ಹರಾಮಿ ಹನುಮ

'ಹ್ಞೂಂ, ಬಂದ ನೋಡು ಲೋಪರ್ ಸುಳೇಮಗ, ಇವನೌನು ನಮ್ಮ ವಂಶದ ಮಾನ ಮರ್ಯಾದಿನ ಹಾಳು ಮಾಡಾಕಂತಾನಾ ಹುಟ್ಯಾನೇನ ಈ ಶನಿಮಾತ್ಮನಂಥೋನು. ಲೇ, ನಿನಿಗ್ಯ ತಟಗರಾ ಮಾನಾ, ಮರ್ಯಾದಿ, ಏನರಾ ಐತೇನ್ಲೇ ? ಬಟ್ಟಿಬಿಟ್ಟೋನಾ. ನಾಡ್ ಬಟ್ಟಿ ಬಿಟ್ಟೋನಾ. ಥೂ ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ. ಹೋಗು, ಅಡಿಗಿ ಮನಿಗೋಗಿ ಊರ ಸೂಳೇರ ಹೇಸಿಗಿ ಐತೇನಾ, ಗಂಟ್ಲಮಟ್ಟ ತಿಂದು, ಬೀದಿ ಸೂಳೇರ್ನ ನೋಡಿಕಂತ ತಿರುಗೋಗು. ಥತ್ ಮಾದ್ರಚೋದ್' ಹಿಂಗ ಒಂದಾ ಉಸಿರಿಗೇ ಅಂಬಣ್ಣ ತನ್ನ ಮನಿಯ ಪಡಸಾಲಿ ಮ್ಯಾಗ ಕುಂತ್ಕಂಡು, ಆವಾಗಿನ್ನ ಹಚ್ಚಿಗಂಡಿದ್ದ ಗಣೇಶ ಬೀಡಿನ, ನೆಲದ ಕಡಪಾ ಕಲ್ಲಿಗೆ ತಿಕ್ಕಿ ತನ್ನ ಹೊಟ್ಟ್ಯಾಗಿನ ಸಿಟ್ಟನ್ನೆಲ್ಲಾ ಕೊಡವಾದನ್ನ ಕೇಳಿನೂ ಕೇಳದಂಗ, ಧಡ್ ಬಡ್ ಧಡ್ ಬಡ್ ಅಂತ ಒಳಗೋದಾನು ಅಂಬಣ್ಣನ ಎಲ್ಡನೇ ಮಗ ಹನುಮಂತ.
ಒಳಗ ಹೋಗತಿದ್ದಂಗನಾ, ಅಡಿಗಿ ಮನ್ಯಾಗ ರೊಟ್ಟಿ ಸುಡಾಕತ್ತಿದ್ದ ಅವರವ್ವ ನಿಂಗಮ್ಮನ ಮುಂದೆ ಹೋಗಿ ಕುಕ್ಕರಗಾಲಿಲೆ ಕುಂತ್ಕಂಡ. ಕೊಣಗ್ಯಾಗಿನ ರೊಟ್ಟಿ "ಟ್ಟನ್ನ ಪಟ ಪಟ ತಟ್ಟಿಗಂತನಾ, 'ಎಲ್ಲಿಗೋಗಿದ್ಯಪಾ ಯಪ್ಪಾ ಪುಣ್ಯಾತ್ಮ ? ನಿನ್ನಿಚ್ಚಿಗ್ಯ ಇಟಾತ್ತನ ನಾನು ಮಖಾ ತ್ವಳಿಸ್ಗಂಡೀನಿ ನಿಮ್ಮಪ್ಪನ ಕುಟಾಗ. ಅಲ್ಲಲೋ, ಮುಂಜ ಮುಂಜಾಲೆ ಹಿಂಗ ಮನಿಬಿಟ್ಟು ತಿರಗಾಕ ಹೋಗಿ, ಸೀದಾ ಹತ್ತುವರಿಗೆ ಬರ್ತಿಯಲ್ಲ ? ಹೇಳಾರು ಕೇಳಾರು ಯಾರೂ ಇಲ್ಲೇನಾ ಈ ಹುಡ್ಗಗಾ ? ಯಾವಾಗ ನೋಡಿದ್ರೂ ನಾಯಿ ತಿರಿಗಿದಂಗ ತಿರಗತೈತಿ, ಅಂತೇಳಿ ಓಣ್ಯಾಳ ಜನ ನಮಿಗ್ಯ ತಿನ್ನವೋಟು ಇಕ್ಕತಾರೋಡಪಾ ಸಗಣೀನ. ಹೊಟ್ಟಿಗ್ಯ ಅನ್ನ ತಿನ್ನನಾದ್ರ ತಿಳ್ಕಬೇಕಲೋ ಒಂದೀಟು' ಅಂತಂದು ಅವ್ನೂ ಯಾಕಾ ಬ್ಯಾಸರಾ ಮಾಡಿಕಂಡು ಬೈಯಾದು ಕೇಳತಿದ್ದಂಗನಾ, ಆಗಷ್ಟಾ ಮಖದ ಮ್ಯಾಗ ಮೀಸಿ ಬಂದಿದ್ದ ಹನುಮಗ ಕಂಡೆಬಟ್ಟೆ ಸಿಟ್ಟು ಬಂದುಬಿಡ್ತು. ಎಷ್ಟಾ ಆಗ್ಲಿ ಹರೇದ ಸೊಕ್ಕು ಮೈ ತುಂಬಾ ತುಂಬಿರತೈತಿ ನೋಡ್ರಿ, ಹಂಗಾಗಿ, 'ನಾನೇನು ಮಾಡೀನ್ರಬೇ ಅಂಥಾದ್ದು ? ಯಾಕ ಸುಮ್ಮನ ನಾಯಿ ಬೊಗಳಿದಂಗ ಬೊಳತೀರಿ ನನಿಗ್ಯ' ಅಂತ ಕೊಡವ್ಯಾಬಿಟ್ಟ.
ಅಡಗಿ ಮನಿಲಿಂದ ಯಾವಾಗ ಈ ಅವಾಜ್ ಕೇಳಿದ್ನೋ ಪಡಸಾಲ್ಯಾಗ ಕುಂತಿದ್ದ ಅಂಬಣ್ಣ, ರೌಸಿಲೇ ಎದ್ದೋಗಿ, ಕುಕ್ಕರಗಾಲಿಲೆ ಕುಂತಿದ್ದ ಹನುಮನ ಮೈಮ್ಯಾಗ ಏರಿದಂಗ ನಿಂತ್ಕಂಡು 'ಏನಾ ಬೊಗಳಿದಲ್ಲಲೇ, ಬೊಗಳು ಇಪಾಟು ? ಮನ್ಯಾಗ ಮಾಡಿ ಹಾಕಿದ್ದು ತಿಂದು ತಿಂದು ಮುಕಳಾಗ ಸೊಕ್ಕು ಜಾಸ್ತಿ ಆಗೈತೇನ್ಲೇ ನಿನಿಗ್ಯ? ಅಂತೇಳಿಕಂತನಾ, ತೆಗತಾ ತೆಗದು ಎಲ್ಡೇಟು ಕಪಾಳಕ್ಕ ಗಾವನಾಗೇ ಹೊಡದುಬುಟ್ಟ. ಕೂಲಿ ನಾಲಿ ಮಾಡಿ, ಮೈಮುರುದು ದುಡಿದಿದ್ದ ಅಂಬಣ್ಣನ ಕಲ್ಲಿನಂಥಾ ಅಂಗೈ ಹೊಡ್ತಕ್ಕ, ಹನುಮನ ಕಪಾಳದ ಮ್ಯಾಗ ನಾಕ್ ನಾಕು ಬೊಳ್ಳು ಹಂಗಾ ಬಾಚಲು ಮೂಡಿದ್ವು. ಯಾವಾಗ ಅಪ್ಪನಲಿಂದ ಹನುಮಾ ಕಡುಬು ತಿಂದನೋ, ಔನು ರೌಸಿಲೇ ಮ್ಯಾಕ ಎದ್ದುದ್ದೂ, 'ಹೌದೂ, ಹಿಂದೂ ಮುಂದು ನೋಡದಂಗಾ ಹಿಂಗ ಕಪಾಳಕ್ಕ ಹೊಡದೆಲ್ಲಾ, ಏನು ಮಾಡಕ್ಕಿತ್ತು ನಾನು ಮನ್ಯಾಗಿದ್ದು ? ಅದಾ ಹೌದಿಲ್ಲು, ನಾಕೆಮ್ಮಿ ಸೆಗಣಿ ಬಳದು, ಎಲ್ಡೆಮ್ಮಿ ಕರಾ ಬಿಟ್ಕಂಡು, ಡೈರಿಗೆ ಹಾಲು ಹಾಕಿ ಬರಾದೊಂದು ದೊಡ್ಡ ಕೆಲ್ಸೇನು ? ಇರಾ ಅಷ್ಟು ಸಣ್ಣ ಕೆಲಸನಾ ನಾನಾ ಮಾಡಿದ್ರ, ನೀನೇನು ಬಿಳೇ ಅಂಗಿ ಹಾಕ್ಕೊಂಡು ಓಣಿತುಂಬಾ ಅಡ್ಡಾಡಾಕು ಅಂತ ಮಾಡಿದ್ದೇನು?' ಅಂತ ಹಡದಪ್ಪಗಾ ಎದುರು ಮಾತಾಡಿಬಿಟ್ಟ.

ಮಗ ಯಾವಾಗ ವಯಸ್ಸಿಗೆ ಮೀರಿದ ಮಾತನ್ನು ಅಪ್ಪಗಾ ಎದುರಾಡಿದ್ನೋ ಮತ್ತೋಟು ತಾಳ್ಮಿ ಕಳಕಂಡ ಅಂಬಣ್ಣ, ಮತ್ತೆ ಮಗನ ಮ್ಯಾಗ ಕೈ ಮಾಡಾಕ ಹೋದಾಗ ರೊಟ್ಟಿ ಸುಡಾಕತ್ತಿದ್ದ ನಿಂಗಮ್ಮ ಎದ್ದು ಇಬ್ಬರ ನಡುಕೂ ನಿಂತಗಂಡು 'ನಿಮಿಗ್ಯ ಕೈ ಮುಗಿತೀನ್ರಪ್ಪಾ ಯಪ್ಪಾ, ಜೋರು ಬಾಯಿಗದ್ಲ ಮಾಡಿ ಓಣ್ಯಾಗಿನ ಜನಗಳೆಲ್ಲಾ ಅಂಗಳದಾಗ ನಿಂದ್ರಂಗ ಮಾಡಿ ಮರ್ಯಾದಿ ತೆಕ್ಕಬ್ಯಾಡ್ರಿ' ಅಂತೇಳಿ ಎದಿ ಉಬ್ಬಿಸಿ ನಿಂತಿದ್ದ ಮಗ ಹನುಮನ ಬುಜಾನ ಉರಿಯುತ್ತಿದ್ದ ಒಲಿ ಕಡಿಗೆ ತಿರುಗಿಸಿ 'ಲೋ ಅಡ್ಬಿಟ್ಟಿ ಸುಮ್ಮನ ರೊಟ್ಟಿ ತಿಂದು ನೆಡಿ, ಎಲ್ಲಿಗೆ ಹೊಕ್ಕಿಯೋ ಹಾಳಾಗಿ ಹೋಗು ಅತ್ಲಾಗ' ಅಂತ ಹೇಳತಿದ್ದಂಗನಾ, ಅವ್ವನ ಕೈಲಿಂದ ಕೊಸರಿಕಂಡ ಹನುಮ 'ಯಾವನಿಗೆ ಬೇಕ್ರಬೇ ನಿಮ್ಮ ಕೂಳು. ನೀವಾ ಗಂಡ ಹೆಂಡ್ತಿ ತಿಂದು ಸಾಯ್ರಿ. ಇವನೌನು ನಾನು ಇಲ್ಲಿ ದುಡಿಯಾದಾ ಯಾದರ ಬ್ಯಾರೆ ಕಡೀಗೆ ದುಡದ್ರ, ನಾಕು ರುಪಾಯಿನರಾ ಕೊಡ್ತಾರ, ನೀವೇನು ಕೊಡ್ತೀರಿ ಮಣ್ಣು. ಮಗ ವಯಸ್ಸಿಗೆ ಬಂದಾನ, ಅವನಿಗೀಟು ಏನರಾ ದಂದೆಕ್ಕ ಹಚ್ಚಾನು ಅನ್ನಾದು ಬಿಟ್ಟು, ಹೊಲ ನೋಡ್ಕ್ಯ, ಮನ್ಯಾಗಿನ್ನ ಎಮ್ಮಿ ಮೇಯಿಸ್ಕಂಡಿರು ಅಂತಿರಲ್ಲಬೇ ಮನಷ್ಯಾರೇನು ನೀವು?' ಅಂತ ತನ್ನ ಬುದ್ದಿವಂತಿಕಿ ಮಾತುಗಳನ್ನ ಆಡಿದ.
ಈ ಮಾತುಗಳನ್ನ ಕೇಳಿಸ್ಕಂಡಿದ್ದ ಅಂಬಣ್ಣ, 'ಲೇ ಲೋಪರಾ, ನಿನ್ನಲಿಂದ ನಮಿಗೇನು ಆಗಬೇಕಾಗಿಲ್ಲ. ಈಗ ನಿನ್ನ ಗಂಟು ಮೂಟಿನೆಲ್ಲಾ ಕಟ್ಟಿಗಂಡು, ಮನಿಬುಡು ಮದ್ಲು. ಅಲ್ಲಿ ನೋಡು ಹೊಸಲಿ ಹೊರಗ ಮಕ್ಕಂಡೈತಲ್ಲ ಆ ನಾಯಿಗೂ, ನಿನಿಗೂ ಏನೂ ವ್ಯತ್ಯಾಸನಾ ಇಲ್ಲ. ನಾವು ದುಡದಿದ್ದನ್ನ ತಿನ್ನ ನಾಯಿಲೇ ನೀನು. ವಂಟುಬುಡು, ಮದ್ಲು ಮನಿಬುಡು ನೀನು. ನನಿಗಿನ್ನೂ ನಾಕು ಮಂದಿ ಮಕ್ಕಳು ಅದಾವು' ಅಂತೇಳಿದ.
ಹೌದು. ಅಂಬಣ್ಣ ನಿಂಗಮ್ಮ ಗಂಡ ಹೆಂಡ್ತಿಗೆ ಒಟ್ಟು ಐದು ಜನಾ ಮಕ್ಕಳದಾರ. ಹಿರೇ ಮಗ ಅವರವಾ ಇಪ್ಪತ್ತು ಕುರಿಗುಳು ಅದಾವು ಅವನ್ನ ಕಾಯತಾನ. ಮೂರನೇ ಮಗಾ ಮನ್ಯಾಗಿರಾ ನಾಕೆಮ್ಮಿ, ಹೊಲದ ಕೆಲಸಾನ ನೋಡಿಕಂತಾನ. ನಾಕನೋನು ಅದಾ ಊರಾಗಿನ ಕಿರಾಣಿ ಅಂಗಡ್ಯಾಗ ಕೆಲಸ ಮಾಡತಾನ. ಕೊನೇದು ಹೆಣ್ಣುಡುಗಿ ಸಾಲಿಗೆ ಒಕ್ಕಾಳ. ಈಗ ಆ ಹುಡುಗಿ ಪಿಯುಸಿ ಮಾಡತಾಳ.
ಅಂಬಣ್ಣನ ತುಂಬಿದ ಮನಿಯಾಗ ಏನೂ ಕೆಲಸ ಮಾಡದಂಗ ಮೋಜು ಮಾಡಿಕಂಡು ತಿರಗಾದು ಅಂದ್ರ ಈ ಹನುಮ ಒಬ್ಬನಾ. ಮನಿಯಾಗ ಯಾರೂ ಓದಿದ್ದಿಲ್ಲ. ಇವನು ಒಂದಿಟು ಜಾಣ ಅದಾನ ಅಂತ ಸಾಲಿಗೆ ಕಳಿಸಿದ್ರ ಎಸೆಲ್ಸಿ ಫೇಲಾಗಿ ಅತ್ಲಾಗ ಕೆಲ್ಸಾನೂ ಮಾಡದಂಗ, ಇತ್ಲಾಗ ಓದಾದ್ನೂ ಮಾಡದಂಗ ಬರೆ ಒಣ ಟಬುರು ಮಾಡಿಕಂತ ಥರ್ಡ್ ಕ್ಲಾಸ್ ಗುಂಪು ಕಟ್ಟಿಗಂಡು ಊರುತುಂಬಾ ತಿರಗತಿದ್ದ. ಮನ್ಯಾರು ಏನರಾ ಕೇಳಿದ್ರ, "ರೇ ಮಗ ತನಿಗ್ಯ ಖರ್ಚಿಗೆ ಬೇಕಾದಾಗೆಲ್ಲಾ ಹೋತ ಮಾರಿಕಂತಾನ, ಸಣ್ಣಾರ ಪೈಕಿ ಒಬ್ಬನು ಹಾಲಿನ ಬಟವಾಡಿ ದಿನ ಖರ್ಚಿಗೆ ತೆಕ್ಕಂತಾನ. ಇನ್ನೊಬ್ಬಾನು, ಕಿರಾಣಿ ಅಂಗಡಿ ಸಂಬಳದಾಗ ರ್ವಕ್ಕ ಉಳಿಸ್ಗಂತಾನ. ಅವ್ರಿಗೆಲ್ಲ, ಬೇಸಿ ನೋಡ್ಕಂಡೀರಿ, ನನ್ನ ಮಾತ್ರ ಹಿಂಗ ಕೈ ಬಿಟ್ಟೀರಿ. ಅದ್ಕ ನಾನು ನಿಮ್ಮ ಮನಿ ಬಿಟ್ಟೋಗಿ ನನ್ನ ಜೀವನಕ್ಕ ನಾನಾ ದುಡಕಂತೀನಿ' ಅಂತಂದು ಎದ್ರಿಗೆ ಇದ್ದ ದೊಡ್ಡ ಹಂಡೇದಾಗ ಒಂದು ಚಂಬು ನೀರು ತಗಂಡು ಗಟ ಗಟ ಕುಡುದು ತನ್ನ ಲುಂಗಿ ಏರುಗಟ್ಟಿಕಂತ ಮನಿಬಿಟ್ಟು ಹೊರಗ ಹೋದ.

ಮಗಾ ಸೆಟಗಂಡು ಹೋಗಿದ್ದನ್ನ ನೋಡಿದ ನಿಂಗಮ್ಮ ತನ್ನ ಗಂಡಗ ಕೇಳಂಗ 'ಉಣ್ಣಲಿಲ್ಲದಂಗ ಹಂಗಾ ಹೋದ ನೋಡು ಔನು. ಉಂಡಿಂದೆ ನಿಮುವು ಏನರಾ ಜಗಳ ಇರ್ಲಿ ಮಾಡ್ಕೋರಿ. ಹಿಂಗ ಅಪ್ಪ ಒಂದು ನಮೂನಿ, ಮಗ ಒಂದು ನಮೂನಿ ಸೆಟಗಂಡ್ರ ಬಾಳೆವು ಅಕ್ಕಾವೇನು' ಅಂತಂದ್ಲು. ಎಷ್ಟಾ ಆಗ್ಲಿ ಅದು ಅವ್ವನ ಹೃದಯಾ ಐತಲ್ರಿ. ಮಗ ಎಂಥಾನಾ ಆಗಿಲ್ರಿ, ತುತ್ತು ಉಂಡುಬುಟ್ರ ಅವ್ವನ ಹೊಟ್ಟಿ ತಣ್ಣಗ ಇರತೈತಿ. ನಿಂಗಮ್ಮನ ಮಾತು ಕೇಳತಿದ್ದಂಗನಾ ಅಂಬಣ್ಣ 'ಲೇ ಬಿಡಿಕಿ, ಔನೆಲ್ಲಿಗೆ ಒಕ್ಕಾನ, ಸುಮ್ಮನ ನೀನು ರೊಟ್ಟಿ ಸುಟ್ಟು ಮುಂದ್ಲ ಕೆಲ್ಸ ನೋಡ್ಕ. ಈಗ ಹೊಟ್ಟಿ ಹಸಿದ್ರ ತಾನಾ ನಾಯಿ ಬಂದಂಗ ಬರ್ತಾನ' ಅಂತೇಳಿ ಮನಿಲಿಂದ ಎದ್ದು ತಾನೂ ಹೊರಗೋದ.
ಅದಾಗ್ಲೆ ಮಧ್ಯಾಹ್ನ ಆಗಿತ್ತು. ನಿಂಗವ್ವ ಅಂಗಳದಾಗ ಒಂದು ಚಾಪಿ ಹಾಸಿಗಂಡು ಮುಂದೆ ಒಂದು ರಾಶಿ ಸುರುವಿಕಂಡು ಒಂದು ಮರದಾಗ ಜ್ವಾಳನ ಹಸನು ಮಾಡಕತ್ತಿದ್ಲು. ಅವಾಗ ಮತ್ಯ ಬಂದ ಹನುಮನ್ನ ನೋಡಿ 'ಉಣ್ಣೋಗಲೋ, ಯಾಕಂಗ ಮಾಡ್ತೀದಿ' ಅನ್ನದನ್ನ ಕೇಳಿಸ್ಕಂತನಾ ಮನಿ ಹೊರಗಿನ ಕಟ್ಟಿ ಹತ್ರ ಚಪ್ಪಲಿ ಬುಟ್ಟು ಒಳಗೋದ ಹನುಮ ರೊಟ್ಟಿ ತಟ್ಟಿಗೆ ಮುರುದು ಹಾಕ್ಕೊಂಡು ಬಂದು ಪಡಸಾಲ್ಯಾಗ ಕುಂತ್ಕಂಡು ಉಣ್ಣಾಕ ಚಾಲೂ ಮಾಡಿದ. ಅಕ್ಕಡೆ ಗ್ವಾಡಿ ಹತ್ರ ಅಂಬಣ್ಣ ತುಂಬ ಹೊಚ್ಚಿಗಂಡು ಮಕ್ಕಂಡಿದ್ದ 'ಒಂದು ಹಸೇಕಾಯಿ ಕೊಡ್ಲೇನಣ್ಣಾ ?' ಅಕ್ಕರೆಯಿಂದ ಕೇಳಿದಳು ತಂಗಿ. ಬ್ಯಾಡ ಅನ್ನಂಗೆ ತಲೆಯಾಡಿಸಿದ ಹನುಮ.
ಹನುಮನ ಪರಿಸ್ಥಿತಿಯನ್ನು ನೋಡಿ ಒಳಗೊಳಗೇ ನೊಂದುಕೊಂಡಿದ್ದ ತಂಗಿ ಮತ್ಯ ಮಾತಾಡಿದ್ಲು. 'ಯಾಕಣ್ಣಾ ಸುಮ್ಮನಾ ಜಗಳ ಮಾಡತೀದಿ ಮನ್ಯಾಗ. ನೋಡು ಅಣ್ಣಾರು ಒಬ್ರರಾ ಹಿಂಗ ಗದ್ಲ ಮಾಡತಾರೇನು? ಅವುರು ಇವತ್ತಿಗೂ ಅಪ್ಪಗ ಇದಿರು ಮಾತಾಡಿಲ್ಲ. ಅದಕ್ಕ ಔರು ಏಟು ರ್ವಕ್ಕನರಾ ಖರ್ಚು ಮಾಡ್ಲಿ ನೆಡಿತೈತಿ. ನೀನು ತಲಿನಾ ಬಗ್ಗಸಾಲ ಅಂತೀಯಪ್ಪಾ, ನೋಡಣ್ಣಾ ಮುಂದೆ ಯಾರಿಗೆ ಯಾರೂ ಆಗಲ್ಲ, ನೀನು ದುಡದ್ರ ನಿನಿಗ್ಯಾ ಅಕೈತಿ, ಇವತ್ತು ನಿನ್ನ ನೋಡಿದ ಕೂಡ್ಲೆ ಥೂ ಅಂತ ಉಗುಳಾ ಇವರಿಗೆಲ್ಲಾ ನೀನು ಬೇಸಿ ದುಡುದು ಉತ್ರ ಕೊಡಬೇಕು. ನಿನ್ನ ಕಂಡ್ರ ಮನ್ಯಾಗ ಎಲ್ಲರೂ ಮರ್ಯಾದಿ ಕೊಡಬೇಕು. ಹಂಗಿರಾಕಣ್ಣಾ. ನೀನೋಡಿದ್ರ ಯಡವಟ್ಟನಂಗಾಡ್ತಿದಪ್ಪಾ.

ಆ ಶಿಲ್ಪ ಅದಾಳಲ್ಲ ಆಕಿ 'ಏನ್ಲೇ ನಿಮ್ಮ ಹನ್ಮಣ್ಣಗ ಮನ್ಯಾಗ ಎಲ್ಲರೂ ಹಂಗ ಬೈತಾರಲ್ಲ. ಹಂಗ ಬೈಸ್ಕಣಾದಕ್ಕಿಂತ್ಲೂ ಎಲ್ಲೆರ ಹೋಗಿ ಬೇಸಿ ದುಡಕಂಡು, ರ್ವಕ್ಕ ಮಾಡಿಕಂಡು ಬಂದು, ಇಲ್ಲೆ ಏನರ ಯಾಪಾರ ಮಾಡಿದ್ರ ಆಗಲ್ಲಂತೇನು' ಅಂತಂದ್ಲಣ್ಣಾ, ನನಿಗ್ಯ ಎಷ್ಟು ಅವಮಾನ ಆತು ಗೊತ್ತೇನು ಅವಾಗ' ಅಂತೇಳಿದ್ಲು. ಯಾವಾಗ ತಂಗಿಲಿಂದ ಇಂಥಾ ಮಾತುಗಳನ್ನ ಕೇಳಿದ್ನೋ ಹನುಮಗಾ ಮಿಂಚು ಹೊಡದಂಗಾಗೋತು. ಯಾಕಂದ್ರ ತನ್ನ ತಂಗಿ ಎದ್ರಿಗೆ ಹಂಗ ಮಾತಾಡಿದಾಕಿ ಹನುಮನ ಮನಸಿನ್ಯಾಗ ಮನಿ ಮಾಡಿದಾಕಿ ಆಗಿದ್ಲು. ಅದು ಅವನ ತಂಗಿಗೂ ಗೊತ್ತಿತ್ತು. ಈಗ ಈ ಮಾತುಗಳನ್ನ ಕೇಳತಿದ್ದಂಗನಾ ಹನುಮನ ಕಣ್ಣು ತುಂಬಿ ಬಂದ್ವು. ಅಲ್ಲಿಂದ ಒಂದು ತಿಂಗಳು ಬಾಳ ಸೈಲೆಂಟಾಗಿಬಿಟ್ಟ. ಮನಿಬಿಟ್ಟು ಎಲ್ಲಿಗೂ ಹೋಗದಂಗ ಮನ್ಯಾಗಿನ ಎಲ್ಲಾ ಕೆಲಸಗಳನ್ನು ಮಾಡಾಕತ್ತಿದ. ತನ್ನ ಥರ್ಡ್ ಕ್ಲಾಸ್ ಗುಂಪನ್ನ ಮರತಾಬಿಟ್ಟ. ಇದನ್ನೆಲ್ಲ ನೋಡತಿದ್ದ ಅಂಬಣ್ಣ ನಿಂಗಮ್ಮರಿಗೆ ಒಳಗೊಳಗೇ ಹಿಗ್ಗಾಗುತ್ತಿತ್ತು. ಮಗ ಇನ್ನೇನು ಹಾದಿಗೆ ಬಂದ ಅಂತ ಅವ್ರು ಖುಲಿಂದ ಇರುವಷ್ಟೊತ್ತಿಗೆ ಅವತ್ತೊಂದಿನ ಮದ್ಯಾಹ್ನ ಅಪ್ಪನ ಎದ್ರಿಗೆ ನಿಂತ್ಗಂಡ ಹನುಮಾ, ಕೈ ಕೈ ಹಿಚುಕಿಕೊಳ್ತಾ, ತಲೆತಗ್ಗಿಸಿ ನಿಂತ್ಗಂಡು 'ಯಪ್ಪಾ ನನಿಗೀಟು ರ್ವಕ್ಕ ಕೊಡು ನಾನು ಬೆಂಗಳೂರಿಗೆ ಒಕ್ಕೀನಿ ದುಡಿಯಾಕ' ಅಂದುಬುಟ್ಟ.
ಸರಿದಾರಿಗೆ ಬಂದಿದ್ದ ಮಗಾ ಏಕಾ ಏಕಿ ಮನಿಬಿಡಾ ಮಾತಾಡಿದ್ಕ ಅಂಬಣ್ಣನ ಎದಿಯೊಳಗ ಮುಳ್ಳು ಚುಚ್ಚಿದಂಗಾತು 'ಹೇ ಹೋಗ್ಲೇ ಯಾ ಬೆಂಗ್ಳೂರಿಗೆ ಒಕ್ಕೀದಿ. ಯಾವೂರಿಗೂ ಹೋಗಬ್ಯಾಡೋಗು. ಇಲ್ಲೇ ಏನರಾ ಮಾಡಿಕಂಡಿರು. ನಿನ್ನ ಹಣೆಬರದಾಗ ಇದ್ದಂಗಾಕೈತೋಗು' ಅಂತ ಕಣ್ಣು ತುಂಬಿಕಂಡು ಹೇಳಿದ್ದ. ಆದ್ರ ಹನುಮ ತಾನು ಊರು ಬಿಡಾಕಬೇಕು ಅಂತ ತೀರ್ಮಾನ ಮಾಡಿದ್ದರಿಂದ ಹಟ ಮಾಡಿ ರ್ವಕ್ಕ ತಗಂಡು ಒಂದು ಜೊತಿ ಬಟ್ಟಿನ ಒಂದು ಚೀಲದಾಗ ತುಂಬಿಕಂಡು ಮನ್ಯಾಗಿನ ಎಲ್ಲರಿಗೂ ಹೇಳಿ ಮನಿಬಿಡಾಕರ, ಅಂಗಳದವರಿಗೂ ಬಂದ ಅವನ ತಂಗಿ 'ಯಣ್ಣಾ ಬೆಂಗ್ಳೂರಾಗ ಉಷಾರಿರು. ಜಾಸ್ತಿ ಖರ್ಚು ಮಾಡಬ್ಯಾಡ. ಮೂರ್ನಾಕು ದಿಸಕ್ಕೊಮ್ಮಿ ನಾನು ಶಿಲ್ಪಿಕುಟಾಗ ಪೋನ್ ಮಾಡ್ಸಿ ಮಾತಾಡಿಸ್ತೀನಿ. ಒಮ್ಮೆರೆ ನಮ್ಮೂರ ತೇರಿಗೆ ಬೇಸಿ ದುಡಕಂಡು ಬರಾಕುನೋಡು' ಅಂತೇಳಿದಾಗ ಅಕಿ ಕಣ್ಣಾಗ ನೀರು ತುಂಬಿಕಂಡಿತ್ತು. ಆ ಟೈಂನಾಗ ಹನುಮುಗೂ ಕಣ್ಣೀರು ಬಂದ್ರೂ ತೋರಿಸ್ಗಣದಂಗ 'ಆತು ಬುಡಬೇ ನಾ ಇನ್ನು ಬರ್ತೀನಿ' ಅಂತೇಳಿ ಬಸ್ ಸ್ಟ್ಯಾಂಡಿಗೆ ಸ್ವಲ್ಪ ದೂರ ಬರಾತ್ಗೆ ಅವನ ಹಿಂದೆ ಬಟ್ಟೆ ಗಂಟು ಹಿಡಕೊಂಡು ಶಿಲ್ಪ ಬರಾದನ್ನ ನೋಡಿ ನಿಂತ್ಕಂಡ.
.jpg)
ಅವಾಗ ಹತ್ರಕ್ಕ ಬಂದ ಶಿಲ್ಪ 'ಉಷಾರಾಗಿರು. ಅವಾಗವಾಗ ನಿಮ್ಮ ತಂಗೀಗೆ ಪೋನ್ ಮಾಡು. ಅವತ್ತು ನಾನ್ಯಾಕ ಹಂಗ ನಿಮ್ಮ ತಂಗಿ ಎದ್ರಿಗೆ ಅಂದೆನಂದ್ರ, ತನಗ ಗಂಡ ಆಗೋನು ತನ್ನ ಮನ್ಯಾರೆದ್ರಿಗೇ ಕೈಲಾಗದೋನಂಗ ಕೈ ಕಟ್ಟಿಗಂಡು ನಿಂತ್ಗಂಡು ಬೈಸ್ಕಣಾದ್ನ ಯಾವ ಹುಡುಗಿ ನೋಡಾಕ ಬಗಸ್ತಾಳ ನೀನಾ ಹೇಳು? ಅದ್ಕಾ ಹಂಗಂದ್ಯ ತಪ್ಪು ತಿಳ್ಕಬ್ಯಾಡ' ಅಂತೇಳಿ ಅಕಿ ಮುಟುಗಿಯೊಳಗ ಮುಚ್ಚಿಗಂಡಿದ್ದ ಐನೂರುಪಾಯಿನ ಹನುಮನ ಬಕ್ಕಣಕ್ಕ ತುರುಕಿ, ಏನೂ ಮಾತಾಡದಂಗ ಕಣ್ಣೀರು ಸುರಿಸಿಕೋತ ಹೋಗಿಬಿಟ್ಲು. ಜೀವನದಾಗ ಅದಾ ಮದ್ಲನೇ ಸರತಿ ಹನುಮಗ ತನ್ನ ತಪ್ಪು ಅರುವಾಗಿತ್ತು. ತಾನೂ ನಾಕು ಮಂದಿಯಂಗ ಬೇಸಿ ಬದುಕಬೇಕು, ಕೈ ಹಿಡಿಯಾಕಿಕುಟಾಗೂ, ಹಡದೋರಕುಟಾಗೂ, ಊರಿನೋರಕುಟಾಗೂ ಒಳ್ಳೇನಪ್ಪಾ ಅನ್ನಿಸ್ಕಬೇಕು. ಕಳದೋದ ಮರ್ಯಾದಿನ ಹೊಳ್ಳಿ ಪಡೀಬೇಕು ಅನ್ನಂಥ ಪ್ರಣತಿ ಬೆಳಕು ಬೆಳಗಿತ್ತು.
ಹನುಮನ ಕಣ್ಣೀರು ಸುರಿಸೋದು ನೋಡಿ ಮಗ್ಗಲದಾಗ ಕುಂತಿದ್ದ ಬೆಂಗಳೂರಿನ ಒಬ್ಬ ಯಜಮಾನ 'ಯಾಕೋ ಮಗಾ ಊರು ನೆನಪಾಯ್ತಾ ?' ಕೇಳುತ್ತಲೇ ನೆನಿಕೆಯಿಂದ ವಾಸ್ತವಕ್ಕೆ ಬಂದ ಹನುಮ, ಅದಾಗಲೇ ಕೆನ್ನೆ ದಾಟುತಿದ್ದ ಕಣ್ಣೀರನ್ನ ಒರಿಸಿಕೋತ 'ಹಂಗೇನಿಲ್ಲ ಧಣಿ ನಾಡಿದ್ದು ಊರಾಗ ಹಬೈತಿ. ನಾಳೆ ಊರಿಗೆ ಹೋಗಬೇಕಲ್ಲ ಅದ್ಕ ಅಳೇದೆಲ್ಲ ನೆಪ್ಪಾತು' ಅಂತೇಳಿದ. ಈಗ ಹನುಮ ಬೆಂಗಳೂರಿಗೆ ಬಂದು ಬರೊಬ್ಬರಿ ನಾಕು ವರ್ಸ ಆಗಿದ್ವು. ಒಂದಾ ವರ್ಸಕ್ಕಾ ವಳ್ಳಿ ಬರ್ತೀನಿ ಅಂತೇಳಿ ಬಂದಿದ್ದವನಿಗೆ ಜೀವನದ ಸತ್ಯ ಗೊತ್ತಾಗಿ ತಾನೂ ಸಮಾಜದಾಗ ಒಂದು ಒಳ್ಳೇ ಸ್ಥಾನ ಪಡಕಂಡು, ನನ್ನ ಹೆತ್ತೋರು, ನನ್ನ ನೆಚ್ಚಿಕೊಂಡೋಳು, ಹೆಮ್ಮೆಯಿಂದ ನನ್ನ ಬಗ್ಗೆ ನಾಕು ಜನಕ್ಕ ಹೇಳಿಕಣಂಗ ಬದುಕಿ ತೋರಿಸ್ಬೇಕು ಅಂತೇಳಿ ಹಠಕ್ಕ ಬಿದ್ದು ಬೆಂಗಳೂರಿನ ಮಾರ್ಕೆಟ್ಟಿನಲ್ಲಿ ಮೊದ ಮೊದಲು ಮೂಟೆ ಹೋರತಿದ್ದೋನು ಕ್ರಮೇಣ ಒಂದು ಹಣ್ಣಿನ ಅಂಗಡಿಯಲ್ಲಿ ವ್ಯಾಪಾರ ಮಾಡೋ ಹುಡುಗನಾಗಿ ಹೆಚ್ಚುವರಿ ಖರ್ಚು ಏನೂ ಮಾಡದಾ ತನ್ನ ಖಾತಿಯೊಳಗ ಮೂರು ಲಕ್ಷದಾ ಇಪ್ಪತ್ತು ಸೌರ ಉಳಿಸಿದ್ದ.
.jpg)
ಹಳ್ಳಿಯಲ್ಲಿ ಹರಾಮಿ ಅನ್ನಿಸಿಕೊಂಡಿದ್ದ ಹನುಮನಿಗೆ ಈಗ ಜವಾಬ್ದಾರಿಯನ್ನ ರೋಮ ರೋಮದಲ್ಲೂ ತುಂಬಿಕೊಂಡ ಧೀಮಂತ ವ್ಯಕ್ತಿತ್ವದವನಾಗಿದ್ದ. ಇಷ್ಟೆಲ್ಲಾ ಘಟನೇನ ನೆನಪು ಮಾಡಿಕೊಂಡು ಮನಸ್ಸು ಅವ್ವಳಿಗೆ ಹಂಬಲಿಸೋ ಮಗುವಿನಂಗಾಗಿತ್ತು. ಹಂಗಾಗಿ ರಾತ್ರಿ ಊಟಾನೇ ಮಾಡದೆ ಹಂಗಾ ಮಕ್ಕೊಂಡು ಮುಂಜಾಲೆ ಎದ್ದು ಮದ್ಯಾಹ್ನದವರೆಗೂ ಹಣ್ಣಿನ ಅಂಗಡೀಲಿ ಕೆಲ್ಸ ಮಾಡಿ ಮದ್ಯಾಹ್ನ ಮಾರ್ಕೆಟ್ಟಿಗೆ ಹತ್ರದಲ್ಲಿರೋ ಎಟಿಎಂಗೋಗಿ ಹತ್ತು ಸಾವಿರ ರ್ವಕ್ಕ ಬಿಡಿಸಿಕಂಡು ಮನ್ಯಾರಿಗೆ ಎಲ್ಲರಿಗೂ ಬಟ್ಟಿ ತಗಂಡು, ತನ್ನ ಹುಡುಗೀಗೊಂದು ಸೀರೆ ತಗಂಡು ಬಂದು ಅಂಗಡಿ ಮಾಲಿಕಗ 'ಇನ್ನು ನಾ ಬೆಂಗಳೂರಿಗೆ ಬರಲ್ರೀ ಧಣೀ, ಇಷ್ಟು ದಿನ ನನ್ನ ಮನಿ ಮಗನಂಗ ನೋಡಿಕಂಡಿದ್ಕ ನಿಮ್ಮ ಋಣಾನ ನಾ ಸತ್ರೂ ಮರಿಯಲ್ಲ. ಮುಂದ್ಲ ಬಸಂಜಯಂತಿಗೆ ನನ್ನ ಮದ್ವಿ ಅಕೈತಿ, ನನ್ನ ಸಲುವಾಗಿ ನಮ್ಮ ಹಿರೇಅಣ್ಣನೂ ಮದ್ವಿಯಾಗಿಲ್ಲ. ತಂಗಿದೂ ಆಗಿಲ್ಲ. ಆಕಿ ಬಿಪಿಎಡ್ ಮಾಡಕತ್ಯಾಳಂತ್ಯ ನನ್ನ ಇನ್ನೊಬ್ಬ ತಮ್ಮಂದೂ ಸೇರಿ ಒಟ್ಟು ನಾಕೂ ಮಂದಿ ಲಗ್ನಾನ ಒಮ್ಮಿಗೇ ಹಮ್ಮಿಕಂತೀವಿ. ನಿಮಿಗೆ ಬಂದು ಲಗ್ನಪತ್ರ ಕೊಟ್ಟು ಹೊಕ್ಕೀನಿ ಲಗ್ನಕ್ಕ ಬರಬೇಕು ನೋಡ್ರೀ' ಪ್ರೀತಿಯಿಂದ ಹೇಳಿದ ಹನುಮನ.
ಹನುಮನ ಈ ಮಾತು ಕೇಳಿದ ಆ ಹಣ್ಣಿನ ಅಂಗಡಿ ಯಜಮಾನ ಕಣ್ಣು ತುಂಬಿಕಂಡು 'ನಿನ್ನ ಒಳ್ಳೇತನ ನಿನ್ನ ಎಲ್ಲಿದ್ರೂ ಕಾಪಾಡ್ತೈತಿ ಹೋಗು ಮಗಾ, ನೀನೇನೂ ಚಿಂತೆ ಮಾಡಬೇಡ. ನೀನು ಎಲ್ಲಿದ್ರೂ ಚೆನ್ನಾಗಿಯೇ ಇರ್ತೀಯಾ. ನಿಂಗೆ ಹಳ್ಳಿ ಒಗ್ಗಲಿಲ್ಲಾಂದ್ರೆ ಯೋಚ್ನೆನೇ ಮಾಡ್ಬೇಡ. ಹೆಂಡ್ತಿ ಸಮೇತ ಇಲ್ಲಿಗೇ ಬಂದುಬಿಡು, ನಮಗೂ ಹೆಂಗೂ ಮಕ್ಕಳಿಲ್ಲ. ನಮ್ಮನ್ನ ಮುಪ್ಪಿನ ಕಾಲಕ್ಕೆ ನೋಡಿಕೊಳ್ಳೋಕೆ ನಿನ್ನಂಥಾ ಮಗನ್ನ ಬಯಸೋದು ತಪ್ಪಾಗಲ್ಲ. ಬೆಕಿದ್ರೆ ನಮ್ಮ ಮನೆ, ಈ ಹಣ್ಣಿನ ವ್ಯಾಪಾರ ಎಲ್ಲವನ್ನೂ ನಿಂಗೆ ಬರೆದು ಕೊಡ್ತೀವಿ. ಯಾವುದಕ್ಕೂ ಹೆದ್ರಬೇಡ. ಹೋಗಿ ಬಾ' ಅಂತೇಳಿ ಪ್ರೀತಿಯಿಂದ ಹತ್ತು ಸಾವಿರ ರೂಪಾಯಿಗಳನ್ನ ಒಲ್ಲೆ ಒಲ್ಲೆ ಎಂದರೂ ಹನುಮನ ಜೇಬಿಗೆ ತುರುಕಿದರು. ಹನುಮನ ದಾರಿ ಕಾಯುತ್ತಾ ಶಿಲ್ಪ ತನಗೊಲಿದು ಬಂದಿದ್ದ ಆರು ಸಂಬಂಧಗಳನ್ನ ನಿಷ್ಟುರವಾಗಿ ತಿರಸ್ಕರಿಸಿದ್ದಳೆಂಬುದು ಹನುಮನ ಮನದಲ್ಲಿ ಹಾಗೇ ಅಚ್ಚೊತ್ತಿತ್ತು. ಅಷ್ಟೊತ್ತಿಗೆಲ್ಲ ಹೊತ್ತು ಮುಳುಗಿ ಕತ್ತಲಾಗಿತ್ತು. ಎರೆಡು ಭರ್ತಿ ತುಂಬಿದ ಬ್ಯಾಗ್ ಗಳೊಂದಿಗೆ ಹನುಮ ಮೆಜೆಸ್ಟಿಕ್ ಹತ್ತಿರ ಬಂದಾಗ ಅವನ ಹಳ್ಳಿಗೆ ಹೊರಡುವ ಬಸ್ ಬಂದು ನಿಂತಿತ್ತು.