Shivu Morigeri

Saturday, 16 February 2013

ಕೋಲಾಕುವಾಗ ಕಲೆತಂತ ಗೆಳತೀನ
ಮರಿ ಅಂತೀಯಲ್ಲ ಮನಿಷೇನಾ ನೀನು ?
ಆಕಿ ಗೆಜ್ಜಿ ನಾದಾನ ನನ್ನೆದಿಯ ಮ್ಯಾಗೆಲ್ಲಾ...ಶಿವು ಮೋರಿಗೇರಿ 

ದೊಡ್ಡಾರು ಅಂತೇಳಿ ಪಾದಕ್ಕ ಬಿದ್ದಿದ್ದೆ
ಅವರ ಹೆಬ್ಬೆಟ್ಟು ನನ್ನ ಎದಿಮ್ಯಾಗ ಆಡಿತ್ತು
ಯವ್ವಾ ದೊಡ್ಡಾರ ಪಾದ ಬಲು ದೊಡ್ಡವು...ಶಿವು ಮೋರಿಗೇರಿ

ಎದಿಯ ಮ್ಯಾಗಲ ಗುಂಡಿ ಹರಿದೈತಿ ನಿಲ್ಲೋ
ಒಲದ ಕೊಡತೇನ ಒಂದಾ ನಿಮಿಸದಾಗ
ನನ್ನ ಸವತಿ ನನಮ್ಯಾಗ ಸಿಟ್ಟಾದಾಳು...ಶಿವು ಮೋರಿಗೇರಿ

ಗಂಡನಿಲ್ಲದ ವಿದಿವಿ ಗಂಡು ಮಗುವನ್ನಡೆದು
ಗಂಡಬೇರುಂಡನೆಂಬ ಹೆಸರಿಟ್ಟಾಳೋ
ಬೇರುಂಡ ಗಂಡನ್ನ ಊರೆಲ್ಲ ಹುಡುಕೈತೋ...ಶಿವು ಮೋರಿಗೇರಿ

ಎಷ್ಟ ಕಷ್ಟಪಟ್ಟರು ಹಾಲ್ಯಾಕ ಕೊಡವಲ್ಲಿ
ಬ್ಯಾಸಿಗಿಗ್ಯ ಒಣಿಗೋಗ ಗಿಡವಲ್ಲ ನೀನು
ನಿನ್ನ ಸೊಕ್ಕ ಮುರಿದವರ್ಯಾರ ಬಿಳಿ ಎಕ್ಕಿ ಗಿಡವೇ...ಶಿವು ಮೋರಿಗೇರಿ

ಮುತ್ತ ಕೊಟ್ಟಾನಂತ ಉತ್ತತ್ತಿ ವನದಾಗ
ಅತ್ತು ಕರೆದಾಳೋ ಅರಮನಿಯ ದೊರಿಸಾನಿ
ಸುತ್ತ ಕುಂತು ಸುರಿಗಿ ಎರದಾರ ಮುತ್ತೈದೇರು.........ಶಿವು ಮೋರಿಗೇರಿ

ಗಗ್ಗರಿ ಸರದ ಭಲೆ ಬುಜದ ಬಸವಣ್ಣ
ಸಿಡಿಲೊಡೆದು ಸುರಿಲಿಲ್ಲ ಮಳಿರಾಯ ಯಾಕೋ
ಗಗ್ಗರಿ ಮಾರಿ ನಿನ್ನ ಸಲುತೀನೋ... ಶಿವು ಮೋರಿಗೇರಿ


ಸಿಟ್ಟಾಗಿ ಹೋದಾಕಿ ಸವಾಸ ಸಾಕೆಂದು 
ಅಂಗಳದಾಗಿನ ಮಾತು ನಡುಮನಿಯಾಗ್ಯಾಕಿಲ್ಲ ಚೆಲುವ
ಅಳಬ್ಯಾಡ ನೀನಲ್ಲ ತೊಲಿಮನಿಯ ಬೆಳಗಿದವ......ಶಿವು ಮೋರಿಗೇರಿ


ನಾನು ಕೇಳಿದಾಗಲೆಲ್ಲಾ ನೀ ಮಡಿಲು ಕೊಟ್ಟೆ
ಈಗ ನೋಡು, ನಿನ್ನೊಡಲ ತುಂಬಿಕೊಂಡು ನೀ ತವರಿಗೋಗಿಬಿಟ್ಟೆ
ಶಿವು ಮೋರಿಗೇರಿ

ನನಗಾಗಿ ನೀನು ಬದಲಾಗಬೇಕಿಲ್ಲ
ನಿನಗಾಗಿ ನಾನೇನೂ ತ್ಯಾಗ ಮಾಡೊಲ್ಲ
ನಿನ್ನೇಳಿಗೆಗೆ ನಾನು ನನ್ನೇಳಿಗೆಗೆ ನೀನು
ಹೆಗಲುಕೊಟ್ಟು ಬದುಕಿದರೆ ಸಾಕು...
ನನಗಾಗಿ ನಿನ್ನ ಮನೆಯ ನೀನು ತೊರೆಯಬೇಕಿಲ್ಲ 
ಸ್ವತಂತ್ರ ಸಮಾನತೆ ಅಂತೆಲ್ಲ ಕೊರಗಬೇಕಿಲ್ಲ
ನಿನ್ನೊಳಗೆ ನಾನು ನನ್ನೊಳಗೆ ನೀನು
ಅಳೆದು ಸುರಿದು ಕಳೆದು ಮತ್ತೆ ವಾಸ್ತವಕ್ಕೆ ಮರಳಿದರೆ ಸಾಕು...

ಶಿವು ಮೋರಿಗೇರಿ

No comments:

Post a Comment