ಬನ್ನಿ ಹಬ್ಬ
'ಹೊತ್ತಾಕೈತಿ ಹೊಗಲೇ, ತಲಿ ಎರಕಂಡು ಬಂದು ದೇವ್ರಿಗೆ ಎಲ್ಡು ಉದ್ದಿನಕಡ್ಡಿ ಹಚ್ಚು ಅಂತ ಅವಾಗಿನಿಂದ ಹೇಳಕತ್ತೀನಿ,ಎದ್ದಳಕಾ ತಯಾರಿಲ್ಲ ನೋಡ್ರಬೇ. ಏನಾಗಿದ್ದೀತು ಈ ಹುಡ್ಗೀಗ್ಯ ?' ಧ್ವನಿ ಎಲ್ಲೋ ಕೇಳಿದಂಗಾಗಿ ಮೆಲ್ಲಕ ಕಣ್ಣು ತೆಗದ ನೋಡಿದ ಪಾರ್ವತಿ ಮನಿಯ ಬಾಗಲ ಹೊರಾಕ ನೋಡಿದಾಗ ಹೊತ್ತು ಮುಣಿಗಿ ಕತ್ಲಾಗಿತ್ತು. ಮನಿಮುಂದೆ ಹಂದರಕ್ಕ ಹಾಕಿದ್ದ ತೆಂಗಿನ ಗರಿಗಳು ಬಾಡಿದಂಗಾಗಿದ್ರೂ ತನ್ನ ಹಸುರು ಬಣ್ಣನ ಕಳಕಂಡಿದ್ದಿಲ್ಲ. ಕರೆಂಟು ಇದ್ರೂ ಹಂದರದ ನಡುಕು ಒಂದು ಲಾಟೀನ ಹಚ್ಚಿದ್ರು. ಅದು ಸ್ವಲ್ಪ ಜಾಸ್ತಿ ಉರಿಯಾಕತ್ತಿದ್ಕ, ಅದರ ಪಾವು, ಹೊಗಿಲಿಂದ ಸ್ವಲ್ಪ ಕರ್ರಗಾಗಿತ್ತು. ಮನಿಯ ಒಳಗಾ ಹೆಣ್ಮಕ್ಕಳ ಪಂಕ್ತಿ ನಡದಿತ್ತು. ಮನಿಯ ಹೊರಾಕ ನೋಡಾಕತ್ತಿದ್ದ ಪಾರ್ವತಿ ಮೆಲ್ಲಕ ಯಾರಾ ನನ್ನ ಎಬ್ಬಿಸಿದಂಗಾತಲ್ಲಾ ಅಂತೇಳಿ ನೋಡಿದ್ರ ಎದ್ರಿಗ್ಯ ಅಕಿಯ ಎಂಟು ಗೆಣಕಾರ್ತಿಯರು ನಕ್ಕೋತ ನಿಂತಿದ್ರು. ಅವರವ್ವ ಒಳಾಕ ಹೋದ್ಲು. ಅವಾಗ ಗೆಣಕಾರ್ತಿಯರ ಪೈಕಿ ಒಬ್ಬಾಕಿ 'ಏನೇ ಮದ್ಯಾಹ್ನಾನಾ ಮಕ್ಕಂಡಿದ್ಯಂತ್ಯ ? ಪಾಡಾತು ಬುಡು' ಅಂತ ನಕ್ಕೋತ ಹೇಳತಿದ್ದಂಗನಾ ಎದ್ದು ಕುಂತ ಪಾರ್ವತಿ ಸುತ್ತ ಬಂದು ಅವರೆಲ್ಲ ಕುಂತಕಂಡ್ರು. ಹಂಗ ನೋಡಬೇಕಪ್ಪಾ ಅಂದ್ರ ಆ ಟೈಂನಾಗ ಪಾರ್ವತಿ ಮಖ ಕೆಂಪಾಗಬೇಕಿತ್ತು. ಆದ್ರ ಅಂಥಾ ಬದ್ಲಾವಣಿನೇನೂ ಯಾರೂ ಕಾಣಲಿಲ್ಲ. ಹೊದ್ದಕಂಡಿದ್ದ ದುಪ್ಪಡಿ ತೆಗದು ಕುಂತಗಂಡ ಪಾರ್ವತಿಗೆ ಇನ್ನೊಬ್ಬ ಗೆಳತಿ, 'ಹೋಗೇ ಗಡಗಡ ಮೈ ತ್ವಕ್ಕಂದು ಬಾ, ನಾವೀಟು ನಿನ್ನ ರೆಡಿ ಮಾಡಾಕು'. ಅಂದಾಗ, ತನ್ನ ಎರಡೂ ಕೈಗಳಿಂದ ಮಖದ ತುಂಬಾ ಹಲ್ಡಿಕಂಡಿದ್ದ ತನ್ನ ಮುಂಗೂದಲನ್ನ ಸರಿಗೆ ಮಾಡಿಕಂಡು ಪಾರ್ವತಿ ಬಚ್ಚಲು ಮನಿಗೆ ಹೋದ್ಲು. ಅಷ್ಟತ್ತಿಗೆಲ್ಲಾ ಬಚ್ಚಲಮನಿಯಾಗ ಬರೊಬ್ಬರಿ ಒಂದು ದೊಡ್ಡ ಬಕೀಟ್ನಾಗ ಸುಡ್ ಸುಡೋ ನೀರು ಹೊಗಿಯಾಡತಿದ್ವು., ಆ ನೀರನ್ನ ನೋಡಿದ ಪಾರ್ವತಿ ಆಕಳಿಸಿಕಂತ ಮತ್ತೊಂದಿಷ್ಟು ತಣ್ಣೀರನ್ನ ಸುರುದು, ನೀರನ್ನ ಮೈ ತ್ವಕ್ಕಣಾ ಹದಕ್ಕ ತಂದಕಂಡು, ತನ್ನ ಮುಡಿಯಾಗ ಬಾಡಿದ್ದ ಮಲ್ಲಿಗಿ, ಕನಕಾಂಬ್ರಿ, ಗುಲಾಬಿ ಹೂಗಳನ್ನ ಹಿಡಕಂಡಿದ್ದ ಏರ್ ಪಿನ್ ತೆಗದು ಹೂವನ್ನ ಬಚ್ಚಲ ಮನಿಯಾಗಿನ ಒಂದು ಗುಣೇದಾಕ ವಗದಳು. ಇನ್ನೂ ಅದಾ ಹಳೇ ನಿದ್ದಿ ಮಂಪರಿನಾಗ ಬ್ರಷ್ ಮಾಡಿದ್ಲು. ಆಮೇಲೆ ಬಕೀಟ್ನಾಗಿಂದ ಒಂದು ಚೊಂಬು ನೀರು ತಗೊಂಡು ತಲಿಮ್ಯಾಗ ಸುರುಕೊಂಡಾಗ ಅಕೀ ತಲಿಮ್ಯಾಗಿಂದ ಹರದಿದ್ದು,
ಗಟ್ಟಿಗಿನ ಅರಿಷಿಣದ ನೀರು !
ಗಟ್ಟಿಗಿನ ಅರಿಷಿಣದ ನೀರು !
ಹೌದು. ಪಾರ್ವತಿ ಅದಾ ವಾರ ಮದುವಿಯಾಗಿದ್ದ ಹೊಸ ಮಧುಮಗಳು. ಇವತ್ತು ಅಕಿಯ ಕಡೇ ನೀರಿನ ಕಾರ್ಯ ನಡಿಯಾಕತೈತಿ. ಅಂದ್ರ ಇದು ಪಾರ್ವತಿಯ ಪ್ರಸ್ಥದ ದಿನ. ಅಷ್ಟತ್ತಿಗೆಲ್ಲಾ ಒಣ್ಯಾಗಿನ್ನ ಹೆಣ್ಮಕ್ಕಳೆಲ್ಲಾ ಬಂದು ಕಾರ್ಯಕಟ್ಟು ಅಂತಾ ಏನೇನಾ ಕೆಲ್ಸದಾಗ ಮುಣಿಗಿದ್ರು. ಈಗ ಪಾರ್ವತಿ ಒಬ್ಬಾಕಿ ರೆಡಿಯಾಗಿಬಿಟ್ರ, ಒಂದರ್ಧಗಂಟಿ ಮಧುಮಕ್ಕಳನ್ನ ಹಂದ್ರದ ತೆಳಗ ಕುಂದ್ರಿಸಿ, ಕಳಸ ಬೆಳಗಿ, ಓಣ್ಯಾನ ದೈವದೋರು, ಪಾರ್ವತಿ ಅಪ್ಪನ ಗೆಣೆಕಾರು ಎಲ್ಲಾರು ಪಂಕ್ತಿಲಿ ಕುಂತ್ಗಂಡು ಉಂಡೊಕ್ಕಾರ. ಆಮ್ಯಾಲೆ ಪಾರ್ವತಿ ಗೆಣತೀರು ಪಾರ್ವತೀನ ರೆಡಿ ಮಾಡಿ ಪ್ರಸ್ಥದ ಕ್ವಾಣಿಗೆ ಬಿಟ್ಟು ಹುಳ್ಳುಳ್ಳಗೆ ನಕ್ಕೋತ ಮನಿಗೊಕ್ಕಾರ. ಇದು ಇವತ್ತು ನಡಿಬೇಕಿರಾ ಕಾರ್ಯಕ್ರಮ. ಅದಕ್ಕಾಗಿನೇ ಅವರವ್ವ ಮಕ್ಕಂಡಿರಾ ಪಾರ್ವತಿಗೆ ಮೈ ತ್ವಕ್ಕಂಡು ಮನಿದೇವ್ರಿಗೆ ಎಲ್ಡು ಉದ್ನಿಕಡ್ಡಿ ಹಚ್ಚಾಕ ಅವಸ್ರ ಮಾಡಾಕತ್ತಿದ್ದು.
ಮನಿಯಾಗ ನಡಿಯಾಕತ್ತಿದ್ದ ಸಂತೋಷದ ಮಾತುಕತಿಗಳು, ಗೆಳತಿಯಾರ ಕಾಡರಟಿ, ಹಾಸ್ಯ, ಸೋಬಾನ ಪದಗಳನ್ನ ನೆಪ್ಪು ಮಾಡಿಕಣಾಕತ್ತಿದ್ದ ಮುದುಕ್ಯಾರ ಖುಷಿ, 'ತಗಳಲೇ ಕುಡುದು ನಿಷೇದಾಗ ಹಂಗಾ ಹೋಗಿ ಮಕ್ಕೋಬ್ಯಾಡ, ಉಂಡು ಹೋಗುವಂತೆ' ಅಂತ ಅವರಪ್ಪ ಯಾರಿಗೋ ಹೇಳಿತಿದ್ದ ಧ್ವನಿ ಎಲ್ಲದನ್ನೂ ಕೇಳಿಸ್ಕೋತ ಪಾರ್ವತಿ ಮೈ ತ್ವಕಣಾಕತ್ತಿದ್ಲು. ಅಕೀಗೆ ದೇವರ ಮನಿಯಾಗಿನ ಸೆಲ್ಪಿನ್ಯಾಗ ಇಟ್ಟಿದ್ದ ಬಾಟ್ಲಿಗಳ ಒಂದು ಕೇಸ್ ನೆನಪಾತು. ಓಣ್ಯಾನ ಕೆಲವು ಯಜಮಾನ್ರು, ತನ್ನಣ್ಣನ ಗೆಣೆಕಾರ್ರು ಎಲ್ಲಾರೂ ಸೇರಿ ತುಂಬಿಕಂಡಿದ್ದ ಕೇಸ್ನ ಖಾಲಿ ಮಾಡಾಕ ತುದಿಗಾಲಿಲೆ ಕುಂತಿದ್ದನ್ನ ನೆನಪು ಮಾಡಿಕಂಡ್ಲು. ಸುಡ್ ಸುಡೋ ನೀರು ಸುರಕೋತನೇ ಇದ್ಲು. ಇನ್ನೇನು ತಲೀಗೆ ಹಚ್ಚಿಗಣಾಕ ಶಾಂಪುಗೆ ಕೈ ಹಾಕಬೇಕು, ಅವನು ನೆಪ್ಪಾಗಿಬಿಟ್ಟ. ಜೀವದ ಗೆಳೆಯ. ಹೆಸ್ರುಶಂಕರ !
ಅವತ್ತು ಆ ಊರಾಗ ಜಾತ್ರಿಯಿತ್ತು. ಜಾತ್ರಿ ಮಾಡಾನು ಅಂತೇಳಿ ಗೆಳತ್ಯಾರ ಜೊತಿಗೆ ಪಾರ್ವತಿ ಹೋದಾಗ ಗೆಣೆಕಾರ ಜತಿಗ್ಯ ಜಗತ್ತನ್ನಾ ಗೆದ್ದಂಥಾ ಕಲ್ಮಷನಾ ಇಲ್ಲದಂಥಾ ಖುಷಿಯೊಳಗ ಬರುತಿದ್ದ ಶಂಕರನ್ನ ನೊಡಿ ನಾಚಿ ತಲಿ ಬಗ್ಗಿಸಿದ್ದಳು. ಅವನೇನೂ ಇಕಿಕಡಿಗ್ಯ ನೋಡಿರಲಿಲ್ಲ. ಆದ್ರ ಇಡೀ ಊರಿಗ್ಯಾ 'ಬಾಳ ಒಳ್ಳೇನು, ಜಿದ್ದಿಗೆ ಬಿದ್ರ ಅವನು ಏನು ಬೇಕಾರ ಧಕ್ಕಿಸ್ಕಂತನ. ಅದ್ಕ ಅವನ್ನ ಯಾರೂ ಎದ್ರಕ್ಕಬ್ಯಾಡ್ರಲೇ' ಅಂತಾನಾ ಹೆಸ್ರಾಗಿದ್ದ ಶಂಕ್ರನಿಗ್ಯ ಪಾರ್ವತಿ ಕಳದೋಗಿದ್ಳು. ಪುಣ್ಯಕ್ಕ ಅವತ್ತು ಆ ಶಂಕ್ರನ ಗೆಣೆಕಾರರ ಗುಂಪಿನಾಗ ಪಾರ್ವತಿ ಗೆಳತಿಯ ಅಣ್ಣನಿದ್ದ. ಹಿಂದೆಲೆ ಒಂದು ಐಡ್ಯಾ ಮಾಡಿದ ಪಾರ್ವತಿ, ತನ್ನ ಗೆಳತಿ ಮಂಜುಳಾಗ, 'ಲೇ ಮಂಜಿ, ನಾವು ಇಲ್ಲಿ ಬಳಿ ತಗಾಣಾನು ಹೆಣ್ಮಕ್ಕಳಿಗೆ ಅಂಗಡಿಯೋರು ರೇಟು ಬಾಯಿಗೆ ಬಂದಂಗ ಹೇಳ್ತಾರ, ಬಳಿ ಇಕ್ಕಾ ನ್ಯವಾದಾಗ ಮುಂಗೈನ ಬೇಕಂತ್ಲ ಹಿಚುಕಿ ಹಿಂಸೆ ಮಾಡ್ತಾರ. ಅದ್ಕಾ ಅಲ್ಲಿ ನಿಮ್ಮಣ್ಣ ಅದಾನಲ್ಲ ಕರಿ ಒಂದೀಟು' ಅಂತ ಹೇಳಿದ್ದು ಸರಿ ಅನ್ನಿಸಿ ಮಂಜುಳ ಕೂಗಿ ಅವರ ಅಣ್ಣನ್ನ ಕರದ್ರ, ಔನು 'ಬಾರಲೇ ಶಂಕ್ರಿ ಅವ್ರೇನಾ ತಗಂತಾರಂತ್ಯ, ಕೊಡಿಸಿ ಕಳಸಾನು' ಅಂತಂದು ಶಂಕ್ರಿನೂ ಜೊತಿಗೆ ಕರಕಂಡು ಪಾರ್ವತಿ ಗುಂಪಿನತ್ರ ಬಂದು ನಿಂತಾಗ, ಶಂಕ್ರಿಯ ಮಗ್ಗುಲು ಸರದ ಪಾರ್ವತಿ, 'ಶಂಕ್ರು, ಯಾವ ಬಳಿ ಸೂಟ್ ಅಕ್ಕಾವು ಹೇಳು ಪ್ಲೀಜ್' ಕಿವಿಗ್ಯ ಹತ್ರದಾಗ ನಿಂತ್ಗಂಡು ತುಟಿನೂ ಅಡಿಸದಂಗ ಮೆಲ್ಲಕ ಕೇಳಿದ ಪಾರ್ವತಿ ಧ್ವನಿಗೆ ಕಕ್ಕಾಬಿಕ್ಕಿಯಾದ ಶಂಕ್ರ, ಇಷ್ಟಗಲಾ ಕಣ್ಣಗಲಿಸಿ ಪಾರ್ವತೀನಾ ನೋಡಿದಾಗ. ಪಾರ್ವತಿ ಮಖದಾಗ ಮೂಡಿದ್ದ ತಂಗಾಳಿ ಚಂದಪ್ಪನ್ನ ಕಂಡಂಗಾಗಿ ಹಸುರು ಬಳಿಕಡಿಗೆ ಬೊಟ್ಟು ತೋರಿಸಿದ್ದ. ಬರಬ್ಬರಿ ಎಲ್ಡು ಡಜನ್ ಬಳಿ ತಗಂಡು ಕೈ ತುಂಬಾ ತೊಟ್ಕೊಂಡು ದೂರದಾಗ ನಿಂತಿದ್ದ ಶಂಕ್ರಿಕಡಿಗೆ ತೋರಿಸಿ 'ಹೆಂಗದಾವು' ಅನ್ನಂಗ ಕಣ್ಣ ಹುಬ್ಬೇರಿಸಿದ್ಳು. ಮೀಸಿಯೊಳಗಾ ನಕ್ಕೊತ ಶಂಕ್ರಿ ಉದ್ದುದ್ದಾ ತಲಿಯಾಡಿಸಿದ್ದ.
ಅವತ್ತಿನವರಿಗೂ ಇಡೀ ಊರಾಗ ಶಂಕರನಿಗೆ ಅಟಕಂದು ಸದರದಿಲೆ ಮಾತಾಡಿದ ಮದ್ಲನೇ ಹುಡುಗಿನಾ ಪಾರ್ವತಿ. ಯಾಕಂದ್ರ ಶಂಕ್ರಿಗ್ಯ, ತನ್ನ ಊರಾಗಾತೂ, ತನ್ನ ಓಣ್ಯಾಗಾತು, ಸಣ್ಣೋರಿಂದ, ಹಣ್ಣಣ್ಣು ಮುದುಕ್ರುವರಿಗೂ ಎಲ್ಲರೂ ಬಾಳ ಪ್ರೀತಿಲಿಂದ ಕಾಣತಿದ್ರು. ಎಲ್ಲರೂ 'ಅವ್ನು ನಮ್ಮ ಮನಿ ಮಗ ಇದ್ದಂಗ್ರೀ' ಅಂತಂದು ಬಂದೋರ ಎದ್ರಿಗೆ ಹೇಳತಿದ್ರು.. ಶಂಕ್ರಿ ಓಣ್ಯಾಗಿನ ಯಾರ ಅಡಿಗಿ ಮನಿಗೆ ಬೇಕಾರೂ ಹೋಗಿ ಹೊಟ್ಟಿತುಂಬಾ ಉಂಡು ಬರ್ತಿದ್ದ. ಜನಾ ಅಷ್ಟು ಅವನ್ನ ಹಚ್ಚಿಕೊಂಡಿದ್ರು. ನೆಚ್ಚಿಗಂಡಿದ್ರು. ಇನ್ನು ,ಹುಡಿಗೇರಂತೂ ಅವನಿಗ್ಯ ಬಾಳ ಗೌರವ ಕೊಡ್ತಿದ್ರು. ಕೆಲವು ಹುಡುಗೀರು ಶಂಕರನ ಗುಣಕ್ಕ ಅವನನ್ನ ಕೈ ಹಿಡಿಬೇಕು ಅಂತ ಅಂದ್ಕೊಂಡೋರು ನೇರವಾಗಿ ಶಂಕ್ರಿ ಹತ್ರ ಮಾತಾಡಾ ಧೈರ್ಯ ಸಾಲ್ದಾಗಿ ಅವನ ಚಡ್ಡಿ ದೋಸ್ತ ರಾಘನ ಎದ್ರಿಗೆ 'ರಾಘಣ್ಣಾ, ನಾನು ಶಂಕರನ್ನ ಇಷ್ಟಪಟ್ಟಿನಿ, ಅತನ ಎದ್ರಿಗೆ ಹೇಳಾಕ ಧೈರ್ಯ ಬರವಲ್ದು ನೀನಾ ಹೇಳ್ತಿ ಇಲ್ಲಪಾ?' ಅಂತೇಳಿ ಅವನ ಖರ್ಚಿಗಿಷ್ಟು ರ್ವಕ್ಕ ಕೊಡೋರು. ರ್ವಕ್ಕ ತಗಂಡಮ್ಯಾಗ ರಾಘ 'ತಂಗೀ ಹೆಣ್ಮಕ್ಕಳು ಅಂದ್ರ ಒಂದು ಅಣ್ಣನ ಗಂಭೀರದಾಗ ನಿಂದ್ರ ಅವ್ನು ಈ ಇಳೇವ್ನ ಒಪ್ಪತಾನೋ ಏನು ನನ್ನ ಕೆರದಾಗ ಹೊಡಿತಾನೋ, ಅಂತೂ ಒಮ್ಮಿ ಕೇಳಿ ನೋಡ್ತಿನಿ' ಅಂತೇಳಿ ಶಂಕ್ರಿ ಹತ್ರ ಬಂದು ಅದೂ ಇದೂ ಮಾತಾಡಿ ಕೊನಿಗೆ ತನಿಗೆ ಬಂದಿರಾ ವೀಳ್ಯಾದ ವಿಷ್ಯಾನ ಹೇಳಿ ಮಖಾ ತೋಯುವಂಗ ಉಗುಳಿಸ್ಕೋತಿದ್ದ. ಅಂಥಾ ಶಂಕ್ರಿ ಮನಸಿನ್ಯಾಗ ಅವತ್ತು ಪಾರ್ವತಿ ಡೈರೆಕ್ಟ್ ಎಂಟ್ರಿ ಕೊಡಾಕ ಕಣ್ಣಾಗಾ ಒಪ್ಪಿಗಿ ಕೇಳಿಬಿಟ್ಟಿದ್ಲು. ಅವತ್ತು ಮದ್ಲನೇ ಸತಿ ಶಂಕ್ರಿ ಒಬ್ಬನಿಗೊಬ್ಬನಾ ನಗಾಕ ಚಾಲೂ ಮಾಡಿದ್ದ. ಮಗ್ಗಲದಾಗ ನಿಂತಿದ್ದ ಚಡ್ಡಿ ದೋಸ್ತ ರಾಘ 'ಲೇ ಶಂಕ್ರೀ ಇನ್ನು ನನಿಗ್ಯ ಕೆರದೇಟು ಕಮ್ಮಿ ಅಕ್ಕಾವು ಹೌದಿಲ್ಲು ?' ಅಂತ ಕೇಳಿದಾಗ ಜೋರು ನಕ್ಕಿದ್ರು ಇಬ್ರೂ.
ಅಲ್ಲಿಂದ ಶಂಕ್ರಿ ಪಾರ್ವತಿ ನಡುಕು, ಬಾಳ ಅಂದ್ರ ಬಾಳ ಒಳ್ಳೊಳ್ಳೇ ಘಟನಿಗಳು ನಡಿದಿದ್ವು. ಇತ್ತೀಚಿಗೆ ಶಂಕ್ರು ದಿನಾಲು ಆ ಪಾರ್ವತಿ ಮನಿ ಮಗ್ಗಲದಾಗಿನ ಶೆಡ್ಡಿನ ಅಂಗಡಿ ಮುಂದೇನಾ ನಿಂದ್ರತಿದ್ದ. ಕೊನಿಗೂ ಶಂಕ್ರಿಯ ಜೀವನದೊಳಗ ಒಂದು ಒಳ್ಳೇ ಘಳಿಗಿ ಕೂಡಿ ಬಂದಿತ್ತು. ಅವತ್ತು ದಸರಾ ಹಬ್ಬದ ರಾತ್ರಿ ಬನ್ನಿ ಕೊಡಾಂತ ದಿನವಾಗಿತ್ತು. ಅವತ್ತು ರಾತ್ರಿ ಶಂಕ್ರಿ ಮತ್ಯ ರಾಘ ಜತಿಗೆ ಸಾಲು ಹಿಡಿದು ಎಲ್ಲರ ಮನ್ಯಾಗಿನ್ನ ಹಿರಿಯಾರು, ಕಿರಿಯಾರು, ಎಲ್ಲರಿಗೂ ಬನ್ನಿಕೊಟ್ಟು ಕಾಲಿಗೆ ಬಿದ್ದುಕೋತ ಮನಿ ಮನಿ ತಿರಗಬೇಕಾದ್ರ ದಾರ್ಯಾಗ ಎದ್ರಿಗಾದ ಪಾರ್ವತಿ ಮದ್ಲು ರಾಘಗ ಬನ್ನಿ ಕೊಟ್ಟು 'ಬನ್ನಿ ತಗಂಡು ಬಂಗಾರದಂಗ ಇರಾನಣ್ಣಾ' ಅಂತೇಳಿ ಕಾಲಿಗೆ ಬೀಳಾಕ ಹೋದಾಗ 'ಹೇ ಬ್ಯಾಡ್ವಾ ತಂಗೀ, ನಾ ಏನ್ ಯಜಮಾನ ಮನಷ್ಯಾ ಏನು ? ಕೈ ಮುಕ್ಕೋಳಾನು ಸಾಕು' ಅಂತೇಳಿ ಕೈ ಕೈ ಮುಕ್ಕೊಂಡಿಂದೆ ಶಂಕ್ರಿ ಕಡಿಗೆ ತಿರುಗಿದ, ರಾಘ, 'ಲೇ ಶಂಕ್ರಿ, ಇಲ್ಲೇ ಅಂಗಡಿಗೋಗಿ ಎಲ್ಡು ಇಮಾಲ್ (ಗುಟ್ಕಾ) ತರ್ತೀನಿ ತಡಿ' ಅಂತಂದು ಅಲ್ಲಿಂದ ಜಾಗ ಖಾಲಿ ಮಾಡತಿದ್ದಂಗನಾ, ಶಂಕ್ರಿ ಕೈಗೆ ಬನ್ನಿ ಕೊಟ್ಟ ಪಾರ್ವತಿ 'ನಿನಿಗ್ಯ ಬನ್ನಿ ಕೊಟ್ಟೀನಿ, ನನಿಗ್ಯ ಬಂಗಾರದಂಥಾ ಬಾಳು ಕೊಡ್ತೀಯೇನಾ?' ಕಂಡೆಬಟ್ಟೆ ಧೈರ್ಯದಾಗಲೇ ಕೇಳಿದ್ಲು. ಶಂಕ್ರಿಗೆ ನೆಲಮುಗುಲು ಏಕ್ ಆದಂಗಾಗಿ ದಂಗು ಬಡದು ನಿಂತುಬಿಟ್ಟಿದ್ದ. ಇವನೌನು ಏನರಾ ಯಾಕಾ ಆಗ್ಲಿ ಅಂತಂದು ಧೈರ್ಯ ತಗಂಡು, 'ಈಗ ದುರ್ಗಮ್ಮನ ಗುಡಿತಾಗ ದೇವ್ರ ಕಾರ್ಯ ನಡಿತೈತಲ್ಲಾ ಅಲ್ಲಿಗೆ ಬಾಯಿಲ್ಲಿ ಹೇಳ್ತಿನಿ' ಅಂತೇಳತಿದ್ದಂಗನಾ, ಹುಡುಗಿ ಶಂಕ್ರಿಯ ಮುಂಗೈಗೊಂದು ಮುತ್ತು ಕೊಟ್ಟು ಬುಜಕ್ಕ ಬುಜ ತಾಗಿಸಿ ಶಂಕ್ರಿ ಮೈಗೆ ಮಿಂಚು ಹೊಡಿಸಿ ಹೋಗಿದ್ಳು.
ಆಮ್ಯಾಲೆ ಅವರಿಬ್ರೂ ಗುಡಿ ಹಿಂದಿರಾ ಸಾಲಿ ಗ್ರೌಂಡಿನಾಗ ನಿಂತಾಗ ಶಂಕ್ರಿ 'ನನ್ಯಾಕ ಇಷ್ಟು ಹಚ್ಚಿಕೊಂಡೀದಿ ? ಕತಿ ಏನರಾ ಇರ್ಲಿ, ನಿನ್ನ ಧೈರ್ಯಕ್ಕ ಮೆಚ್ಚಿದ್ನೆ ಬುಡು' ಅಂದ 'ನಿನ್ನಂಥಾ ಕಾಡಿಗೆ, ದೂರ ನಿಂತ್ಕಂಡು ಅವನಾ ಬಂದು ಹೇಳ್ತಾನ, ನನ್ನ ಕೈ ಹಿಡಿತಾನ ಅನ್ನಾದು ಕನಸಿನ ಮಾತಂತ ಗೊತ್ತಾತು. ನಿನ್ನ ಬಿಟ್ಟು ಇರಾಕೂ ಆಗದಂಗಾಗಿ ಹಿಂಗ ಧೈರ್ಯಬಂತು ನೋಡು' ಖುಷಿಲಿಂದ ಹೇಳಿದ ಪಾರ್ವತಿಯ ಕೈ ಹಿಡಿದು ಹಣಿಗೊಂದು ಮುತ್ತು ಕೊಟ್ಟು ದೇವ್ರ ಪ್ರಸಾದ ಅಂತ ಸಿಕ್ಕಿದ್ದ ಹೂವನ್ನ ಮುಡಿಗಿಟ್ಟಿದ್ದ. ಆಮ್ಯಾಗ ಇವರಿಬ್ರ ನಡುಕು ನಡದಿದ್ದು ಅದೊಂದು ದೊಡ್ಡ ಕತಿನಾ ಬಿಡ್ರಿ. ಒಂದು ಸುಗ್ಗಿ ಕಳಿಯಾತ್ಗೆ ಇಬ್ರೂ ಜೀವಕ್ಕ ಜೀವಾ ಕೊಡಾ ಜೊಡಿಗಳಾಗಿಬಿಟ್ಟಿದ್ರು. ವಿಷ್ಯ ಊರಿನೋರಿಗೂ ಗೊತ್ತಾತು, ಪಾರ್ವತಿ ಮನೆಯೋರಿಗೂ ಗೊತ್ತಾತು.
ವಿಷ್ಯ ಗೊತ್ತಾಗತಿದ್ದಂಗನಾ ಪಾರ್ವತಿ ಅಣ್ಣ ಒಂದಿನಾ ಶಂಕ್ರಿನಾ ವಾರಿಗೆ ಕರದು, 'ಶಂಕ್ರಿ ನಾನು ಕೇಳಿದ್ದು ಖರೆ ಐತೇನು? ನಮ್ಮ ತಂಗೀನಾ ನೀ ಪ್ರೀತಿ ಮಾಡ್ತಿಯಂತೇ ? ನಿನಿಗ್ಯ ಸುಳ್ಳು ಹೇಳಾಕ ಬರಲ್ಲ, ತಪ್ಪು ನಡದಿದ್ರ ಮುಚ್ಚು ಮರಿ ಇಲ್ಲದಂಗ ನೀ ಒಪ್ಪಿಗಂತೀ ಅನ್ನಾದು ನನಿಗಂತೂ ಗೊತೈತಿ. ಖರೇವೇಳು ಇದೆಲ್ಲಾ ಹೌದಿಲ್ಲೂ ?' ನೇರವಾಗಿ ಕೇಳಿದ ಪ್ರಶ್ನೆಗೆ ಶಂಕ್ರಿ ಒಂದೀಟು ಅಂಜಿಕಿಲೆ ಮದ್ಲನೇ ಸರತಿ ವಾರಿಗಿ ಗೆಳೆಯನ ಎದ್ರಿಗೆ ತಲಿ ತಗ್ಗಿಸಿ'ಖರೇವೈತಿ. ನಾನು ನಿಮ್ಮ ತಂಗಿನ ಇಷ್ಟ ಪಟ್ಟಿನಿ' ಹಿಂಗ ಹೇಳತಿದ್ದಂಗನಾ ಬಾಚಿ ಅಮಚಿಗಂಡುಬಿಟ್ಟಿದ್ದ ಪಾರ್ವತಿ ಅಣ್ಣ. 'ಹೌದ್ದಲೇ ಮಗನಾ, ಊರಾಗ ಎಂಥೆಂತೋರು ಮನಸು ಮಾಡಿದ್ರಲೇಪಾ ನಿನ್ನ ಮ್ಯಾಲೆ. ಅಂಥಾದ್ರಾಗ ನನ್ನ ತಂಗಿ ಅದೇನು ಮಾಟ ಮಾಡಿದ್ಲಲೇ ನಿನಿಗ್ಯ? ಮಾವ ಅನ್ನಬೇಕಪ್ಪಾ ಇಪಾಟು ನಿನಿಗ್ಯ?' ಖುಷಿಲಿಂದ ಹೇಳಿದ್ದ. ಇದೆಲ್ಲಾ ಆಗಿ ಒಂದಾ ವಾರದಾಗ ಪಾರ್ವತಿ ಮನಿಯೋರು, ಶಂಕ್ರಿಯ ಮನ್ಯಾರ ಜತಿಗೆ ಈ ಇಚಾರ ಮಾತಾಡಿದಾಗ 'ನೋಡ್ರಪಾ ಔರೇನೂ ದಡ್ಡರಲ್ಲ. ಇವನೂ ವಕೀಲಗಿರಿ ಟ್ರೈನಿಂಗ್ ಮಾಡಕತ್ಯಾನ, ಮತ್ಯ ಪಾರ್ವತಿನೂ ನಮ್ಮೂರ ಬ್ಯಾಂಕಿನಾಗ ಕೆಲ್ಸಾ ಮಾಡತಾಳ. ಔರೋರ ಇಷ್ಟ ಇದ್ರ ಹಣೆಬರದಾಗ ಇದ್ದಂಗಾಗ್ಲಿ ಮುಂದಿನ ವರ್ಸಕ್ಕ ಲಗ್ನ ಹಮ್ಮಿಕಣಾನುಬುಡು, ಇನ್ನೊಂದು ತಿಂಗಳು ಕಳದು ಚೊಲೋ ದಿನ ನೋಡಿ ಇಳೇವು ಹೊಡಿಯಾನಂತೆ' ಅಂತ ಸೀ ಸುದ್ದಿ ಕೊಟ್ಟಿದ್ರು. ಜೀವನ ಜೋಡಿಗಳಿಗೆ ಬಂಗಾರದಂತಾ ಬಾಳು ಕಟ್ಟಿಗಣಾಕ ಇನ್ನೇನು ಬೇಕು ? 'ಸ್ವರ್ಗ ಅನ್ನಾದು ಎಲ್ಲೂ ಇಲ್ಲ ಅದು ನಮ್ಮಿಬ್ರ ಹೃದಯದಾಗ ಐತಿ ಹೌದಿಲ್ಲು?' ಅಂತ ಶಂಕ್ರಿ ಪಾರ್ವತಿಯ ಜುಮುಕಿ ಕಿವಿಯೊಳಗ ಪಿಸುಗುಟ್ಟಿದ್ದ. ಮತ್ತೊಂದಿಷ್ಟು ದಿನಗಳು ಸರದೋದ್ವು. ಇನ್ನೇನು ಇವರಿಬ್ರ ಎಂಗೇಜ್ ಮೆಂಟ್ ಡೇಟ್ ಪಿಕ್ಸ್ ಮಾಡಬೇಕಿತ್ತು ನಡದೋತು ಒಂದು ಅನಾಹುತ !
ಈಗ ಬಚ್ಚಲು ಮನಿಯಾಗ ಅರಿಷಿನದ ನೀರಿನ ಜತಿಗ್ಯ ಪಾರ್ವತಿಯ ಕಣ್ಣೀರೂ ಹರಿತಿದ್ವು.. 'ಹೊತ್ತು ಆತು ಬಾರಲೇ' ಅಂತ ಕೂಗಿದ ಧ್ವನಿ ಕೇಳಿ ಎಲ್ಲ ನೆಪ್ಪುಗಳಿಂದ ಹೊಳ್ಳಿಬಂದ ಪಾರ್ವತಿ. ಬ್ಯಾಡಾದ ಮನಸಿಲಿಂದ ಹೊರಗ ಬಂದು, ದೇವ್ರಿಗೆ ಪೂಜೆ ಮಾಡಿ, ಗೆಳತಿಯಾರಿಂದ ರೆಡಿ ಆಗಬೇಕಾದ್ರ ಮತ್ತೊಬ್ಬ ಗೆಳತಿ ಪಾರ್ವತಿಯ ಮಖ ನೋಡಿ ತಡಕಣದಾಗಲಾರದ, ಕಣ್ಣಾಗ ನೀರು ತುಂಬಿಕಂಡು 'ನಮ್ಮ ಶಂಕ್ರಣ್ಣ ನೆಪ್ಪು ಆಗ್ಯಾನಲ್ಲಾ?' ಕೇಳಿದ್ದಳು ಬರೇ ಪಾರ್ವತಿ ಮತ್ತ ಅಕಿ ಗೆಳತಿಯಾರು ಅಷ್ಟಾ ಇದ್ದ ಕ್ವಾಣಿಯೊಳಗ ಈ ಮಾತನ್ನ ಕೇಳತಿದ್ದಂಗನಾ ಗೆಳತೀನ ಅಮಚಿಗಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಲು ಪಾರ್ವತಿ. ಆಮ್ಯಾಲ ಸುಧಾರಿಸ್ಕಂಡು ರೆಡಿಯಾಗಿ ಬಂದು ಕಾರ್ಯ ಮುಗಿಸಿಕಂಡು ಊಟ ಮುಗಿಸಿ, ಹಾಲಿನ ಕಪ್ಪು ಹಿಡಕಂಡು ಪ್ರಸ್ಥದ ಕ್ವಾಣಿ ಕದ ತೆಗಿತಿದ್ದಂಗನಾ ಮಂಚದ ಮ್ಯಾಗ ಶಂಕ್ರಿನಾ ಅದಾನೇನಾ ಅಂತ ಪಾರ್ವತಿ ಕಣ್ಣುಗಳು ಹುಡುಕಿಬಿಟ್ವು. ಬನ್ನಿ ಮುಡಿಯಾ ಹಬ್ಬದಾಗ ಕೈ ಹಿಡಿದಿದ್ದ ಬಂಗಾರದಂಥಾ ಹುಡಗನ್ನ ಕಿತ್ತುಕೊಂಡ ದೇವರಿಗೆ ಹಿಡಿ ಶಾಪ ಹಾಕಿ, ಏನೂ ಗೊತ್ತಿಲ್ಲದ ಈ ಗಂಡನ ಕಡಿಗೆ ನೋಡಿ ಕಣ್ಣಿಂದ ಹನಿ ನೀರು ಹೊರಬಂತು. ಅದನ್ನ ನೋಡಿದ ಮದುಮಗ, 'ಪಾರೂ, ನಂಗೂ ನಿನ್ನ ಜೀವನದಾಗ ನಡದಿದ್ದು ಎಲ್ಲಾನು ಗೊತ್ತು. ದೇವರಂಥಾ ಶಂಕ್ರು, ನಿನ್ನ ಹೊಟ್ಟಿಯೊಳಗ ಮತ್ತೆ ಹುಟ್ಟಿ ಬರತಾನ, ನಿನ್ನ ಕೊನಿವರಿಗೂ ಕಾವಲು ಕಾಯ್ತಾನ,ಹೆದ್ರಬ್ಯಾಡ' ಅಂತೇಳಿದಾಗ ಪಾರ್ವತಿ ಕುಸಿದು ಕುಂತಳು.






No comments:
Post a Comment