Shivu Morigeri

Monday, 4 February 2013

ನಾನಿಲ್ಲದೆ ಎಳೆಯುತ್ತೆ ಇಂದು ನನ್ನೂರ ತೇರು...

ನಾನಿಲ್ಲದೆ ಎಳೆಯುತ್ತೆ ಇಂದು ನನ್ನೂರ ತೇರು...

ಇಂದು ಇಡೀ ನನ್ನ ಮೋರಿಗೇರಿಯ ಸಡಗರಕ್ಕೆ ಸ್ವರ್ಗದ ಸರಕೆಲ್ಲಾ ಖಾಲಿ ಖಾಲಿ. ನನ್ನ ಮನೆಯಲ್ಲೂ ಇದಕ್ಕಿಂತ ಭಿನ್ನ ವಾತಾವರಣ ಸಿಗಲು ಹೇಗೆ ಸಾಧ್ಯ ? ಎರೆಡು ದಿನಗಳ ಹಿಂದೆಯೇ ಪಕ್ಕದ ನಗರಕ್ಕೆ ಹೋಗಿ ನನ್ನ ತಮ್ಮ ಮನೆಮಂದಿಗೆಲ್ಲಾ ಹೊಸ ಬಟ್ಟೆ ಖರೀದಿಸಿ, ಹಬ್ಬದ ದಿನಸಿ ಕೊಳ್ಳುವಾಗ ಯಾಕೆ ನೆನಪಾದೆನೋ ನಾನು. ತಕ್ಷಣ ಪೋನ್ ಮಾಡಿ ' ನಾಳ್ಯ ಸ್ವಾಮ್ವಾರ ಕಲ್ಲಪ್ಪನ ತೇರು ಐತಿ , ಒಂದಿನದ ಮಟ್ಟಿಗ್ಯ ಬಂದೋಗ ಯಣ್ಣಾ,' ಪ್ರೀತಿಯಿಂದ ಕೇಳಿದ್ದಕ್ಕೆ ಪರ್ವಾಗಿಲ್ಲ ನೀವೇ ಮುಗಿಸ್ಕಳ್ರಪ್ಪಾ. ಎಂದು ಕರೆ ಕಟ್ ಮಾಡಿದ್ದೆ. ಇಂದು ಬೆಳಗ್ಗೆಯೇ ಮನೆಗೆಷ್ಟು ನೆಂಟರು ಬಂದಿರುವರೋ ಏನೋ... ಎಲ್ಲರೂ ನನ್ನಬಗ್ಗೆ ಕೇಳಿರ್ತಾರೆ. ಎಲ್ಲರೂ ಹೊಸ ಬಟ್ಟೆಯುಟ್ಟು, ಹೋಳಿಗೆ ಊಟ ಜಬರದಸ್ತಾಗೇ ಬಡಿದಿರ್ತಾರೆ. ಸಾಲ ಮಾಡಿಯಾದ್ರೂ ಹಿಗ್ಗಿಲೆ ಹಬ್ಬ ಮಾಡೋದು ನನ್ನ ಜನಗಳಿಗೆ ಹೊಸತಲ್ಲ. ಮಳೆ ಇಲ್ಲ ಅನ್ನೋ ಅಳುಕು, ಹಬ್ಬದ ಸಡಗರವನ್ನು ಸತಾಯಿಸೊಲ್ಲ. ಹಾಗಾಗಿಯೇ ನನ್ನ ಇಡೀ ಓಣಿಯ ಅಷ್ಟೂ ಮನೆಗಳಲ್ಲಿನ ನೆಂಟರ ಉತ್ಸವ ಜೋರಾಗಿಯೇ ಇರುತ್ತೆ. ನನ್ನ ಓಣಿಯ ಎಲ್ಲಾ ಯುವಕರು, ಹಿರಿಯರು, ನನ್ನ ಮನೆಯ ಮುಂದಿನ ಬೇವಿನ ಮರದ ಕಟ್ಟೆಗೆ ಕುಳಿತು, ನಮ್ಮ ಮನಗೆ ಬಂದವರನ್ನು ಕಿಚಾಯಿಸುತ್ತಾ, ಒಂದೇ ಮನೆಯವರಂತೆ ಕುಶಲೋಪಚಾರಿ ಮಾಡುತ್ತಾ ಥಟ್ಟನೆ ನಮ್ಮ ಮನೆಯವರನ್ನು ಕೇಳೇ ಬಿಡ್ತಾರೆ ' ಯಾಕ್ರಪ್ಪಾ ನಿಮ್ಮ ಶಿವ್ವ ಬಂದಿಲ್ಲೇನು ? ಅವನಿರಬೇಕ್ರಲೇ ಹಬ್ಬಕ್ಕ ನಿಮ್ಮನಿಗ್ಯ ಆದ್ರೂ ಅವ್ನು ಎಲ್ಲಿ ಓದ್ರು ಬದಕ್ಕಂತಾನ ಬಿಡಪಾ' ಹೀಗೆ ಆ ಕಟ್ಟೆಗೆ ಇಂದು ವಿಸಿಟ್ ಮಾಡಿದವರೆಲ್ಲರೂ ನನ್ನ ನೆನಪು ಮಾಡ್ಕೋತಾರೆ. ಆದ್ರೆ ನನಗೆ ಯಾಕೆ ಈ ಹಬ್ಬ ಮೆದುಳಿನ ನರವೊಂದರಲ್ಲಿ ಹಾಗೆ ಉಳಿದು ಮರಳಿ ಮರಳಿ ಕಾಡುತ್ತೆ ಅಂದ್ರೆ, ಇವತ್ತು ನಮ್ಮೂರಲ್ಲಿ ನಾಟಕಗಳಿರ್ತವೆ. ಇಡೀ ಗ್ರಾಮದಲ್ಲಿ ಮೂರ್ನಾಲ್ಕು ಯುವಕ ಸಂಘದ ಸದಸ್ಯರು 'ಪಟ್ಟಿ' ಹಾಕಿಕೊಂಡು ತಿಂಗಳ ತಾಲೀಮು ನಡೆಸಿ ಇಂದು ತಮ್ಮ ಕಲಾ ಪ್ರದರ್ಶನಕ್ಕೆ ತುದಿಗಾಲಲ್ಲಿ ನಿಂತಿರ್ತಾರೆ. ನನ್ನ ಮನೆಯಿರುವ 1ನೇ ವಾರ್ಡ್ ನಲ್ಲಿನ ನಮ್ಮ ' ಮಾರುತಿ ಯುವಕ ಸಂಘ'ದ ಯುವಕರೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಬಾರಿ ಯಾಕೋ ನಮ್ಮ ಹುಡುಗ್ರು ನಾಟಕದ ಗೋಜಿಗೆ ಹೋಗಿಲ್ಲವಂತೆ. 1996 ರಲ್ಲಿ ನಾನಿನ್ನೂ 6 ನೇ ತರಗತಿಯಲ್ಲಿ ಓದುತಿದ್ದೆ. 5 ನೇ ತರಗತಿ ಓದುತಿದ್ದಾಗಲೇ ಗಣೇಶೋತ್ಸವದಲ್ಲಿ ವೇದಿಕೆ ಹತ್ತಿ ಕಥೆಗಳನ್ನು ಹೇಳಿ ಎಲ್ಲರ ಪ್ರೀತಿಯ ಮಗುವಾಗಿದ್ದೆ. ನಮ್ಮ ಸಂಘದಲ್ಲಿ ಕಥೆ ಹೇಳುವುದನ್ನು ನೋಡಿದ್ದ ಗ್ರಾಮದ ಮತ್ತೊಂದು ಸಂಘದವರು ನಂಗೆ ಕಥೆ ಹೇಳೋಕೆ ಅಂತ ಅವರ ಸಂಘದ ಹತ್ತಿರ ಕರೆದುಕೊಂಡು ಹೋಗಿ, ಎಲ್ಲರಿಗೂ ಕಾಣಲಿ ಹುಡುಗ ಎಂದು ಛೇರ್ ಮೇಲೆ ನಿಲ್ಲಿಸಿ ಕಥೆ ಹೇಳಿಸಿದ್ದರಿಂದ ಅಲ್ಲೂ ಫೇಮಸ್ಸು. ಹೀಗಿದ್ದಾಗ ಆ ವರ್ಷ ನಮ್ಮ 'ಮಾರುತಿ ಯುವಕ ಸಂಘ'ದವರು ಇದೇ ತೇರಿಗೆ 'ಗರತಿ ಹೆಣ್ಣಿಗೆ ಗರ್ವದ ಗಂಡ' ನಾಟಕಕ್ಕೆ ತಲೀಮು ಅದಾಗಲೇ 15 ದಿನಗಳಷ್ಟು ನಡೆದಿತ್ತು. ನಾನೂ ಕೆಲವು ದಿನಗಳಲ್ಲಿ ರಾತ್ರಿ ತಾಲೀಮನೆಗೋಗಿ ಕುಳಿತು ತಾಲೀಮು ನೋಡಿ ಬರುತ್ತಿದ್ದೆ. ಇದ್ದಕ್ಕಿದ್ದಂತೆ ಒಂದಿನ ನಮ್ಮ ನಾಟಕ ಕಲಿತ ಎಲ್ಲಾ ಪಾತ್ರಧಾರಿಗಳೂ, ನಾಟಕದ ಮ್ಯಾನೇಜರ್ 'ದಿ.ಹೋಟೆಲ್ ಶೇಖರಪ್ಪ' ನಮ್ಮ ಮನೆಗೆ ಬಂದು ನಾಟಕದ ಕುರಿತು ಮಾತಾಡುತ್ತಾ, ರೌಡಿ ಪಾತ್ರ ಮಾಡಿದ್ದ ಗಡದೆಪ್ಪರ ಗುಡ್ಡಪ್ಪ ' ಎಲ್ಲ ಚೊಲೋ ನಡದೈತಿ ಮಾವಾ, ಆದ್ರ, ಅದ್ರಾಗೊಂದು ಹುಡುಗನ ಪಾತ್ರಕ್ಕ ಇನ್ನೂ ಯಾರೂ ಇಲ್ಲ. ನಮ್ಮ ಸಿವ್ವನ್ನ ಅಕ್ಯಣಾನು ಅಂತ ಕೇಳಾಕ ಬಂದೀವಿ. ನೀನೇನು 'ಪಟ್ಟಿ ಹಾಕಬ್ಯಾಡ'  ಮಾತೇನು ಬಾಳಾ ಇಲ್ಲ, ಬರೇ ಹದ್ನೈದು ಮಾತು ಅಷ್ಟ. ಒಂದು ವಾರ ಸಿವ್ವನ ತಾಲೀಮ್ಗೆ ಕಳ್ಸು. ಅವನು ಸಿಕ್ಕಪಟ್ಟಿ ಚೂಟಿ ಅದಾನ. ಮಾತು ಕಲಿತಾನ. ಓಣ್ಯಾಗ ಉಡ್ರೇನು ಜಗ್ಗು ಅದಾವು. ಆದ್ರ ಟೇಜಿನ ಮ್ಯಾಗ ಮಾತಾಡಕ ದೈರ್ಯ ಬೇಕಲ್ಲ. ಇವ್ನಾದ್ರ, ಟೇಜಿಂದು ಗೊತ್ತೈತಿ. ನೀನೆನರ ಆಗಲ್ಲ ಅಂದ್ರ ನಮ್ಮ ನಾಟ್ಕನ ಕೆಟ್ಟೊಕೈತಿ. ಬಿಟ್ಟು ಮಾಡಾ ಪಾತ್ರ ಅಲ್ಲದು'  ನನ್ನ ತಂದೆಯೆದಿರು ಗೌರವಯುತವಾಗಿ ಕೇಳಿದಾಗ ಅಲ್ಲೇ ಇದ್ದ ನನಗೆ  ಹಿಗ್ಗೋ ಹಿಗ್ಗು. ತಕ್ಷಣ ನನ್ನ ತಂದೆ, ನನ್ನನ್ನು ಗಣೇಶ ಬೀಡಿ ತರಲು ಅಂಗಡಿಗೆ ಕಳಿಸಿಬಿಟ್ಟ. ಮರಳಿ ಬರುವಷ್ಟರಲ್ಲಿ ಅವರಾರೂ ಇರಲಿಲ್ಲ.ನನ್ನ ಕುತೂಹಲಕ್ಕೆ ಉತ್ತರ ಕೊಡೋದ್ಯಾರು ? ನೇರ ನನ್ನ ಅಜ್ಜಿಯ ಬಳಿ ಹೋಗಿ ' ಅಪ್ಪ ಏನಂದನಮ್ಮಾ ?' ಎಂದು ಕೇಳಿದ್ರೆ ' ಬೇಕಾರ ಪಟ್ಟಿ ಕೊಡ್ತಾನಂತ್ಯ, ನಿನ್ನ ಕಳಸಲ್ಲಂತ್ಯ ನೋಡು. ಓದಾ ಉಡ್ಗ ಕೆಟ್ಟೋಕ್ಕಾನ ಹೋಗ್ರಪ್ಪಾ ಅಂದಿದ್ಕ ವಳ್ಳಿ ಓದ್ರು ಅವ್ರು' ಅಜ್ಜಿ ಏರುಧ್ವನಿಯಲ್ಲಿ ಉತ್ತರ ಕೊಡುತ್ತಲೇ ಥತ್ತೇರಿ ಎಂದುಕೊಂಡಿದ್ದೆ. ಆಮೇಲೆ ಆ ಪಾತ್ರವನ್ನು ಉತ್ತಂಗಿ ಮಂಜು ಅನ್ನೋನು ಮಾಡಿದ. ಮುಂದೆ 2006 ರಲ್ಲಿ ಮತ್ತದೇ ನಾಟಕಕ್ಕೆ ಅಣಿ ಮಾಡಿದ್ರು. ಕಳೆದಬಾರಿ ಬಾಲಕನ ಪಾತ್ರ ಮಾಡಿದ್ದ ಉತ್ತಂಗಿ ಮಂಜು ಈ ಬಾರಿ ಖಳನಾಯಕನ ಪಾತ್ರಧಾರಿ. ನಾನು ಈ ಬಾರಿ ಕಥಾಸಂಚಾಲಕನಾಗಿದ್ದೆ. ಮುಂದಿನ ವರ್ಷ ನನ್ನ ಅಣ್ಣನ ಸ್ನೇಹಿತರೆಲ್ಲಾ ಸೇರಿಕೊಂಡು 'ನ್ಯಾಯ ನೀಡಿದ ಹುಲಿ' ನಾಟಕ ಆಡಿದ್ರು ಅದರಲ್ಲಿ ನಾನು ಸಹ ನಿರ್ದೇಶಕ. ಮರುವರ್ಷ ಅದೇ ನಮ್ಮಣ್ಣನ  ಇತರೆ ಸ್ನೇಹಿತರು ' ಕೆರಳಿದ ಅವಳಿ ಸರ್ಪಗಳು' ಆಡಿದ್ರು ಆಗಲೂ ನಾನು ಸಹ ನಿರ್ದೇಶಕ. ಮುಂದೆ ಹಳೆಯ ಹುಲಿಗಳೆಲ್ಲಾ ಸೇರಿಕೊಂಡು 'ರಕ್ತ ರಾತ್ರಿ' ನಾಟಕ ಅಣಿ ಮಾಡಿದ್ರು. ಈ ಬಾರಿ ನಾನು ತಾಲೀಮನಿ ಒಳಗೂ ಹೋಗಲಿಲ್ಲ. ಏಕೆಂದರೆ ನಮ್ಮ  ' ಮೀಸೆ ಹನುಮಂತಪ್ಪ' ದೊಡ್ಡಪ್ಪ ನಾಟಕದ ಡೈರೆಕ್ಟ್ರು. ಒಂದು ಮನೆಗೆ ಇನ್ನೆಷ್ಟು ಜನ ಹೋಗ್ತಾರೆ ತಾಲೀಮನಿಗೆ ? ಎಂದುಕೊಂಡು ಸುಮ್ಮನಾದೆ. ಇದಾದ ಮೇಲೆ ಮತ್ತೆ ಅದೇ ಹಳೆಯ ತಂಡ 'ನ್ಯಾಯ ನೀಡಿದ ಹುಲಿ' ಯನ್ನು ಮತ್ತೊಮ್ಮೆ ಅಖಾಡಕ್ಕೆ ಬಿಟ್ವಿ. ಆಗಲೂ ನಾನು ಸಹ ನಿರ್ದೇಶಕ. ಮರುವರ್ಷ ಮತ್ತದೇ ' ರಕ್ತ ರಾತ್ರಿ'. ನಮ್ಮ ಓಣಿಯ ಎಲ್ಲಾ ನಾಟಕಗಳಲ್ಲಿ ನಾನು ವೇದಿಕೆಯಿಂದ ಕದಲಿಲ್ಲ. ಪಾತ್ರಧಾರಿಗಳನ್ನು ತಯಾರು ಮಾಡುವುದು, ಅವರಿಗೆ ಚಾ ಕೊಡೋದು, ಕಲಾವಿದೆಯರಿಗೆ ಚಾ, ಮಂಡಕ್ಕಿ ಮಿರ್ಚಿ ಕೊಡಿಸೋದು, ಮುಯ್ಯಿ ಬರೆಯೋದು, ಪರದೆ ಹಿಂದೆ ನಿಂತು ಮಾತುಗಳನ್ನು ಹೇಳಿ ಕೊಡೋದು. ಹೀಗೇ ಕೆಲಸ ಸಾಗಿದ್ದೇ ಸಾಗಿದ್ದು. ನಮ್ಮ ತಂಡದ ನಾಟಕಗಳ ತಯಾರಿಬಗ್ಗೆ  ಬರೆದರೆ ಅದು ಮತ್ತೊಂದು 'ರಂಜನೆಯ ರಾತ್ರಿ' ಆದರೆ ಈ ಬಾರಿ ನಮ್ಮ ಹುಡುಗರು ನಾಟಕವನ್ನು ಆಡುತ್ತಿಲ್ಲ.  ನಾಟಕದ ವಿಷಯ ಬಂದಾಗಲಾದರೂ ನನ್ನ ಓಣಿಯ ಜನತೆ ನನ್ನನ್ನು ನೆನಪಿಸಿಕೊಂಡಿರುತ್ತಾರೆ. ಇಷ್ಟೊತ್ತಿಗೆಲ್ಲ ತೇರು ಪಾದಗಟ್ಟಿಯಕಡೆ ಮುಖ ಮಾಡಿರಬಹುದು. ಆ ಜಾತ್ರೆಯ ಸಡಗರವನ್ನು ಬರೆದರೆ ಅದೂ ಒಂದು ಅದ್ಧೂರಿ ಲೇಖನವಾಗುತ್ತೆ. ಅಲ್ಲಿ ಇಂದು ಬೆಳಗಿನಿಂದ ಯಾರ್ಯಾರು ಎಷ್ಟು ಸಂಭ್ರಮಿಸಿದರೋ, ಯಾರ ಹೃದಯದೊಳಗೆ ಯಾರಿದ್ದರೋ, ಅಂತೂ ನಾನಿಲ್ಲದೆ ಎಳೆಯುತ್ತೆ ಇಂದು ನನ್ನೂರ ತೇರು. ಇಂದು ನನ್ನನ್ನು ಯಾರು  ಜ್ಞಾಪಿಸಿಕೊಳ್ಳದಿದ್ದರೂ ಊಟದ ತಟ್ಟೆಯ ಮುಂದೆ ಕುಳಿತಾಗ ನನ್ನ ಹೆತ್ತವ್ವಳಿಗೆ ನಾನು ನೆನಪಾಗಲಿಕ್ಕಿಲ್ಲವೇನು ? ಕಂಗಳು ತುಂಬುತ್ತಿವೆ ಆ ಘಳಿಗೆಯನ್ನು ನೆನೆದರೇಕೋ 

No comments:

Post a Comment