Shivu Morigeri

Saturday, 16 February 2013

ಕೋಲಾಕುವಾಗ ಕಲೆತಂತ ಗೆಳತೀನ
ಮರಿ ಅಂತೀಯಲ್ಲ ಮನಿಷೇನಾ ನೀನು ?
ಆಕಿ ಗೆಜ್ಜಿ ನಾದಾನ ನನ್ನೆದಿಯ ಮ್ಯಾಗೆಲ್ಲಾ...ಶಿವು ಮೋರಿಗೇರಿ 

ದೊಡ್ಡಾರು ಅಂತೇಳಿ ಪಾದಕ್ಕ ಬಿದ್ದಿದ್ದೆ
ಅವರ ಹೆಬ್ಬೆಟ್ಟು ನನ್ನ ಎದಿಮ್ಯಾಗ ಆಡಿತ್ತು
ಯವ್ವಾ ದೊಡ್ಡಾರ ಪಾದ ಬಲು ದೊಡ್ಡವು...ಶಿವು ಮೋರಿಗೇರಿ

ಎದಿಯ ಮ್ಯಾಗಲ ಗುಂಡಿ ಹರಿದೈತಿ ನಿಲ್ಲೋ
ಒಲದ ಕೊಡತೇನ ಒಂದಾ ನಿಮಿಸದಾಗ
ನನ್ನ ಸವತಿ ನನಮ್ಯಾಗ ಸಿಟ್ಟಾದಾಳು...ಶಿವು ಮೋರಿಗೇರಿ

ಗಂಡನಿಲ್ಲದ ವಿದಿವಿ ಗಂಡು ಮಗುವನ್ನಡೆದು
ಗಂಡಬೇರುಂಡನೆಂಬ ಹೆಸರಿಟ್ಟಾಳೋ
ಬೇರುಂಡ ಗಂಡನ್ನ ಊರೆಲ್ಲ ಹುಡುಕೈತೋ...ಶಿವು ಮೋರಿಗೇರಿ

ಎಷ್ಟ ಕಷ್ಟಪಟ್ಟರು ಹಾಲ್ಯಾಕ ಕೊಡವಲ್ಲಿ
ಬ್ಯಾಸಿಗಿಗ್ಯ ಒಣಿಗೋಗ ಗಿಡವಲ್ಲ ನೀನು
ನಿನ್ನ ಸೊಕ್ಕ ಮುರಿದವರ್ಯಾರ ಬಿಳಿ ಎಕ್ಕಿ ಗಿಡವೇ...ಶಿವು ಮೋರಿಗೇರಿ

ಮುತ್ತ ಕೊಟ್ಟಾನಂತ ಉತ್ತತ್ತಿ ವನದಾಗ
ಅತ್ತು ಕರೆದಾಳೋ ಅರಮನಿಯ ದೊರಿಸಾನಿ
ಸುತ್ತ ಕುಂತು ಸುರಿಗಿ ಎರದಾರ ಮುತ್ತೈದೇರು.........ಶಿವು ಮೋರಿಗೇರಿ

ಗಗ್ಗರಿ ಸರದ ಭಲೆ ಬುಜದ ಬಸವಣ್ಣ
ಸಿಡಿಲೊಡೆದು ಸುರಿಲಿಲ್ಲ ಮಳಿರಾಯ ಯಾಕೋ
ಗಗ್ಗರಿ ಮಾರಿ ನಿನ್ನ ಸಲುತೀನೋ... ಶಿವು ಮೋರಿಗೇರಿ


ಸಿಟ್ಟಾಗಿ ಹೋದಾಕಿ ಸವಾಸ ಸಾಕೆಂದು 
ಅಂಗಳದಾಗಿನ ಮಾತು ನಡುಮನಿಯಾಗ್ಯಾಕಿಲ್ಲ ಚೆಲುವ
ಅಳಬ್ಯಾಡ ನೀನಲ್ಲ ತೊಲಿಮನಿಯ ಬೆಳಗಿದವ......ಶಿವು ಮೋರಿಗೇರಿ


ನಾನು ಕೇಳಿದಾಗಲೆಲ್ಲಾ ನೀ ಮಡಿಲು ಕೊಟ್ಟೆ
ಈಗ ನೋಡು, ನಿನ್ನೊಡಲ ತುಂಬಿಕೊಂಡು ನೀ ತವರಿಗೋಗಿಬಿಟ್ಟೆ
ಶಿವು ಮೋರಿಗೇರಿ

ನನಗಾಗಿ ನೀನು ಬದಲಾಗಬೇಕಿಲ್ಲ
ನಿನಗಾಗಿ ನಾನೇನೂ ತ್ಯಾಗ ಮಾಡೊಲ್ಲ
ನಿನ್ನೇಳಿಗೆಗೆ ನಾನು ನನ್ನೇಳಿಗೆಗೆ ನೀನು
ಹೆಗಲುಕೊಟ್ಟು ಬದುಕಿದರೆ ಸಾಕು...
ನನಗಾಗಿ ನಿನ್ನ ಮನೆಯ ನೀನು ತೊರೆಯಬೇಕಿಲ್ಲ 
ಸ್ವತಂತ್ರ ಸಮಾನತೆ ಅಂತೆಲ್ಲ ಕೊರಗಬೇಕಿಲ್ಲ
ನಿನ್ನೊಳಗೆ ನಾನು ನನ್ನೊಳಗೆ ನೀನು
ಅಳೆದು ಸುರಿದು ಕಳೆದು ಮತ್ತೆ ವಾಸ್ತವಕ್ಕೆ ಮರಳಿದರೆ ಸಾಕು...

ಶಿವು ಮೋರಿಗೇರಿ

Thursday, 14 February 2013


ನಾನು ಜೀವನವನ್ನು ಪ್ರೀತಿಸುತ್ತೇನೆ
ಪ್ರೀತಿಯನ್ನೂ ಪ್ರೀತಿಸುತ್ತೇನೆ
ಜಗದ ಸರ್ವರನ್ನೂ ಪ್ರೀತಿಸುತ್ತೇನೆ
ಗುರಿ ಸಾಧನೆಗಳ ಬೆನ್ನತ್ತಿ ಪ್ರೀತಿಸುತ್ತೇನೆ
ಆದರೆ ಹುಡುಗೀ...
ನಿನ್ನೊಬ್ಬಳನ್ನು ಮಾತ್ರ ನಾ ನಂಬುತ್ತೇನೆ
ನಿನ್ನೆದಿರು ಮಾತ್ರ ನಾ ಸೋಲುತ್ತೇನೆ
ನಿನ್ನ ನಂಬುಗೆಯ ಇಂಬನ್ನು ಅಂಬಾರಿಯೇರಿಸಲು
ಎದಿರು ನೋಡುತ್ತಿರುವೆ ನಾ ಪ್ರೇಮಿಗಳ ದಿನವನ್ನು
ಹುಡುಕುತ್ತಲೇ ಇದ್ದೇನೆ ನಾ ನನ್ನ ಮನದರಸಿಯನ್ನು...

ವಿಜಾಪುರದ ಸಾಹಿತ್ಯ ಸಮ್ಮೇಳನದಿಂದ ಮರಳಿ ಬೆಂಗಳೂರಿಗೆ ಬಂದ್ರೂ,,,,,,,,,, ನನಿಗಿನ್ನೂ ನನ್ನ ಉತ್ರ ಕರ್ನಾಟಕದ ನೆಪ್ಪು ಮರೆತಿಲ್ಲ... ಇದಕ್ಕೆಲ್ಲಾ ಅವ್ವಳಾಗಿ ನಿಂತ 'ಅವಧಿ' ಖುಣಾನಾ ನಾ ಮರಿಯಂಗಿಲ್ಲಾ........ಶಿವು ಮೋರಿಗೇರಿ


ನನಗಾಗಿ ನೀನು ಬದಲಾಗಬೇಕಿಲ್ಲ
ನಿನಗಾಗಿ ನಾನೇನೂ ತ್ಯಾಗ ಮಾಡೊಲ್ಲ
ನಿನ್ನೇಳಿಗೆಗೆ ನಾನು ನನ್ನೇಳಿಗೆಗೆ ನೀನು
ಹೆಗಲುಕೊಟ್ಟು ಬದುಕಿದರೆ ಸಾಕು...
ನನಗಾಗಿ ನಿನ್ನ ಮನೆಯ ನೀನು ತೊರೆಯಬೇಕಿಲ್ಲ 
ಸ್ವತಂತ್ರ ಸಮಾನತೆ ಅಂತೆಲ್ಲ ಕೊರಗಬೇಕಿಲ್ಲ
ನಿನ್ನೊಳಗೆ ನಾನು ನನ್ನೊಳಗೆ ನೀನು
ಅಳೆದು ಸುರಿದು ಕಳೆದು ಮತ್ತೆ ವಾಸ್ತವಕ್ಕೆ ಮರಳಿದರೆ ಸಾಕು...

ಶಿವು ಮೋರಿಗೇರಿ


ಹೋಟೆಲ್ಲಿನಲ್ಲಿರುವ ಟೇಬಲ್ಲು ನೀನು
ನಿನ್ನೆದಿರು ಇರುವ ಛೇರು ನಾನು
ಎಷ್ಟೋ ಗಿರಾಕಿಗಳನ್ನು ನೋಡಿದ್ದೇನೆ ನಾನು
ಅಷ್ಟೇ ವಾಕರಿಕೆ,ಡೇಗುಗಳ ಕಂಡಿರುವೆ ನೀನು
ನನ್ನ ಮೇಲೆ ಒಬ್ಬರಮೇಲೊಬ್ಬರು ಎರಗುತ್ತಾರೆ
ಅವರೆದ್ದು ಹೋದ ಮೇಲೆ ನಿನ್ನ ಮುಖ ತೊಳೆಯುತ್ತಾರೆ

ಶಿವು ಮೋರಿಗೇರಿ



Thursday, 7 February 2013

ಕಳೆದ 5 ವರ್ಷಗಳಿಂದ ನಾನು ಹಗಲುವೇಶದ ಬೀದಿ ನಾಟಕಗಳನ್ನೇ ನೋಡಿದ್ದು. ಸಿನಿಮಾ ಗಳನ್ನು ನೋಡುವಷ್ಟು ಕಾಸನ್ನು ಸಂಪಾದಿಸಲೇ ಇಲ್ಲ ನಾನು.... ಶಿವು ಮೋರಿಗೇರಿ
ಇಂದಿನ ದಿನದ 24 ಘಂಟೆ ಮಾತಾಡುವವರ ನಡುವೆ ನಾನೊಬ್ಬನೇಕೋ ಮೂಕನಾಗಿ ಮಾತು ಕಳೆದುಕೊಂಡು ಬರವಣಿಗೆಯನ್ನಪ್ಪಿದೆ......ಶಿವು ಮೋರಿಗೇರಿ

Monday, 4 February 2013

ನಾನಿಲ್ಲದೆ ಎಳೆಯುತ್ತೆ ಇಂದು ನನ್ನೂರ ತೇರು...

ನಾನಿಲ್ಲದೆ ಎಳೆಯುತ್ತೆ ಇಂದು ನನ್ನೂರ ತೇರು...

ಇಂದು ಇಡೀ ನನ್ನ ಮೋರಿಗೇರಿಯ ಸಡಗರಕ್ಕೆ ಸ್ವರ್ಗದ ಸರಕೆಲ್ಲಾ ಖಾಲಿ ಖಾಲಿ. ನನ್ನ ಮನೆಯಲ್ಲೂ ಇದಕ್ಕಿಂತ ಭಿನ್ನ ವಾತಾವರಣ ಸಿಗಲು ಹೇಗೆ ಸಾಧ್ಯ ? ಎರೆಡು ದಿನಗಳ ಹಿಂದೆಯೇ ಪಕ್ಕದ ನಗರಕ್ಕೆ ಹೋಗಿ ನನ್ನ ತಮ್ಮ ಮನೆಮಂದಿಗೆಲ್ಲಾ ಹೊಸ ಬಟ್ಟೆ ಖರೀದಿಸಿ, ಹಬ್ಬದ ದಿನಸಿ ಕೊಳ್ಳುವಾಗ ಯಾಕೆ ನೆನಪಾದೆನೋ ನಾನು. ತಕ್ಷಣ ಪೋನ್ ಮಾಡಿ ' ನಾಳ್ಯ ಸ್ವಾಮ್ವಾರ ಕಲ್ಲಪ್ಪನ ತೇರು ಐತಿ , ಒಂದಿನದ ಮಟ್ಟಿಗ್ಯ ಬಂದೋಗ ಯಣ್ಣಾ,' ಪ್ರೀತಿಯಿಂದ ಕೇಳಿದ್ದಕ್ಕೆ ಪರ್ವಾಗಿಲ್ಲ ನೀವೇ ಮುಗಿಸ್ಕಳ್ರಪ್ಪಾ. ಎಂದು ಕರೆ ಕಟ್ ಮಾಡಿದ್ದೆ. ಇಂದು ಬೆಳಗ್ಗೆಯೇ ಮನೆಗೆಷ್ಟು ನೆಂಟರು ಬಂದಿರುವರೋ ಏನೋ... ಎಲ್ಲರೂ ನನ್ನಬಗ್ಗೆ ಕೇಳಿರ್ತಾರೆ. ಎಲ್ಲರೂ ಹೊಸ ಬಟ್ಟೆಯುಟ್ಟು, ಹೋಳಿಗೆ ಊಟ ಜಬರದಸ್ತಾಗೇ ಬಡಿದಿರ್ತಾರೆ. ಸಾಲ ಮಾಡಿಯಾದ್ರೂ ಹಿಗ್ಗಿಲೆ ಹಬ್ಬ ಮಾಡೋದು ನನ್ನ ಜನಗಳಿಗೆ ಹೊಸತಲ್ಲ. ಮಳೆ ಇಲ್ಲ ಅನ್ನೋ ಅಳುಕು, ಹಬ್ಬದ ಸಡಗರವನ್ನು ಸತಾಯಿಸೊಲ್ಲ. ಹಾಗಾಗಿಯೇ ನನ್ನ ಇಡೀ ಓಣಿಯ ಅಷ್ಟೂ ಮನೆಗಳಲ್ಲಿನ ನೆಂಟರ ಉತ್ಸವ ಜೋರಾಗಿಯೇ ಇರುತ್ತೆ. ನನ್ನ ಓಣಿಯ ಎಲ್ಲಾ ಯುವಕರು, ಹಿರಿಯರು, ನನ್ನ ಮನೆಯ ಮುಂದಿನ ಬೇವಿನ ಮರದ ಕಟ್ಟೆಗೆ ಕುಳಿತು, ನಮ್ಮ ಮನಗೆ ಬಂದವರನ್ನು ಕಿಚಾಯಿಸುತ್ತಾ, ಒಂದೇ ಮನೆಯವರಂತೆ ಕುಶಲೋಪಚಾರಿ ಮಾಡುತ್ತಾ ಥಟ್ಟನೆ ನಮ್ಮ ಮನೆಯವರನ್ನು ಕೇಳೇ ಬಿಡ್ತಾರೆ ' ಯಾಕ್ರಪ್ಪಾ ನಿಮ್ಮ ಶಿವ್ವ ಬಂದಿಲ್ಲೇನು ? ಅವನಿರಬೇಕ್ರಲೇ ಹಬ್ಬಕ್ಕ ನಿಮ್ಮನಿಗ್ಯ ಆದ್ರೂ ಅವ್ನು ಎಲ್ಲಿ ಓದ್ರು ಬದಕ್ಕಂತಾನ ಬಿಡಪಾ' ಹೀಗೆ ಆ ಕಟ್ಟೆಗೆ ಇಂದು ವಿಸಿಟ್ ಮಾಡಿದವರೆಲ್ಲರೂ ನನ್ನ ನೆನಪು ಮಾಡ್ಕೋತಾರೆ. ಆದ್ರೆ ನನಗೆ ಯಾಕೆ ಈ ಹಬ್ಬ ಮೆದುಳಿನ ನರವೊಂದರಲ್ಲಿ ಹಾಗೆ ಉಳಿದು ಮರಳಿ ಮರಳಿ ಕಾಡುತ್ತೆ ಅಂದ್ರೆ, ಇವತ್ತು ನಮ್ಮೂರಲ್ಲಿ ನಾಟಕಗಳಿರ್ತವೆ. ಇಡೀ ಗ್ರಾಮದಲ್ಲಿ ಮೂರ್ನಾಲ್ಕು ಯುವಕ ಸಂಘದ ಸದಸ್ಯರು 'ಪಟ್ಟಿ' ಹಾಕಿಕೊಂಡು ತಿಂಗಳ ತಾಲೀಮು ನಡೆಸಿ ಇಂದು ತಮ್ಮ ಕಲಾ ಪ್ರದರ್ಶನಕ್ಕೆ ತುದಿಗಾಲಲ್ಲಿ ನಿಂತಿರ್ತಾರೆ. ನನ್ನ ಮನೆಯಿರುವ 1ನೇ ವಾರ್ಡ್ ನಲ್ಲಿನ ನಮ್ಮ ' ಮಾರುತಿ ಯುವಕ ಸಂಘ'ದ ಯುವಕರೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಬಾರಿ ಯಾಕೋ ನಮ್ಮ ಹುಡುಗ್ರು ನಾಟಕದ ಗೋಜಿಗೆ ಹೋಗಿಲ್ಲವಂತೆ. 1996 ರಲ್ಲಿ ನಾನಿನ್ನೂ 6 ನೇ ತರಗತಿಯಲ್ಲಿ ಓದುತಿದ್ದೆ. 5 ನೇ ತರಗತಿ ಓದುತಿದ್ದಾಗಲೇ ಗಣೇಶೋತ್ಸವದಲ್ಲಿ ವೇದಿಕೆ ಹತ್ತಿ ಕಥೆಗಳನ್ನು ಹೇಳಿ ಎಲ್ಲರ ಪ್ರೀತಿಯ ಮಗುವಾಗಿದ್ದೆ. ನಮ್ಮ ಸಂಘದಲ್ಲಿ ಕಥೆ ಹೇಳುವುದನ್ನು ನೋಡಿದ್ದ ಗ್ರಾಮದ ಮತ್ತೊಂದು ಸಂಘದವರು ನಂಗೆ ಕಥೆ ಹೇಳೋಕೆ ಅಂತ ಅವರ ಸಂಘದ ಹತ್ತಿರ ಕರೆದುಕೊಂಡು ಹೋಗಿ, ಎಲ್ಲರಿಗೂ ಕಾಣಲಿ ಹುಡುಗ ಎಂದು ಛೇರ್ ಮೇಲೆ ನಿಲ್ಲಿಸಿ ಕಥೆ ಹೇಳಿಸಿದ್ದರಿಂದ ಅಲ್ಲೂ ಫೇಮಸ್ಸು. ಹೀಗಿದ್ದಾಗ ಆ ವರ್ಷ ನಮ್ಮ 'ಮಾರುತಿ ಯುವಕ ಸಂಘ'ದವರು ಇದೇ ತೇರಿಗೆ 'ಗರತಿ ಹೆಣ್ಣಿಗೆ ಗರ್ವದ ಗಂಡ' ನಾಟಕಕ್ಕೆ ತಲೀಮು ಅದಾಗಲೇ 15 ದಿನಗಳಷ್ಟು ನಡೆದಿತ್ತು. ನಾನೂ ಕೆಲವು ದಿನಗಳಲ್ಲಿ ರಾತ್ರಿ ತಾಲೀಮನೆಗೋಗಿ ಕುಳಿತು ತಾಲೀಮು ನೋಡಿ ಬರುತ್ತಿದ್ದೆ. ಇದ್ದಕ್ಕಿದ್ದಂತೆ ಒಂದಿನ ನಮ್ಮ ನಾಟಕ ಕಲಿತ ಎಲ್ಲಾ ಪಾತ್ರಧಾರಿಗಳೂ, ನಾಟಕದ ಮ್ಯಾನೇಜರ್ 'ದಿ.ಹೋಟೆಲ್ ಶೇಖರಪ್ಪ' ನಮ್ಮ ಮನೆಗೆ ಬಂದು ನಾಟಕದ ಕುರಿತು ಮಾತಾಡುತ್ತಾ, ರೌಡಿ ಪಾತ್ರ ಮಾಡಿದ್ದ ಗಡದೆಪ್ಪರ ಗುಡ್ಡಪ್ಪ ' ಎಲ್ಲ ಚೊಲೋ ನಡದೈತಿ ಮಾವಾ, ಆದ್ರ, ಅದ್ರಾಗೊಂದು ಹುಡುಗನ ಪಾತ್ರಕ್ಕ ಇನ್ನೂ ಯಾರೂ ಇಲ್ಲ. ನಮ್ಮ ಸಿವ್ವನ್ನ ಅಕ್ಯಣಾನು ಅಂತ ಕೇಳಾಕ ಬಂದೀವಿ. ನೀನೇನು 'ಪಟ್ಟಿ ಹಾಕಬ್ಯಾಡ'  ಮಾತೇನು ಬಾಳಾ ಇಲ್ಲ, ಬರೇ ಹದ್ನೈದು ಮಾತು ಅಷ್ಟ. ಒಂದು ವಾರ ಸಿವ್ವನ ತಾಲೀಮ್ಗೆ ಕಳ್ಸು. ಅವನು ಸಿಕ್ಕಪಟ್ಟಿ ಚೂಟಿ ಅದಾನ. ಮಾತು ಕಲಿತಾನ. ಓಣ್ಯಾಗ ಉಡ್ರೇನು ಜಗ್ಗು ಅದಾವು. ಆದ್ರ ಟೇಜಿನ ಮ್ಯಾಗ ಮಾತಾಡಕ ದೈರ್ಯ ಬೇಕಲ್ಲ. ಇವ್ನಾದ್ರ, ಟೇಜಿಂದು ಗೊತ್ತೈತಿ. ನೀನೆನರ ಆಗಲ್ಲ ಅಂದ್ರ ನಮ್ಮ ನಾಟ್ಕನ ಕೆಟ್ಟೊಕೈತಿ. ಬಿಟ್ಟು ಮಾಡಾ ಪಾತ್ರ ಅಲ್ಲದು'  ನನ್ನ ತಂದೆಯೆದಿರು ಗೌರವಯುತವಾಗಿ ಕೇಳಿದಾಗ ಅಲ್ಲೇ ಇದ್ದ ನನಗೆ  ಹಿಗ್ಗೋ ಹಿಗ್ಗು. ತಕ್ಷಣ ನನ್ನ ತಂದೆ, ನನ್ನನ್ನು ಗಣೇಶ ಬೀಡಿ ತರಲು ಅಂಗಡಿಗೆ ಕಳಿಸಿಬಿಟ್ಟ. ಮರಳಿ ಬರುವಷ್ಟರಲ್ಲಿ ಅವರಾರೂ ಇರಲಿಲ್ಲ.ನನ್ನ ಕುತೂಹಲಕ್ಕೆ ಉತ್ತರ ಕೊಡೋದ್ಯಾರು ? ನೇರ ನನ್ನ ಅಜ್ಜಿಯ ಬಳಿ ಹೋಗಿ ' ಅಪ್ಪ ಏನಂದನಮ್ಮಾ ?' ಎಂದು ಕೇಳಿದ್ರೆ ' ಬೇಕಾರ ಪಟ್ಟಿ ಕೊಡ್ತಾನಂತ್ಯ, ನಿನ್ನ ಕಳಸಲ್ಲಂತ್ಯ ನೋಡು. ಓದಾ ಉಡ್ಗ ಕೆಟ್ಟೋಕ್ಕಾನ ಹೋಗ್ರಪ್ಪಾ ಅಂದಿದ್ಕ ವಳ್ಳಿ ಓದ್ರು ಅವ್ರು' ಅಜ್ಜಿ ಏರುಧ್ವನಿಯಲ್ಲಿ ಉತ್ತರ ಕೊಡುತ್ತಲೇ ಥತ್ತೇರಿ ಎಂದುಕೊಂಡಿದ್ದೆ. ಆಮೇಲೆ ಆ ಪಾತ್ರವನ್ನು ಉತ್ತಂಗಿ ಮಂಜು ಅನ್ನೋನು ಮಾಡಿದ. ಮುಂದೆ 2006 ರಲ್ಲಿ ಮತ್ತದೇ ನಾಟಕಕ್ಕೆ ಅಣಿ ಮಾಡಿದ್ರು. ಕಳೆದಬಾರಿ ಬಾಲಕನ ಪಾತ್ರ ಮಾಡಿದ್ದ ಉತ್ತಂಗಿ ಮಂಜು ಈ ಬಾರಿ ಖಳನಾಯಕನ ಪಾತ್ರಧಾರಿ. ನಾನು ಈ ಬಾರಿ ಕಥಾಸಂಚಾಲಕನಾಗಿದ್ದೆ. ಮುಂದಿನ ವರ್ಷ ನನ್ನ ಅಣ್ಣನ ಸ್ನೇಹಿತರೆಲ್ಲಾ ಸೇರಿಕೊಂಡು 'ನ್ಯಾಯ ನೀಡಿದ ಹುಲಿ' ನಾಟಕ ಆಡಿದ್ರು ಅದರಲ್ಲಿ ನಾನು ಸಹ ನಿರ್ದೇಶಕ. ಮರುವರ್ಷ ಅದೇ ನಮ್ಮಣ್ಣನ  ಇತರೆ ಸ್ನೇಹಿತರು ' ಕೆರಳಿದ ಅವಳಿ ಸರ್ಪಗಳು' ಆಡಿದ್ರು ಆಗಲೂ ನಾನು ಸಹ ನಿರ್ದೇಶಕ. ಮುಂದೆ ಹಳೆಯ ಹುಲಿಗಳೆಲ್ಲಾ ಸೇರಿಕೊಂಡು 'ರಕ್ತ ರಾತ್ರಿ' ನಾಟಕ ಅಣಿ ಮಾಡಿದ್ರು. ಈ ಬಾರಿ ನಾನು ತಾಲೀಮನಿ ಒಳಗೂ ಹೋಗಲಿಲ್ಲ. ಏಕೆಂದರೆ ನಮ್ಮ  ' ಮೀಸೆ ಹನುಮಂತಪ್ಪ' ದೊಡ್ಡಪ್ಪ ನಾಟಕದ ಡೈರೆಕ್ಟ್ರು. ಒಂದು ಮನೆಗೆ ಇನ್ನೆಷ್ಟು ಜನ ಹೋಗ್ತಾರೆ ತಾಲೀಮನಿಗೆ ? ಎಂದುಕೊಂಡು ಸುಮ್ಮನಾದೆ. ಇದಾದ ಮೇಲೆ ಮತ್ತೆ ಅದೇ ಹಳೆಯ ತಂಡ 'ನ್ಯಾಯ ನೀಡಿದ ಹುಲಿ' ಯನ್ನು ಮತ್ತೊಮ್ಮೆ ಅಖಾಡಕ್ಕೆ ಬಿಟ್ವಿ. ಆಗಲೂ ನಾನು ಸಹ ನಿರ್ದೇಶಕ. ಮರುವರ್ಷ ಮತ್ತದೇ ' ರಕ್ತ ರಾತ್ರಿ'. ನಮ್ಮ ಓಣಿಯ ಎಲ್ಲಾ ನಾಟಕಗಳಲ್ಲಿ ನಾನು ವೇದಿಕೆಯಿಂದ ಕದಲಿಲ್ಲ. ಪಾತ್ರಧಾರಿಗಳನ್ನು ತಯಾರು ಮಾಡುವುದು, ಅವರಿಗೆ ಚಾ ಕೊಡೋದು, ಕಲಾವಿದೆಯರಿಗೆ ಚಾ, ಮಂಡಕ್ಕಿ ಮಿರ್ಚಿ ಕೊಡಿಸೋದು, ಮುಯ್ಯಿ ಬರೆಯೋದು, ಪರದೆ ಹಿಂದೆ ನಿಂತು ಮಾತುಗಳನ್ನು ಹೇಳಿ ಕೊಡೋದು. ಹೀಗೇ ಕೆಲಸ ಸಾಗಿದ್ದೇ ಸಾಗಿದ್ದು. ನಮ್ಮ ತಂಡದ ನಾಟಕಗಳ ತಯಾರಿಬಗ್ಗೆ  ಬರೆದರೆ ಅದು ಮತ್ತೊಂದು 'ರಂಜನೆಯ ರಾತ್ರಿ' ಆದರೆ ಈ ಬಾರಿ ನಮ್ಮ ಹುಡುಗರು ನಾಟಕವನ್ನು ಆಡುತ್ತಿಲ್ಲ.  ನಾಟಕದ ವಿಷಯ ಬಂದಾಗಲಾದರೂ ನನ್ನ ಓಣಿಯ ಜನತೆ ನನ್ನನ್ನು ನೆನಪಿಸಿಕೊಂಡಿರುತ್ತಾರೆ. ಇಷ್ಟೊತ್ತಿಗೆಲ್ಲ ತೇರು ಪಾದಗಟ್ಟಿಯಕಡೆ ಮುಖ ಮಾಡಿರಬಹುದು. ಆ ಜಾತ್ರೆಯ ಸಡಗರವನ್ನು ಬರೆದರೆ ಅದೂ ಒಂದು ಅದ್ಧೂರಿ ಲೇಖನವಾಗುತ್ತೆ. ಅಲ್ಲಿ ಇಂದು ಬೆಳಗಿನಿಂದ ಯಾರ್ಯಾರು ಎಷ್ಟು ಸಂಭ್ರಮಿಸಿದರೋ, ಯಾರ ಹೃದಯದೊಳಗೆ ಯಾರಿದ್ದರೋ, ಅಂತೂ ನಾನಿಲ್ಲದೆ ಎಳೆಯುತ್ತೆ ಇಂದು ನನ್ನೂರ ತೇರು. ಇಂದು ನನ್ನನ್ನು ಯಾರು  ಜ್ಞಾಪಿಸಿಕೊಳ್ಳದಿದ್ದರೂ ಊಟದ ತಟ್ಟೆಯ ಮುಂದೆ ಕುಳಿತಾಗ ನನ್ನ ಹೆತ್ತವ್ವಳಿಗೆ ನಾನು ನೆನಪಾಗಲಿಕ್ಕಿಲ್ಲವೇನು ? ಕಂಗಳು ತುಂಬುತ್ತಿವೆ ಆ ಘಳಿಗೆಯನ್ನು ನೆನೆದರೇಕೋ 

Sunday, 3 February 2013

ಜಾತಿ ಧರ್ಮ ಎಲ್ಲವನ್ನೂ ಮೀರಿದ 
ನನ್ನ ಭಾರತದಲ್ಲಿ ಯಾರಿಗೆ ಏನಾಗಿದೆಯೋ
ಜಾತಿ ಜಾತಿಗಳ ಲೆಕ್ಕದಲ್ಲಿ ರಾಜ್ಯ ದೇಶದ ಅಧಿಕಾರದ
ಚುಕ್ಕಾಣಿ ಹಿಡಿಯುವುದು ಎಷ್ಟು ಸರಿ ತಿಳಿಯದಾಗಿದೆಯೋ.....
ಶಿವು ಮೋರಿಗೇರಿ

ಬಿಳಿ ಬಟ್ಟೆ ಹಾಕಿದೋರೆಲ್ಲ ಒಳ್ಳೇರಲ್ಲ
ಬಿಳಿ ಬಟ್ಟೆ ಜನಗಳೆಲ್ಲ ಓಟ್ ಕೇಳಾಕ ಬರ್ತಾರಲ್ಲ
ಬಿಳಿ ಬಿಳಿ ಜನಗಳಿಂದ ದೇಶ ಬಿಡಿಸ್ಕೊಂಡಿದಾರಲ್ಲ
ಅವರ ಕನಸುಗಳನ್ನು ಇವರು ತುಳಿತಾರಲ್ಲ
ಶಿವು ಮೋರಿಗೇರಿ

ಮುಂದುವರೆದವರ ಕಾಲು ಎಳೆದು 
ಸಮಾನತೆ ಸೃಷ್ಟಿಸುವುದಲ್ಲ
ಮುಂದುವರೆದವರ ವೇಗ ಪಡೆದು
ಸಮಾನತೆ ಸೃಷ್ಟಿಸುವವರಿಗೇನು ಕಡಿಮೆ ಇಲ್ಲ
ಶಿವು ಮೋರಿಗೇರಿ
ಮನವೇ ನಿನಗೆ ತಾಕತ್ತಿದ್ದರೆ....
ಬಾಲ್ಯದಲ್ಲಿ ಕ್ರೋಧವನ್ನು
ಯೌವ್ವನದಲ್ಲಿ ಕಾಮವನ್ನು
ಮುಪ್ಪಿನಲ್ಲಿ ಮತ್ಸರವನ್ನು
ಗೆಲ್ಲೋ ನೋಡೋಣ...
                          
                       ಶಿವು ಮೋರಿಗೇರಿ



"ಜಗತ್ತಿನ ಎಲ್ಲಾ ಶ್ರೇಷ್ಠರು ಹಿಂದೆದೋ ಒಂದು ದಿನ ಯಾವುದೋ ಒಬ್ಬ ಮೇಷ್ಟ್ರ ಮುಂದೆ ಚಕ್ಕಳ ಬಡಿದು ಕುಳಿತ ಪೆದ್ದು ವಿದ್ಯಾರ್ಥಿಯೇ " ಮುಂದೆ ಅವರು ಶ್ರೇಷ್ಠರಾಗ್ತಾರೆ, ಅದಕ್ಕೆ ಹೇಳೋದು ತಸ್ಮೈ ಶ್ರೀ ಗುರುವೇ ನಮಃ.....    .ಶಿವು ಮೋರಿಗೇರಿ


ಯಾವ ನಿರೀಕ್ಷೆಯೂ ಇಲ್ಲದ ಪ್ರೀತಿ 
ಯಾವ ಫಲವೂ ಬೇಡದ ಸಲುಗೆ
ಯಾವ ಕಲ್ಮಷವೂ ಇಲ್ಲದ ಅಪ್ಪುಗೆ
ಯಾವ ಮೋಸವೂ ಬಗೆಯದ ಸ್ನೇಹ
ಯಾವ ಯಾವ ಹೃದಯಗಳಲ್ಲಡಗಿವೆಯೋ ತೆಪ್ಪಗೆ
                                                         
                                           ಶಿವು ಮೋರಿಗೇರಿ


ಗಡಿಗಳೇ ಇಲ್ಲದ ಧರೆಯನು ಕಂಡು 
ಬೆಚ್ಚಿಬೀಳದ ದೊರೆಗಳು ಯಾರು ?
ಮನ ಮನಗಳ ನಡುವೆಯೇ ಗೋಡೆಗಳ ಕಂಡು 
ಮರುಗುವವರ ನೋವಿನ ಮಾತು ಕೇಳುವವರಾರು ?
                                                     
                                       ಶಿವು ಮೋರಿಗೇರಿ

ದೇವರ ಹರಸಿ ಗುಡಿಯೊಳಗೋದರೆ
ದೇವರ ಮೂರ್ತಿಯೊಳಗೂ ನೀನೆ
ಭಕ್ತಿಯಿಂದ ಘಂಟೆಯ ಹೊಡೆದರೆ
ಘಂಟೆಯಿಂದ ಹೊರಹೊಮ್ಮಿದ ನಾದವು ನೀನೆ
                                                 
                                       ಶಿವು ಮೋರಿಗೇರಿ

ಅರ್ಧನಾರೀಶ್ವರನನ್ನು ನಾವು ಗೌರವಿಸ್ತಿವಿ
ಮೋಹಿನಿಯಾದ ಹರಿಯನ್ನು ನಾವು ಗೌರವಿಸ್ತಿವಿ
ಮಹಾಭಾರತಕ್ಕೊಬ್ಬ ಬೃಹನ್ನಳೆಯನ್ನೂ ತಂದಿದಿವಿ
ಪ್ರಸ್ತುತ ಇಂಥಹವರನ್ನು ಸಮಾಜದ ಅಪಶಕುನದಂತೆ ಕಾಣ್ತಿವಿ
ನಿಜಕ್ಕೂ ನಾವೆಂಥಾ ಬ್ರಮೆಯಲ್ಲಿ ಬದುಕ್ತಾ ಇದೀವಿ ?
                                                
                                        ಶಿವು ಮೋರಿಗೇರಿ

ಕಲ್ಪಿತ ಭಾವನೆಗಳೇ ಮಿಡಿತವಾಗಿದ್ದ
ಪ್ರೀತಿಯ ತುಡಿತಗಳೇ ಬರಹಗಳಾಗಿದ್ದ 
ಬಂಗಾರದ ದಿನಗಳು ಕಳೆದು ಹೋದವು ಯಾಕೋ ?
ಸುಂದರ ಹೂಗಳ ಹೂದೋಟವಾಗಿದ್ದ
ಅದ್ಭುತ ವರ್ಣನೆಗಳ ತವರಾಗಿದ್ದ
ನನ್ನ ಮನವು ಖಾಲಿಯಾಗಿ ಕಮರಿ ನಿಂತದ್ದು ಯಾಕೋ ?
                                       
                                         ಶಿವು ಮೋರಿಗೇರಿ

ಹನ್ಮಪ್ಪನ ಗುಡ್ಯಾಗ ನಮಾಜ್ ಮಾಡ್ತಾರೇನ್ರಿ ?
ಮಸೀದ್ಯಾಗ ಯಾವ ಅಭಿಷೇಕ ನಡಿತೈತೇಳ್ರೀ ?
ಬಚ್ಚಲ ಮನ್ಯಾಗ ಭಕ್ತಿ ಹುಟ್ಟುತೈತೇನ್ರಿ ?
ಸಣ್ಣ ಕೂಸು ನನ್ನ ಈ ಪ್ರಶ್ನಿ ಕೇಳಕತ್ಯಾಳ್ರೀ ...
                                        
                                        ಶಿವು ಮೋರಿಗೇರಿ

ಮಳಿ ಇಲ್ಲಾ ಬೆಳಿ ಇಲ್ಲ 
ನಮ್ಮನ್ನಾಳ ಸರ್ಕಾರಕ್ಕಿನ್ನು ಥಂಡಿ ಬಿಟ್ಟಿಲ್ಲ
ನನ್ನಂಥ ಬಡವನಿಗ್ಯ ಅಕ್ಕಿ ಕಾರ್ಡು ಇಲ್ಲ 
ರಾಜ್ಯದ ಪರಿಸ್ಥಿತಿ ಎಂಗೈತೋ ಗೊತ್ತ ಆಗಂಗಿಲ್ಲ
ಪೇಪರ್ ತೆಗದು ನೋಡಾಕ ಮನಸಾ ಬರ್ತಿಲ್ಲ
ಅಂಗಂತ ಎದಿಮ್ಯಾಗ ಬಂದಿರಾ ಎಲೆಕ್ಷನ್ನೂ ಮರಿಯಂಗಿಲ್ಲ
ಎಷ್ಟಾ ಆಗ್ಲಿ ನಾನು ಇದ್ಯಾವಂತ ಅದೀನಲ್ಲ ?
ಯಾರಿಗ್ಯ ಓಟು ಆಕಬೇಕೋ ತಲಿಗ್ಯ ಅತ್ತಂಗಿಲ್ಲ
ಈಗಿನ ಟೈಂನಾಗ ನನಿಗ್ಯಾರೂ ಒಳ್ಳೇರು ಅನ್ನಿಸ್ತಾನೇ ಇಲ್ಲ
ಕರದು ಬುದ್ಧಿ ಹೇಳಾರು ನನಿಗೆ ಕಾಣಿಸ್ತಾನೇ ಇಲ್ಲ
                                                
                                           ಶಿವು ಮೋರಿಗೇರಿ

ನಮಗೆ ಈಗ ಇನ್ನೊಬ್ಬ ಗಾಂಧಿ
ಮತ್ತೊಬ್ಬ ಭಗತ್, ವಿವೇಕಾನಂದ 
ಭೋಸ್, ಬಸವ, ಬುದ್ಧ, ಘರ್ಜಿಸಿದ ಆ ಮೈಸೂರ ಹುಲಿ ಟಿಪ್ಪು
ಕಿತ್ತೂರ ಒಡತಿ ಚೆನ್ನಮ್ಮ ವೀರ ವನಿತೆ ಓಬವ್ವ
ಬಿ.ಆರ್.ಅಂಬೇಡ್ಕರ್ ಇನ್ನೂ ಯಾರ್ಯಾರೋ ಬೇಕಿದೆ
ಅಂಥ ಮಹನೀಯರ ಅಗತ್ಯ ಅನಿವಾರ್ಯ ಕಾಡುತ್ತಿದೆಯೇನೋ...
ಇವರೆಲ್ಲರೂ ನಮಗೆ ಸ್ವತಂತ್ರ್ಯ ಕೊಡಿಸಿ, ಗಣರಾಜ್ಯ ಮಾಡಿ 
ಅದೆಷ್ಟು ವರ್ಷಗಳು ಗತಿಸಿದವೋ ಏನೋ
ಭಾರತದ ಜನಸಂಖ್ಯೆ ನೂರತ್ತು ಕೋಟಿಯಾಚೆ ನಡೆದಿದೆ
ಇನ್ನೂ ಹುಟ್ಟಿಲ್ಲ ಇಂಥ ಮಹನಿಯರೇಕೋ ?
ಹುಟ್ಟಿರಬಹುದೇನೋ... ಈ ನನ್ನ ಪಾಪಿ ಕಂಗಳಿಗೆ
ಇಂದಿಗೂ ಗೋಚರಿಸಿಲ್ಲ ನನ್ನೆಡೆಗೆ ಅವರದೆಂಥಾ ಮುನಿಸೋ......

                                                
                                                    ಶಿವು ಮೋರಿಗೇರಿ

ಏನೂ ಬರೆಯಲಾಗುತ್ತಿಲ್ಲ
ನನ್ನೊಳಗಿನ ಕೆಚ್ಚು ಕೊಚ್ಚಿತೆಲ್ಲಿಗೆ ?
ಸಾಲು ಲೇಖನಗಳಲ್ಲಿ ಸಿಕ್ಕಿಕೊಳ್ಳುತ್ತಿಲ್ಲ
ಸಂದೇಶಗಳಿಲ್ಲದೆ ಸುಸ್ತಾಗಿದೆಯಾ ಮನಸಿಗೆ ?
ಆಯ ತಪ್ಪುತ್ತಿವೆ ನಾಲಿಗೆಯಾಡುವ ಮಾತುಗಳೆಲ್ಲ
ನಲ್ಲೆ ಸರಿವಳಾ ಮುನಿಸಿಕೊಂಡು ಮರೆಗೆ ?
ಹರಿದ ಕನಸುಗಳಿಂದ ಆಚೆ ದಾರಿ ಕಾಣುತ್ತಿಲ್ಲ
ತುಂಬಾ ಭಯವಾಗುತ್ತಿದೆ ಯಾಕೋ ನನಗೆ

                                              
                                       ಶಿವು ಮೋರಿಗೇರಿ

ಈ ಭೂಮಿಯಿಂದ ಒಂದೇ ಒಂದಿಂಚು
ಜಿಗಿದರೂ ಸಾಕು ತನುವೇ
ಆಗಸದಲ್ಲಾಗಲೆ ನೀ ಹೆಜ್ಜೆ ಇಟ್ಟಿರುತ್ತೀ
ಆದರೆ ಆ ಮಿಂಚು ತಾರೆಗಳನ್ನೇ ದಕ್ಕಿಸಿಕೊಳ್ಳಲು ಇಂಚಿಂಚು
ತಾರೆಗಳೆತ್ತರಕ್ಕೆ ಜಿಗಿದುಬಿಡು ಮನವೇ
ಆ ತಾರೆಗಳೊಳಗೊಂದು ನೀ ತಾರೆಯಾಗಿರುತ್ತೀ...

                                            
                                                  ಶಿವು ಮೋರಿಗೇರಿ

ನಿಜ ಹೇಳು ಸೂರ್ಯ,
ಅದೆಷ್ಟು ಹಸಿವೆಯಿಂದ ನಿದ್ರೆಯಿಲ್ಲದ
ನಿರ್ಗತಿಕರ ಕಂಡು ಮಲಗಿದೆ...?
ಉಡಲು ಬಟ್ಟೆಯಿಲ್ಲದೆ ಕೊರೆವ ಛಳಿಗೆ
ಅರೆನಗ್ನ ದೇಹಗಳ ದುಗುಡ ಕಂಡೆ ?
ನೀನು ಬರುವ ಹೊತ್ತಾಯಿತೆಂದು
ಎಷ್ಟು ಸೆರಗು ಸರಿಪಡಿಸಿಕೊಂಡ ಸೆಳವುಗಳ ಕಂಡೆ ?
ಅನ್ಯ ದಾರಿಯಿಲ್ಲ ಬದುಕಲೆಂದು ಒಳಗೊಳಗೆ ನೊಂದು
ಮತ್ತೆಷ್ಟು ನತದೃಷ್ಠ ಬೆತ್ತಲೆ ದೇಹಗಳ ಕಂಡೆ ?
ಮಾಡದ ಪಾಪಕ್ಕಾಗಿ ಯಾಮಾರಿದ ಘಳಿಗೆಗೆಂದು
ಹರಕೆಯ ಕುರಿಯಾದ ನಿರ್ಗತಿಕ ದೇಹಗಳ ಕಂಡೆ ?
ಇಷ್ಟೆಲ್ಲಾ ಕಂಡು ನಿನ್ನೊಳಗೆ ನೊಂದು ಉರಿದುರಿದು
ಮತ್ಯಾವ ಪುರುಷಾರ್ಥಕ್ಕೆ ಹುಟ್ಟಿದೆಯೋ ನೀ ಕೆಂಡದುಂಡೆ...

                                                      
                                                          ಶಿವು ಮೋರಿಗೇರಿ

ಭೂಮಿಯಷ್ಟು ತಾಳ್ಮೆ ತಂದುಕೋ..........
ಆಕೆ ಹೇಳಿ ತಲೆಗೂದಲು ನೇವರಿಸಿ ಹೇಳಿದಳು
ಕ್ಷಣವೂ ಬಿಡುವಿಲ್ಲದೆ ತಿರುಗುವ ಭೂಮಿಗೆಲ್ಲಿಯ ತಾಳ್ಮೆ....?
ಹೇಳಬೇಕೆಂದರೆ ಮರಳಿ ಬರಲೇ ಇಲ್ಲ ಅವಳು..

                                              
                                                  ಶಿವು ಮೋರಿಗೇರಿ

ಏನೋ ಆಗಿದೆ ನಂಗೆ
ಭಾವನೆಗಳ ಸಾಗರ ಬರಿದಾಗಿ
ಪದ ಪುಂಜಗಳ ಬರ ಬಡಿದು
ಕಂಗಾಲಾಗಿದೆ ಮನವು ದಂಗಾಗಿ
ಕಣ್ತುಂಬಿ ನೋಟ ಕಲ್ಪನೆಯ ಮುಗಿಲೆಡೆಗೆ ನಡೆದು
ಆ ಸಂಭ್ರಮದ ಕವನಗಳು ಮರಳುವವಾ ಬಾಗಿ
ಭೋರ್ಗರೆತದ ಹುಚ್ಚು ಮಳೆ ಹುಚ್ಚೆದ್ದು ಕಾದು...?
ಅದ್ಯಾವಾಗ ಎದ್ದು ಹೋದಳೋ ನನ್ನ ಸ್ಪೂರ್ತಿ ದೇವತೆ
ಅದಾವ ನಿದ್ದೆಯಲ್ಲಿ ನನ್ನ ಅದ್ದಿ ಅದ್ದಿ
ಭಯದ ಕಾರ್ಗತ್ತಲು ಸರಿದು ಮಬ್ಬು ಹರಿದರಿದು
ಮರಳಿಬಿಡಲಿ ಈ ಖಾಲಿ ಮನದಲ್ಲಿ ಕೊಳೆಯುತ್ತಿದೆ ರದ್ದಿ.....

                                                
                                                    ಶಿವು ಮೋರಿಗೇರಿ

ನಂಗೆ ಯಾವತ್ತೋ ಗೊತ್ತಾಗಿ ಹೋಗಿದೆ
ಎಲ್ಲರೂ ಒಂದಿನ ಸತ್ತೇ ಸಾಯ್ತಾರೆ ಅಂತ
ಮನಸ್ಸು ಯಾಕೋ ಕಲ್ಲಾಗಿ ಕುಳಿತಿದೆ
ಜೀವನವನ್ನೊಮ್ಮೆ ಅನುಭವಿಸೋ ಅಂತ

                                      
                                   ಶಿವು ಮೋರಿಗೇರಿ

ಹಾಸಿಕೊಳ್ಳೋಕೆ ಬಿ.ಪಿ...
ಹೊದ್ದುಕೊಳ್ಳೋಕೆ ಶುಗರ್...
ತಲೆದಿಂಬಿಗೆ ಕ್ಯಾನ್ಸರ್...
ಮಗ್ಗುಲಲ್ಲಿ ಹೆಚ್.ಐ.ವಿ....
ಇರಲಿಲ್ಲವೆಂದರೆ ನಿದ್ರೆ ಬರೊಲ್ಲ ಎನ್ನುವವನಿಗೆ
ಏನ ಹೇಳಲಿ ನಾನು....?

                                        
                                  ಶಿವು ಮೋರಿಗೇರಿ

ಹಸಿವೇ ಇಲ್ಲದ ದೇವರು ನನ್ನವನು...
ಭೂರಿ ಪ್ರಸಾದಗಳನ್ನು ಅರ್ಪಿಸುತ್ತಿದ್ದೇನೆ ನಾನು...
ಬಾಯಾರಿಕೆಯೇ ಗೊತ್ತಿಲ್ಲದ ಕರುಣಾಮಯಿ ಅವನು...
ಅವನೆಸರಲಿ ತೀರ್ಥ ಹಂಚಿದ್ದೇ ಹಂಚಿದ್ದು ನಾನು..
ಕಲ್ಮಶವೇ ಇಲ್ಲದ ಕನಕ ಮೂರ್ತಿ ಅವನು..
ಅಭಿಷೇಕವೆಂಬ ಮಜ್ಜನ ಮಾಡುವೆನು ಅವನಿಗಾಗಿ ನಾನು..
ಲೋಕಕ್ಕೆ ಬೆಳಕು ನೀಡುವವನು ಅವನು..
ನಿನಗೇ ಮಂಗಳಾರಾತಿ ಬೆಳಕ ತೋರಿಸುವೆನಲ್ಲಾ ನಾನು
ಸಕಲವನ್ನೂ ತ್ಯಜಿಸಿದ ಪುಣ್ಯಾತ್ಮ ನೀನು
ಸಕಲವನ್ನೂ ನಿನ್ನೆದಿರು ಸಾದರಪಡಿಸುವೆನಲ್ಲಾ ನಾನು
ನಿನ್ನೊಳಗೆ ನಿನ್ನ ಕಾಯಕದೊಳಗಿರುವೆನೆಂದವನು ನೀನು
ಮರೆತು ನಿನಗಾಗಿ ಒಂದು ಗೋಪುರದ ಮನೆ ಕಟ್ಟಬಯಸುವ ಹುಂಬ ನಾನು
ಬಡವರ ಗೊಳಿಗೆ ಕಿವಿ ಮುಚ್ಚಿಕೊಂಡಿರುವೆ ನಾಣು
ಕೊನೆಗೆ ನನಗೆ ಬುದ್ಧಿ ಕಲಿಸಬೇಕಿರುವವನು ನೀನು

                                              
                                               ಶಿವು ಮೋರಿಗೇರಿ

ಬೇಕಿದ್ದರೆ ಪರೀಕ್ಷಿಸಿ ನೋಡಿ,,,
"ಪ್ರಥಮ ಚಿಕಿತ್ಸಾ ಪೆಟ್ಟಿಗೆ" ಇರುವ
ಒಂದೇ ಒಂದು ಗ್ಯಾರೆಜ್
ಇಡೀ ರಾಜ್ಯದಲ್ಲಿ ಹುಡುಕಿದರೂ
ಒಂದೂ ಸಿಗಲಿಕ್ಕಿಲ್ಲವೇನೋ... 

                                                  
                       ಶಿವು ಮೋರಿಗೇರಿ

ಇಲ್ಲಿ ಕನಸು ಖಾಲಿಯಾಗಿ ಆಗಸದ ತಾರೆಗಳಾಗಿಬಿಟ್ಟವು ...
ನಿನ್ನ ಕೋಪವಲ್ಲಿ ಮೋಡವಾಗಿ ಅಡ್ಡಿಪಡಿಸಿದ್ದು ಸರಿಯೇ.....
ನನ್ನ ಕಲ್ಪನೆಗಳೆಲ್ಲ ಕೈ ಕೊಟ್ಟು ಕುಳಿತುಬಿಟ್ಟವು
ನನ್ನ ಕವನಗಳಿಗೆ ನೀ ಚುಂಬಿಸಿದ್ದು ಸರಿಯೇ.......

                                              
                                      ಶಿವು ಮೋರಿಗೇರಿ

ಸೌಂದರ್ಯ ಅನ್ನೋದು, ಬಣ್ಣದಲ್ಲಿಲ್ಲ,
ದೈಹಿಕವಾಗಿಲ್ಲ ಅಂತ....
ನಾವೆಂಥವರನ್ನು ಮದ್ವೆಯಾಗೋದು,,,
ನಮ್ಮ ಮಕ್ಕಳಿಗೆ ಎಂಥಹ ಜೋಡಿ ಹುಡುಕುತ್ತೀವಿ
ಅಂತ ಮರ್ತೇಬಿಡ್ತೀವಿ ಅಲ್ವಾ.....?
                                   

                                       ಶಿವು ಮೋರಿಗೇರಿ
ಬರವಣಿಗೆ ಗೊತ್ತೆಂಬ ಅಹಃ ನನಗಿಲ್ಲ

ಏನು ಬರೆಯುವೆನೋ ನನಗೂ ಗೊತ್ತಿಲ್ಲ
ಬರೆಯಲೇಬೇಕೆಂಬ ಹಂಬಲ ನಿಲ್ಲುತ್ತಿಲ್ಲ
ನಿನ್ನ ಓಲೈಕೆಗಂತೂ ನಾ ಬರೆಯುತ್ತಿಲ್ಲ

ಆ ಸೂರ್ಯನೇಕೆ ಇಂಚಿಂಚು ಕರಗಿ
ತಂಪಾದ ನಿನ್ನ ಕಂಬನಿಗೆ ಮರುಗಿ
ಆ ನಿನ್ನ ಸೆರಗು ಓಡಿ ಹನಿ ಮುತ್ತಿಗೆ ತಾಗಿ
ನನ್ನ ನೆನಪ ಅಲೆಯಲ್ಲೇಕೆ ಮಿಂದಿತು ಕೊರಗಿ ಕೊರಗಿ
ಶಿವು ಮೋರಿಗೇರಿ