Shivu Morigeri

Tuesday, 6 August 2013

ಹಸಿವು: my imagination story11

ಹಸಿವು: my imagination story 10: ಗರ್ಭಗುಡಿ ಇಡೀ ಊರಿಗೂರಾ, ಜಗತ್ತನ್ನಾ ಮರತು ಮಕ್ಕಂಡಿರತೈತಿ. ಊರಾಗಿನ ಎಲ್ಲರ ಮನಿ ಕದಗಳು ಮಖಾ ಮುಚ್ಚಿಗಂಡಿರ್ತಾವು. ಲೋಕದ ಪರಿಜ್ಞಾನನಾ ಇಲ್ಲದ ಕೂಸುಗಳು ಒಂದು ಕ...

my imagination story 10

ಗರ್ಭಗುಡಿ

ಇಡೀ ಊರಿಗೂರಾ, ಜಗತ್ತನ್ನಾ ಮರತು ಮಕ್ಕಂಡಿರತೈತಿ. ಊರಾಗಿನ ಎಲ್ಲರ ಮನಿ ಕದಗಳು ಮಖಾ ಮುಚ್ಚಿಗಂಡಿರ್ತಾವು. ಲೋಕದ ಪರಿಜ್ಞಾನನಾ ಇಲ್ಲದ ಕೂಸುಗಳು ಒಂದು ಕಾಪು ನಿದ್ದಿ ಮುಗಿಸಿ ಹೊಟ್ಟಿ ಹಸಿದಂಗಾಗಿಯೋ ಇಲ್ಲಾ ಉಚ್ಚಿ ಹೊಯ್ಕಂಡು ಹಾಸ್ಗಿನೆಲ್ಲಾ ತೊಯಿಸ್ಕಂಡೋ ಅಂತೂ ಮಕ್ಕೊಂಡಿರಾ ಜೋಲಿಲಿಂದನಾ ಚಿಟಾರನೇ ಚೀರಿ ಅಪ್ಪನ ತೋಳಮ್ಯಾಗ ತಲಿಕೊಟ್ಟಿದ್ದ ಅವ್ವಗ ದಿಢೀರನ ಎಚ್ಚರ ಮಾಡೋ ಹೊತ್ತದು. ಇನ್ನು ಹಸು ಮಕ್ಕಳು, ಹರೇದ ಮಕ್ಕಳು, ತಮ್ಮ ಮಗ್ಗಲು ಬದ್ಲಿಸೋ ಟೈಂ ಅದು. ಮತ್ತಿನ್ನು ನಿದ್ದಿನಾ ಬರದ ಮುದುಕ್ರು ಯಾವಾಗ ಬೆಳಕರಿತೈತಪಾ ಅಂತೇಳಿ ಮಕ್ಕೊಂಡಿರಾ ಹಾಸ್ಗಿಯೊಳಗಾ ಕೆಮ್ಮಿಕೋತ ಅತ್ಲಾಗ ಇತ್ಲಾಗ ಒದ್ದಾಡಿ, ಹಾಸ್ಗಿ ಮಗ್ಗಲದಾಗಿನ ಚೆಂಬಿನಾಳಿನ ನೀರು ಕುಡುದು ಮತ್ತೆ ಔರೋರ ಕೌದಿಯೊಳಗ ತಲಿಕೊಡಾಂತ ಟೈಂ ಅದು. ಮನಿ ಹೊರಗ ಮೆಟ್ಟುಣ್ಕಿ ಮ್ಯಾಗೋ, ಕಟ್ಟಿ ಮೂಲ್ಯಾಗೋ ಎಲ್ಲೋ ಒಂದು ಕಡಿಗೆ ನಾಯಿಗಳು ದುಂಡುಗು ಮಕ್ಕೊಂಡಿರಾ ಟೈಂ ಅದು. ಊರಾಗಿನ್ನ ಎಲ್ಲಾ ಓಣಿಯ ಎಲ್ಲಾ ಬೀದಿಗಳೂ ತಮ್ಮ ಕೈಕಾಲುಗಳನ್ನ ಮನಸೋ ಇಚ್ಛೆ ಚೆಲ್ಲಾಡಿ ಮಕ್ಕೊಂಡಿರಾಂಥ ಟೈಂ ಅದು. ಹಿಂಗ ಒಂದಾ ಮಾತಿಗೆ ಹೇಳಬೇಕಂದ್ರ ಇಡೀ ಜಗತ್ತಾ ಮಕ್ಕೊಂಡಿರಾ ಟೈಂನಾಗ ಅವನೊಬ್ಬನು ಊರ ಹೊರಗಿರೋ ಆ ಹಳೇ ಹ್ಮಪ್ಪನ ಗುಡಿಯೊಳಗ ಎದ್ದು ಕುಂದ್ರತಾನ.
ಹಂಗ ಎದ್ದು ಕುಂತೋನು ತನ್ನ ಹಾಸ್ಗಿನೆಲ್ಲಾ ಹನ್ಮಪ್ಪನ ಗುಡಿಯಾಗಿನ ಜಂತಿಮ್ಯಾಕ ಎತ್ತಿಟ್ಟು , ಗುಡಿಯ ಮೂಲ್ಯಾಗಿನ ಒಂದು ಗಡಿಗಿಯೊಳಗಿನ ನೀರು ತಗೊಂಡು ಮಾರಿ ತ್ವಕ್ಕಂಡು ತನ್ನ ಜೋಳಿಗಿ ತಗಂಡು ನೇರ ಹೋಗಾದು ಊರಾಚೆಗಿರೋಂತ ಸುಡುಗಾಡಿಗೆ. ಹಾಗೆ ಸುಡುಗಾಡಿಗೆ ಹೋದ ಅವನು ಅಲ್ಲಿ ಅದೇನಾ ಪೂಜೆ ಮಾಡಿ ಆ ಸುಡಗಾಡಿನಲ್ಲಿನ ಆತ್ಮಗಳ ಜತಿಗೆ ಮಾತಾಡ್ತಾನಂತೆ. ಅವಾಗ ಅಲ್ಲಿರಾ ಆತ್ಮಗಳು ಔರೋರ ಮನಿಗುಳಾಗ ಮುಂದೆ ನಡಿಯ ಒಳ್ಳೇದು, ಕೆಟ್ಟದ್ದು ಎಲ್ಲಾ ನಮೂನಿ ಕಾರ್ಯಗಳನ್ನ ಇವನಿಗೆ ಹೇಳ್ತಾವಂತೆ ಅವುಗಳನ್ನೆಲ್ಲಾ ತಿಳಕೊಂಡು ಆ ಆತ್ಮಗಳಿಗೆ ಏನಾ ಒಂದು ಭರವಸೆ ಕೊಟ್ಟು ಅಲ್ಲಿಂದ ವಾಪಾಸ್ ಊರೊಳಗ ಬರಾಕರ ತನ್ನ ಬಲಗೈಯೊಳಗಿನ ಶಂಖವನ್ನ ಊದಿಕಂತ ಬರ್ತಾನೆ. ಇವನ ಶಂಖ ಧ್ವನಿ ಕೇಳತಿದ್ದಂಗನಾ ಅಲ್ಲಲ್ಲಿ ಮಕ್ಕಂಡಿರಾ ನಾಯಿಗಳು ದಿಢೀರನ ಎದ್ದು ಬೊಗಳಾಕ ಚಾಲೂ ಮಾಡ್ತಾವು.
ಯಾವಾಗ ಓಣ್ಯಾಗಿನ ನಾಯಿಗಳು ಟೀಂ ಕಟ್ಟಿಗಂಡು ಬೊಗಳತಾವೋ ಮದ್ಲಾ ನಿದ್ದಿ ಇಲ್ಲದ ಮುದುಕ್ರು ಮಕ್ಕಂಡಿರಾ ಹಾಸ್ಗಿಯೊಳಗಾ ತಮಗ ತಾವಾ ಹೇಳ್ಕಂತಾರ 'ಶಂಖದ ಧ್ವನಿನೂ ಬರ್ತೈತಿ, ಓಣ್ಯಾಗಿನ ನಾಯಿಗಳೂ ಬೊಗಳತಾವಪಾ ಅಂದ್ರ ಔನು ಕಳ್ಳನೂ ಅಲ್ಲ ಸುಳ್ಳನೂ ಅಲ್ಲ, ಅನುಮಾನನಾ ಬ್ಯಾಡ ಅವ್ನು ಕಾಡ ಸಿದ್ದಪ್ಪ' ಇವ್ನು ಶಂಖ ಊದಿಕಂತ ಬಂದಾನ ಅಂದ್ರ ಬೆಳ್ಳಿ ಚುಕ್ಕಿ ಮುಡಾಕ ಇನ್ನೇನು ಸ್ವಲ್ಪಹೊತ್ತು ಬಾಕಿ ಐತಿ ಅಂತಾನ ಖಾತ್ರಿ ಮಾಡ್ಕಬೇಕು. ಅಷ್ಟರ ಮಟ್ಟಿಗೆ ಟೈಂನ ಮೆಂಟೇನ್ ಮಾಡೊ ವ್ಯಕ್ತಿ ಅಂದ್ರ ಕಾಡ ಸಿದ್ರ ಸಿದ್ದಯ್ಯ. ಹೌದು. ಅವನು ಆ ಊರಿನ ಸಿದ್ದಪ್ಪ. ಅಂದ್ರ ಕಾಡು ಸಿದ್ರು ಅಂತ ಕರಿಸಿಕೊಳ್ಳಾ ಒಂದು ನಮೂನಿ ವಿಶಿಷ್ಠ ಜನಾಂಗದ ಸಂತ ಅಂತಾನಾ ಕರೀ ಬೌದು. ಈ ಕಾಡು ಸಿದ್ರು ಒಂದು ಕಡಿಗೆ ನೆಲೆನಿಂದ್ರಾದು ಬಾಳ ಅಪರೂಪವಂತೆ. ಆದ್ರ ಈ ಸಾಲಾಪುರ ಅನ್ನೋ ಊರಾಗ ಮಾತ್ರ ಎಲ್ಲಿಂದಲೋ ಬಂದ ಈ ಸಿದ್ದಯ್ಯ ಬಾಳ ದಿನ ಇದಾ ಊರಾಗಾ ಇದ್ದ. ಅವನ ಹೆಸ್ರು
ಸಿದ್ದಯ್ಯ.

ಇಂಥಾ ಸಿದ್ದಯ್ಯ ಹಂಗ ಶಂಖ ಊದಿಕಂತ ಇಡೀ ಊರಿನ ಎಲ್ಲಾ ಹಾದಿ ಬೀದಿಗಳನ್ನೂ ಸುತ್ತಿಕಂಡು ಕೊನೀಗೆ ಮತ್ಯ ಹನ್ಮಪ್ಪನ ಗುಡೀಗೆ ಬಂದು ತನ್ನ ಜೋಳಿಗಿಗಳನ್ನ ಒಂದು ಮೂಲಿಗಿಟ್ಟು, ತಲೀಗೆ ಸುತ್ತಿಕಂಡಿದ್ದ ರುಮಾಲನ್ನ ತಲೀಲಿಂದ ತೆಗದು ಉಸ್ಸಪ್ಪ ಅಂತೇಳಿ ಒಂದು ಗ್ವಾಡಿಗೆ ಆತುಕಂಡು ಕುಂತ್ಕಂಡು ಒಂದು ಬೀಡಿ ಸೇದುಷ್ಟೊತ್ತಿಗೆ ಬೆಳಗಿನ ಜಾವ ಐದುವರೆ ಆಗಿರತೈತಿ. ಅವಾಗ ಗುಡಿಲಿಂದ ಎದ್ದು ಸೀದಾ ಬಸ್ ಸ್ಟ್ಯಾಂಡಿಗೆ ಬಂದು ಅಲ್ಲಿರಾ ಹೋಟ್ಲಗುಳಾಗ ಒಂದು ಚಾ ಕುಡುದು ವಳ್ಳಿ ಮತ್ತದಾ ಗುಡಿಗೆ ಹೋಗಿ ತನ್ನ ನಿಜ ಕಾಯಕಕ್ಕ ತಯಾರಿ ನಡಿಸ್ತಾನ. ಈ ಸಿದ್ದಯ್ಯ ತನ್ನ ಕಾಯಕಕ್ಕ ನಡಿಸಾ ತಯಾರಿನಾ ಒಂದು ದೊಡ್ಡ ಹಬ್ಬ ನೋಡಿದಂಗಾಕೈತಿ ಬಿಡ್ರಿ. ಮದ್ಲು ತಾನು ತೊಟ್ಟಕಂಡಿರಾ ಖಾವಿನ ಒಮ್ಮಿ ನೋಡಿಕಂತಾನ. ಆಮ್ಯಾಲ ತನ್ನ ಕಿವಿಗೆ ರುದ್ರಾಕ್ಷಿ ಝುಮುಕಿನಾ ಹಾಕ್ಕೋತಾನ, ತನ್ನ ಕೊಳ್ಳಾಗಿನ ಮಣಗಟ್ಟಲೆ ಇರೋ ರುದ್ರಾಕ್ಷಿ ಸರಗಳನ್ನ ಎಲ್ಲವ್ನೂ ನೀಟಾಗಿ ತನ್ನ ಖಾವಿ ಹೊರಗ ಕಾಣಂಗ ಹಾಕ್ಕೊತಾನ. ಆಮ್ಯಾಲೆ ಮಖದ ತುಂಬಾ ತೆಳ್ಳಗ ಕಾಣಂಗ ಅಂದ್ರ ಲೈಟಾಗಿ ಕಾಣುವಂಗ ವಿಭೂತಿನ ತಿಕ್ಕೋತಾನ. 
ಒಂದು ಲೆಕ್ಕಕ್ಕ ಹೇಳಬೇಕಪಾ ಅಂದ್ರ ವಿಭೂತಿ ಪುಡಿಯೊಳಗಾ ಮಖಾ ತ್ವಳಕಂಡನೇನಾ ಅನ್ನಂಗ ಕಾಣತಿರತೈತಿ. ಆಮ್ಯಾಲ ತನ್ನ ಹಣಿ ಮ್ಯಾಗ ಮೂರು ಬೊಳ್ಳಿಲಿಂದ ಹಣಿತುಂಬಾ ವಿಭೂತಿ ಹಚ್ಗೋತಾನ. ತನ್ನ ಮೂಗಿನ ನೇರ ನಡೋ ಹಣಿಯೊಳಗ ರುಪಾಯಿಯಷ್ಟು ಅಗಲಾ ಕರೀ ಬಣ್ಣದ ಕುಂಕುಮ ಹಚ್ಕೋತಾನ. ಅದು ಕರೀ ಕುಂಕುಮ ಅಲ್ರಲೇ ಅಂಜನ ಅದು ಅಂತ ವಾದ ಮಾಡೋರೂ ಅದಾರ. ಆಮ್ಯಾಲೆ ಕಣ್ಣಿನ ತೆಳಾಗಿರೋ ಬುರುಡೆ ಮೂಳೆಯ ದಿಬ್ಬಕ್ಕ ಗುಲಾಬಿ ಬಣ್ಣದ ಕುಂಕುಮಾನ ತೆಳ್ಳಗ ಸೂರ್ಯ ಚಂದ್ರನಂಗ ಎರಡೂ ಕಡಿ ಹಚ್ಕೋತಾನ. ಕೈ ತುಂಬಾ ಸಿಲ್ವರ್ ಆಭರಣ, ಕಾಲಿಗೆ ಎಂಥದ್ದೋ ಗೆಜ್ಜಿ, ಹಿಂಗ ಎಲ್ಲಾ ಸಿಂಗಾರ ಮುಗದ ಮ್ಯಾಗ ತನ್ನ ತಲೀಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಂಡು ತನ್ನ ಜೋಳಿಗಿಯೊಳಗಿರೋ ನೌಲು ಗರಿಯೊಂದನ್ನ ಸಿಕ್ಕಿಸಿಕೋತಾನ. ಆಮ್ಯಾಲ ಶಂಖವನ್ನ ತಗೊಂಡು ತನ್ನ ಜೋಳಿಗೆಗಳನ್ನ ಹೆಗಲಿಗೆ ಹಾಕ್ಕೊಂಡು ಊರ ಕಡಿಗೆ ಮಖಾ ಮಾಡಾಷ್ಟತ್ಗೆ, ಮುಳಾಮುಂಜಾಲೆ ಅನ್ನೋ ಮಬ್ಬು ಮಬ್ಬು ಬೆಳಕು ಊರತುಂಬಾ ಚೆಲ್ಲಿರತೈತಿ.

ಹಂಗ ನೋಡಬೇಕಪಾ ಅಂದ್ರ, ಈ ಸಿದ್ದಯ್ಯ ಊರಾಗಿನ್ನ ಎಲ್ಲರ ಮನಿಗುಳಿಗೆ ಹೋಗಿ ಶಂಖ ವೂದಿ ಮನ್ಯಾರು ನೀಡಿದ್ದನ್ನ ಜೋಳಿಗಿಗೆ ಹಾಕಿಸಿಕೊಂಡು ಬರ್ತಾನ. ಆದ್ರ ಸವತ್ತಿನಾಗ ಸುಡುಗಾಡಾಗ ಯಾವ್ಯಾವೋ ಆತ್ಮಗಳು ತಮ್ಮತಮ್ಮ ಮನಿತನದ ಕಥಿಗಳನ್ನ ಹೇಳಿರ್ತಾವಂತೆಲ್ಲಾ, ಅಂಥಾ ಮನಿಮುಂದೆ ನಿಂತ್ಕಂಡು 'ನಿಮ್ಮ ಮನಿಯಾಗ ಇನ್ನು ಇಷ್ಟು ದಿನದಾಗ ಇಂಥಾದ್ದೊಂದು ಕಾರ್ಯ ನಡೀತೈತಿ' ಅಂತ ಏನೇನೋ ಹೇಳ್ತಾನ. ಅವಾಗ ಅಂಥಾ ಮನಿಯೋರು, ಸಿದ್ದಯ್ಯ ಕೊಟ್ಟ ಸುದ್ದಿ ಒಳ್ಳೇದಾಗಿದ್ರ ಖುಷಿಲಿಂದ ಹತ್ತಿಪ್ಪತ್ತು ರುಪಾಯಿ ಕೊಟ್ಟು ಒಂದು ಮೊರದ ತುಂಬಾ ಕಾಳು ಕಡಿ ಕೊಡ್ತಾರ. ಆದ್ರ ಒಂದುವೇಳೆ ಅವನೇನಾದ್ರೂ ಕೆಟ್ಟ ಸುದ್ದಿ ಕೊಟ್ಟಿದ್ರ ದುಃಖದಿಂದ ಆ ಘಟನಿಲಿಂದ ತಪ್ಪಿಸ್ಕಣಾಕ ಏನು ದಾರಿಗುಳು ಅದಾವು ಅಂತ ಕೇಳಿಕಂಡು ಬ್ಯಾಸ್ರಾ ಮಾಡಿಕಂಡು ಐದತ್ತು ರುಪಾಯಿ ಕೊಟ್ಟು ಮನ್ಯಾಗಿನ ಹಳೇ ಅರಿವಿ ಕೊಟ್ಟು ಕಳಿಸ್ತಾರ.
ಈ ಸಿದ್ದಯ್ಯ ಬರೀ ಹಿಂಗ ಆತ್ಮಗಳು ಹೇಳಿದ ಕತಿ ಹೊತ್ಕಂಡು ಮನಿ ಮನಿ ತಿರುಗಾದಷ್ಟಾ ಅಲ್ಲದ, ಹರೇದ ಹುಡ್ರು ಓಣ್ಯಾಗ ಸೇರಿಕಂಡು ಇತನ್ನ ಕರದು ನಮಿಗೊಂದು ಆಟ ತೋರ್ಸು ಅಂತ ಕೇಳಿದ್ರ ತನ್ನ ಜೋಳಿಗಿಯೊಳಗ ಇಟ್ಟುಕೊಂಡಿರಾಂತ ಐದಾರು ಬ್ಯಾರೆ ಬ್ಯಾರೆ ಸೈಜಿನ ನುಣುಪು ಕಲ್ಲುಗಳನ್ನ ಬಾಯಿಗೆ ಹಾಕ್ಕೊಂಡು ನುಂಗಿ ಅವುನ್ನ ಮತ್ಯ ಹೊಟ್ಟಿಲಿಂದ ಕಡೀಗೆ ತೆಗದು ತೋರಸಾದು, ಬರೈ ಕೈನ ಗಾಳಿಯೊಳಗ ಆಡಿಸಿದಂಗಾ ಮಾಡಿ ಎನಾರ ಒಂದು ಪವಾಡದ ವಸ್ತುಗಳನ್ನ ಕೊಡ್ತಾನ. ಆಮ್ಯಾಲ ಅವರಿಂದ ಒಂದಿಷ್ಟು ರ್ವಕ್ಕ ತಗೊಂಡು ಮುಂದಕ್ಕೊಕ್ಕಾನ. ಹೊತ್ತು ನೆತ್ತಿಗತ್ತವರಿಗೂ ಊರಾಡಿ ಆಮ್ಯಾಲ ತನ್ನ ಜೋಳಿಗಿಯೊಳಗಿನ ಕಾಳನ್ನ ಅಲಲೇ ಯಾವುದರಾ ಕಿರಾಣಿ ಅಂಗಡೀಗೆ ಹಾಕಿ ಸಿಕ್ಕೊಷ್ಟು ರ್ವಕ್ಕ ತಗೊಂಡು ಮತ್ಯ ಹನ್ಮಪ್ಪನ ಗುಡಿಗೆ ಹೋಗಿ ತನ್ನ ವೇಶಾನೆಲ್ಲಾ ಬಿಚ್ಚಿಟ್ಟು ಹೋಟ್ಲಿಗೆ ಹೋಗಿ ಊಟಮಾಡಿ ವಿಶ್ರಾಂತಿ ತಗಾಂತಾನ. ಇದು ಸುಳ್ಳಾಪುರದಾಗ ಸಿದ್ದಯ್ಯನ ದಿನನಿತ್ಯದ ಕಾಯಕ ಐತಿ.
ಇಂಥಾ ಸಿದ್ದಯ್ಯ ಇರೋ ಊರಾಗ ಆ ಒಂದು ಮನಿ ಐತಿ. ಅದು ಊರಾಗ ಒಂದು ಮಟ್ಟಿಗಿನ ದೌಲತ್ತು ನಡಿಸೋಂತ ಮನಿನೂ ಹೌದು. ಅವ್ರ ಮನಿಯೊಳಗಿನ ಆಳುಗುಳಾ ದೊಣ್ಣಿ ನಾಯಕರುಗುಳು ಮೆರದಂಗ ಮೆರಿತಾರ ಇನ್ನು ಮನಿ ಯಜಮಾನನ ದೌಲತ್ತು ಹೆಂಗಿರಬೋದು ನೀವಾ ಗೆಸ್ ಮಾಡ್ಕೋರಿ. ಗಂಡ ಹೆಂಡ್ತಿ ಬಿಟ್ರ, ಆ ಮನಿಯಾಗ ಯಜಮಾನ್ರು ಅಂತ ಯಾರೂ ಇದ್ದಿಲ್ಲ. ಕೀರಪ್ಪ ನಾರಮ್ಮ ಅಂತ ಔರೆಸ್ರು. ನಾರಮ್ಮ ಬಾಳ ಒಳ್ಳೇಕಿ. ತನ್ನ ಮನಿಯೊಳಗಿನ ಎಂಟು ಜನ ಆಳುಗಳನ್ನ ಸ್ವಂತ ಮಕ್ಕಳಂಗ ಕಾಣಾಕಿ. ಕಷ್ಟ ಅಂತ ಬಂದೋರಿಗೆ ಕೀರಪ್ಪನ ಕಳವಿಲೆ ತನ್ನ ಯೋಗ್ತಿಯನುಸಾರ ಸಾಯಾ ಮಾಡ್ತಿದ್ಳು. ಈ ಮನಿಯಾಗ ಇದ್ದ ಕೀರಪ್ಪನ ತಾಯಿ ತಾನು ಇನ್ನು ಉಳಿಯೋದಿಲ್ಲ ಅನ್ನಂಥಾ ಖಾತ್ರಿಯೊಳಗ ತನ್ನ ಮಗನ್ನ ಮದ್ವಿ ಮಾಡಿ ಸಿವನ ಪಾದ ಸೇರಿದ್ಲು.

ನಾರಮ್ಮನ ನೋಡಾಕ ಕೀರಪ್ಪ ಹೋದಾಗ ಇವನ ಠೀವಿ, ಗತ್ತು-ದೌಲತ್ತು ನೋಡಿ ಮನುಷ್ಯ ಬಾಳ ಒಳ್ಳೇನಿರಬೇಕು, ಗರಡಿಮನ್ಯಾಗ ಪಳಗಿದ ಹೆಬ್ಬುಲಿ ಇದ್ದಂಗದಾನ. ಇಂಥಾ ವರ ಸಿಗಾಕ ನಾರಮ್ಮ ಪುಣ್ಯ ಮಾಡ್ಯಾಳ ಅಂತ ಅಕಿ ಗೆಳತೀರು ನಕಲಿ ಮಾಡಿದ್ರು. ಅವಾಗೆಲ್ಲಾ ನಾರಮ್ಮ ಹಿರಿ ಹಿರಿ ಹಿಗ್ಗಿ ತಲಿ ಎತ್ತಿ 'ಹೆಂಗದನ ನನ್ನ ಗಂಡ ?' ಅಂತ ಉಬ್ಬುಬ್ಬಿ ಮಾತಾಡತಿದ್ಲು. ಆದ್ರ ಯಾವಾಗ ನಾರಮ್ಮನ ನೊಡಿದ ಕೂಡ್ಲ ಕನ್ಯ ಇಷ್ಟ ಆಗೈತಿ ಅಂತ ಒಪ್ಪಿಗಿ ಕೊಟ್ಟು ಮೂರಾ ತಿಂಗಳದಾಗ ಲಗ್ಮ ಮಾಡಿಕಂಡು ತನ್ನ ಮನಿಗೆ ಕರಕಂಡು ಬಂದು ಆರ ತಿಂಗಳಿಗೆ ಕೀರಪ್ಪನ ಅವ್ವ ತೀರಿಕಂಡೋದ್ಲು. ಯಾವಾಗ ಮನ್ಯಾಗಿರಾ ಒಂದು ಯಜಮಾನಿನೂ ಇಲ್ಲದಂಗಾತೋ ಆ ಮನಿಯ ಯಜಮಾನಿಕಿ ಇದ್ದೊಬ್ಬ ಮಗ ಈ ಕೀರಪ್ಪನಾ ಅರವತ್ತೆಪ್ಪತ್ತು ಎಕರಿ ಹೊಲ, ಗದ್ದಿ, ತ್ವಾಟ, ಮನಿತುಂಬಾ ದನಗುಳು, ತಿಜಿರಿತುಂಬಾ ರ್ವಕ್ಕ, ಬಂಗಾರ, ಎಲ್ಲದಕ್ಕೂ ಈತನಾ ಯಜಮಾನ ಆಗೋದ. ಅವಾಗ ನಾರಮ್ಮಗ ಗೊತ್ತಾತು ನೋಡ್ರಿ ಕೀರಪ್ಪನ ಅಸಲೀಯತ್ತು.
ಕೀರಪ್ಪ ಗರಡಿ ಮನಿಯಾಗ ಪಳಗಿದ ಹುಲಿ ಅನ್ನೋದು ಎಷ್ಟು ದಿಟವಿತ್ತೋ, ಊರಾಗಿನ ನಾಕಾರು ಗುಡುಸಿಲುಗುಳಾಗ ಬಿದ್ದೇಳಾ ನಾಯಿಯಂಥೋನೂ ಹೌದು. ಅಂತ ಒಂದಿನ ನಾರಮ್ಮಗ ಗೊತ್ತಾಗೋಯ್ತು. ಅವತ್ತು ಮದ್ಯಾಹ್ನದ ಹೊತ್ತಿನಾಗ ಮಜ್ಗಿ ಕೇಳಾನು ಅಂತ ಬಂದಿದ್ದ ಬಡವಿಯೊಬ್ಬಾಕಿ ಕ್ವಳ್ಳಾಗ ತನ್ನ ಮನಿ ತಿಜುರಿಯೊಳಗಿದ್ದ ಮನಿದೇವ್ರ ಪದಕದ ಬೆಳ್ಳಿ ಸರ ಕಂಡಿತ್ತು. ಈ ವಿಚಾರದ ಸತ್ಯ ತಿಳಕಣಾಕ ನಾರಮ್ಮ ತಮ್ಮ ಮನಿಯಾಳುಗಳನ್ನ ಕೇಳಿದಾಗ ಹೆತ್ತವ್ವನ ಎದ್ರು ಹಸು ಮಕ್ಳು ಸತ್ಯ ಹೇಳಿದಂಗ ಕೀರಪ್ಪನ ಎಲ್ಲಾ ಹರಾಮಿ ಕೆಲಸಗಳನ್ನೂ ಹೆಳಿದ್ರು.. ಕಿನಗಳು ಸರಿತಾನಾ ಇದ್ವು. ಕೀರಪ್ಪ ತೀರಾ ತನ್ನ ಹೆಂಡ್ತಿಯೊಬ್ಬಾಕಿನಾ ಬುಟ್ಟು ರಾತ್ರೆಲ್ಲಾ ಬಿಡಾಡಿಯಂಗ ಹರಾಮಿತನ ಮುಂದುವರಿಸಿದ್ನೋ ಅವತ್ತು ನಡುಮನಿಯೊಳಗ ನಿಂದ್ರಿಸಿ ಕೇಳಿದ್ಲು ನಾರಮ್ಮ. 'ಕಟ್ಟಿಕೊಂಡಾಕಿನ ಇಂಥಾ ದೊಡ್ಡ ಮನಿಯಾಗ ಒಬ್ಬಾಕಿನಾ ಬುಟ್ಟು ನಿನ್ನ ಗಂಡಸ್ತನಾನಬಡವ್ರು, ಅಮಾಯಕ್ರು ಮ್ಯಾಗ ತೋರಿಸ್ತಿಯಲ್ಲ ಚೂರು ನಾಚಿಕಿ ಅಕಯತೇನು ನಿನಿಗ್ಯ ?' ಯಾವಾಗ ಮೂಕ ಬಸವಣ್ಣನಂಗ ಇದ್ದ ಹೆಂಡ್ತಿ ಬಾಯಿಂದ ಇಂಥಾ ಮಾತು ಕೇಳಿದನೋ, ಕೆರಳಿದ ಕೀರಪ್ಪ, ನಾರಮ್ಮನ ದನಕ ಬಡದಂಗ ಬಡುದು, 'ನಾನು ಇರಾದ ಹಿಂಗ, ನನಿಗೆ ಬೇಕಾದಾಗ ಇಲ್ಲಿ ಮಕ್ಕೋತಿನಿ ಬ್ಯಾಡಾದ್ರ ನಾ ಎಲ್ಲೆರಾ ಮಕ್ಕೋಳ್ಳಿ ಅದನ್ನೆಲ್ಲಾ ನೀ ಯಜಮಾನಕಿ ಮಾಡಿದ್ರ ಕ್ವಳ್ಳಾಳ ತಾಳಿ ಹರದು ನನಿಗ್ಯ ಬರದುಕೊಟ್ಟು ಮನಿಬುಡು' ಅಂತೇಳಿ ಹೊರಗೋಗಿದ್ದ. ಅವತ್ತಿನಿಂದ ಕೀರಪ್ಪ ತನ್ನ ಮನಿಯೊಳಗ ಇರ್ತಾಇದ್ದುದು ಯಾವಾಗ್ಲೋ ಏನೋ, ಇದು ಬರೊಬ್ಬರಿ ಮೂರು ವರ್ಸ ನಡೀತು. ಊರಾಗ, ತನ್ನ ತೌರ ಮನಿಯಾಗ ಎಲ್ಲರೂ ನಾರಮ್ಮನ ಒಡಲು ಯಾಕಾ ತುಂಬುವಲ್ದು ಅಂತ ಮಾತಾಡ್ಕಂತಿದ್ರು.. ಓಸು ಮಂದಿ ನಗಾಡಿದ್ರು. ಹೆತ್ತೋರು ಸಮಸ್ಯೆ ಏನರಾ ಐತೇನ್ವಾ ಅಂತ ಕೆಳಿದಾಗ ತನ್ನ ಯಾವ ಕಷ್ಟಾನೂ ಹೇಳಿಕಣದೇ, ತಾನಾ ಯಾವುದಾ ವ್ರತಾ ಮಾಡಾಕತ್ತೀನಿ ಅಂತೇಳಿ ಕಾಲ ಕಳಿತಿದ್ಳು. ತನ್ನ ಗಂಡ ತನಿಗೆ ಮಾಡಾ ಅವಮಾನ, ಸುತ್ತು ಉರಾರು ಮಾಡಾ ಅವಮಾನ, ಎಲ್ಲದರಿಂದ ಬೇಸತ್ತುಬಿಟ್ಟಿದ್ಲು. ಇಂಥಾ ಸಂದರ್ಭದೊಳಗ ಶಂಖ ಊದಿಕೋತ ನಾರಮ್ಮನ ಮನಿಯ ಮುಂದೆ
ಸಿದ್ದಯ್ಯ ನಿಂತಿದ್ದ !
ಹಂಗ ಮನಿಮುಂದೆ ನಿಂತಿದ್ದ ಸಿದ್ದಯ್ಯ ಅವತ್ತು ರಾತ್ರಿ ನಾರಮ್ಮಳ ಅತ್ತಿ ಆತ್ಮ ಸುಡುಗಾಡಾಗ ಹೇಳಿದ ಕೆಟ್ಟ ಸುದ್ದಿನ ತೊದಲಿಕಂತ ಹೇಳಿದ್ದ. ಅದು ಏನಂದ್ರ, ಇನ್ನೊಂದು ವಾರದಾಗ ಕೀರಪ್ಪ ಸಾಯೋದು ಗ್ಯಾರೆಂಟಿ. ಸುದ್ದಿ ಕೇಳಿದ ನಾರಮ್ಮಗ ಸಿಡಿಲು ಬಡದಂಗಾತು. ಔನು ಎಂಥೋನಾ ಆಗಿರ್ಲಿ. ತನ್ನ ಗಂಡನ್ನ ಉಳಿಸ್ಕಣಾಕ ಇರಾ ದಾರಿಗಳನ್ನೆಲ್ಲಾ ಹುಡುಕಿದ್ಲು. ತನ್ನ ಗಂಡಗ 'ಇನ್ನೊಂದು ವಾರ ನೀ ಮನ್ಯಾಗಿರು. ಆಮ್ಯಾಲ ನಿನಿಗೆ ತಿಳದಂಗ ನೀ ಬದುಕು. ಅಲ್ಲಿವರಿಗೂ ಬೇಕಾರ ಆ ನನ್ನ ಸವತೀರನ್ನ ನನ್ನ ಮನಿಯೊಳಗಾ ಕರಕೊಂಡು ಬಾ. ದಿನಾಲು ನಾ ಒಬ್ಬಾಕೆ ಮಕ್ಕೋತಿದ್ದ ದೊಡ್ಡ ಮಂಚನಾ ನಿಮಿಗ್ಯಾ ಬಿಟ್ಟುಕೊಟ್ಟು ನಾ ದೇವ್ರ ಕ್ವಾಣ್ಯಾಗ ಮಕ್ಕೋತೀನಿ' ಅಂತ ಕಾಡಿದ್ಳು. ಆದ್ರ ಹೆಂಡ್ತಿಯ ಇಂತಾ ಬದ್ಲಾವಣಿ ಮಾತಿನ ಮ್ಯಾಲಾ ಅನುಮಾನಗೊಂಡ ಕೀರಪ್ಪ.
'ರೆಡ್ ಹ್ಯಾಂಡ್ಆಗಿ ಪೊಲೀಸ್ರಿಗೆ ಹಿಡಿದು ಕೊಡಾಕಮತ ಮಾಡೀದೇನು? ನಾನು ಹೆಂಗ ಬದುಕಬೇಕು ಅನ್ನಾದು ನನಿಗೆ ಗೊತ್ತೈತಿ ನಿನ್ನ ಕಕೆಲ್ಸ ಏನೈತಿ ಅದನ್ನ ನೋಡ್ಕ ಹೋಗು' ಅಂತೇಳಿದ್ದ ಕೀರಪ್ಪ. ಅವತ್ತೊಂದಿನ ಊರಾಗಿನ್ನ ಒಂದು ಬಡ ಒಂಟಿ ಹೆಣ್ಣಿನ ಗುಡಿಸಲಾಗ ಸತ್ತೋಗಿದ್ದ. ಅವನ ಮೈಯೆಲ್ಲಾ ಹಸಿರಾಗಿತ್ತು. ಇಡೀ ಊರಿಗೂರಾ ಕೀರಪ್ಪಗ ರಾತ್ರಿ ಹಾವು ಕಡದೈತಿ ಅಂತ ನಂಬಿದ್ರು. ಸುದ್ದಿ ತಿಳದ ನಾರಮ್ಮ ಹುಚ್ಚಿಯಂಗಾದ್ರೂ ಹೋಳಿ ಕಾಮ ಉರುದಂಗ ಉರುದು ನನ್ನ ಒಡಲಾಗೂ ಬೆಂಕಿ ಸುರುದು ಹೋಗ್ಯಾನ ಇನ್ನು ನಾನು ಜಾಣಿ ಆಗ್ಲಿಲ್ಲಾಂದ್ರ ಈ ವಂಶದ ಮಾನ ಮರ್ಯಾದಿ ಎಲ್ಲಾನೂ ಹರಾಜಾಗಿ. ದೊಡ್ಡ ಮನಿತನವೊಂದು ಸರ್ವನಾಶ ಅಕೈತಿ ನಾ ಅದ್ಕ ಅವಕಾಶ ಕೊಡಬಾರ್ದು ಅಂತ ಡಿಸೈಡ್ ಮಾಡಿ ಆ ಗುಡಿಸಲಿನಿಂದ ಹೆಣಾನ ತನ್ನ ಮನೀಗೆ ತನ್ನ ಮನಿಯಾಳುಗುಳ ಕುಟಾಗ ಸಾಗಿಸಿ ಮುಂದಿನ ಕಾರ್ಯನೆಲ್ಲಾ ಮಾಡಿ ತಾನು ವಿಧಿವಿ ಆಗಿ ಕೀರಪ್ಪಗ ಮಣ್ಣು ಮಾಡಿ ಬಂದಿದ್ಳು. 
ಗಂಡ ತೀರಿಕಂಡ ಒಂದು ವಾರ ಸುಮ್ಮನಿದ್ದ ನಾರಮ್ಮ ಆಮ್ಯಾಲ ತನ್ನ ಗಂಡನ ಸಾವು ಹೆಂಗ ಬಂತು ಅಂತ ಪತ್ತೆ ಹಚ್ಚಾಕ ಮನಿ ಆಳುಗುಳಿಗೆ ಹೇಳಿದ ಮೂರಾ ದಿನಕ್ಕ ಹೊರಕ ಬಿತ್ತು ಸತ್ಯ. ಕೀರಪ್ಪನ ಆ ಸಾವಿನ ಅಸಲಿಯತ್ತು ಏನಿತ್ತಪಾ ಅಂದ್ರ ಈ ಕೀರಪ್ಪ ಊರಾಗ, ಅದ್ರಾಗೂ ಒಂದಾ ಏರಿಯಾದಾಗ ನಾಕು ಹೆಣ್ಮಕ್ಕಳ ಸಂಗ ಮಾಡಿದ್ದ. ಅದ್ರಾಗ ಹೊಟ್ಟಿಪಾಡಿಗೆ, ಬಡತನಕ್ಕ ಬಳಲಿದೋರು ಕೀರಪ್ಪನ ಸವಾಸ ಮಾಡಿದ್ರು. ಅದ್ರಾಗ ಇಬ್ರು ಹೆಣ್ಮಕ್ಕಳ ನಡುಕು ಇದಾ ಕೀರಪ್ಪನ ವಿಚಾರದಾಗಾ ಜಗಳ ನಡದಿತ್ತಂತೆ. ಆ ಜಗಳ ತೀರಾ ವೈಷ್ಯಮ್ಯಕ್ಕೋಗಿ ನನಿಗ್ಯ ದಕ್ಕದ ಸೌಕಾರ ನಿನಿಗ್ಯಾಕ ಬೇಕಲೇ ಅಂತೇಳಿ ಒಬ್ಬಾಕಿ ಅವತ್ತು ಉಣ್ಣಾ ಅನ್ನದಾಗ ಇಸಾಕೊಟ್ಟಿದ್ಲಂತ್ಯ. ಸುದ್ದಿ ಕೇಳಿದ ನಾರಮ್ಮ ಬಾಳ ನೊಂದಕಂಡು ಆ ಹೆಣ್ಮಗಳನ್ನ ಮನಿಗೆ ಕರದು 'ಸುಮ್ಮನ ಪೊಲೀಸ್ರಿಗೆ ಹೋಗಿ ಶರಣಾಗು ಇಲ್ಲಾಂದ್ರ ನಡಿಯಾ ಕತೀನಾ ಬ್ಯಾರೆ ಐತಿ ನೋಡು' ಅಂತ ಸಿಟ್ಟಿಲೆ ಹೇಳಿದ ಮೂರ ತಾಸಿನೊಳಗ ಆ ಹೆಣ್ಮಗಳು ತನ್ನ ತಪ್ಪು ಒಪ್ಪಿಗಂಡು ಜೈಲಿಗೋಗಿ ಬಿಟ್ಲು.

 ಈ ಸತ್ಯದ ಘಟನಿ ತಿಳದ ಇಡೀ ಊರಾಗಿನ ಜನ ನಾರಮ್ಮನ ಒಳ್ಳೇ ಗುಣಕ್ಕ ಮರುಗಿದ್ರ, ಅಕಿಯ ದೈರ್ಯಕ್ಕ ಮೆಚ್ಚಿದ್ರು. ಅವತ್ತಾ ಊರಿಗೆ ಬಂದಿದ್ದ ನಾರಮ್ಮನ ಹೆತ್ತೋರು ತಮ್ಮ ಇದ್ದೊಬ್ಬ ಮಗಳ ಬಾಳು ಹಿಂಗಾತಲ್ಲಾ, ತನ್ನ ರೊಕ್ಕದ ಸೊಕ್ಕಿಗೆ ಕೀರಪ್ಪ ತನ್ನ ಮಗಳ ಬಾಳು ಹಾಳು ಮಾಡಿದ್ದಲ್ಲದಾ, ತನ್ನ ವಂಶಾನ ಸರ್ವನಾಶ ಮಾಡಿಕಂಡನಲ್ಲಾ ಅಂತ ಗೋಳಾಡಿ ಅಳೋವಾಗ ಕಂಬಕ್ಕ ಆತುಕೊಂಡು ಕುಂತಿದ್ದ ನಾರಮ್ಮ 'ಯವ್ವಾ ಈಗ ಇತ್ತೀಚಿಗೆ ಆತ (ಗಂಡ) ಒಂದೀಟು ಹಾದಿಗೆ ಬಂದಿದ್ನಬೇ ಇನ್ನೇನು ಸರಿ ಹೊಕ್ಕಾನ ಅನ್ನಷ್ಟತ್ಗೆ ಹಿಂಗಾತು, ಆದ್ರ ನೀವು ತಿಳ್ಕಂಡಂಗ ಈ ವಂಶ ಇಲ್ಲಿಗೇ ಸರ್ವನಾಶ ಆಗಲ್ಲ ಯಾಕಂದ್ರ' ಅಂತೇಳಿ ಅವ್ವನ ಮಾತ್ರ ಒಳಾಕ ಕರದು 'ಯವ್ವಾ ನನಿಗೆ ಮುಟ್ಟು ನಿಂತೈತಿ' ಮೆಲ್ಲಕ ಹೇಳಿದ್ಲು !
ವಿಷ್ಯ ತಿಳದು ಹಿಗ್ಗಿಬಿಟ್ಲು ತಾಯಿ. ಅವತ್ತಾ ವಿಷ್ಯ ಓಣ್ಯಾಗಿನ್ನ ಜನಕ್ಕೆಲ್ಲಾ ಮುಟ್ಟಿತು. ಮನಿಯ ಅಕ್ಕ ಪಕ್ಕದೋರು ಬುಡಾ ನಮ್ಮೌವ್ವನಾ ದೇವ್ರು ಕೊನಿಗಾಲದಾಗ ಕೈ ಬಿಡಲಿಲ್ಲ ಅಂತ ಎಲ್ಲರೂ ಸಮಾಧಾನಗೊಂಡಿದ್ರು. ಯಾಕಂದ್ರ ನಾರಮ್ಮಳ ಗುಣಕ್ಕ ಎಲ್ಲರೂ ತಲಿಬಾಗಿದ್ರು. ಈ ಘಟನೆಯಾದಮ್ಯಾಗ ಮೊದ್ಲಾ ಒಂದು ನಿಧರ್ಾರಕ್ಕ ಬಂದಿದ್ದ ನಾರಮ್ಮ ಅವತ್ತೊಂದು ಶನಿವಾರ ಅಪರಾಳದ ಹೊತ್ತಿನಾಗ ಹನ್ಮಪ್ಪನ ಗುಡಿಗೋಗಿ ಅಲ್ಲಿ ನಿದ್ದಿಯೊಳಗಿದ್ದ ಸಿದ್ದಯ್ಯನ ಎಬ್ಬಿಸಿ ತನಗ ಎದುರಾಗಿರಾ ಕಷ್ಟಕ್ಕ ಪರಿಹಾರ ಕೇಳಿದ್ಲು. ಸಪೂರ ಸುಂದರಿಯ ದಿಟ್ಟತನದ ನಿಲುವಿಗೆ ತಲೆಬಾಗಿದ್ದ ಸಿದ್ದಯ್ಯ. ಆ ಶನಿವಾರ ಹನ್ಮಪ್ಪನ ಜ್ಯೋತಿಯೊಂದು ಮದ್ಯಾಹ್ನದೊತ್ತಿನಾಗಾ ಬೆಳಗಿ ಗರ್ಭಗುಡಿಯೊಳಗಿನ್ನ ಕತ್ತಲನ್ನ ಓಡಿಸಿತ್ತು. ಸಿದ್ದಯ್ಯನ ಮುಂಗೈಗೊಂದು  ನಾಲ್ಕು ತ್ವಲಿಯ ಬಂಗಾರದ ಕಡಗ ಬಂದಿತ್ತು.  ಆಮೇಲಿನ ಕೆಲವು ತಿಂಗಳುಗಳಲ್ಲಿ ನಾರಮ್ಮಳ ಸೀಮಂತ ಕಾರ್ಯ ನಡೆದಿತ್ತು. ಆಮ್ಯಾಲೆ ನಾರಮ್ಮಗೊಂದು ಗಂಡುಮಗು ಹುಟ್ಟಿತ್ತು. ಮತ್ತೂ ಕೆಲವು ತಿಂಗಳುಗಳು ಕಳೆದವು. ಮಗುವಿನೊಂದಿಗೆ ತನ್ನ ಗಂಡನ ಮನಿಗೆ ಬಂದ ನಾರಮ್ಮ ಹೊಸಾ ಜೀವನಕ್ಕ ನಾಂದಿ ಹಾಡಿದ್ಲು. ಈಗ ಬೆಳಗಿನ ಜಾವ ಸಿದ್ದಯ್ಯನ ಶಂಖನಾದಕ್ಕೆ ಬೀದಿಯಲ್ಲಿನ ನಾಯಿಗಳು ಬೊಗಳೋಕ್ಕೆ ಶುರು ಮಾಡಿದ್ರ, ನಾರಮ್ಮಳ ಮಗ್ಗುಲು ದೊಡ್ಡ ಮಂಚದ ಮ್ಯಾಗ ಮಕ್ಕೊಂಡ ಮಗು ಕಿಲಿಕಿಲಿ ನಗುತ್ತಿತ್ತು. 




 

Saturday, 3 August 2013

ಹಸಿವು: my imagination 09

ಹಸಿವು: my imagination 09:   ಬನ್ನಿ ಹಬ್ಬ 'ಹೊತ್ತಾಕೈತಿ ಹೊಗಲೇ, ತಲಿ ಎರಕಂಡು ಬಂದು ದೇವ್ರಿಗೆ ಎಲ್ಡು ಉದ್ದಿನಕಡ್ಡಿ ಹಚ್ಚು ಅಂತ ಅವಾಗಿನಿಂದ ಹೇಳಕತ್ತೀನಿ,ಎದ್ದಳಕಾ ತಯಾರಿಲ್ಲ ನೋಡ್ರಬೇ...

Friday, 2 August 2013

my imagination 09

 ಬನ್ನಿ ಹಬ್ಬ
'ಹೊತ್ತಾಕೈತಿ ಹೊಗಲೇ, ತಲಿ ಎರಕಂಡು ಬಂದು ದೇವ್ರಿಗೆ ಎಲ್ಡು ಉದ್ದಿನಕಡ್ಡಿ ಹಚ್ಚು ಅಂತ ಅವಾಗಿನಿಂದ ಹೇಳಕತ್ತೀನಿ,ಎದ್ದಳಕಾ ತಯಾರಿಲ್ಲ ನೋಡ್ರಬೇ. ಏನಾಗಿದ್ದೀತು ಈ ಹುಡ್ಗೀಗ್ಯ ?' ಧ್ವನಿ ಎಲ್ಲೋ ಕೇಳಿದಂಗಾಗಿ ಮೆಲ್ಲಕ ಕಣ್ಣು ತೆಗದ ನೋಡಿದ ಪಾರ್ವತಿ ಮನಿಯ ಬಾಗಲ ಹೊರಾಕ ನೋಡಿದಾಗ ಹೊತ್ತು ಮುಣಿಗಿ ಕತ್ಲಾಗಿತ್ತು. ಮನಿಮುಂದೆ ಹಂದರಕ್ಕ ಹಾಕಿದ್ದ ತೆಂಗಿನ ಗರಿಗಳು ಬಾಡಿದಂಗಾಗಿದ್ರೂ  ತನ್ನ ಹಸುರು ಬಣ್ಣನ ಕಳಕಂಡಿದ್ದಿಲ್ಲ. ಕರೆಂಟು ಇದ್ರೂ ಹಂದರದ ನಡುಕು ಒಂದು ಲಾಟೀನ ಹಚ್ಚಿದ್ರು. ಅದು ಸ್ವಲ್ಪ ಜಾಸ್ತಿ ಉರಿಯಾಕತ್ತಿದ್ಕ, ಅದರ ಪಾವು, ಹೊಗಿಲಿಂದ ಸ್ವಲ್ಪ ಕರ್ರಗಾಗಿತ್ತು. ಮನಿಯ ಒಳಗಾ ಹೆಣ್ಮಕ್ಕಳ ಪಂಕ್ತಿ ನಡದಿತ್ತು. ಮನಿಯ ಹೊರಾಕ ನೋಡಾಕತ್ತಿದ್ದ ಪಾರ್ವತಿ ಮೆಲ್ಲಕ ಯಾರಾ ನನ್ನ ಎಬ್ಬಿಸಿದಂಗಾತಲ್ಲಾ ಅಂತೇಳಿ ನೋಡಿದ್ರ ಎದ್ರಿಗ್ಯ ಅಕಿಯ ಎಂಟು ಗೆಣಕಾರ್ತಿಯರು  ನಕ್ಕೋತ ನಿಂತಿದ್ರು. ಅವರವ್ವ ಒಳಾಕ ಹೋದ್ಲು. ಅವಾಗ ಗೆಣಕಾರ್ತಿಯರ ಪೈಕಿ ಒಬ್ಬಾಕಿ 'ಏನೇ ಮದ್ಯಾಹ್ನಾನಾ ಮಕ್ಕಂಡಿದ್ಯಂತ್ಯ ? ಪಾಡಾತು ಬುಡು' ಅಂತ ನಕ್ಕೋತ ಹೇಳತಿದ್ದಂಗನಾ ಎದ್ದು ಕುಂತ ಪಾರ್ವತಿ ಸುತ್ತ ಬಂದು ಅವರೆಲ್ಲ ಕುಂತಕಂಡ್ರು. ಹಂಗ ನೋಡಬೇಕಪ್ಪಾ ಅಂದ್ರ ಆ ಟೈಂನಾಗ ಪಾರ್ವತಿ ಮಖ ಕೆಂಪಾಗಬೇಕಿತ್ತು. ಆದ್ರ ಅಂಥಾ ಬದ್ಲಾವಣಿನೇನೂ ಯಾರೂ ಕಾಣಲಿಲ್ಲ. ಹೊದ್ದಕಂಡಿದ್ದ ದುಪ್ಪಡಿ ತೆಗದು ಕುಂತಗಂಡ ಪಾರ್ವತಿಗೆ ಇನ್ನೊಬ್ಬ ಗೆಳತಿ, 'ಹೋಗೇ ಗಡಗಡ ಮೈ ತ್ವಕ್ಕಂದು ಬಾ, ನಾವೀಟು ನಿನ್ನ ರೆಡಿ ಮಾಡಾಕು'. ಅಂದಾಗ, ತನ್ನ ಎರಡೂ ಕೈಗಳಿಂದ ಮಖದ ತುಂಬಾ ಹಲ್ಡಿಕಂಡಿದ್ದ ತನ್ನ ಮುಂಗೂದಲನ್ನ ಸರಿಗೆ ಮಾಡಿಕಂಡು ಪಾರ್ವತಿ ಬಚ್ಚಲು ಮನಿಗೆ ಹೋದ್ಲು. ಅಷ್ಟತ್ತಿಗೆಲ್ಲಾ ಬಚ್ಚಲಮನಿಯಾಗ ಬರೊಬ್ಬರಿ ಒಂದು ದೊಡ್ಡ ಬಕೀಟ್ನಾಗ ಸುಡ್  ಸುಡೋ ನೀರು ಹೊಗಿಯಾಡತಿದ್ವು., ಆ ನೀರನ್ನ ನೋಡಿದ ಪಾರ್ವತಿ ಆಕಳಿಸಿಕಂತ ಮತ್ತೊಂದಿಷ್ಟು ತಣ್ಣೀರನ್ನ ಸುರುದು, ನೀರನ್ನ ಮೈ ತ್ವಕ್ಕಣಾ ಹದಕ್ಕ ತಂದಕಂಡು, ತನ್ನ ಮುಡಿಯಾಗ ಬಾಡಿದ್ದ ಮಲ್ಲಿಗಿ, ಕನಕಾಂಬ್ರಿ, ಗುಲಾಬಿ ಹೂಗಳನ್ನ ಹಿಡಕಂಡಿದ್ದ ಏರ್ ಪಿನ್ ತೆಗದು ಹೂವನ್ನ ಬಚ್ಚಲ ಮನಿಯಾಗಿನ ಒಂದು ಗುಣೇದಾಕ ವಗದಳು. ಇನ್ನೂ ಅದಾ ಹಳೇ ನಿದ್ದಿ ಮಂಪರಿನಾಗ ಬ್ರಷ್ ಮಾಡಿದ್ಲು. ಆಮೇಲೆ ಬಕೀಟ್ನಾಗಿಂದ ಒಂದು ಚೊಂಬು ನೀರು ತಗೊಂಡು ತಲಿಮ್ಯಾಗ ಸುರುಕೊಂಡಾಗ ಅಕೀ ತಲಿಮ್ಯಾಗಿಂದ ಹರದಿದ್ದು,
ಗಟ್ಟಿಗಿನ ಅರಿಷಿಣದ ನೀರು !
ಹೌದು. ಪಾರ್ವತಿ ಅದಾ ವಾರ ಮದುವಿಯಾಗಿದ್ದ ಹೊಸ ಮಧುಮಗಳು. ಇವತ್ತು ಅಕಿಯ ಕಡೇ ನೀರಿನ ಕಾರ್ಯ ನಡಿಯಾಕತೈತಿ. ಅಂದ್ರ ಇದು ಪಾರ್ವತಿಯ ಪ್ರಸ್ಥದ ದಿನ. ಅಷ್ಟತ್ತಿಗೆಲ್ಲಾ ಒಣ್ಯಾಗಿನ್ನ ಹೆಣ್ಮಕ್ಕಳೆಲ್ಲಾ ಬಂದು ಕಾರ್ಯಕಟ್ಟು ಅಂತಾ ಏನೇನಾ ಕೆಲ್ಸದಾಗ ಮುಣಿಗಿದ್ರು. ಈಗ ಪಾರ್ವತಿ ಒಬ್ಬಾಕಿ ರೆಡಿಯಾಗಿಬಿಟ್ರ, ಒಂದರ್ಧಗಂಟಿ ಮಧುಮಕ್ಕಳನ್ನ ಹಂದ್ರದ ತೆಳಗ ಕುಂದ್ರಿಸಿ, ಕಳಸ ಬೆಳಗಿ, ಓಣ್ಯಾನ ದೈವದೋರು, ಪಾರ್ವತಿ ಅಪ್ಪನ ಗೆಣೆಕಾರು ಎಲ್ಲಾರು ಪಂಕ್ತಿಲಿ ಕುಂತ್ಗಂಡು ಉಂಡೊಕ್ಕಾರ. ಆಮ್ಯಾಲೆ ಪಾರ್ವತಿ ಗೆಣತೀರು ಪಾರ್ವತೀನ ರೆಡಿ ಮಾಡಿ ಪ್ರಸ್ಥದ ಕ್ವಾಣಿಗೆ ಬಿಟ್ಟು ಹುಳ್ಳುಳ್ಳಗೆ ನಕ್ಕೋತ ಮನಿಗೊಕ್ಕಾರ. ಇದು ಇವತ್ತು ನಡಿಬೇಕಿರಾ ಕಾರ್ಯಕ್ರಮ. ಅದಕ್ಕಾಗಿನೇ ಅವರವ್ವ ಮಕ್ಕಂಡಿರಾ ಪಾರ್ವತಿಗೆ ಮೈ ತ್ವಕ್ಕಂಡು ಮನಿದೇವ್ರಿಗೆ ಎಲ್ಡು ಉದ್ನಿಕಡ್ಡಿ ಹಚ್ಚಾಕ ಅವಸ್ರ ಮಾಡಾಕತ್ತಿದ್ದು.
ಮನಿಯಾಗ ನಡಿಯಾಕತ್ತಿದ್ದ ಸಂತೋಷದ ಮಾತುಕತಿಗಳು, ಗೆಳತಿಯಾರ ಕಾಡರಟಿ, ಹಾಸ್ಯ, ಸೋಬಾನ ಪದಗಳನ್ನ ನೆಪ್ಪು ಮಾಡಿಕಣಾಕತ್ತಿದ್ದ ಮುದುಕ್ಯಾರ ಖುಷಿ, 'ತಗಳಲೇ ಕುಡುದು ನಿಷೇದಾಗ ಹಂಗಾ ಹೋಗಿ ಮಕ್ಕೋಬ್ಯಾಡ, ಉಂಡು ಹೋಗುವಂತೆ' ಅಂತ ಅವರಪ್ಪ ಯಾರಿಗೋ ಹೇಳಿತಿದ್ದ ಧ್ವನಿ ಎಲ್ಲದನ್ನೂ ಕೇಳಿಸ್ಕೋತ ಪಾರ್ವತಿ ಮೈ ತ್ವಕಣಾಕತ್ತಿದ್ಲು. ಅಕೀಗೆ ದೇವರ ಮನಿಯಾಗಿನ ಸೆಲ್ಪಿನ್ಯಾಗ ಇಟ್ಟಿದ್ದ ಬಾಟ್ಲಿಗಳ ಒಂದು ಕೇಸ್ ನೆನಪಾತು. ಓಣ್ಯಾನ ಕೆಲವು ಯಜಮಾನ್ರು, ತನ್ನಣ್ಣನ ಗೆಣೆಕಾರ್ರು ಎಲ್ಲಾರೂ ಸೇರಿ ತುಂಬಿಕಂಡಿದ್ದ ಕೇಸ್ನ ಖಾಲಿ ಮಾಡಾಕ ತುದಿಗಾಲಿಲೆ ಕುಂತಿದ್ದನ್ನ ನೆನಪು ಮಾಡಿಕಂಡ್ಲು. ಸುಡ್ ಸುಡೋ ನೀರು ಸುರಕೋತನೇ ಇದ್ಲು. ಇನ್ನೇನು ತಲೀಗೆ ಹಚ್ಚಿಗಣಾಕ ಶಾಂಪುಗೆ ಕೈ ಹಾಕಬೇಕು, ಅವನು ನೆಪ್ಪಾಗಿಬಿಟ್ಟ. ಜೀವದ ಗೆಳೆಯ. ಹೆಸ್ರು
ಶಂಕರ !

'ಏನಿವತ್ತು ? ಟಿವ್ಯಾಗ ತೋರಿಸಾ ಅಡವಿಟೇಜು ವರ್ಕೌಟ್ ಆದಂಗೈತಿ? ಶಾಂಪು, ದುಬಾರಿ ಸೊಬ್ಬು, ಇದ್ಯಾವುದೋ ಸೆಂಟು, ಉಗುರುತುಂಬಾ ಉಗಿರಿಂದಾ ಬಣ್ಣ ಹೋಲಾಂತ ಪಾಲಿಷ್ಷು, ಮಖಕ್ಕ ಇದ್ಯಾವುದೋ ಘಂ ಅನ್ನಾಂತ ಕ್ರೀಮು. ದೊಡ್ಡ ಕತಿ ಐತಿ ಬುಡು' ಊರಿಂದ ಒಂದಾ ಒಂದು ಕಿಲೋಮೀಟ್ರು ದೂರದಾಗಿರಾ ಸಣ್ಣ ಗುಡ್ಡದ ಮ್ಯಾಗಿನ ಒಂದು ಕಲ್ಲಿನ ಮ್ಯಾಗ ಕುಂತ್ಗಂಡು ನಕ್ಕೋತ ಹೇಳತಿದ್ದ. ಅವನಿಗೆ ಈ ಆಧುನಿಕ ಅಡವಿಟೇಜುಗಳ ಮ್ಯಾಗ ಸಿಕ್ಕಾಪಟ್ಟೆ ಸಿಟ್ಟಿತ್ತು. ಅವಾಗೆಲ್ಲಾ ಶಂಕ್ರನ ಮಾತು ಕೇಳಿ ತಲಿ ತಗ್ಗಸಿ 'ನಾನೊಳ್ಳೇ ಕಾಡಿನ ಸವಾಸ ಮಾಡಿಬಿಟ್ಯ' ಅಂತೇಳಿ ನಕ್ಕೋತ ಅವನ ಬುಜಕ್ಕ ತಲಿಕೊಡ್ತಿದ್ದಾಕಿ, ಶಾಂಪೂ ಕಡೆ ಹೋದ ಕೈಯನ್ನ  ಇವತ್ತು ಛಕ್ಕನಂಗ ಹಿಂದಕ್ಕ ತ್ಯಕ್ಕಂಡು, ಅದ್ರ ಮಗ್ಗಲದಾಗಿದ್ದ ಸೀಗೆಕಾಯಿ ಪುಡಿನಾ ತಲಿಗೆ ಹಾಕ್ಕೊಂಡ್ಲು. ಸೊಬ್ಬಿನ ಕಡೀಗ್ಯ ತಿರಿಗೀನೂ ನೋಡದಂಗ ಒಂದು ಬಟ್ಟಲದಾಗಿದ್ದ ಕಡಲೆ ಹಿಟ್ಟನ್ನೇ ಮೈಗೆ ಹಚ್ಚಿಕಂಡ್ಳು.. ಅದರ್ಾ ಮಣಕೈವರಿಗೂ ತುಂಬಿಕಂಡಿದ್ದ ಹಸುರು ಬಳಿನಾ ಒಮ್ಮಿ ನೋಡಿಕಂಡು ಯಾಕಾ ಕಣ್ಣೀರು ಹಾಕಿದ್ಲು. ಇನ್ನೂ ಹೊಸವಾ ಆಗಿದ್ದ ಕಾಲಚೈನು ತಿಕ್ಕೋಬೇಕಾದ್ರ ತನ್ನ ಕಣ್ಣೀರ ಹನಿ ಆ ಚೈನಿನ ಮ್ಯಾಕ ಬಿದ್ದುಬಿಟ್ವು. ಅಂಥಾ ಸಂದರ್ಭದಾಗೂ ಹುಕ್ಕಿ ಬಂದ ದುಕ್ಕಕ್ಕ ಆಕಿ ತನ್ನ ಕಳದೋದ ದಿನಗಳಿಗೆ ಜಾರಿಬಿಟ್ಲು.
ಅವತ್ತು ಆ ಊರಾಗ ಜಾತ್ರಿಯಿತ್ತು. ಜಾತ್ರಿ ಮಾಡಾನು ಅಂತೇಳಿ ಗೆಳತ್ಯಾರ ಜೊತಿಗೆ ಪಾರ್ವತಿ ಹೋದಾಗ ಗೆಣೆಕಾರ ಜತಿಗ್ಯ ಜಗತ್ತನ್ನಾ ಗೆದ್ದಂಥಾ ಕಲ್ಮಷನಾ ಇಲ್ಲದಂಥಾ ಖುಷಿಯೊಳಗ ಬರುತಿದ್ದ ಶಂಕರನ್ನ ನೊಡಿ ನಾಚಿ ತಲಿ ಬಗ್ಗಿಸಿದ್ದಳು. ಅವನೇನೂ ಇಕಿಕಡಿಗ್ಯ ನೋಡಿರಲಿಲ್ಲ. ಆದ್ರ ಇಡೀ ಊರಿಗ್ಯಾ 'ಬಾಳ ಒಳ್ಳೇನು, ಜಿದ್ದಿಗೆ ಬಿದ್ರ ಅವನು ಏನು ಬೇಕಾರ ಧಕ್ಕಿಸ್ಕಂತನ. ಅದ್ಕ ಅವನ್ನ ಯಾರೂ ಎದ್ರಕ್ಕಬ್ಯಾಡ್ರಲೇ' ಅಂತಾನಾ ಹೆಸ್ರಾಗಿದ್ದ ಶಂಕ್ರನಿಗ್ಯ ಪಾರ್ವತಿ ಕಳದೋಗಿದ್ಳು. ಪುಣ್ಯಕ್ಕ ಅವತ್ತು ಆ ಶಂಕ್ರನ ಗೆಣೆಕಾರರ ಗುಂಪಿನಾಗ ಪಾರ್ವತಿ ಗೆಳತಿಯ ಅಣ್ಣನಿದ್ದ. ಹಿಂದೆಲೆ ಒಂದು ಐಡ್ಯಾ ಮಾಡಿದ ಪಾರ್ವತಿ, ತನ್ನ ಗೆಳತಿ ಮಂಜುಳಾಗ,  'ಲೇ ಮಂಜಿ, ನಾವು ಇಲ್ಲಿ ಬಳಿ ತಗಾಣಾನು ಹೆಣ್ಮಕ್ಕಳಿಗೆ ಅಂಗಡಿಯೋರು ರೇಟು ಬಾಯಿಗೆ ಬಂದಂಗ ಹೇಳ್ತಾರ, ಬಳಿ ಇಕ್ಕಾ ನ್ಯವಾದಾಗ ಮುಂಗೈನ ಬೇಕಂತ್ಲ ಹಿಚುಕಿ ಹಿಂಸೆ ಮಾಡ್ತಾರ. ಅದ್ಕಾ ಅಲ್ಲಿ ನಿಮ್ಮಣ್ಣ ಅದಾನಲ್ಲ ಕರಿ ಒಂದೀಟು' ಅಂತ ಹೇಳಿದ್ದು ಸರಿ ಅನ್ನಿಸಿ ಮಂಜುಳ ಕೂಗಿ ಅವರ ಅಣ್ಣನ್ನ ಕರದ್ರ, ಔನು 'ಬಾರಲೇ ಶಂಕ್ರಿ ಅವ್ರೇನಾ ತಗಂತಾರಂತ್ಯ, ಕೊಡಿಸಿ ಕಳಸಾನು' ಅಂತಂದು ಶಂಕ್ರಿನೂ ಜೊತಿಗೆ ಕರಕಂಡು ಪಾರ್ವತಿ ಗುಂಪಿನತ್ರ ಬಂದು ನಿಂತಾಗ, ಶಂಕ್ರಿಯ ಮಗ್ಗುಲು ಸರದ ಪಾರ್ವತಿ, 'ಶಂಕ್ರು, ಯಾವ ಬಳಿ ಸೂಟ್ ಅಕ್ಕಾವು ಹೇಳು ಪ್ಲೀಜ್' ಕಿವಿಗ್ಯ ಹತ್ರದಾಗ ನಿಂತ್ಗಂಡು ತುಟಿನೂ ಅಡಿಸದಂಗ ಮೆಲ್ಲಕ ಕೇಳಿದ ಪಾರ್ವತಿ ಧ್ವನಿಗೆ ಕಕ್ಕಾಬಿಕ್ಕಿಯಾದ ಶಂಕ್ರ, ಇಷ್ಟಗಲಾ ಕಣ್ಣಗಲಿಸಿ ಪಾರ್ವತೀನಾ ನೋಡಿದಾಗ. ಪಾರ್ವತಿ ಮಖದಾಗ ಮೂಡಿದ್ದ ತಂಗಾಳಿ ಚಂದಪ್ಪನ್ನ ಕಂಡಂಗಾಗಿ ಹಸುರು ಬಳಿಕಡಿಗೆ ಬೊಟ್ಟು ತೋರಿಸಿದ್ದ. ಬರಬ್ಬರಿ ಎಲ್ಡು ಡಜನ್ ಬಳಿ ತಗಂಡು ಕೈ ತುಂಬಾ ತೊಟ್ಕೊಂಡು ದೂರದಾಗ ನಿಂತಿದ್ದ ಶಂಕ್ರಿಕಡಿಗೆ ತೋರಿಸಿ 'ಹೆಂಗದಾವು' ಅನ್ನಂಗ ಕಣ್ಣ ಹುಬ್ಬೇರಿಸಿದ್ಳು. ಮೀಸಿಯೊಳಗಾ ನಕ್ಕೊತ ಶಂಕ್ರಿ ಉದ್ದುದ್ದಾ ತಲಿಯಾಡಿಸಿದ್ದ.

ಅವತ್ತಿನವರಿಗೂ ಇಡೀ ಊರಾಗ ಶಂಕರನಿಗೆ ಅಟಕಂದು ಸದರದಿಲೆ ಮಾತಾಡಿದ ಮದ್ಲನೇ ಹುಡುಗಿನಾ ಪಾರ್ವತಿ. ಯಾಕಂದ್ರ ಶಂಕ್ರಿಗ್ಯ, ತನ್ನ ಊರಾಗಾತೂ, ತನ್ನ ಓಣ್ಯಾಗಾತು, ಸಣ್ಣೋರಿಂದ, ಹಣ್ಣಣ್ಣು ಮುದುಕ್ರುವರಿಗೂ ಎಲ್ಲರೂ ಬಾಳ ಪ್ರೀತಿಲಿಂದ ಕಾಣತಿದ್ರು. ಎಲ್ಲರೂ 'ಅವ್ನು ನಮ್ಮ ಮನಿ ಮಗ ಇದ್ದಂಗ್ರೀ' ಅಂತಂದು ಬಂದೋರ ಎದ್ರಿಗೆ ಹೇಳತಿದ್ರು.. ಶಂಕ್ರಿ ಓಣ್ಯಾಗಿನ ಯಾರ ಅಡಿಗಿ ಮನಿಗೆ ಬೇಕಾರೂ ಹೋಗಿ ಹೊಟ್ಟಿತುಂಬಾ ಉಂಡು ಬರ್ತಿದ್ದ. ಜನಾ ಅಷ್ಟು ಅವನ್ನ ಹಚ್ಚಿಕೊಂಡಿದ್ರು. ನೆಚ್ಚಿಗಂಡಿದ್ರು. ಇನ್ನು ,ಹುಡಿಗೇರಂತೂ ಅವನಿಗ್ಯ ಬಾಳ ಗೌರವ ಕೊಡ್ತಿದ್ರು. ಕೆಲವು ಹುಡುಗೀರು ಶಂಕರನ ಗುಣಕ್ಕ ಅವನನ್ನ ಕೈ ಹಿಡಿಬೇಕು ಅಂತ ಅಂದ್ಕೊಂಡೋರು ನೇರವಾಗಿ ಶಂಕ್ರಿ ಹತ್ರ ಮಾತಾಡಾ ಧೈರ್ಯ ಸಾಲ್ದಾಗಿ ಅವನ ಚಡ್ಡಿ ದೋಸ್ತ ರಾಘನ ಎದ್ರಿಗೆ 'ರಾಘಣ್ಣಾ, ನಾನು ಶಂಕರನ್ನ ಇಷ್ಟಪಟ್ಟಿನಿ, ಅತನ ಎದ್ರಿಗೆ ಹೇಳಾಕ ಧೈರ್ಯ ಬರವಲ್ದು ನೀನಾ ಹೇಳ್ತಿ ಇಲ್ಲಪಾ?' ಅಂತೇಳಿ ಅವನ ಖರ್ಚಿಗಿಷ್ಟು ರ್ವಕ್ಕ ಕೊಡೋರು. ರ್ವಕ್ಕ ತಗಂಡಮ್ಯಾಗ ರಾಘ 'ತಂಗೀ ಹೆಣ್ಮಕ್ಕಳು ಅಂದ್ರ ಒಂದು ಅಣ್ಣನ ಗಂಭೀರದಾಗ ನಿಂದ್ರ ಅವ್ನು ಈ ಇಳೇವ್ನ ಒಪ್ಪತಾನೋ ಏನು ನನ್ನ ಕೆರದಾಗ ಹೊಡಿತಾನೋ, ಅಂತೂ ಒಮ್ಮಿ ಕೇಳಿ ನೋಡ್ತಿನಿ' ಅಂತೇಳಿ ಶಂಕ್ರಿ ಹತ್ರ ಬಂದು ಅದೂ ಇದೂ ಮಾತಾಡಿ ಕೊನಿಗೆ ತನಿಗೆ ಬಂದಿರಾ ವೀಳ್ಯಾದ ವಿಷ್ಯಾನ ಹೇಳಿ ಮಖಾ ತೋಯುವಂಗ ಉಗುಳಿಸ್ಕೋತಿದ್ದ. ಅಂಥಾ ಶಂಕ್ರಿ ಮನಸಿನ್ಯಾಗ ಅವತ್ತು ಪಾರ್ವತಿ ಡೈರೆಕ್ಟ್ ಎಂಟ್ರಿ ಕೊಡಾಕ ಕಣ್ಣಾಗಾ ಒಪ್ಪಿಗಿ ಕೇಳಿಬಿಟ್ಟಿದ್ಲು. ಅವತ್ತು ಮದ್ಲನೇ ಸತಿ ಶಂಕ್ರಿ ಒಬ್ಬನಿಗೊಬ್ಬನಾ ನಗಾಕ ಚಾಲೂ ಮಾಡಿದ್ದ. ಮಗ್ಗಲದಾಗ ನಿಂತಿದ್ದ ಚಡ್ಡಿ ದೋಸ್ತ ರಾಘ 'ಲೇ ಶಂಕ್ರೀ ಇನ್ನು ನನಿಗ್ಯ ಕೆರದೇಟು ಕಮ್ಮಿ ಅಕ್ಕಾವು ಹೌದಿಲ್ಲು ?' ಅಂತ ಕೇಳಿದಾಗ ಜೋರು ನಕ್ಕಿದ್ರು ಇಬ್ರೂ.

ಅಲ್ಲಿಂದ ಶಂಕ್ರಿ ಪಾರ್ವತಿ ನಡುಕು, ಬಾಳ ಅಂದ್ರ ಬಾಳ ಒಳ್ಳೊಳ್ಳೇ ಘಟನಿಗಳು ನಡಿದಿದ್ವು. ಇತ್ತೀಚಿಗೆ ಶಂಕ್ರು ದಿನಾಲು ಆ ಪಾರ್ವತಿ ಮನಿ ಮಗ್ಗಲದಾಗಿನ ಶೆಡ್ಡಿನ ಅಂಗಡಿ ಮುಂದೇನಾ ನಿಂದ್ರತಿದ್ದ. ಕೊನಿಗೂ ಶಂಕ್ರಿಯ ಜೀವನದೊಳಗ ಒಂದು ಒಳ್ಳೇ ಘಳಿಗಿ ಕೂಡಿ ಬಂದಿತ್ತು. ಅವತ್ತು ದಸರಾ ಹಬ್ಬದ ರಾತ್ರಿ ಬನ್ನಿ ಕೊಡಾಂತ ದಿನವಾಗಿತ್ತು. ಅವತ್ತು ರಾತ್ರಿ ಶಂಕ್ರಿ ಮತ್ಯ ರಾಘ ಜತಿಗೆ ಸಾಲು ಹಿಡಿದು ಎಲ್ಲರ ಮನ್ಯಾಗಿನ್ನ ಹಿರಿಯಾರು, ಕಿರಿಯಾರು, ಎಲ್ಲರಿಗೂ ಬನ್ನಿಕೊಟ್ಟು ಕಾಲಿಗೆ ಬಿದ್ದುಕೋತ ಮನಿ ಮನಿ ತಿರಗಬೇಕಾದ್ರ ದಾರ್ಯಾಗ ಎದ್ರಿಗಾದ ಪಾರ್ವತಿ ಮದ್ಲು ರಾಘಗ ಬನ್ನಿ ಕೊಟ್ಟು 'ಬನ್ನಿ ತಗಂಡು ಬಂಗಾರದಂಗ ಇರಾನಣ್ಣಾ' ಅಂತೇಳಿ ಕಾಲಿಗೆ ಬೀಳಾಕ ಹೋದಾಗ 'ಹೇ ಬ್ಯಾಡ್ವಾ ತಂಗೀ, ನಾ ಏನ್ ಯಜಮಾನ ಮನಷ್ಯಾ ಏನು ? ಕೈ ಮುಕ್ಕೋಳಾನು ಸಾಕು' ಅಂತೇಳಿ ಕೈ ಕೈ ಮುಕ್ಕೊಂಡಿಂದೆ ಶಂಕ್ರಿ ಕಡಿಗೆ ತಿರುಗಿದ, ರಾಘ, 'ಲೇ ಶಂಕ್ರಿ, ಇಲ್ಲೇ ಅಂಗಡಿಗೋಗಿ ಎಲ್ಡು ಇಮಾಲ್ (ಗುಟ್ಕಾ) ತರ್ತೀನಿ ತಡಿ' ಅಂತಂದು ಅಲ್ಲಿಂದ ಜಾಗ ಖಾಲಿ ಮಾಡತಿದ್ದಂಗನಾ, ಶಂಕ್ರಿ ಕೈಗೆ ಬನ್ನಿ ಕೊಟ್ಟ ಪಾರ್ವತಿ 'ನಿನಿಗ್ಯ ಬನ್ನಿ ಕೊಟ್ಟೀನಿ, ನನಿಗ್ಯ ಬಂಗಾರದಂಥಾ ಬಾಳು ಕೊಡ್ತೀಯೇನಾ?' ಕಂಡೆಬಟ್ಟೆ ಧೈರ್ಯದಾಗಲೇ ಕೇಳಿದ್ಲು. ಶಂಕ್ರಿಗೆ ನೆಲಮುಗುಲು ಏಕ್ ಆದಂಗಾಗಿ ದಂಗು ಬಡದು ನಿಂತುಬಿಟ್ಟಿದ್ದ. ಇವನೌನು ಏನರಾ ಯಾಕಾ ಆಗ್ಲಿ ಅಂತಂದು ಧೈರ್ಯ ತಗಂಡು, 'ಈಗ ದುರ್ಗಮ್ಮನ ಗುಡಿತಾಗ ದೇವ್ರ ಕಾರ್ಯ ನಡಿತೈತಲ್ಲಾ ಅಲ್ಲಿಗೆ ಬಾಯಿಲ್ಲಿ ಹೇಳ್ತಿನಿ' ಅಂತೇಳತಿದ್ದಂಗನಾ, ಹುಡುಗಿ ಶಂಕ್ರಿಯ ಮುಂಗೈಗೊಂದು ಮುತ್ತು ಕೊಟ್ಟು ಬುಜಕ್ಕ ಬುಜ ತಾಗಿಸಿ ಶಂಕ್ರಿ ಮೈಗೆ ಮಿಂಚು ಹೊಡಿಸಿ ಹೋಗಿದ್ಳು.

ಅಂಗಡೀಗೆ ಹೋಗಿದ್ದ ರಾಘ ವಾಪಾಸ್ ಬಂದು 'ಏನಾತ್ಲೇ ಶಂಕ್ರಿ ? ಹಣ್ಣೋ ಕಾಯೋ?, ಮಗನಾ ತಾನಾಗೇ ಒಲುದು ಬಂದೈತಿ ಸುಮ್ಮನ ಒಪ್ಪಿಗಂಬಿಡು, ಅದನ್ನ ಬುಟ್ಟು ನಾನು ಬಾಳ ಒಳ್ಳೆನು, ಹಿಂಗೆಲ್ಲಾ ನಡ್ಕಬಾರ್ದು, ಹಂಗಾ ಹಿಂಗ ಅಂತ ಟಬುರು ಮಾತಾಡಿದ್ರ ಇಪಾಟು ನಾನಾ ನಿನ್ನ ಮೆಟ್ಟಿಲೆ ಹೊಡಿತೀನಿ ಹುಷಾರು' ಗೆಳೆಯ ಅನ್ನಾ ಸದರಕ್ಕ ಹಂಗೇಳಿದ್ದ. ನಕ್ಕೋತ ಶಂಕ್ರಿ ಅವನ ಹೆಗಲ ಮ್ಯಾಗ ಕೈ ಹಾಕಿ, 'ಈಗ ಗುಡಿತಾಕ ಬರಾಕೇಳಿನಿ ಬಾರ್ಲೇಪಾ' ಅಂತ ಹೇಳಿದ ಸ್ವಲ್ಪ ಹೊತ್ತಿನ ಮ್ಯಾಗ ಊರಿನ ದುರುಗಮ್ಮನ ಗುಡಿಯ ಹತ್ರ ಜನಾಂ ಜಾತ್ರಿ ಗದ್ಲದಾಗ ಪಾರ್ವತಿ ಒಂದು ಕಟ್ಟಿ ಮ್ಯಾಗ ತನ್ನ ಗೆಳತಿಯಾರ ಜೊತಿ ನಿಂತಕಂಡು ನಗುತಿದ್ದದ್ದನ್ನ ನೋಡಿದ ಶಂಕ್ರಿ ಸುಮ್ಮನ ದೇವ್ರಿಗೆ ಹೋಗಿ ಕೈ ಮುಗುದು ಹೊರಾಕ ಬರೊಷ್ಟತ್ಗೆ ಪಾರ್ವತಿನೂ ಅವನ ಜೊತಿಗೂಡಿದ್ಲು. 'ಇಲ್ಲಿ ಗದ್ಲೈತಿ ಅಕ್ಕಡಿ ಹೋಗಂಬಾ' ಪಾರ್ವತಿನೇ ಹೇಳಿದ್ದನ್ನ ಕೇಳಿದ ಶಂಕ್ರಿ ಎಲಾ ಇವ್ಳಾ ! ಅಂದ್ಕಂಡಿದ್ದ.
ಆಮ್ಯಾಲೆ ಅವರಿಬ್ರೂ ಗುಡಿ ಹಿಂದಿರಾ  ಸಾಲಿ ಗ್ರೌಂಡಿನಾಗ ನಿಂತಾಗ ಶಂಕ್ರಿ 'ನನ್ಯಾಕ ಇಷ್ಟು ಹಚ್ಚಿಕೊಂಡೀದಿ ? ಕತಿ ಏನರಾ ಇರ್ಲಿ, ನಿನ್ನ ಧೈರ್ಯಕ್ಕ ಮೆಚ್ಚಿದ್ನೆ ಬುಡು' ಅಂದ 'ನಿನ್ನಂಥಾ ಕಾಡಿಗೆ, ದೂರ ನಿಂತ್ಕಂಡು ಅವನಾ ಬಂದು ಹೇಳ್ತಾನ, ನನ್ನ ಕೈ ಹಿಡಿತಾನ ಅನ್ನಾದು ಕನಸಿನ ಮಾತಂತ ಗೊತ್ತಾತು. ನಿನ್ನ ಬಿಟ್ಟು ಇರಾಕೂ ಆಗದಂಗಾಗಿ ಹಿಂಗ ಧೈರ್ಯಬಂತು ನೋಡು' ಖುಷಿಲಿಂದ ಹೇಳಿದ ಪಾರ್ವತಿಯ ಕೈ ಹಿಡಿದು ಹಣಿಗೊಂದು ಮುತ್ತು ಕೊಟ್ಟು ದೇವ್ರ ಪ್ರಸಾದ ಅಂತ ಸಿಕ್ಕಿದ್ದ ಹೂವನ್ನ ಮುಡಿಗಿಟ್ಟಿದ್ದ. ಆಮ್ಯಾಗ ಇವರಿಬ್ರ ನಡುಕು ನಡದಿದ್ದು ಅದೊಂದು ದೊಡ್ಡ ಕತಿನಾ ಬಿಡ್ರಿ. ಒಂದು ಸುಗ್ಗಿ ಕಳಿಯಾತ್ಗೆ ಇಬ್ರೂ ಜೀವಕ್ಕ ಜೀವಾ ಕೊಡಾ ಜೊಡಿಗಳಾಗಿಬಿಟ್ಟಿದ್ರು. ವಿಷ್ಯ ಊರಿನೋರಿಗೂ ಗೊತ್ತಾತು, ಪಾರ್ವತಿ ಮನೆಯೋರಿಗೂ ಗೊತ್ತಾತು.
ವಿಷ್ಯ ಗೊತ್ತಾಗತಿದ್ದಂಗನಾ ಪಾರ್ವತಿ ಅಣ್ಣ ಒಂದಿನಾ ಶಂಕ್ರಿನಾ ವಾರಿಗೆ ಕರದು, 'ಶಂಕ್ರಿ ನಾನು ಕೇಳಿದ್ದು ಖರೆ ಐತೇನು? ನಮ್ಮ ತಂಗೀನಾ ನೀ ಪ್ರೀತಿ ಮಾಡ್ತಿಯಂತೇ ? ನಿನಿಗ್ಯ ಸುಳ್ಳು ಹೇಳಾಕ ಬರಲ್ಲ, ತಪ್ಪು ನಡದಿದ್ರ ಮುಚ್ಚು ಮರಿ ಇಲ್ಲದಂಗ ನೀ ಒಪ್ಪಿಗಂತೀ ಅನ್ನಾದು ನನಿಗಂತೂ ಗೊತೈತಿ. ಖರೇವೇಳು ಇದೆಲ್ಲಾ ಹೌದಿಲ್ಲೂ ?' ನೇರವಾಗಿ ಕೇಳಿದ ಪ್ರಶ್ನೆಗೆ ಶಂಕ್ರಿ ಒಂದೀಟು ಅಂಜಿಕಿಲೆ ಮದ್ಲನೇ ಸರತಿ ವಾರಿಗಿ ಗೆಳೆಯನ ಎದ್ರಿಗೆ ತಲಿ ತಗ್ಗಿಸಿ'ಖರೇವೈತಿ. ನಾನು ನಿಮ್ಮ ತಂಗಿನ ಇಷ್ಟ ಪಟ್ಟಿನಿ' ಹಿಂಗ ಹೇಳತಿದ್ದಂಗನಾ ಬಾಚಿ ಅಮಚಿಗಂಡುಬಿಟ್ಟಿದ್ದ ಪಾರ್ವತಿ ಅಣ್ಣ. 'ಹೌದ್ದಲೇ ಮಗನಾ, ಊರಾಗ ಎಂಥೆಂತೋರು ಮನಸು ಮಾಡಿದ್ರಲೇಪಾ ನಿನ್ನ ಮ್ಯಾಲೆ. ಅಂಥಾದ್ರಾಗ ನನ್ನ ತಂಗಿ ಅದೇನು ಮಾಟ ಮಾಡಿದ್ಲಲೇ ನಿನಿಗ್ಯ? ಮಾವ ಅನ್ನಬೇಕಪ್ಪಾ ಇಪಾಟು ನಿನಿಗ್ಯ?' ಖುಷಿಲಿಂದ ಹೇಳಿದ್ದ. ಇದೆಲ್ಲಾ ಆಗಿ ಒಂದಾ ವಾರದಾಗ ಪಾರ್ವತಿ ಮನಿಯೋರು, ಶಂಕ್ರಿಯ ಮನ್ಯಾರ ಜತಿಗೆ ಈ ಇಚಾರ ಮಾತಾಡಿದಾಗ 'ನೋಡ್ರಪಾ ಔರೇನೂ ದಡ್ಡರಲ್ಲ. ಇವನೂ ವಕೀಲಗಿರಿ ಟ್ರೈನಿಂಗ್ ಮಾಡಕತ್ಯಾನ, ಮತ್ಯ ಪಾರ್ವತಿನೂ ನಮ್ಮೂರ ಬ್ಯಾಂಕಿನಾಗ ಕೆಲ್ಸಾ ಮಾಡತಾಳ. ಔರೋರ ಇಷ್ಟ ಇದ್ರ ಹಣೆಬರದಾಗ ಇದ್ದಂಗಾಗ್ಲಿ ಮುಂದಿನ ವರ್ಸಕ್ಕ ಲಗ್ನ ಹಮ್ಮಿಕಣಾನುಬುಡು, ಇನ್ನೊಂದು ತಿಂಗಳು ಕಳದು ಚೊಲೋ ದಿನ ನೋಡಿ ಇಳೇವು ಹೊಡಿಯಾನಂತೆ' ಅಂತ ಸೀ ಸುದ್ದಿ ಕೊಟ್ಟಿದ್ರು. ಜೀವನ ಜೋಡಿಗಳಿಗೆ ಬಂಗಾರದಂತಾ ಬಾಳು ಕಟ್ಟಿಗಣಾಕ ಇನ್ನೇನು ಬೇಕು ? 'ಸ್ವರ್ಗ ಅನ್ನಾದು ಎಲ್ಲೂ ಇಲ್ಲ ಅದು ನಮ್ಮಿಬ್ರ ಹೃದಯದಾಗ ಐತಿ ಹೌದಿಲ್ಲು?' ಅಂತ ಶಂಕ್ರಿ ಪಾರ್ವತಿಯ ಜುಮುಕಿ ಕಿವಿಯೊಳಗ ಪಿಸುಗುಟ್ಟಿದ್ದ. ಮತ್ತೊಂದಿಷ್ಟು ದಿನಗಳು ಸರದೋದ್ವು. ಇನ್ನೇನು ಇವರಿಬ್ರ ಎಂಗೇಜ್ ಮೆಂಟ್ ಡೇಟ್ ಪಿಕ್ಸ್ ಮಾಡಬೇಕಿತ್ತು ನಡದೋತು ಒಂದು ಅನಾಹುತ !

ಇದ್ದಕ್ಕಿದ್ದಂಗ ಶಂಕ್ರಿ ಜ್ವರದಿಂದ ಬಳಲಾಕ ಶುರು ಮಾಡಿದ. ಇದ್ದೂರ ಆಸ್ಪತ್ರ್ಯಾಗ ಏಳಿಗಿ ಆಗಲಿಲ್ಲಾಂತ ತಾಲೂಕ ಆಸ್ಪತ್ರಿಗೆ ತೋರಿಸಿದಾಗ ಇದು ಇಲ್ಲಿ ಬಗೆಹರಿಯಲ್ಲ, ಜಿಲ್ಲಾಸ್ಪತ್ರಿಗೆ  ಹೋಗ್ರಿ ಅಂದಿದ್ರಂತ್ಯ ಡಾಕ್ಟ್ರು. ಜ್ವರ ಶಂಕ್ರಿಯ ಜೀವದ ಜತಿಗೆ ಆಟ ಆಡಾಕತ್ತಿದ್ವು. ಅವನ ಮಗ್ಗುಲು ಹೆತ್ತೋರು, ರಾಘ, ಪಾರ್ವತಿ ಅಣ್ಣ, ಎಲ್ಲರೂ ಇದ್ರು. ಅವನ ತಲಿಗ್ಯ ತನ್ನ ಮಡಿಲನ್ನ ಕೊಟ್ಟಾಕಿ ಪಾರ್ವತಿ. ಇನ್ನೇನು ಡಾಕ್ಟ್ರ ಮಾತು ಕೇಳಿ ಜಿಲ್ಲಾಸ್ಪತ್ರಿಗೆ ತಗಂಡೋಗಬೇಕು, ನಡೋ ದಾರ್ಯಾಗ, ಆಂಬುಲೆನ್ಸ್ ಒಳಗಾ ಶಂಕ್ರಿ ಇಲ್ಲವಾಗಿದ್ದ. ಅವನಿಗೆ ಬಂದಿದ್ದ ಜ್ವರ ಡೆಂಗ್ಯೂ ಜ್ವರವಾಗಿದ್ವು. ಇಡೀ ಊರಿಗೂರಾ ಹೊಟ್ಟಿಕಿಚ್ಚುಪಡುವಂಗ ಜೀವನ ಕಟ್ಟಿಕೊಳ್ಳಾನು ಅಂತೇಳಿದ್ದ ಶಂಕ್ರಿ, ತನ್ನ ನೆಚ್ಚಿಕಂಡಾರ ಹೊಟ್ಟಿಯೊಳಗ ದುಃಖದ ಕಡಲು ತುಂಬಿ ವಂಟೋಗಿದ್ದ. ನೆಲ ಮುಗುಲು ಏಕು ಆಗಂಗ ಅತ್ತುಬಿಟ್ಟಿದ್ಲು ಪಾರ್ವತಿ. ಹುಚ್ಚಿಯಾಗಿಬಿಟ್ಟಿದ್ಲು ಸ್ವಲ್ಪದಿನ. ಆದ್ರ ಕಾಲ ಎಲ್ಲದಕ್ಕೂ ಮದ್ದು ಕೊಡ್ತೈತಿ ನೋಡ್ರಿ. ಹಂಗಾಗಿ ಶಂಕ್ರ ಹೋದ ಒಂದುವರೆ ವರ್ಸದ ಮ್ಯಾಗ 'ನೀನು ಮದ್ವಿಯಾಗಲಿಲ್ಲಾಂದ್ರ ನಾವೂ ಸತ್ತು ಹೊಕ್ಕೀವಿ ಅಂತೇಳಿ ಮೈತುಂಬಾ ಚಿಮ್ನೆಣ್ಣಿ ಸುರುವಿಕಂಡು ನಿಂತಿದ್ದ ಹಡದೋರ ಹೊಟ್ಟಿ ತಣ್ಣಗಿರ್ಲಿ ಅಂತಂದು ಈ ಮದ್ವಿಗೆ ಒಪ್ಪಿಗಂಡಿದ್ಲು.
ಈಗ ಬಚ್ಚಲು ಮನಿಯಾಗ ಅರಿಷಿನದ ನೀರಿನ ಜತಿಗ್ಯ ಪಾರ್ವತಿಯ ಕಣ್ಣೀರೂ ಹರಿತಿದ್ವು.. 'ಹೊತ್ತು ಆತು ಬಾರಲೇ' ಅಂತ ಕೂಗಿದ ಧ್ವನಿ ಕೇಳಿ ಎಲ್ಲ ನೆಪ್ಪುಗಳಿಂದ ಹೊಳ್ಳಿಬಂದ ಪಾರ್ವತಿ. ಬ್ಯಾಡಾದ ಮನಸಿಲಿಂದ ಹೊರಗ ಬಂದು, ದೇವ್ರಿಗೆ ಪೂಜೆ ಮಾಡಿ, ಗೆಳತಿಯಾರಿಂದ ರೆಡಿ ಆಗಬೇಕಾದ್ರ ಮತ್ತೊಬ್ಬ ಗೆಳತಿ ಪಾರ್ವತಿಯ ಮಖ ನೋಡಿ ತಡಕಣದಾಗಲಾರದ, ಕಣ್ಣಾಗ ನೀರು ತುಂಬಿಕಂಡು 'ನಮ್ಮ ಶಂಕ್ರಣ್ಣ ನೆಪ್ಪು ಆಗ್ಯಾನಲ್ಲಾ?' ಕೇಳಿದ್ದಳು ಬರೇ ಪಾರ್ವತಿ ಮತ್ತ ಅಕಿ ಗೆಳತಿಯಾರು ಅಷ್ಟಾ ಇದ್ದ ಕ್ವಾಣಿಯೊಳಗ ಈ ಮಾತನ್ನ ಕೇಳತಿದ್ದಂಗನಾ ಗೆಳತೀನ ಅಮಚಿಗಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಲು ಪಾರ್ವತಿ. ಆಮ್ಯಾಲ ಸುಧಾರಿಸ್ಕಂಡು ರೆಡಿಯಾಗಿ ಬಂದು ಕಾರ್ಯ ಮುಗಿಸಿಕಂಡು ಊಟ ಮುಗಿಸಿ, ಹಾಲಿನ ಕಪ್ಪು ಹಿಡಕಂಡು ಪ್ರಸ್ಥದ ಕ್ವಾಣಿ ಕದ ತೆಗಿತಿದ್ದಂಗನಾ ಮಂಚದ ಮ್ಯಾಗ ಶಂಕ್ರಿನಾ ಅದಾನೇನಾ ಅಂತ ಪಾರ್ವತಿ ಕಣ್ಣುಗಳು ಹುಡುಕಿಬಿಟ್ವು. ಬನ್ನಿ ಮುಡಿಯಾ ಹಬ್ಬದಾಗ ಕೈ ಹಿಡಿದಿದ್ದ ಬಂಗಾರದಂಥಾ ಹುಡಗನ್ನ ಕಿತ್ತುಕೊಂಡ ದೇವರಿಗೆ ಹಿಡಿ ಶಾಪ ಹಾಕಿ, ಏನೂ ಗೊತ್ತಿಲ್ಲದ ಈ ಗಂಡನ ಕಡಿಗೆ ನೋಡಿ ಕಣ್ಣಿಂದ ಹನಿ ನೀರು ಹೊರಬಂತು. ಅದನ್ನ ನೋಡಿದ ಮದುಮಗ, 'ಪಾರೂ, ನಂಗೂ ನಿನ್ನ ಜೀವನದಾಗ ನಡದಿದ್ದು ಎಲ್ಲಾನು ಗೊತ್ತು. ದೇವರಂಥಾ ಶಂಕ್ರು, ನಿನ್ನ ಹೊಟ್ಟಿಯೊಳಗ ಮತ್ತೆ ಹುಟ್ಟಿ ಬರತಾನ, ನಿನ್ನ ಕೊನಿವರಿಗೂ ಕಾವಲು ಕಾಯ್ತಾನ,ಹೆದ್ರಬ್ಯಾಡ' ಅಂತೇಳಿದಾಗ ಪಾರ್ವತಿ ಕುಸಿದು ಕುಂತಳು.