಸಿದ ಅವನಿಗೆ ತೀರಾ ಸುಸ್ತಾಗಿ ಹಸಿವಾದಂತಾಯಿತು.
ಅಷ್ಟೊತ್ತಿಗೆ ಅವನು ಬಸ್ ಸ್ಟ್ಯಾಂಡಿಗೆ ಬಂದಿದ್ದ. ತಿನ್ನಲು ಜಗತ್ತಲ್ಲಿ ಎಲ್ಲಾ ಇದೆ. ಆದರೆ ಈ ಹುಡುಗನ
ಜೇಬಲ್ಲಿ ದುಡ್ಡು ಬೇಕಲ್ಲಾ ? ಕುಸಿದು ಕುಳಿತ ಬಸ್ ನಿಲ್ದಾಣದ ಪಕ್ಕದಲ್ಲಿನ ಹೋಟೆಲ್ಲಿನಲ್ಲಿ ತಿನ್ನುತ್ತಿದ್ದವರ
ಬಾಯಿ ನೋಡುತ್ತಾ ಗಂಟಲೊತ್ತಿಕೊಂಡು ಆಸೆಯಿಂದ ಅದೇ ಹೋಟೆಲ್ ಒಳ ಹೋಗಿ ಕಪ್ ನೀರು ಕುಡಿದು.
ಥೂ ನಿನ್ನ
ಇಂಥಾ ಗಲೀಜು ಜಗತ್ತನ್ನಾ ನಾ ನೋಡಲು ಕಾತರಿಸಿದ್ದು ? ಇಲ್ಲ, ಮೊದಲು ನಾನು ನನ್ನ ಮೂಲಕ್ಕೋಗಬೇಕೆಂದು
ತಡಮಾಡದೆ ಮತ್ತದೇ ದೊಡ್ಡ ಗೇಟಿನ ಒಳ ನಿಲ್ಲುವಷ್ಟರಲ್ಲಿ ಯಾರೋ ದಂಪತಿಗಳು ಅಲ್ಲಿರುವ ಮಕ್ಕಳೆಲ್ಲರಿಗೂ
ಸಿಹಿ ನೀಡುತ್ತಿದ್ದರು. ಮೊದಲೇ ಹಸಿದ ಮಗು ಅವರು ನೀಡಿದ ಸಿಹಿಯನ್ನು ಒಂದೇ ಗುಕ್ಕಿಗೆ ತಿಂದು ಉಸಿರು
ತಿರುಗಿಸಿಕೊಳ್ಳುವುದನ್ನು ನೋಡಿದ ಅಲ್ಲಿನ ಮಧ್ಯ ವಯಸ್ಕೆ ಕೇಳಿದಳು. ‘ಮಗೂ ಆಚೆ ಹೋಗಿದ್ಯಾ ? ಚೆನ್ನಾಗಿದೆಯಾಪಾ
ಜಗತ್ತು ?’ ತುಂಬಿದ ಕಂಗಳನ್ನು ಒರೆಸಿಕೊಳ್ಳುತ್ತಾ ಮಗು ಮಾತಾಡಿದ ‘ಮಿಸ್ ನನ್ನಷ್ಟೂ ಸುಖವಾಗಿಲ್ಲದ
ಜಗತ್ತು ನೋಡಿ ಬಳಲಿದೆ. ಇಂದು ಅದೇನೋ ಅಪ್ಪನ ದಿನವಂತೆ. ಜಗತ್ತಿನಲ್ಲಿ ಎಷ್ಟೊಂದು ರೀತಿಯ ಅಪ್ಪಂದಿರಿದ್ದಾರೆ!
ಅಲ್ಲಿನ ಅಪ್ಪಂದಿರನ್ನು ನೆನಪಿಸಿಕೊಂಡರೂ ಸಾಕು, ಮೈ ತುಂಬಾ ಮುಳ್ಳು ಚುಚ್ಚಿದಂತಾಗುತ್ತೆ’ ಎನ್ನುತ್ತಾ
ಕಂಗಳನ್ನು ಮುಚ್ಚಿಕೊಳ್ಳುತ್ತಾ ಮುಗಿಲತ್ತ ಮುಖವಿಟ್ಟು ‘ದೇವರೇ ನಂಗೆ ಅಪ್ಪ, ಅಮ್ಮ ಅನ್ನೋ ಪಾತ್ರಗಳ
ನೆನಪೇ ಇಲ್ಲದಂತೆ ಆಶಿರ್ವಾದಿಸಿದ್ದಕ್ಕೆ ಧನ್ಯನಾದೆ ತಂದೆ. ನಂಗೆ ಆ ಅಪ್ಪ ಅಮ್ಮ ಇಲ್ಲದ್ದೇ ಚೆನ್ನಾಯಿತು’
ಎನ್ನುತ್ತಿದ್ದಂತೆಯೇ ಕಂಗಳಿಂದ ನೀರು ತೊಟ್ಟಿಕ್ಕುತ್ತಿತ್ತು. ಆ ಅನಾಥಾಶ್ರಮದ ಮಿಸ್ ಅವನನ್ನು ಬಾಚಿ
ತಬ್ಬಿಕೊಂಡು ಕಣ್ಣೀರಾದಳು. ಸಿಹಿ ಹಂಚುತ್ತಿದ್ದ ದಂಪತಿಗಳೂ. ಕಣ್ಣೀರಾದರು.