Shivu Morigeri

Tuesday, 6 August 2013

my imagination story 10

ಗರ್ಭಗುಡಿ

ಇಡೀ ಊರಿಗೂರಾ, ಜಗತ್ತನ್ನಾ ಮರತು ಮಕ್ಕಂಡಿರತೈತಿ. ಊರಾಗಿನ ಎಲ್ಲರ ಮನಿ ಕದಗಳು ಮಖಾ ಮುಚ್ಚಿಗಂಡಿರ್ತಾವು. ಲೋಕದ ಪರಿಜ್ಞಾನನಾ ಇಲ್ಲದ ಕೂಸುಗಳು ಒಂದು ಕಾಪು ನಿದ್ದಿ ಮುಗಿಸಿ ಹೊಟ್ಟಿ ಹಸಿದಂಗಾಗಿಯೋ ಇಲ್ಲಾ ಉಚ್ಚಿ ಹೊಯ್ಕಂಡು ಹಾಸ್ಗಿನೆಲ್ಲಾ ತೊಯಿಸ್ಕಂಡೋ ಅಂತೂ ಮಕ್ಕೊಂಡಿರಾ ಜೋಲಿಲಿಂದನಾ ಚಿಟಾರನೇ ಚೀರಿ ಅಪ್ಪನ ತೋಳಮ್ಯಾಗ ತಲಿಕೊಟ್ಟಿದ್ದ ಅವ್ವಗ ದಿಢೀರನ ಎಚ್ಚರ ಮಾಡೋ ಹೊತ್ತದು. ಇನ್ನು ಹಸು ಮಕ್ಕಳು, ಹರೇದ ಮಕ್ಕಳು, ತಮ್ಮ ಮಗ್ಗಲು ಬದ್ಲಿಸೋ ಟೈಂ ಅದು. ಮತ್ತಿನ್ನು ನಿದ್ದಿನಾ ಬರದ ಮುದುಕ್ರು ಯಾವಾಗ ಬೆಳಕರಿತೈತಪಾ ಅಂತೇಳಿ ಮಕ್ಕೊಂಡಿರಾ ಹಾಸ್ಗಿಯೊಳಗಾ ಕೆಮ್ಮಿಕೋತ ಅತ್ಲಾಗ ಇತ್ಲಾಗ ಒದ್ದಾಡಿ, ಹಾಸ್ಗಿ ಮಗ್ಗಲದಾಗಿನ ಚೆಂಬಿನಾಳಿನ ನೀರು ಕುಡುದು ಮತ್ತೆ ಔರೋರ ಕೌದಿಯೊಳಗ ತಲಿಕೊಡಾಂತ ಟೈಂ ಅದು. ಮನಿ ಹೊರಗ ಮೆಟ್ಟುಣ್ಕಿ ಮ್ಯಾಗೋ, ಕಟ್ಟಿ ಮೂಲ್ಯಾಗೋ ಎಲ್ಲೋ ಒಂದು ಕಡಿಗೆ ನಾಯಿಗಳು ದುಂಡುಗು ಮಕ್ಕೊಂಡಿರಾ ಟೈಂ ಅದು. ಊರಾಗಿನ್ನ ಎಲ್ಲಾ ಓಣಿಯ ಎಲ್ಲಾ ಬೀದಿಗಳೂ ತಮ್ಮ ಕೈಕಾಲುಗಳನ್ನ ಮನಸೋ ಇಚ್ಛೆ ಚೆಲ್ಲಾಡಿ ಮಕ್ಕೊಂಡಿರಾಂಥ ಟೈಂ ಅದು. ಹಿಂಗ ಒಂದಾ ಮಾತಿಗೆ ಹೇಳಬೇಕಂದ್ರ ಇಡೀ ಜಗತ್ತಾ ಮಕ್ಕೊಂಡಿರಾ ಟೈಂನಾಗ ಅವನೊಬ್ಬನು ಊರ ಹೊರಗಿರೋ ಆ ಹಳೇ ಹ್ಮಪ್ಪನ ಗುಡಿಯೊಳಗ ಎದ್ದು ಕುಂದ್ರತಾನ.
ಹಂಗ ಎದ್ದು ಕುಂತೋನು ತನ್ನ ಹಾಸ್ಗಿನೆಲ್ಲಾ ಹನ್ಮಪ್ಪನ ಗುಡಿಯಾಗಿನ ಜಂತಿಮ್ಯಾಕ ಎತ್ತಿಟ್ಟು , ಗುಡಿಯ ಮೂಲ್ಯಾಗಿನ ಒಂದು ಗಡಿಗಿಯೊಳಗಿನ ನೀರು ತಗೊಂಡು ಮಾರಿ ತ್ವಕ್ಕಂಡು ತನ್ನ ಜೋಳಿಗಿ ತಗಂಡು ನೇರ ಹೋಗಾದು ಊರಾಚೆಗಿರೋಂತ ಸುಡುಗಾಡಿಗೆ. ಹಾಗೆ ಸುಡುಗಾಡಿಗೆ ಹೋದ ಅವನು ಅಲ್ಲಿ ಅದೇನಾ ಪೂಜೆ ಮಾಡಿ ಆ ಸುಡಗಾಡಿನಲ್ಲಿನ ಆತ್ಮಗಳ ಜತಿಗೆ ಮಾತಾಡ್ತಾನಂತೆ. ಅವಾಗ ಅಲ್ಲಿರಾ ಆತ್ಮಗಳು ಔರೋರ ಮನಿಗುಳಾಗ ಮುಂದೆ ನಡಿಯ ಒಳ್ಳೇದು, ಕೆಟ್ಟದ್ದು ಎಲ್ಲಾ ನಮೂನಿ ಕಾರ್ಯಗಳನ್ನ ಇವನಿಗೆ ಹೇಳ್ತಾವಂತೆ ಅವುಗಳನ್ನೆಲ್ಲಾ ತಿಳಕೊಂಡು ಆ ಆತ್ಮಗಳಿಗೆ ಏನಾ ಒಂದು ಭರವಸೆ ಕೊಟ್ಟು ಅಲ್ಲಿಂದ ವಾಪಾಸ್ ಊರೊಳಗ ಬರಾಕರ ತನ್ನ ಬಲಗೈಯೊಳಗಿನ ಶಂಖವನ್ನ ಊದಿಕಂತ ಬರ್ತಾನೆ. ಇವನ ಶಂಖ ಧ್ವನಿ ಕೇಳತಿದ್ದಂಗನಾ ಅಲ್ಲಲ್ಲಿ ಮಕ್ಕಂಡಿರಾ ನಾಯಿಗಳು ದಿಢೀರನ ಎದ್ದು ಬೊಗಳಾಕ ಚಾಲೂ ಮಾಡ್ತಾವು.
ಯಾವಾಗ ಓಣ್ಯಾಗಿನ ನಾಯಿಗಳು ಟೀಂ ಕಟ್ಟಿಗಂಡು ಬೊಗಳತಾವೋ ಮದ್ಲಾ ನಿದ್ದಿ ಇಲ್ಲದ ಮುದುಕ್ರು ಮಕ್ಕಂಡಿರಾ ಹಾಸ್ಗಿಯೊಳಗಾ ತಮಗ ತಾವಾ ಹೇಳ್ಕಂತಾರ 'ಶಂಖದ ಧ್ವನಿನೂ ಬರ್ತೈತಿ, ಓಣ್ಯಾಗಿನ ನಾಯಿಗಳೂ ಬೊಗಳತಾವಪಾ ಅಂದ್ರ ಔನು ಕಳ್ಳನೂ ಅಲ್ಲ ಸುಳ್ಳನೂ ಅಲ್ಲ, ಅನುಮಾನನಾ ಬ್ಯಾಡ ಅವ್ನು ಕಾಡ ಸಿದ್ದಪ್ಪ' ಇವ್ನು ಶಂಖ ಊದಿಕಂತ ಬಂದಾನ ಅಂದ್ರ ಬೆಳ್ಳಿ ಚುಕ್ಕಿ ಮುಡಾಕ ಇನ್ನೇನು ಸ್ವಲ್ಪಹೊತ್ತು ಬಾಕಿ ಐತಿ ಅಂತಾನ ಖಾತ್ರಿ ಮಾಡ್ಕಬೇಕು. ಅಷ್ಟರ ಮಟ್ಟಿಗೆ ಟೈಂನ ಮೆಂಟೇನ್ ಮಾಡೊ ವ್ಯಕ್ತಿ ಅಂದ್ರ ಕಾಡ ಸಿದ್ರ ಸಿದ್ದಯ್ಯ. ಹೌದು. ಅವನು ಆ ಊರಿನ ಸಿದ್ದಪ್ಪ. ಅಂದ್ರ ಕಾಡು ಸಿದ್ರು ಅಂತ ಕರಿಸಿಕೊಳ್ಳಾ ಒಂದು ನಮೂನಿ ವಿಶಿಷ್ಠ ಜನಾಂಗದ ಸಂತ ಅಂತಾನಾ ಕರೀ ಬೌದು. ಈ ಕಾಡು ಸಿದ್ರು ಒಂದು ಕಡಿಗೆ ನೆಲೆನಿಂದ್ರಾದು ಬಾಳ ಅಪರೂಪವಂತೆ. ಆದ್ರ ಈ ಸಾಲಾಪುರ ಅನ್ನೋ ಊರಾಗ ಮಾತ್ರ ಎಲ್ಲಿಂದಲೋ ಬಂದ ಈ ಸಿದ್ದಯ್ಯ ಬಾಳ ದಿನ ಇದಾ ಊರಾಗಾ ಇದ್ದ. ಅವನ ಹೆಸ್ರು
ಸಿದ್ದಯ್ಯ.

ಇಂಥಾ ಸಿದ್ದಯ್ಯ ಹಂಗ ಶಂಖ ಊದಿಕಂತ ಇಡೀ ಊರಿನ ಎಲ್ಲಾ ಹಾದಿ ಬೀದಿಗಳನ್ನೂ ಸುತ್ತಿಕಂಡು ಕೊನೀಗೆ ಮತ್ಯ ಹನ್ಮಪ್ಪನ ಗುಡೀಗೆ ಬಂದು ತನ್ನ ಜೋಳಿಗಿಗಳನ್ನ ಒಂದು ಮೂಲಿಗಿಟ್ಟು, ತಲೀಗೆ ಸುತ್ತಿಕಂಡಿದ್ದ ರುಮಾಲನ್ನ ತಲೀಲಿಂದ ತೆಗದು ಉಸ್ಸಪ್ಪ ಅಂತೇಳಿ ಒಂದು ಗ್ವಾಡಿಗೆ ಆತುಕಂಡು ಕುಂತ್ಕಂಡು ಒಂದು ಬೀಡಿ ಸೇದುಷ್ಟೊತ್ತಿಗೆ ಬೆಳಗಿನ ಜಾವ ಐದುವರೆ ಆಗಿರತೈತಿ. ಅವಾಗ ಗುಡಿಲಿಂದ ಎದ್ದು ಸೀದಾ ಬಸ್ ಸ್ಟ್ಯಾಂಡಿಗೆ ಬಂದು ಅಲ್ಲಿರಾ ಹೋಟ್ಲಗುಳಾಗ ಒಂದು ಚಾ ಕುಡುದು ವಳ್ಳಿ ಮತ್ತದಾ ಗುಡಿಗೆ ಹೋಗಿ ತನ್ನ ನಿಜ ಕಾಯಕಕ್ಕ ತಯಾರಿ ನಡಿಸ್ತಾನ. ಈ ಸಿದ್ದಯ್ಯ ತನ್ನ ಕಾಯಕಕ್ಕ ನಡಿಸಾ ತಯಾರಿನಾ ಒಂದು ದೊಡ್ಡ ಹಬ್ಬ ನೋಡಿದಂಗಾಕೈತಿ ಬಿಡ್ರಿ. ಮದ್ಲು ತಾನು ತೊಟ್ಟಕಂಡಿರಾ ಖಾವಿನ ಒಮ್ಮಿ ನೋಡಿಕಂತಾನ. ಆಮ್ಯಾಲ ತನ್ನ ಕಿವಿಗೆ ರುದ್ರಾಕ್ಷಿ ಝುಮುಕಿನಾ ಹಾಕ್ಕೋತಾನ, ತನ್ನ ಕೊಳ್ಳಾಗಿನ ಮಣಗಟ್ಟಲೆ ಇರೋ ರುದ್ರಾಕ್ಷಿ ಸರಗಳನ್ನ ಎಲ್ಲವ್ನೂ ನೀಟಾಗಿ ತನ್ನ ಖಾವಿ ಹೊರಗ ಕಾಣಂಗ ಹಾಕ್ಕೊತಾನ. ಆಮ್ಯಾಲೆ ಮಖದ ತುಂಬಾ ತೆಳ್ಳಗ ಕಾಣಂಗ ಅಂದ್ರ ಲೈಟಾಗಿ ಕಾಣುವಂಗ ವಿಭೂತಿನ ತಿಕ್ಕೋತಾನ. 
ಒಂದು ಲೆಕ್ಕಕ್ಕ ಹೇಳಬೇಕಪಾ ಅಂದ್ರ ವಿಭೂತಿ ಪುಡಿಯೊಳಗಾ ಮಖಾ ತ್ವಳಕಂಡನೇನಾ ಅನ್ನಂಗ ಕಾಣತಿರತೈತಿ. ಆಮ್ಯಾಲ ತನ್ನ ಹಣಿ ಮ್ಯಾಗ ಮೂರು ಬೊಳ್ಳಿಲಿಂದ ಹಣಿತುಂಬಾ ವಿಭೂತಿ ಹಚ್ಗೋತಾನ. ತನ್ನ ಮೂಗಿನ ನೇರ ನಡೋ ಹಣಿಯೊಳಗ ರುಪಾಯಿಯಷ್ಟು ಅಗಲಾ ಕರೀ ಬಣ್ಣದ ಕುಂಕುಮ ಹಚ್ಕೋತಾನ. ಅದು ಕರೀ ಕುಂಕುಮ ಅಲ್ರಲೇ ಅಂಜನ ಅದು ಅಂತ ವಾದ ಮಾಡೋರೂ ಅದಾರ. ಆಮ್ಯಾಲೆ ಕಣ್ಣಿನ ತೆಳಾಗಿರೋ ಬುರುಡೆ ಮೂಳೆಯ ದಿಬ್ಬಕ್ಕ ಗುಲಾಬಿ ಬಣ್ಣದ ಕುಂಕುಮಾನ ತೆಳ್ಳಗ ಸೂರ್ಯ ಚಂದ್ರನಂಗ ಎರಡೂ ಕಡಿ ಹಚ್ಕೋತಾನ. ಕೈ ತುಂಬಾ ಸಿಲ್ವರ್ ಆಭರಣ, ಕಾಲಿಗೆ ಎಂಥದ್ದೋ ಗೆಜ್ಜಿ, ಹಿಂಗ ಎಲ್ಲಾ ಸಿಂಗಾರ ಮುಗದ ಮ್ಯಾಗ ತನ್ನ ತಲೀಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಂಡು ತನ್ನ ಜೋಳಿಗಿಯೊಳಗಿರೋ ನೌಲು ಗರಿಯೊಂದನ್ನ ಸಿಕ್ಕಿಸಿಕೋತಾನ. ಆಮ್ಯಾಲ ಶಂಖವನ್ನ ತಗೊಂಡು ತನ್ನ ಜೋಳಿಗೆಗಳನ್ನ ಹೆಗಲಿಗೆ ಹಾಕ್ಕೊಂಡು ಊರ ಕಡಿಗೆ ಮಖಾ ಮಾಡಾಷ್ಟತ್ಗೆ, ಮುಳಾಮುಂಜಾಲೆ ಅನ್ನೋ ಮಬ್ಬು ಮಬ್ಬು ಬೆಳಕು ಊರತುಂಬಾ ಚೆಲ್ಲಿರತೈತಿ.

ಹಂಗ ನೋಡಬೇಕಪಾ ಅಂದ್ರ, ಈ ಸಿದ್ದಯ್ಯ ಊರಾಗಿನ್ನ ಎಲ್ಲರ ಮನಿಗುಳಿಗೆ ಹೋಗಿ ಶಂಖ ವೂದಿ ಮನ್ಯಾರು ನೀಡಿದ್ದನ್ನ ಜೋಳಿಗಿಗೆ ಹಾಕಿಸಿಕೊಂಡು ಬರ್ತಾನ. ಆದ್ರ ಸವತ್ತಿನಾಗ ಸುಡುಗಾಡಾಗ ಯಾವ್ಯಾವೋ ಆತ್ಮಗಳು ತಮ್ಮತಮ್ಮ ಮನಿತನದ ಕಥಿಗಳನ್ನ ಹೇಳಿರ್ತಾವಂತೆಲ್ಲಾ, ಅಂಥಾ ಮನಿಮುಂದೆ ನಿಂತ್ಕಂಡು 'ನಿಮ್ಮ ಮನಿಯಾಗ ಇನ್ನು ಇಷ್ಟು ದಿನದಾಗ ಇಂಥಾದ್ದೊಂದು ಕಾರ್ಯ ನಡೀತೈತಿ' ಅಂತ ಏನೇನೋ ಹೇಳ್ತಾನ. ಅವಾಗ ಅಂಥಾ ಮನಿಯೋರು, ಸಿದ್ದಯ್ಯ ಕೊಟ್ಟ ಸುದ್ದಿ ಒಳ್ಳೇದಾಗಿದ್ರ ಖುಷಿಲಿಂದ ಹತ್ತಿಪ್ಪತ್ತು ರುಪಾಯಿ ಕೊಟ್ಟು ಒಂದು ಮೊರದ ತುಂಬಾ ಕಾಳು ಕಡಿ ಕೊಡ್ತಾರ. ಆದ್ರ ಒಂದುವೇಳೆ ಅವನೇನಾದ್ರೂ ಕೆಟ್ಟ ಸುದ್ದಿ ಕೊಟ್ಟಿದ್ರ ದುಃಖದಿಂದ ಆ ಘಟನಿಲಿಂದ ತಪ್ಪಿಸ್ಕಣಾಕ ಏನು ದಾರಿಗುಳು ಅದಾವು ಅಂತ ಕೇಳಿಕಂಡು ಬ್ಯಾಸ್ರಾ ಮಾಡಿಕಂಡು ಐದತ್ತು ರುಪಾಯಿ ಕೊಟ್ಟು ಮನ್ಯಾಗಿನ ಹಳೇ ಅರಿವಿ ಕೊಟ್ಟು ಕಳಿಸ್ತಾರ.
ಈ ಸಿದ್ದಯ್ಯ ಬರೀ ಹಿಂಗ ಆತ್ಮಗಳು ಹೇಳಿದ ಕತಿ ಹೊತ್ಕಂಡು ಮನಿ ಮನಿ ತಿರುಗಾದಷ್ಟಾ ಅಲ್ಲದ, ಹರೇದ ಹುಡ್ರು ಓಣ್ಯಾಗ ಸೇರಿಕಂಡು ಇತನ್ನ ಕರದು ನಮಿಗೊಂದು ಆಟ ತೋರ್ಸು ಅಂತ ಕೇಳಿದ್ರ ತನ್ನ ಜೋಳಿಗಿಯೊಳಗ ಇಟ್ಟುಕೊಂಡಿರಾಂತ ಐದಾರು ಬ್ಯಾರೆ ಬ್ಯಾರೆ ಸೈಜಿನ ನುಣುಪು ಕಲ್ಲುಗಳನ್ನ ಬಾಯಿಗೆ ಹಾಕ್ಕೊಂಡು ನುಂಗಿ ಅವುನ್ನ ಮತ್ಯ ಹೊಟ್ಟಿಲಿಂದ ಕಡೀಗೆ ತೆಗದು ತೋರಸಾದು, ಬರೈ ಕೈನ ಗಾಳಿಯೊಳಗ ಆಡಿಸಿದಂಗಾ ಮಾಡಿ ಎನಾರ ಒಂದು ಪವಾಡದ ವಸ್ತುಗಳನ್ನ ಕೊಡ್ತಾನ. ಆಮ್ಯಾಲ ಅವರಿಂದ ಒಂದಿಷ್ಟು ರ್ವಕ್ಕ ತಗೊಂಡು ಮುಂದಕ್ಕೊಕ್ಕಾನ. ಹೊತ್ತು ನೆತ್ತಿಗತ್ತವರಿಗೂ ಊರಾಡಿ ಆಮ್ಯಾಲ ತನ್ನ ಜೋಳಿಗಿಯೊಳಗಿನ ಕಾಳನ್ನ ಅಲಲೇ ಯಾವುದರಾ ಕಿರಾಣಿ ಅಂಗಡೀಗೆ ಹಾಕಿ ಸಿಕ್ಕೊಷ್ಟು ರ್ವಕ್ಕ ತಗೊಂಡು ಮತ್ಯ ಹನ್ಮಪ್ಪನ ಗುಡಿಗೆ ಹೋಗಿ ತನ್ನ ವೇಶಾನೆಲ್ಲಾ ಬಿಚ್ಚಿಟ್ಟು ಹೋಟ್ಲಿಗೆ ಹೋಗಿ ಊಟಮಾಡಿ ವಿಶ್ರಾಂತಿ ತಗಾಂತಾನ. ಇದು ಸುಳ್ಳಾಪುರದಾಗ ಸಿದ್ದಯ್ಯನ ದಿನನಿತ್ಯದ ಕಾಯಕ ಐತಿ.
ಇಂಥಾ ಸಿದ್ದಯ್ಯ ಇರೋ ಊರಾಗ ಆ ಒಂದು ಮನಿ ಐತಿ. ಅದು ಊರಾಗ ಒಂದು ಮಟ್ಟಿಗಿನ ದೌಲತ್ತು ನಡಿಸೋಂತ ಮನಿನೂ ಹೌದು. ಅವ್ರ ಮನಿಯೊಳಗಿನ ಆಳುಗುಳಾ ದೊಣ್ಣಿ ನಾಯಕರುಗುಳು ಮೆರದಂಗ ಮೆರಿತಾರ ಇನ್ನು ಮನಿ ಯಜಮಾನನ ದೌಲತ್ತು ಹೆಂಗಿರಬೋದು ನೀವಾ ಗೆಸ್ ಮಾಡ್ಕೋರಿ. ಗಂಡ ಹೆಂಡ್ತಿ ಬಿಟ್ರ, ಆ ಮನಿಯಾಗ ಯಜಮಾನ್ರು ಅಂತ ಯಾರೂ ಇದ್ದಿಲ್ಲ. ಕೀರಪ್ಪ ನಾರಮ್ಮ ಅಂತ ಔರೆಸ್ರು. ನಾರಮ್ಮ ಬಾಳ ಒಳ್ಳೇಕಿ. ತನ್ನ ಮನಿಯೊಳಗಿನ ಎಂಟು ಜನ ಆಳುಗಳನ್ನ ಸ್ವಂತ ಮಕ್ಕಳಂಗ ಕಾಣಾಕಿ. ಕಷ್ಟ ಅಂತ ಬಂದೋರಿಗೆ ಕೀರಪ್ಪನ ಕಳವಿಲೆ ತನ್ನ ಯೋಗ್ತಿಯನುಸಾರ ಸಾಯಾ ಮಾಡ್ತಿದ್ಳು. ಈ ಮನಿಯಾಗ ಇದ್ದ ಕೀರಪ್ಪನ ತಾಯಿ ತಾನು ಇನ್ನು ಉಳಿಯೋದಿಲ್ಲ ಅನ್ನಂಥಾ ಖಾತ್ರಿಯೊಳಗ ತನ್ನ ಮಗನ್ನ ಮದ್ವಿ ಮಾಡಿ ಸಿವನ ಪಾದ ಸೇರಿದ್ಲು.

ನಾರಮ್ಮನ ನೋಡಾಕ ಕೀರಪ್ಪ ಹೋದಾಗ ಇವನ ಠೀವಿ, ಗತ್ತು-ದೌಲತ್ತು ನೋಡಿ ಮನುಷ್ಯ ಬಾಳ ಒಳ್ಳೇನಿರಬೇಕು, ಗರಡಿಮನ್ಯಾಗ ಪಳಗಿದ ಹೆಬ್ಬುಲಿ ಇದ್ದಂಗದಾನ. ಇಂಥಾ ವರ ಸಿಗಾಕ ನಾರಮ್ಮ ಪುಣ್ಯ ಮಾಡ್ಯಾಳ ಅಂತ ಅಕಿ ಗೆಳತೀರು ನಕಲಿ ಮಾಡಿದ್ರು. ಅವಾಗೆಲ್ಲಾ ನಾರಮ್ಮ ಹಿರಿ ಹಿರಿ ಹಿಗ್ಗಿ ತಲಿ ಎತ್ತಿ 'ಹೆಂಗದನ ನನ್ನ ಗಂಡ ?' ಅಂತ ಉಬ್ಬುಬ್ಬಿ ಮಾತಾಡತಿದ್ಲು. ಆದ್ರ ಯಾವಾಗ ನಾರಮ್ಮನ ನೊಡಿದ ಕೂಡ್ಲ ಕನ್ಯ ಇಷ್ಟ ಆಗೈತಿ ಅಂತ ಒಪ್ಪಿಗಿ ಕೊಟ್ಟು ಮೂರಾ ತಿಂಗಳದಾಗ ಲಗ್ಮ ಮಾಡಿಕಂಡು ತನ್ನ ಮನಿಗೆ ಕರಕಂಡು ಬಂದು ಆರ ತಿಂಗಳಿಗೆ ಕೀರಪ್ಪನ ಅವ್ವ ತೀರಿಕಂಡೋದ್ಲು. ಯಾವಾಗ ಮನ್ಯಾಗಿರಾ ಒಂದು ಯಜಮಾನಿನೂ ಇಲ್ಲದಂಗಾತೋ ಆ ಮನಿಯ ಯಜಮಾನಿಕಿ ಇದ್ದೊಬ್ಬ ಮಗ ಈ ಕೀರಪ್ಪನಾ ಅರವತ್ತೆಪ್ಪತ್ತು ಎಕರಿ ಹೊಲ, ಗದ್ದಿ, ತ್ವಾಟ, ಮನಿತುಂಬಾ ದನಗುಳು, ತಿಜಿರಿತುಂಬಾ ರ್ವಕ್ಕ, ಬಂಗಾರ, ಎಲ್ಲದಕ್ಕೂ ಈತನಾ ಯಜಮಾನ ಆಗೋದ. ಅವಾಗ ನಾರಮ್ಮಗ ಗೊತ್ತಾತು ನೋಡ್ರಿ ಕೀರಪ್ಪನ ಅಸಲೀಯತ್ತು.
ಕೀರಪ್ಪ ಗರಡಿ ಮನಿಯಾಗ ಪಳಗಿದ ಹುಲಿ ಅನ್ನೋದು ಎಷ್ಟು ದಿಟವಿತ್ತೋ, ಊರಾಗಿನ ನಾಕಾರು ಗುಡುಸಿಲುಗುಳಾಗ ಬಿದ್ದೇಳಾ ನಾಯಿಯಂಥೋನೂ ಹೌದು. ಅಂತ ಒಂದಿನ ನಾರಮ್ಮಗ ಗೊತ್ತಾಗೋಯ್ತು. ಅವತ್ತು ಮದ್ಯಾಹ್ನದ ಹೊತ್ತಿನಾಗ ಮಜ್ಗಿ ಕೇಳಾನು ಅಂತ ಬಂದಿದ್ದ ಬಡವಿಯೊಬ್ಬಾಕಿ ಕ್ವಳ್ಳಾಗ ತನ್ನ ಮನಿ ತಿಜುರಿಯೊಳಗಿದ್ದ ಮನಿದೇವ್ರ ಪದಕದ ಬೆಳ್ಳಿ ಸರ ಕಂಡಿತ್ತು. ಈ ವಿಚಾರದ ಸತ್ಯ ತಿಳಕಣಾಕ ನಾರಮ್ಮ ತಮ್ಮ ಮನಿಯಾಳುಗಳನ್ನ ಕೇಳಿದಾಗ ಹೆತ್ತವ್ವನ ಎದ್ರು ಹಸು ಮಕ್ಳು ಸತ್ಯ ಹೇಳಿದಂಗ ಕೀರಪ್ಪನ ಎಲ್ಲಾ ಹರಾಮಿ ಕೆಲಸಗಳನ್ನೂ ಹೆಳಿದ್ರು.. ಕಿನಗಳು ಸರಿತಾನಾ ಇದ್ವು. ಕೀರಪ್ಪ ತೀರಾ ತನ್ನ ಹೆಂಡ್ತಿಯೊಬ್ಬಾಕಿನಾ ಬುಟ್ಟು ರಾತ್ರೆಲ್ಲಾ ಬಿಡಾಡಿಯಂಗ ಹರಾಮಿತನ ಮುಂದುವರಿಸಿದ್ನೋ ಅವತ್ತು ನಡುಮನಿಯೊಳಗ ನಿಂದ್ರಿಸಿ ಕೇಳಿದ್ಲು ನಾರಮ್ಮ. 'ಕಟ್ಟಿಕೊಂಡಾಕಿನ ಇಂಥಾ ದೊಡ್ಡ ಮನಿಯಾಗ ಒಬ್ಬಾಕಿನಾ ಬುಟ್ಟು ನಿನ್ನ ಗಂಡಸ್ತನಾನಬಡವ್ರು, ಅಮಾಯಕ್ರು ಮ್ಯಾಗ ತೋರಿಸ್ತಿಯಲ್ಲ ಚೂರು ನಾಚಿಕಿ ಅಕಯತೇನು ನಿನಿಗ್ಯ ?' ಯಾವಾಗ ಮೂಕ ಬಸವಣ್ಣನಂಗ ಇದ್ದ ಹೆಂಡ್ತಿ ಬಾಯಿಂದ ಇಂಥಾ ಮಾತು ಕೇಳಿದನೋ, ಕೆರಳಿದ ಕೀರಪ್ಪ, ನಾರಮ್ಮನ ದನಕ ಬಡದಂಗ ಬಡುದು, 'ನಾನು ಇರಾದ ಹಿಂಗ, ನನಿಗೆ ಬೇಕಾದಾಗ ಇಲ್ಲಿ ಮಕ್ಕೋತಿನಿ ಬ್ಯಾಡಾದ್ರ ನಾ ಎಲ್ಲೆರಾ ಮಕ್ಕೋಳ್ಳಿ ಅದನ್ನೆಲ್ಲಾ ನೀ ಯಜಮಾನಕಿ ಮಾಡಿದ್ರ ಕ್ವಳ್ಳಾಳ ತಾಳಿ ಹರದು ನನಿಗ್ಯ ಬರದುಕೊಟ್ಟು ಮನಿಬುಡು' ಅಂತೇಳಿ ಹೊರಗೋಗಿದ್ದ. ಅವತ್ತಿನಿಂದ ಕೀರಪ್ಪ ತನ್ನ ಮನಿಯೊಳಗ ಇರ್ತಾಇದ್ದುದು ಯಾವಾಗ್ಲೋ ಏನೋ, ಇದು ಬರೊಬ್ಬರಿ ಮೂರು ವರ್ಸ ನಡೀತು. ಊರಾಗ, ತನ್ನ ತೌರ ಮನಿಯಾಗ ಎಲ್ಲರೂ ನಾರಮ್ಮನ ಒಡಲು ಯಾಕಾ ತುಂಬುವಲ್ದು ಅಂತ ಮಾತಾಡ್ಕಂತಿದ್ರು.. ಓಸು ಮಂದಿ ನಗಾಡಿದ್ರು. ಹೆತ್ತೋರು ಸಮಸ್ಯೆ ಏನರಾ ಐತೇನ್ವಾ ಅಂತ ಕೆಳಿದಾಗ ತನ್ನ ಯಾವ ಕಷ್ಟಾನೂ ಹೇಳಿಕಣದೇ, ತಾನಾ ಯಾವುದಾ ವ್ರತಾ ಮಾಡಾಕತ್ತೀನಿ ಅಂತೇಳಿ ಕಾಲ ಕಳಿತಿದ್ಳು. ತನ್ನ ಗಂಡ ತನಿಗೆ ಮಾಡಾ ಅವಮಾನ, ಸುತ್ತು ಉರಾರು ಮಾಡಾ ಅವಮಾನ, ಎಲ್ಲದರಿಂದ ಬೇಸತ್ತುಬಿಟ್ಟಿದ್ಲು. ಇಂಥಾ ಸಂದರ್ಭದೊಳಗ ಶಂಖ ಊದಿಕೋತ ನಾರಮ್ಮನ ಮನಿಯ ಮುಂದೆ
ಸಿದ್ದಯ್ಯ ನಿಂತಿದ್ದ !
ಹಂಗ ಮನಿಮುಂದೆ ನಿಂತಿದ್ದ ಸಿದ್ದಯ್ಯ ಅವತ್ತು ರಾತ್ರಿ ನಾರಮ್ಮಳ ಅತ್ತಿ ಆತ್ಮ ಸುಡುಗಾಡಾಗ ಹೇಳಿದ ಕೆಟ್ಟ ಸುದ್ದಿನ ತೊದಲಿಕಂತ ಹೇಳಿದ್ದ. ಅದು ಏನಂದ್ರ, ಇನ್ನೊಂದು ವಾರದಾಗ ಕೀರಪ್ಪ ಸಾಯೋದು ಗ್ಯಾರೆಂಟಿ. ಸುದ್ದಿ ಕೇಳಿದ ನಾರಮ್ಮಗ ಸಿಡಿಲು ಬಡದಂಗಾತು. ಔನು ಎಂಥೋನಾ ಆಗಿರ್ಲಿ. ತನ್ನ ಗಂಡನ್ನ ಉಳಿಸ್ಕಣಾಕ ಇರಾ ದಾರಿಗಳನ್ನೆಲ್ಲಾ ಹುಡುಕಿದ್ಲು. ತನ್ನ ಗಂಡಗ 'ಇನ್ನೊಂದು ವಾರ ನೀ ಮನ್ಯಾಗಿರು. ಆಮ್ಯಾಲ ನಿನಿಗೆ ತಿಳದಂಗ ನೀ ಬದುಕು. ಅಲ್ಲಿವರಿಗೂ ಬೇಕಾರ ಆ ನನ್ನ ಸವತೀರನ್ನ ನನ್ನ ಮನಿಯೊಳಗಾ ಕರಕೊಂಡು ಬಾ. ದಿನಾಲು ನಾ ಒಬ್ಬಾಕೆ ಮಕ್ಕೋತಿದ್ದ ದೊಡ್ಡ ಮಂಚನಾ ನಿಮಿಗ್ಯಾ ಬಿಟ್ಟುಕೊಟ್ಟು ನಾ ದೇವ್ರ ಕ್ವಾಣ್ಯಾಗ ಮಕ್ಕೋತೀನಿ' ಅಂತ ಕಾಡಿದ್ಳು. ಆದ್ರ ಹೆಂಡ್ತಿಯ ಇಂತಾ ಬದ್ಲಾವಣಿ ಮಾತಿನ ಮ್ಯಾಲಾ ಅನುಮಾನಗೊಂಡ ಕೀರಪ್ಪ.
'ರೆಡ್ ಹ್ಯಾಂಡ್ಆಗಿ ಪೊಲೀಸ್ರಿಗೆ ಹಿಡಿದು ಕೊಡಾಕಮತ ಮಾಡೀದೇನು? ನಾನು ಹೆಂಗ ಬದುಕಬೇಕು ಅನ್ನಾದು ನನಿಗೆ ಗೊತ್ತೈತಿ ನಿನ್ನ ಕಕೆಲ್ಸ ಏನೈತಿ ಅದನ್ನ ನೋಡ್ಕ ಹೋಗು' ಅಂತೇಳಿದ್ದ ಕೀರಪ್ಪ. ಅವತ್ತೊಂದಿನ ಊರಾಗಿನ್ನ ಒಂದು ಬಡ ಒಂಟಿ ಹೆಣ್ಣಿನ ಗುಡಿಸಲಾಗ ಸತ್ತೋಗಿದ್ದ. ಅವನ ಮೈಯೆಲ್ಲಾ ಹಸಿರಾಗಿತ್ತು. ಇಡೀ ಊರಿಗೂರಾ ಕೀರಪ್ಪಗ ರಾತ್ರಿ ಹಾವು ಕಡದೈತಿ ಅಂತ ನಂಬಿದ್ರು. ಸುದ್ದಿ ತಿಳದ ನಾರಮ್ಮ ಹುಚ್ಚಿಯಂಗಾದ್ರೂ ಹೋಳಿ ಕಾಮ ಉರುದಂಗ ಉರುದು ನನ್ನ ಒಡಲಾಗೂ ಬೆಂಕಿ ಸುರುದು ಹೋಗ್ಯಾನ ಇನ್ನು ನಾನು ಜಾಣಿ ಆಗ್ಲಿಲ್ಲಾಂದ್ರ ಈ ವಂಶದ ಮಾನ ಮರ್ಯಾದಿ ಎಲ್ಲಾನೂ ಹರಾಜಾಗಿ. ದೊಡ್ಡ ಮನಿತನವೊಂದು ಸರ್ವನಾಶ ಅಕೈತಿ ನಾ ಅದ್ಕ ಅವಕಾಶ ಕೊಡಬಾರ್ದು ಅಂತ ಡಿಸೈಡ್ ಮಾಡಿ ಆ ಗುಡಿಸಲಿನಿಂದ ಹೆಣಾನ ತನ್ನ ಮನೀಗೆ ತನ್ನ ಮನಿಯಾಳುಗುಳ ಕುಟಾಗ ಸಾಗಿಸಿ ಮುಂದಿನ ಕಾರ್ಯನೆಲ್ಲಾ ಮಾಡಿ ತಾನು ವಿಧಿವಿ ಆಗಿ ಕೀರಪ್ಪಗ ಮಣ್ಣು ಮಾಡಿ ಬಂದಿದ್ಳು. 
ಗಂಡ ತೀರಿಕಂಡ ಒಂದು ವಾರ ಸುಮ್ಮನಿದ್ದ ನಾರಮ್ಮ ಆಮ್ಯಾಲ ತನ್ನ ಗಂಡನ ಸಾವು ಹೆಂಗ ಬಂತು ಅಂತ ಪತ್ತೆ ಹಚ್ಚಾಕ ಮನಿ ಆಳುಗುಳಿಗೆ ಹೇಳಿದ ಮೂರಾ ದಿನಕ್ಕ ಹೊರಕ ಬಿತ್ತು ಸತ್ಯ. ಕೀರಪ್ಪನ ಆ ಸಾವಿನ ಅಸಲಿಯತ್ತು ಏನಿತ್ತಪಾ ಅಂದ್ರ ಈ ಕೀರಪ್ಪ ಊರಾಗ, ಅದ್ರಾಗೂ ಒಂದಾ ಏರಿಯಾದಾಗ ನಾಕು ಹೆಣ್ಮಕ್ಕಳ ಸಂಗ ಮಾಡಿದ್ದ. ಅದ್ರಾಗ ಹೊಟ್ಟಿಪಾಡಿಗೆ, ಬಡತನಕ್ಕ ಬಳಲಿದೋರು ಕೀರಪ್ಪನ ಸವಾಸ ಮಾಡಿದ್ರು. ಅದ್ರಾಗ ಇಬ್ರು ಹೆಣ್ಮಕ್ಕಳ ನಡುಕು ಇದಾ ಕೀರಪ್ಪನ ವಿಚಾರದಾಗಾ ಜಗಳ ನಡದಿತ್ತಂತೆ. ಆ ಜಗಳ ತೀರಾ ವೈಷ್ಯಮ್ಯಕ್ಕೋಗಿ ನನಿಗ್ಯ ದಕ್ಕದ ಸೌಕಾರ ನಿನಿಗ್ಯಾಕ ಬೇಕಲೇ ಅಂತೇಳಿ ಒಬ್ಬಾಕಿ ಅವತ್ತು ಉಣ್ಣಾ ಅನ್ನದಾಗ ಇಸಾಕೊಟ್ಟಿದ್ಲಂತ್ಯ. ಸುದ್ದಿ ಕೇಳಿದ ನಾರಮ್ಮ ಬಾಳ ನೊಂದಕಂಡು ಆ ಹೆಣ್ಮಗಳನ್ನ ಮನಿಗೆ ಕರದು 'ಸುಮ್ಮನ ಪೊಲೀಸ್ರಿಗೆ ಹೋಗಿ ಶರಣಾಗು ಇಲ್ಲಾಂದ್ರ ನಡಿಯಾ ಕತೀನಾ ಬ್ಯಾರೆ ಐತಿ ನೋಡು' ಅಂತ ಸಿಟ್ಟಿಲೆ ಹೇಳಿದ ಮೂರ ತಾಸಿನೊಳಗ ಆ ಹೆಣ್ಮಗಳು ತನ್ನ ತಪ್ಪು ಒಪ್ಪಿಗಂಡು ಜೈಲಿಗೋಗಿ ಬಿಟ್ಲು.

 ಈ ಸತ್ಯದ ಘಟನಿ ತಿಳದ ಇಡೀ ಊರಾಗಿನ ಜನ ನಾರಮ್ಮನ ಒಳ್ಳೇ ಗುಣಕ್ಕ ಮರುಗಿದ್ರ, ಅಕಿಯ ದೈರ್ಯಕ್ಕ ಮೆಚ್ಚಿದ್ರು. ಅವತ್ತಾ ಊರಿಗೆ ಬಂದಿದ್ದ ನಾರಮ್ಮನ ಹೆತ್ತೋರು ತಮ್ಮ ಇದ್ದೊಬ್ಬ ಮಗಳ ಬಾಳು ಹಿಂಗಾತಲ್ಲಾ, ತನ್ನ ರೊಕ್ಕದ ಸೊಕ್ಕಿಗೆ ಕೀರಪ್ಪ ತನ್ನ ಮಗಳ ಬಾಳು ಹಾಳು ಮಾಡಿದ್ದಲ್ಲದಾ, ತನ್ನ ವಂಶಾನ ಸರ್ವನಾಶ ಮಾಡಿಕಂಡನಲ್ಲಾ ಅಂತ ಗೋಳಾಡಿ ಅಳೋವಾಗ ಕಂಬಕ್ಕ ಆತುಕೊಂಡು ಕುಂತಿದ್ದ ನಾರಮ್ಮ 'ಯವ್ವಾ ಈಗ ಇತ್ತೀಚಿಗೆ ಆತ (ಗಂಡ) ಒಂದೀಟು ಹಾದಿಗೆ ಬಂದಿದ್ನಬೇ ಇನ್ನೇನು ಸರಿ ಹೊಕ್ಕಾನ ಅನ್ನಷ್ಟತ್ಗೆ ಹಿಂಗಾತು, ಆದ್ರ ನೀವು ತಿಳ್ಕಂಡಂಗ ಈ ವಂಶ ಇಲ್ಲಿಗೇ ಸರ್ವನಾಶ ಆಗಲ್ಲ ಯಾಕಂದ್ರ' ಅಂತೇಳಿ ಅವ್ವನ ಮಾತ್ರ ಒಳಾಕ ಕರದು 'ಯವ್ವಾ ನನಿಗೆ ಮುಟ್ಟು ನಿಂತೈತಿ' ಮೆಲ್ಲಕ ಹೇಳಿದ್ಲು !
ವಿಷ್ಯ ತಿಳದು ಹಿಗ್ಗಿಬಿಟ್ಲು ತಾಯಿ. ಅವತ್ತಾ ವಿಷ್ಯ ಓಣ್ಯಾಗಿನ್ನ ಜನಕ್ಕೆಲ್ಲಾ ಮುಟ್ಟಿತು. ಮನಿಯ ಅಕ್ಕ ಪಕ್ಕದೋರು ಬುಡಾ ನಮ್ಮೌವ್ವನಾ ದೇವ್ರು ಕೊನಿಗಾಲದಾಗ ಕೈ ಬಿಡಲಿಲ್ಲ ಅಂತ ಎಲ್ಲರೂ ಸಮಾಧಾನಗೊಂಡಿದ್ರು. ಯಾಕಂದ್ರ ನಾರಮ್ಮಳ ಗುಣಕ್ಕ ಎಲ್ಲರೂ ತಲಿಬಾಗಿದ್ರು. ಈ ಘಟನೆಯಾದಮ್ಯಾಗ ಮೊದ್ಲಾ ಒಂದು ನಿಧರ್ಾರಕ್ಕ ಬಂದಿದ್ದ ನಾರಮ್ಮ ಅವತ್ತೊಂದು ಶನಿವಾರ ಅಪರಾಳದ ಹೊತ್ತಿನಾಗ ಹನ್ಮಪ್ಪನ ಗುಡಿಗೋಗಿ ಅಲ್ಲಿ ನಿದ್ದಿಯೊಳಗಿದ್ದ ಸಿದ್ದಯ್ಯನ ಎಬ್ಬಿಸಿ ತನಗ ಎದುರಾಗಿರಾ ಕಷ್ಟಕ್ಕ ಪರಿಹಾರ ಕೇಳಿದ್ಲು. ಸಪೂರ ಸುಂದರಿಯ ದಿಟ್ಟತನದ ನಿಲುವಿಗೆ ತಲೆಬಾಗಿದ್ದ ಸಿದ್ದಯ್ಯ. ಆ ಶನಿವಾರ ಹನ್ಮಪ್ಪನ ಜ್ಯೋತಿಯೊಂದು ಮದ್ಯಾಹ್ನದೊತ್ತಿನಾಗಾ ಬೆಳಗಿ ಗರ್ಭಗುಡಿಯೊಳಗಿನ್ನ ಕತ್ತಲನ್ನ ಓಡಿಸಿತ್ತು. ಸಿದ್ದಯ್ಯನ ಮುಂಗೈಗೊಂದು  ನಾಲ್ಕು ತ್ವಲಿಯ ಬಂಗಾರದ ಕಡಗ ಬಂದಿತ್ತು.  ಆಮೇಲಿನ ಕೆಲವು ತಿಂಗಳುಗಳಲ್ಲಿ ನಾರಮ್ಮಳ ಸೀಮಂತ ಕಾರ್ಯ ನಡೆದಿತ್ತು. ಆಮ್ಯಾಲೆ ನಾರಮ್ಮಗೊಂದು ಗಂಡುಮಗು ಹುಟ್ಟಿತ್ತು. ಮತ್ತೂ ಕೆಲವು ತಿಂಗಳುಗಳು ಕಳೆದವು. ಮಗುವಿನೊಂದಿಗೆ ತನ್ನ ಗಂಡನ ಮನಿಗೆ ಬಂದ ನಾರಮ್ಮ ಹೊಸಾ ಜೀವನಕ್ಕ ನಾಂದಿ ಹಾಡಿದ್ಲು. ಈಗ ಬೆಳಗಿನ ಜಾವ ಸಿದ್ದಯ್ಯನ ಶಂಖನಾದಕ್ಕೆ ಬೀದಿಯಲ್ಲಿನ ನಾಯಿಗಳು ಬೊಗಳೋಕ್ಕೆ ಶುರು ಮಾಡಿದ್ರ, ನಾರಮ್ಮಳ ಮಗ್ಗುಲು ದೊಡ್ಡ ಮಂಚದ ಮ್ಯಾಗ ಮಕ್ಕೊಂಡ ಮಗು ಕಿಲಿಕಿಲಿ ನಗುತ್ತಿತ್ತು. 




 

No comments:

Post a Comment