Shivu Morigeri

Tuesday, 6 August 2013

ಹಸಿವು: my imagination story11

ಹಸಿವು: my imagination story 10: ಗರ್ಭಗುಡಿ ಇಡೀ ಊರಿಗೂರಾ, ಜಗತ್ತನ್ನಾ ಮರತು ಮಕ್ಕಂಡಿರತೈತಿ. ಊರಾಗಿನ ಎಲ್ಲರ ಮನಿ ಕದಗಳು ಮಖಾ ಮುಚ್ಚಿಗಂಡಿರ್ತಾವು. ಲೋಕದ ಪರಿಜ್ಞಾನನಾ ಇಲ್ಲದ ಕೂಸುಗಳು ಒಂದು ಕ...

my imagination story 10

ಗರ್ಭಗುಡಿ

ಇಡೀ ಊರಿಗೂರಾ, ಜಗತ್ತನ್ನಾ ಮರತು ಮಕ್ಕಂಡಿರತೈತಿ. ಊರಾಗಿನ ಎಲ್ಲರ ಮನಿ ಕದಗಳು ಮಖಾ ಮುಚ್ಚಿಗಂಡಿರ್ತಾವು. ಲೋಕದ ಪರಿಜ್ಞಾನನಾ ಇಲ್ಲದ ಕೂಸುಗಳು ಒಂದು ಕಾಪು ನಿದ್ದಿ ಮುಗಿಸಿ ಹೊಟ್ಟಿ ಹಸಿದಂಗಾಗಿಯೋ ಇಲ್ಲಾ ಉಚ್ಚಿ ಹೊಯ್ಕಂಡು ಹಾಸ್ಗಿನೆಲ್ಲಾ ತೊಯಿಸ್ಕಂಡೋ ಅಂತೂ ಮಕ್ಕೊಂಡಿರಾ ಜೋಲಿಲಿಂದನಾ ಚಿಟಾರನೇ ಚೀರಿ ಅಪ್ಪನ ತೋಳಮ್ಯಾಗ ತಲಿಕೊಟ್ಟಿದ್ದ ಅವ್ವಗ ದಿಢೀರನ ಎಚ್ಚರ ಮಾಡೋ ಹೊತ್ತದು. ಇನ್ನು ಹಸು ಮಕ್ಕಳು, ಹರೇದ ಮಕ್ಕಳು, ತಮ್ಮ ಮಗ್ಗಲು ಬದ್ಲಿಸೋ ಟೈಂ ಅದು. ಮತ್ತಿನ್ನು ನಿದ್ದಿನಾ ಬರದ ಮುದುಕ್ರು ಯಾವಾಗ ಬೆಳಕರಿತೈತಪಾ ಅಂತೇಳಿ ಮಕ್ಕೊಂಡಿರಾ ಹಾಸ್ಗಿಯೊಳಗಾ ಕೆಮ್ಮಿಕೋತ ಅತ್ಲಾಗ ಇತ್ಲಾಗ ಒದ್ದಾಡಿ, ಹಾಸ್ಗಿ ಮಗ್ಗಲದಾಗಿನ ಚೆಂಬಿನಾಳಿನ ನೀರು ಕುಡುದು ಮತ್ತೆ ಔರೋರ ಕೌದಿಯೊಳಗ ತಲಿಕೊಡಾಂತ ಟೈಂ ಅದು. ಮನಿ ಹೊರಗ ಮೆಟ್ಟುಣ್ಕಿ ಮ್ಯಾಗೋ, ಕಟ್ಟಿ ಮೂಲ್ಯಾಗೋ ಎಲ್ಲೋ ಒಂದು ಕಡಿಗೆ ನಾಯಿಗಳು ದುಂಡುಗು ಮಕ್ಕೊಂಡಿರಾ ಟೈಂ ಅದು. ಊರಾಗಿನ್ನ ಎಲ್ಲಾ ಓಣಿಯ ಎಲ್ಲಾ ಬೀದಿಗಳೂ ತಮ್ಮ ಕೈಕಾಲುಗಳನ್ನ ಮನಸೋ ಇಚ್ಛೆ ಚೆಲ್ಲಾಡಿ ಮಕ್ಕೊಂಡಿರಾಂಥ ಟೈಂ ಅದು. ಹಿಂಗ ಒಂದಾ ಮಾತಿಗೆ ಹೇಳಬೇಕಂದ್ರ ಇಡೀ ಜಗತ್ತಾ ಮಕ್ಕೊಂಡಿರಾ ಟೈಂನಾಗ ಅವನೊಬ್ಬನು ಊರ ಹೊರಗಿರೋ ಆ ಹಳೇ ಹ್ಮಪ್ಪನ ಗುಡಿಯೊಳಗ ಎದ್ದು ಕುಂದ್ರತಾನ.
ಹಂಗ ಎದ್ದು ಕುಂತೋನು ತನ್ನ ಹಾಸ್ಗಿನೆಲ್ಲಾ ಹನ್ಮಪ್ಪನ ಗುಡಿಯಾಗಿನ ಜಂತಿಮ್ಯಾಕ ಎತ್ತಿಟ್ಟು , ಗುಡಿಯ ಮೂಲ್ಯಾಗಿನ ಒಂದು ಗಡಿಗಿಯೊಳಗಿನ ನೀರು ತಗೊಂಡು ಮಾರಿ ತ್ವಕ್ಕಂಡು ತನ್ನ ಜೋಳಿಗಿ ತಗಂಡು ನೇರ ಹೋಗಾದು ಊರಾಚೆಗಿರೋಂತ ಸುಡುಗಾಡಿಗೆ. ಹಾಗೆ ಸುಡುಗಾಡಿಗೆ ಹೋದ ಅವನು ಅಲ್ಲಿ ಅದೇನಾ ಪೂಜೆ ಮಾಡಿ ಆ ಸುಡಗಾಡಿನಲ್ಲಿನ ಆತ್ಮಗಳ ಜತಿಗೆ ಮಾತಾಡ್ತಾನಂತೆ. ಅವಾಗ ಅಲ್ಲಿರಾ ಆತ್ಮಗಳು ಔರೋರ ಮನಿಗುಳಾಗ ಮುಂದೆ ನಡಿಯ ಒಳ್ಳೇದು, ಕೆಟ್ಟದ್ದು ಎಲ್ಲಾ ನಮೂನಿ ಕಾರ್ಯಗಳನ್ನ ಇವನಿಗೆ ಹೇಳ್ತಾವಂತೆ ಅವುಗಳನ್ನೆಲ್ಲಾ ತಿಳಕೊಂಡು ಆ ಆತ್ಮಗಳಿಗೆ ಏನಾ ಒಂದು ಭರವಸೆ ಕೊಟ್ಟು ಅಲ್ಲಿಂದ ವಾಪಾಸ್ ಊರೊಳಗ ಬರಾಕರ ತನ್ನ ಬಲಗೈಯೊಳಗಿನ ಶಂಖವನ್ನ ಊದಿಕಂತ ಬರ್ತಾನೆ. ಇವನ ಶಂಖ ಧ್ವನಿ ಕೇಳತಿದ್ದಂಗನಾ ಅಲ್ಲಲ್ಲಿ ಮಕ್ಕಂಡಿರಾ ನಾಯಿಗಳು ದಿಢೀರನ ಎದ್ದು ಬೊಗಳಾಕ ಚಾಲೂ ಮಾಡ್ತಾವು.
ಯಾವಾಗ ಓಣ್ಯಾಗಿನ ನಾಯಿಗಳು ಟೀಂ ಕಟ್ಟಿಗಂಡು ಬೊಗಳತಾವೋ ಮದ್ಲಾ ನಿದ್ದಿ ಇಲ್ಲದ ಮುದುಕ್ರು ಮಕ್ಕಂಡಿರಾ ಹಾಸ್ಗಿಯೊಳಗಾ ತಮಗ ತಾವಾ ಹೇಳ್ಕಂತಾರ 'ಶಂಖದ ಧ್ವನಿನೂ ಬರ್ತೈತಿ, ಓಣ್ಯಾಗಿನ ನಾಯಿಗಳೂ ಬೊಗಳತಾವಪಾ ಅಂದ್ರ ಔನು ಕಳ್ಳನೂ ಅಲ್ಲ ಸುಳ್ಳನೂ ಅಲ್ಲ, ಅನುಮಾನನಾ ಬ್ಯಾಡ ಅವ್ನು ಕಾಡ ಸಿದ್ದಪ್ಪ' ಇವ್ನು ಶಂಖ ಊದಿಕಂತ ಬಂದಾನ ಅಂದ್ರ ಬೆಳ್ಳಿ ಚುಕ್ಕಿ ಮುಡಾಕ ಇನ್ನೇನು ಸ್ವಲ್ಪಹೊತ್ತು ಬಾಕಿ ಐತಿ ಅಂತಾನ ಖಾತ್ರಿ ಮಾಡ್ಕಬೇಕು. ಅಷ್ಟರ ಮಟ್ಟಿಗೆ ಟೈಂನ ಮೆಂಟೇನ್ ಮಾಡೊ ವ್ಯಕ್ತಿ ಅಂದ್ರ ಕಾಡ ಸಿದ್ರ ಸಿದ್ದಯ್ಯ. ಹೌದು. ಅವನು ಆ ಊರಿನ ಸಿದ್ದಪ್ಪ. ಅಂದ್ರ ಕಾಡು ಸಿದ್ರು ಅಂತ ಕರಿಸಿಕೊಳ್ಳಾ ಒಂದು ನಮೂನಿ ವಿಶಿಷ್ಠ ಜನಾಂಗದ ಸಂತ ಅಂತಾನಾ ಕರೀ ಬೌದು. ಈ ಕಾಡು ಸಿದ್ರು ಒಂದು ಕಡಿಗೆ ನೆಲೆನಿಂದ್ರಾದು ಬಾಳ ಅಪರೂಪವಂತೆ. ಆದ್ರ ಈ ಸಾಲಾಪುರ ಅನ್ನೋ ಊರಾಗ ಮಾತ್ರ ಎಲ್ಲಿಂದಲೋ ಬಂದ ಈ ಸಿದ್ದಯ್ಯ ಬಾಳ ದಿನ ಇದಾ ಊರಾಗಾ ಇದ್ದ. ಅವನ ಹೆಸ್ರು
ಸಿದ್ದಯ್ಯ.

ಇಂಥಾ ಸಿದ್ದಯ್ಯ ಹಂಗ ಶಂಖ ಊದಿಕಂತ ಇಡೀ ಊರಿನ ಎಲ್ಲಾ ಹಾದಿ ಬೀದಿಗಳನ್ನೂ ಸುತ್ತಿಕಂಡು ಕೊನೀಗೆ ಮತ್ಯ ಹನ್ಮಪ್ಪನ ಗುಡೀಗೆ ಬಂದು ತನ್ನ ಜೋಳಿಗಿಗಳನ್ನ ಒಂದು ಮೂಲಿಗಿಟ್ಟು, ತಲೀಗೆ ಸುತ್ತಿಕಂಡಿದ್ದ ರುಮಾಲನ್ನ ತಲೀಲಿಂದ ತೆಗದು ಉಸ್ಸಪ್ಪ ಅಂತೇಳಿ ಒಂದು ಗ್ವಾಡಿಗೆ ಆತುಕಂಡು ಕುಂತ್ಕಂಡು ಒಂದು ಬೀಡಿ ಸೇದುಷ್ಟೊತ್ತಿಗೆ ಬೆಳಗಿನ ಜಾವ ಐದುವರೆ ಆಗಿರತೈತಿ. ಅವಾಗ ಗುಡಿಲಿಂದ ಎದ್ದು ಸೀದಾ ಬಸ್ ಸ್ಟ್ಯಾಂಡಿಗೆ ಬಂದು ಅಲ್ಲಿರಾ ಹೋಟ್ಲಗುಳಾಗ ಒಂದು ಚಾ ಕುಡುದು ವಳ್ಳಿ ಮತ್ತದಾ ಗುಡಿಗೆ ಹೋಗಿ ತನ್ನ ನಿಜ ಕಾಯಕಕ್ಕ ತಯಾರಿ ನಡಿಸ್ತಾನ. ಈ ಸಿದ್ದಯ್ಯ ತನ್ನ ಕಾಯಕಕ್ಕ ನಡಿಸಾ ತಯಾರಿನಾ ಒಂದು ದೊಡ್ಡ ಹಬ್ಬ ನೋಡಿದಂಗಾಕೈತಿ ಬಿಡ್ರಿ. ಮದ್ಲು ತಾನು ತೊಟ್ಟಕಂಡಿರಾ ಖಾವಿನ ಒಮ್ಮಿ ನೋಡಿಕಂತಾನ. ಆಮ್ಯಾಲ ತನ್ನ ಕಿವಿಗೆ ರುದ್ರಾಕ್ಷಿ ಝುಮುಕಿನಾ ಹಾಕ್ಕೋತಾನ, ತನ್ನ ಕೊಳ್ಳಾಗಿನ ಮಣಗಟ್ಟಲೆ ಇರೋ ರುದ್ರಾಕ್ಷಿ ಸರಗಳನ್ನ ಎಲ್ಲವ್ನೂ ನೀಟಾಗಿ ತನ್ನ ಖಾವಿ ಹೊರಗ ಕಾಣಂಗ ಹಾಕ್ಕೊತಾನ. ಆಮ್ಯಾಲೆ ಮಖದ ತುಂಬಾ ತೆಳ್ಳಗ ಕಾಣಂಗ ಅಂದ್ರ ಲೈಟಾಗಿ ಕಾಣುವಂಗ ವಿಭೂತಿನ ತಿಕ್ಕೋತಾನ. 
ಒಂದು ಲೆಕ್ಕಕ್ಕ ಹೇಳಬೇಕಪಾ ಅಂದ್ರ ವಿಭೂತಿ ಪುಡಿಯೊಳಗಾ ಮಖಾ ತ್ವಳಕಂಡನೇನಾ ಅನ್ನಂಗ ಕಾಣತಿರತೈತಿ. ಆಮ್ಯಾಲ ತನ್ನ ಹಣಿ ಮ್ಯಾಗ ಮೂರು ಬೊಳ್ಳಿಲಿಂದ ಹಣಿತುಂಬಾ ವಿಭೂತಿ ಹಚ್ಗೋತಾನ. ತನ್ನ ಮೂಗಿನ ನೇರ ನಡೋ ಹಣಿಯೊಳಗ ರುಪಾಯಿಯಷ್ಟು ಅಗಲಾ ಕರೀ ಬಣ್ಣದ ಕುಂಕುಮ ಹಚ್ಕೋತಾನ. ಅದು ಕರೀ ಕುಂಕುಮ ಅಲ್ರಲೇ ಅಂಜನ ಅದು ಅಂತ ವಾದ ಮಾಡೋರೂ ಅದಾರ. ಆಮ್ಯಾಲೆ ಕಣ್ಣಿನ ತೆಳಾಗಿರೋ ಬುರುಡೆ ಮೂಳೆಯ ದಿಬ್ಬಕ್ಕ ಗುಲಾಬಿ ಬಣ್ಣದ ಕುಂಕುಮಾನ ತೆಳ್ಳಗ ಸೂರ್ಯ ಚಂದ್ರನಂಗ ಎರಡೂ ಕಡಿ ಹಚ್ಕೋತಾನ. ಕೈ ತುಂಬಾ ಸಿಲ್ವರ್ ಆಭರಣ, ಕಾಲಿಗೆ ಎಂಥದ್ದೋ ಗೆಜ್ಜಿ, ಹಿಂಗ ಎಲ್ಲಾ ಸಿಂಗಾರ ಮುಗದ ಮ್ಯಾಗ ತನ್ನ ತಲೀಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಂಡು ತನ್ನ ಜೋಳಿಗಿಯೊಳಗಿರೋ ನೌಲು ಗರಿಯೊಂದನ್ನ ಸಿಕ್ಕಿಸಿಕೋತಾನ. ಆಮ್ಯಾಲ ಶಂಖವನ್ನ ತಗೊಂಡು ತನ್ನ ಜೋಳಿಗೆಗಳನ್ನ ಹೆಗಲಿಗೆ ಹಾಕ್ಕೊಂಡು ಊರ ಕಡಿಗೆ ಮಖಾ ಮಾಡಾಷ್ಟತ್ಗೆ, ಮುಳಾಮುಂಜಾಲೆ ಅನ್ನೋ ಮಬ್ಬು ಮಬ್ಬು ಬೆಳಕು ಊರತುಂಬಾ ಚೆಲ್ಲಿರತೈತಿ.

ಹಂಗ ನೋಡಬೇಕಪಾ ಅಂದ್ರ, ಈ ಸಿದ್ದಯ್ಯ ಊರಾಗಿನ್ನ ಎಲ್ಲರ ಮನಿಗುಳಿಗೆ ಹೋಗಿ ಶಂಖ ವೂದಿ ಮನ್ಯಾರು ನೀಡಿದ್ದನ್ನ ಜೋಳಿಗಿಗೆ ಹಾಕಿಸಿಕೊಂಡು ಬರ್ತಾನ. ಆದ್ರ ಸವತ್ತಿನಾಗ ಸುಡುಗಾಡಾಗ ಯಾವ್ಯಾವೋ ಆತ್ಮಗಳು ತಮ್ಮತಮ್ಮ ಮನಿತನದ ಕಥಿಗಳನ್ನ ಹೇಳಿರ್ತಾವಂತೆಲ್ಲಾ, ಅಂಥಾ ಮನಿಮುಂದೆ ನಿಂತ್ಕಂಡು 'ನಿಮ್ಮ ಮನಿಯಾಗ ಇನ್ನು ಇಷ್ಟು ದಿನದಾಗ ಇಂಥಾದ್ದೊಂದು ಕಾರ್ಯ ನಡೀತೈತಿ' ಅಂತ ಏನೇನೋ ಹೇಳ್ತಾನ. ಅವಾಗ ಅಂಥಾ ಮನಿಯೋರು, ಸಿದ್ದಯ್ಯ ಕೊಟ್ಟ ಸುದ್ದಿ ಒಳ್ಳೇದಾಗಿದ್ರ ಖುಷಿಲಿಂದ ಹತ್ತಿಪ್ಪತ್ತು ರುಪಾಯಿ ಕೊಟ್ಟು ಒಂದು ಮೊರದ ತುಂಬಾ ಕಾಳು ಕಡಿ ಕೊಡ್ತಾರ. ಆದ್ರ ಒಂದುವೇಳೆ ಅವನೇನಾದ್ರೂ ಕೆಟ್ಟ ಸುದ್ದಿ ಕೊಟ್ಟಿದ್ರ ದುಃಖದಿಂದ ಆ ಘಟನಿಲಿಂದ ತಪ್ಪಿಸ್ಕಣಾಕ ಏನು ದಾರಿಗುಳು ಅದಾವು ಅಂತ ಕೇಳಿಕಂಡು ಬ್ಯಾಸ್ರಾ ಮಾಡಿಕಂಡು ಐದತ್ತು ರುಪಾಯಿ ಕೊಟ್ಟು ಮನ್ಯಾಗಿನ ಹಳೇ ಅರಿವಿ ಕೊಟ್ಟು ಕಳಿಸ್ತಾರ.
ಈ ಸಿದ್ದಯ್ಯ ಬರೀ ಹಿಂಗ ಆತ್ಮಗಳು ಹೇಳಿದ ಕತಿ ಹೊತ್ಕಂಡು ಮನಿ ಮನಿ ತಿರುಗಾದಷ್ಟಾ ಅಲ್ಲದ, ಹರೇದ ಹುಡ್ರು ಓಣ್ಯಾಗ ಸೇರಿಕಂಡು ಇತನ್ನ ಕರದು ನಮಿಗೊಂದು ಆಟ ತೋರ್ಸು ಅಂತ ಕೇಳಿದ್ರ ತನ್ನ ಜೋಳಿಗಿಯೊಳಗ ಇಟ್ಟುಕೊಂಡಿರಾಂತ ಐದಾರು ಬ್ಯಾರೆ ಬ್ಯಾರೆ ಸೈಜಿನ ನುಣುಪು ಕಲ್ಲುಗಳನ್ನ ಬಾಯಿಗೆ ಹಾಕ್ಕೊಂಡು ನುಂಗಿ ಅವುನ್ನ ಮತ್ಯ ಹೊಟ್ಟಿಲಿಂದ ಕಡೀಗೆ ತೆಗದು ತೋರಸಾದು, ಬರೈ ಕೈನ ಗಾಳಿಯೊಳಗ ಆಡಿಸಿದಂಗಾ ಮಾಡಿ ಎನಾರ ಒಂದು ಪವಾಡದ ವಸ್ತುಗಳನ್ನ ಕೊಡ್ತಾನ. ಆಮ್ಯಾಲ ಅವರಿಂದ ಒಂದಿಷ್ಟು ರ್ವಕ್ಕ ತಗೊಂಡು ಮುಂದಕ್ಕೊಕ್ಕಾನ. ಹೊತ್ತು ನೆತ್ತಿಗತ್ತವರಿಗೂ ಊರಾಡಿ ಆಮ್ಯಾಲ ತನ್ನ ಜೋಳಿಗಿಯೊಳಗಿನ ಕಾಳನ್ನ ಅಲಲೇ ಯಾವುದರಾ ಕಿರಾಣಿ ಅಂಗಡೀಗೆ ಹಾಕಿ ಸಿಕ್ಕೊಷ್ಟು ರ್ವಕ್ಕ ತಗೊಂಡು ಮತ್ಯ ಹನ್ಮಪ್ಪನ ಗುಡಿಗೆ ಹೋಗಿ ತನ್ನ ವೇಶಾನೆಲ್ಲಾ ಬಿಚ್ಚಿಟ್ಟು ಹೋಟ್ಲಿಗೆ ಹೋಗಿ ಊಟಮಾಡಿ ವಿಶ್ರಾಂತಿ ತಗಾಂತಾನ. ಇದು ಸುಳ್ಳಾಪುರದಾಗ ಸಿದ್ದಯ್ಯನ ದಿನನಿತ್ಯದ ಕಾಯಕ ಐತಿ.
ಇಂಥಾ ಸಿದ್ದಯ್ಯ ಇರೋ ಊರಾಗ ಆ ಒಂದು ಮನಿ ಐತಿ. ಅದು ಊರಾಗ ಒಂದು ಮಟ್ಟಿಗಿನ ದೌಲತ್ತು ನಡಿಸೋಂತ ಮನಿನೂ ಹೌದು. ಅವ್ರ ಮನಿಯೊಳಗಿನ ಆಳುಗುಳಾ ದೊಣ್ಣಿ ನಾಯಕರುಗುಳು ಮೆರದಂಗ ಮೆರಿತಾರ ಇನ್ನು ಮನಿ ಯಜಮಾನನ ದೌಲತ್ತು ಹೆಂಗಿರಬೋದು ನೀವಾ ಗೆಸ್ ಮಾಡ್ಕೋರಿ. ಗಂಡ ಹೆಂಡ್ತಿ ಬಿಟ್ರ, ಆ ಮನಿಯಾಗ ಯಜಮಾನ್ರು ಅಂತ ಯಾರೂ ಇದ್ದಿಲ್ಲ. ಕೀರಪ್ಪ ನಾರಮ್ಮ ಅಂತ ಔರೆಸ್ರು. ನಾರಮ್ಮ ಬಾಳ ಒಳ್ಳೇಕಿ. ತನ್ನ ಮನಿಯೊಳಗಿನ ಎಂಟು ಜನ ಆಳುಗಳನ್ನ ಸ್ವಂತ ಮಕ್ಕಳಂಗ ಕಾಣಾಕಿ. ಕಷ್ಟ ಅಂತ ಬಂದೋರಿಗೆ ಕೀರಪ್ಪನ ಕಳವಿಲೆ ತನ್ನ ಯೋಗ್ತಿಯನುಸಾರ ಸಾಯಾ ಮಾಡ್ತಿದ್ಳು. ಈ ಮನಿಯಾಗ ಇದ್ದ ಕೀರಪ್ಪನ ತಾಯಿ ತಾನು ಇನ್ನು ಉಳಿಯೋದಿಲ್ಲ ಅನ್ನಂಥಾ ಖಾತ್ರಿಯೊಳಗ ತನ್ನ ಮಗನ್ನ ಮದ್ವಿ ಮಾಡಿ ಸಿವನ ಪಾದ ಸೇರಿದ್ಲು.

ನಾರಮ್ಮನ ನೋಡಾಕ ಕೀರಪ್ಪ ಹೋದಾಗ ಇವನ ಠೀವಿ, ಗತ್ತು-ದೌಲತ್ತು ನೋಡಿ ಮನುಷ್ಯ ಬಾಳ ಒಳ್ಳೇನಿರಬೇಕು, ಗರಡಿಮನ್ಯಾಗ ಪಳಗಿದ ಹೆಬ್ಬುಲಿ ಇದ್ದಂಗದಾನ. ಇಂಥಾ ವರ ಸಿಗಾಕ ನಾರಮ್ಮ ಪುಣ್ಯ ಮಾಡ್ಯಾಳ ಅಂತ ಅಕಿ ಗೆಳತೀರು ನಕಲಿ ಮಾಡಿದ್ರು. ಅವಾಗೆಲ್ಲಾ ನಾರಮ್ಮ ಹಿರಿ ಹಿರಿ ಹಿಗ್ಗಿ ತಲಿ ಎತ್ತಿ 'ಹೆಂಗದನ ನನ್ನ ಗಂಡ ?' ಅಂತ ಉಬ್ಬುಬ್ಬಿ ಮಾತಾಡತಿದ್ಲು. ಆದ್ರ ಯಾವಾಗ ನಾರಮ್ಮನ ನೊಡಿದ ಕೂಡ್ಲ ಕನ್ಯ ಇಷ್ಟ ಆಗೈತಿ ಅಂತ ಒಪ್ಪಿಗಿ ಕೊಟ್ಟು ಮೂರಾ ತಿಂಗಳದಾಗ ಲಗ್ಮ ಮಾಡಿಕಂಡು ತನ್ನ ಮನಿಗೆ ಕರಕಂಡು ಬಂದು ಆರ ತಿಂಗಳಿಗೆ ಕೀರಪ್ಪನ ಅವ್ವ ತೀರಿಕಂಡೋದ್ಲು. ಯಾವಾಗ ಮನ್ಯಾಗಿರಾ ಒಂದು ಯಜಮಾನಿನೂ ಇಲ್ಲದಂಗಾತೋ ಆ ಮನಿಯ ಯಜಮಾನಿಕಿ ಇದ್ದೊಬ್ಬ ಮಗ ಈ ಕೀರಪ್ಪನಾ ಅರವತ್ತೆಪ್ಪತ್ತು ಎಕರಿ ಹೊಲ, ಗದ್ದಿ, ತ್ವಾಟ, ಮನಿತುಂಬಾ ದನಗುಳು, ತಿಜಿರಿತುಂಬಾ ರ್ವಕ್ಕ, ಬಂಗಾರ, ಎಲ್ಲದಕ್ಕೂ ಈತನಾ ಯಜಮಾನ ಆಗೋದ. ಅವಾಗ ನಾರಮ್ಮಗ ಗೊತ್ತಾತು ನೋಡ್ರಿ ಕೀರಪ್ಪನ ಅಸಲೀಯತ್ತು.
ಕೀರಪ್ಪ ಗರಡಿ ಮನಿಯಾಗ ಪಳಗಿದ ಹುಲಿ ಅನ್ನೋದು ಎಷ್ಟು ದಿಟವಿತ್ತೋ, ಊರಾಗಿನ ನಾಕಾರು ಗುಡುಸಿಲುಗುಳಾಗ ಬಿದ್ದೇಳಾ ನಾಯಿಯಂಥೋನೂ ಹೌದು. ಅಂತ ಒಂದಿನ ನಾರಮ್ಮಗ ಗೊತ್ತಾಗೋಯ್ತು. ಅವತ್ತು ಮದ್ಯಾಹ್ನದ ಹೊತ್ತಿನಾಗ ಮಜ್ಗಿ ಕೇಳಾನು ಅಂತ ಬಂದಿದ್ದ ಬಡವಿಯೊಬ್ಬಾಕಿ ಕ್ವಳ್ಳಾಗ ತನ್ನ ಮನಿ ತಿಜುರಿಯೊಳಗಿದ್ದ ಮನಿದೇವ್ರ ಪದಕದ ಬೆಳ್ಳಿ ಸರ ಕಂಡಿತ್ತು. ಈ ವಿಚಾರದ ಸತ್ಯ ತಿಳಕಣಾಕ ನಾರಮ್ಮ ತಮ್ಮ ಮನಿಯಾಳುಗಳನ್ನ ಕೇಳಿದಾಗ ಹೆತ್ತವ್ವನ ಎದ್ರು ಹಸು ಮಕ್ಳು ಸತ್ಯ ಹೇಳಿದಂಗ ಕೀರಪ್ಪನ ಎಲ್ಲಾ ಹರಾಮಿ ಕೆಲಸಗಳನ್ನೂ ಹೆಳಿದ್ರು.. ಕಿನಗಳು ಸರಿತಾನಾ ಇದ್ವು. ಕೀರಪ್ಪ ತೀರಾ ತನ್ನ ಹೆಂಡ್ತಿಯೊಬ್ಬಾಕಿನಾ ಬುಟ್ಟು ರಾತ್ರೆಲ್ಲಾ ಬಿಡಾಡಿಯಂಗ ಹರಾಮಿತನ ಮುಂದುವರಿಸಿದ್ನೋ ಅವತ್ತು ನಡುಮನಿಯೊಳಗ ನಿಂದ್ರಿಸಿ ಕೇಳಿದ್ಲು ನಾರಮ್ಮ. 'ಕಟ್ಟಿಕೊಂಡಾಕಿನ ಇಂಥಾ ದೊಡ್ಡ ಮನಿಯಾಗ ಒಬ್ಬಾಕಿನಾ ಬುಟ್ಟು ನಿನ್ನ ಗಂಡಸ್ತನಾನಬಡವ್ರು, ಅಮಾಯಕ್ರು ಮ್ಯಾಗ ತೋರಿಸ್ತಿಯಲ್ಲ ಚೂರು ನಾಚಿಕಿ ಅಕಯತೇನು ನಿನಿಗ್ಯ ?' ಯಾವಾಗ ಮೂಕ ಬಸವಣ್ಣನಂಗ ಇದ್ದ ಹೆಂಡ್ತಿ ಬಾಯಿಂದ ಇಂಥಾ ಮಾತು ಕೇಳಿದನೋ, ಕೆರಳಿದ ಕೀರಪ್ಪ, ನಾರಮ್ಮನ ದನಕ ಬಡದಂಗ ಬಡುದು, 'ನಾನು ಇರಾದ ಹಿಂಗ, ನನಿಗೆ ಬೇಕಾದಾಗ ಇಲ್ಲಿ ಮಕ್ಕೋತಿನಿ ಬ್ಯಾಡಾದ್ರ ನಾ ಎಲ್ಲೆರಾ ಮಕ್ಕೋಳ್ಳಿ ಅದನ್ನೆಲ್ಲಾ ನೀ ಯಜಮಾನಕಿ ಮಾಡಿದ್ರ ಕ್ವಳ್ಳಾಳ ತಾಳಿ ಹರದು ನನಿಗ್ಯ ಬರದುಕೊಟ್ಟು ಮನಿಬುಡು' ಅಂತೇಳಿ ಹೊರಗೋಗಿದ್ದ. ಅವತ್ತಿನಿಂದ ಕೀರಪ್ಪ ತನ್ನ ಮನಿಯೊಳಗ ಇರ್ತಾಇದ್ದುದು ಯಾವಾಗ್ಲೋ ಏನೋ, ಇದು ಬರೊಬ್ಬರಿ ಮೂರು ವರ್ಸ ನಡೀತು. ಊರಾಗ, ತನ್ನ ತೌರ ಮನಿಯಾಗ ಎಲ್ಲರೂ ನಾರಮ್ಮನ ಒಡಲು ಯಾಕಾ ತುಂಬುವಲ್ದು ಅಂತ ಮಾತಾಡ್ಕಂತಿದ್ರು.. ಓಸು ಮಂದಿ ನಗಾಡಿದ್ರು. ಹೆತ್ತೋರು ಸಮಸ್ಯೆ ಏನರಾ ಐತೇನ್ವಾ ಅಂತ ಕೆಳಿದಾಗ ತನ್ನ ಯಾವ ಕಷ್ಟಾನೂ ಹೇಳಿಕಣದೇ, ತಾನಾ ಯಾವುದಾ ವ್ರತಾ ಮಾಡಾಕತ್ತೀನಿ ಅಂತೇಳಿ ಕಾಲ ಕಳಿತಿದ್ಳು. ತನ್ನ ಗಂಡ ತನಿಗೆ ಮಾಡಾ ಅವಮಾನ, ಸುತ್ತು ಉರಾರು ಮಾಡಾ ಅವಮಾನ, ಎಲ್ಲದರಿಂದ ಬೇಸತ್ತುಬಿಟ್ಟಿದ್ಲು. ಇಂಥಾ ಸಂದರ್ಭದೊಳಗ ಶಂಖ ಊದಿಕೋತ ನಾರಮ್ಮನ ಮನಿಯ ಮುಂದೆ
ಸಿದ್ದಯ್ಯ ನಿಂತಿದ್ದ !
ಹಂಗ ಮನಿಮುಂದೆ ನಿಂತಿದ್ದ ಸಿದ್ದಯ್ಯ ಅವತ್ತು ರಾತ್ರಿ ನಾರಮ್ಮಳ ಅತ್ತಿ ಆತ್ಮ ಸುಡುಗಾಡಾಗ ಹೇಳಿದ ಕೆಟ್ಟ ಸುದ್ದಿನ ತೊದಲಿಕಂತ ಹೇಳಿದ್ದ. ಅದು ಏನಂದ್ರ, ಇನ್ನೊಂದು ವಾರದಾಗ ಕೀರಪ್ಪ ಸಾಯೋದು ಗ್ಯಾರೆಂಟಿ. ಸುದ್ದಿ ಕೇಳಿದ ನಾರಮ್ಮಗ ಸಿಡಿಲು ಬಡದಂಗಾತು. ಔನು ಎಂಥೋನಾ ಆಗಿರ್ಲಿ. ತನ್ನ ಗಂಡನ್ನ ಉಳಿಸ್ಕಣಾಕ ಇರಾ ದಾರಿಗಳನ್ನೆಲ್ಲಾ ಹುಡುಕಿದ್ಲು. ತನ್ನ ಗಂಡಗ 'ಇನ್ನೊಂದು ವಾರ ನೀ ಮನ್ಯಾಗಿರು. ಆಮ್ಯಾಲ ನಿನಿಗೆ ತಿಳದಂಗ ನೀ ಬದುಕು. ಅಲ್ಲಿವರಿಗೂ ಬೇಕಾರ ಆ ನನ್ನ ಸವತೀರನ್ನ ನನ್ನ ಮನಿಯೊಳಗಾ ಕರಕೊಂಡು ಬಾ. ದಿನಾಲು ನಾ ಒಬ್ಬಾಕೆ ಮಕ್ಕೋತಿದ್ದ ದೊಡ್ಡ ಮಂಚನಾ ನಿಮಿಗ್ಯಾ ಬಿಟ್ಟುಕೊಟ್ಟು ನಾ ದೇವ್ರ ಕ್ವಾಣ್ಯಾಗ ಮಕ್ಕೋತೀನಿ' ಅಂತ ಕಾಡಿದ್ಳು. ಆದ್ರ ಹೆಂಡ್ತಿಯ ಇಂತಾ ಬದ್ಲಾವಣಿ ಮಾತಿನ ಮ್ಯಾಲಾ ಅನುಮಾನಗೊಂಡ ಕೀರಪ್ಪ.
'ರೆಡ್ ಹ್ಯಾಂಡ್ಆಗಿ ಪೊಲೀಸ್ರಿಗೆ ಹಿಡಿದು ಕೊಡಾಕಮತ ಮಾಡೀದೇನು? ನಾನು ಹೆಂಗ ಬದುಕಬೇಕು ಅನ್ನಾದು ನನಿಗೆ ಗೊತ್ತೈತಿ ನಿನ್ನ ಕಕೆಲ್ಸ ಏನೈತಿ ಅದನ್ನ ನೋಡ್ಕ ಹೋಗು' ಅಂತೇಳಿದ್ದ ಕೀರಪ್ಪ. ಅವತ್ತೊಂದಿನ ಊರಾಗಿನ್ನ ಒಂದು ಬಡ ಒಂಟಿ ಹೆಣ್ಣಿನ ಗುಡಿಸಲಾಗ ಸತ್ತೋಗಿದ್ದ. ಅವನ ಮೈಯೆಲ್ಲಾ ಹಸಿರಾಗಿತ್ತು. ಇಡೀ ಊರಿಗೂರಾ ಕೀರಪ್ಪಗ ರಾತ್ರಿ ಹಾವು ಕಡದೈತಿ ಅಂತ ನಂಬಿದ್ರು. ಸುದ್ದಿ ತಿಳದ ನಾರಮ್ಮ ಹುಚ್ಚಿಯಂಗಾದ್ರೂ ಹೋಳಿ ಕಾಮ ಉರುದಂಗ ಉರುದು ನನ್ನ ಒಡಲಾಗೂ ಬೆಂಕಿ ಸುರುದು ಹೋಗ್ಯಾನ ಇನ್ನು ನಾನು ಜಾಣಿ ಆಗ್ಲಿಲ್ಲಾಂದ್ರ ಈ ವಂಶದ ಮಾನ ಮರ್ಯಾದಿ ಎಲ್ಲಾನೂ ಹರಾಜಾಗಿ. ದೊಡ್ಡ ಮನಿತನವೊಂದು ಸರ್ವನಾಶ ಅಕೈತಿ ನಾ ಅದ್ಕ ಅವಕಾಶ ಕೊಡಬಾರ್ದು ಅಂತ ಡಿಸೈಡ್ ಮಾಡಿ ಆ ಗುಡಿಸಲಿನಿಂದ ಹೆಣಾನ ತನ್ನ ಮನೀಗೆ ತನ್ನ ಮನಿಯಾಳುಗುಳ ಕುಟಾಗ ಸಾಗಿಸಿ ಮುಂದಿನ ಕಾರ್ಯನೆಲ್ಲಾ ಮಾಡಿ ತಾನು ವಿಧಿವಿ ಆಗಿ ಕೀರಪ್ಪಗ ಮಣ್ಣು ಮಾಡಿ ಬಂದಿದ್ಳು. 
ಗಂಡ ತೀರಿಕಂಡ ಒಂದು ವಾರ ಸುಮ್ಮನಿದ್ದ ನಾರಮ್ಮ ಆಮ್ಯಾಲ ತನ್ನ ಗಂಡನ ಸಾವು ಹೆಂಗ ಬಂತು ಅಂತ ಪತ್ತೆ ಹಚ್ಚಾಕ ಮನಿ ಆಳುಗುಳಿಗೆ ಹೇಳಿದ ಮೂರಾ ದಿನಕ್ಕ ಹೊರಕ ಬಿತ್ತು ಸತ್ಯ. ಕೀರಪ್ಪನ ಆ ಸಾವಿನ ಅಸಲಿಯತ್ತು ಏನಿತ್ತಪಾ ಅಂದ್ರ ಈ ಕೀರಪ್ಪ ಊರಾಗ, ಅದ್ರಾಗೂ ಒಂದಾ ಏರಿಯಾದಾಗ ನಾಕು ಹೆಣ್ಮಕ್ಕಳ ಸಂಗ ಮಾಡಿದ್ದ. ಅದ್ರಾಗ ಹೊಟ್ಟಿಪಾಡಿಗೆ, ಬಡತನಕ್ಕ ಬಳಲಿದೋರು ಕೀರಪ್ಪನ ಸವಾಸ ಮಾಡಿದ್ರು. ಅದ್ರಾಗ ಇಬ್ರು ಹೆಣ್ಮಕ್ಕಳ ನಡುಕು ಇದಾ ಕೀರಪ್ಪನ ವಿಚಾರದಾಗಾ ಜಗಳ ನಡದಿತ್ತಂತೆ. ಆ ಜಗಳ ತೀರಾ ವೈಷ್ಯಮ್ಯಕ್ಕೋಗಿ ನನಿಗ್ಯ ದಕ್ಕದ ಸೌಕಾರ ನಿನಿಗ್ಯಾಕ ಬೇಕಲೇ ಅಂತೇಳಿ ಒಬ್ಬಾಕಿ ಅವತ್ತು ಉಣ್ಣಾ ಅನ್ನದಾಗ ಇಸಾಕೊಟ್ಟಿದ್ಲಂತ್ಯ. ಸುದ್ದಿ ಕೇಳಿದ ನಾರಮ್ಮ ಬಾಳ ನೊಂದಕಂಡು ಆ ಹೆಣ್ಮಗಳನ್ನ ಮನಿಗೆ ಕರದು 'ಸುಮ್ಮನ ಪೊಲೀಸ್ರಿಗೆ ಹೋಗಿ ಶರಣಾಗು ಇಲ್ಲಾಂದ್ರ ನಡಿಯಾ ಕತೀನಾ ಬ್ಯಾರೆ ಐತಿ ನೋಡು' ಅಂತ ಸಿಟ್ಟಿಲೆ ಹೇಳಿದ ಮೂರ ತಾಸಿನೊಳಗ ಆ ಹೆಣ್ಮಗಳು ತನ್ನ ತಪ್ಪು ಒಪ್ಪಿಗಂಡು ಜೈಲಿಗೋಗಿ ಬಿಟ್ಲು.

 ಈ ಸತ್ಯದ ಘಟನಿ ತಿಳದ ಇಡೀ ಊರಾಗಿನ ಜನ ನಾರಮ್ಮನ ಒಳ್ಳೇ ಗುಣಕ್ಕ ಮರುಗಿದ್ರ, ಅಕಿಯ ದೈರ್ಯಕ್ಕ ಮೆಚ್ಚಿದ್ರು. ಅವತ್ತಾ ಊರಿಗೆ ಬಂದಿದ್ದ ನಾರಮ್ಮನ ಹೆತ್ತೋರು ತಮ್ಮ ಇದ್ದೊಬ್ಬ ಮಗಳ ಬಾಳು ಹಿಂಗಾತಲ್ಲಾ, ತನ್ನ ರೊಕ್ಕದ ಸೊಕ್ಕಿಗೆ ಕೀರಪ್ಪ ತನ್ನ ಮಗಳ ಬಾಳು ಹಾಳು ಮಾಡಿದ್ದಲ್ಲದಾ, ತನ್ನ ವಂಶಾನ ಸರ್ವನಾಶ ಮಾಡಿಕಂಡನಲ್ಲಾ ಅಂತ ಗೋಳಾಡಿ ಅಳೋವಾಗ ಕಂಬಕ್ಕ ಆತುಕೊಂಡು ಕುಂತಿದ್ದ ನಾರಮ್ಮ 'ಯವ್ವಾ ಈಗ ಇತ್ತೀಚಿಗೆ ಆತ (ಗಂಡ) ಒಂದೀಟು ಹಾದಿಗೆ ಬಂದಿದ್ನಬೇ ಇನ್ನೇನು ಸರಿ ಹೊಕ್ಕಾನ ಅನ್ನಷ್ಟತ್ಗೆ ಹಿಂಗಾತು, ಆದ್ರ ನೀವು ತಿಳ್ಕಂಡಂಗ ಈ ವಂಶ ಇಲ್ಲಿಗೇ ಸರ್ವನಾಶ ಆಗಲ್ಲ ಯಾಕಂದ್ರ' ಅಂತೇಳಿ ಅವ್ವನ ಮಾತ್ರ ಒಳಾಕ ಕರದು 'ಯವ್ವಾ ನನಿಗೆ ಮುಟ್ಟು ನಿಂತೈತಿ' ಮೆಲ್ಲಕ ಹೇಳಿದ್ಲು !
ವಿಷ್ಯ ತಿಳದು ಹಿಗ್ಗಿಬಿಟ್ಲು ತಾಯಿ. ಅವತ್ತಾ ವಿಷ್ಯ ಓಣ್ಯಾಗಿನ್ನ ಜನಕ್ಕೆಲ್ಲಾ ಮುಟ್ಟಿತು. ಮನಿಯ ಅಕ್ಕ ಪಕ್ಕದೋರು ಬುಡಾ ನಮ್ಮೌವ್ವನಾ ದೇವ್ರು ಕೊನಿಗಾಲದಾಗ ಕೈ ಬಿಡಲಿಲ್ಲ ಅಂತ ಎಲ್ಲರೂ ಸಮಾಧಾನಗೊಂಡಿದ್ರು. ಯಾಕಂದ್ರ ನಾರಮ್ಮಳ ಗುಣಕ್ಕ ಎಲ್ಲರೂ ತಲಿಬಾಗಿದ್ರು. ಈ ಘಟನೆಯಾದಮ್ಯಾಗ ಮೊದ್ಲಾ ಒಂದು ನಿಧರ್ಾರಕ್ಕ ಬಂದಿದ್ದ ನಾರಮ್ಮ ಅವತ್ತೊಂದು ಶನಿವಾರ ಅಪರಾಳದ ಹೊತ್ತಿನಾಗ ಹನ್ಮಪ್ಪನ ಗುಡಿಗೋಗಿ ಅಲ್ಲಿ ನಿದ್ದಿಯೊಳಗಿದ್ದ ಸಿದ್ದಯ್ಯನ ಎಬ್ಬಿಸಿ ತನಗ ಎದುರಾಗಿರಾ ಕಷ್ಟಕ್ಕ ಪರಿಹಾರ ಕೇಳಿದ್ಲು. ಸಪೂರ ಸುಂದರಿಯ ದಿಟ್ಟತನದ ನಿಲುವಿಗೆ ತಲೆಬಾಗಿದ್ದ ಸಿದ್ದಯ್ಯ. ಆ ಶನಿವಾರ ಹನ್ಮಪ್ಪನ ಜ್ಯೋತಿಯೊಂದು ಮದ್ಯಾಹ್ನದೊತ್ತಿನಾಗಾ ಬೆಳಗಿ ಗರ್ಭಗುಡಿಯೊಳಗಿನ್ನ ಕತ್ತಲನ್ನ ಓಡಿಸಿತ್ತು. ಸಿದ್ದಯ್ಯನ ಮುಂಗೈಗೊಂದು  ನಾಲ್ಕು ತ್ವಲಿಯ ಬಂಗಾರದ ಕಡಗ ಬಂದಿತ್ತು.  ಆಮೇಲಿನ ಕೆಲವು ತಿಂಗಳುಗಳಲ್ಲಿ ನಾರಮ್ಮಳ ಸೀಮಂತ ಕಾರ್ಯ ನಡೆದಿತ್ತು. ಆಮ್ಯಾಲೆ ನಾರಮ್ಮಗೊಂದು ಗಂಡುಮಗು ಹುಟ್ಟಿತ್ತು. ಮತ್ತೂ ಕೆಲವು ತಿಂಗಳುಗಳು ಕಳೆದವು. ಮಗುವಿನೊಂದಿಗೆ ತನ್ನ ಗಂಡನ ಮನಿಗೆ ಬಂದ ನಾರಮ್ಮ ಹೊಸಾ ಜೀವನಕ್ಕ ನಾಂದಿ ಹಾಡಿದ್ಲು. ಈಗ ಬೆಳಗಿನ ಜಾವ ಸಿದ್ದಯ್ಯನ ಶಂಖನಾದಕ್ಕೆ ಬೀದಿಯಲ್ಲಿನ ನಾಯಿಗಳು ಬೊಗಳೋಕ್ಕೆ ಶುರು ಮಾಡಿದ್ರ, ನಾರಮ್ಮಳ ಮಗ್ಗುಲು ದೊಡ್ಡ ಮಂಚದ ಮ್ಯಾಗ ಮಕ್ಕೊಂಡ ಮಗು ಕಿಲಿಕಿಲಿ ನಗುತ್ತಿತ್ತು. 




 

Saturday, 3 August 2013

ಹಸಿವು: my imagination 09

ಹಸಿವು: my imagination 09:   ಬನ್ನಿ ಹಬ್ಬ 'ಹೊತ್ತಾಕೈತಿ ಹೊಗಲೇ, ತಲಿ ಎರಕಂಡು ಬಂದು ದೇವ್ರಿಗೆ ಎಲ್ಡು ಉದ್ದಿನಕಡ್ಡಿ ಹಚ್ಚು ಅಂತ ಅವಾಗಿನಿಂದ ಹೇಳಕತ್ತೀನಿ,ಎದ್ದಳಕಾ ತಯಾರಿಲ್ಲ ನೋಡ್ರಬೇ...

Friday, 2 August 2013

my imagination 09

 ಬನ್ನಿ ಹಬ್ಬ
'ಹೊತ್ತಾಕೈತಿ ಹೊಗಲೇ, ತಲಿ ಎರಕಂಡು ಬಂದು ದೇವ್ರಿಗೆ ಎಲ್ಡು ಉದ್ದಿನಕಡ್ಡಿ ಹಚ್ಚು ಅಂತ ಅವಾಗಿನಿಂದ ಹೇಳಕತ್ತೀನಿ,ಎದ್ದಳಕಾ ತಯಾರಿಲ್ಲ ನೋಡ್ರಬೇ. ಏನಾಗಿದ್ದೀತು ಈ ಹುಡ್ಗೀಗ್ಯ ?' ಧ್ವನಿ ಎಲ್ಲೋ ಕೇಳಿದಂಗಾಗಿ ಮೆಲ್ಲಕ ಕಣ್ಣು ತೆಗದ ನೋಡಿದ ಪಾರ್ವತಿ ಮನಿಯ ಬಾಗಲ ಹೊರಾಕ ನೋಡಿದಾಗ ಹೊತ್ತು ಮುಣಿಗಿ ಕತ್ಲಾಗಿತ್ತು. ಮನಿಮುಂದೆ ಹಂದರಕ್ಕ ಹಾಕಿದ್ದ ತೆಂಗಿನ ಗರಿಗಳು ಬಾಡಿದಂಗಾಗಿದ್ರೂ  ತನ್ನ ಹಸುರು ಬಣ್ಣನ ಕಳಕಂಡಿದ್ದಿಲ್ಲ. ಕರೆಂಟು ಇದ್ರೂ ಹಂದರದ ನಡುಕು ಒಂದು ಲಾಟೀನ ಹಚ್ಚಿದ್ರು. ಅದು ಸ್ವಲ್ಪ ಜಾಸ್ತಿ ಉರಿಯಾಕತ್ತಿದ್ಕ, ಅದರ ಪಾವು, ಹೊಗಿಲಿಂದ ಸ್ವಲ್ಪ ಕರ್ರಗಾಗಿತ್ತು. ಮನಿಯ ಒಳಗಾ ಹೆಣ್ಮಕ್ಕಳ ಪಂಕ್ತಿ ನಡದಿತ್ತು. ಮನಿಯ ಹೊರಾಕ ನೋಡಾಕತ್ತಿದ್ದ ಪಾರ್ವತಿ ಮೆಲ್ಲಕ ಯಾರಾ ನನ್ನ ಎಬ್ಬಿಸಿದಂಗಾತಲ್ಲಾ ಅಂತೇಳಿ ನೋಡಿದ್ರ ಎದ್ರಿಗ್ಯ ಅಕಿಯ ಎಂಟು ಗೆಣಕಾರ್ತಿಯರು  ನಕ್ಕೋತ ನಿಂತಿದ್ರು. ಅವರವ್ವ ಒಳಾಕ ಹೋದ್ಲು. ಅವಾಗ ಗೆಣಕಾರ್ತಿಯರ ಪೈಕಿ ಒಬ್ಬಾಕಿ 'ಏನೇ ಮದ್ಯಾಹ್ನಾನಾ ಮಕ್ಕಂಡಿದ್ಯಂತ್ಯ ? ಪಾಡಾತು ಬುಡು' ಅಂತ ನಕ್ಕೋತ ಹೇಳತಿದ್ದಂಗನಾ ಎದ್ದು ಕುಂತ ಪಾರ್ವತಿ ಸುತ್ತ ಬಂದು ಅವರೆಲ್ಲ ಕುಂತಕಂಡ್ರು. ಹಂಗ ನೋಡಬೇಕಪ್ಪಾ ಅಂದ್ರ ಆ ಟೈಂನಾಗ ಪಾರ್ವತಿ ಮಖ ಕೆಂಪಾಗಬೇಕಿತ್ತು. ಆದ್ರ ಅಂಥಾ ಬದ್ಲಾವಣಿನೇನೂ ಯಾರೂ ಕಾಣಲಿಲ್ಲ. ಹೊದ್ದಕಂಡಿದ್ದ ದುಪ್ಪಡಿ ತೆಗದು ಕುಂತಗಂಡ ಪಾರ್ವತಿಗೆ ಇನ್ನೊಬ್ಬ ಗೆಳತಿ, 'ಹೋಗೇ ಗಡಗಡ ಮೈ ತ್ವಕ್ಕಂದು ಬಾ, ನಾವೀಟು ನಿನ್ನ ರೆಡಿ ಮಾಡಾಕು'. ಅಂದಾಗ, ತನ್ನ ಎರಡೂ ಕೈಗಳಿಂದ ಮಖದ ತುಂಬಾ ಹಲ್ಡಿಕಂಡಿದ್ದ ತನ್ನ ಮುಂಗೂದಲನ್ನ ಸರಿಗೆ ಮಾಡಿಕಂಡು ಪಾರ್ವತಿ ಬಚ್ಚಲು ಮನಿಗೆ ಹೋದ್ಲು. ಅಷ್ಟತ್ತಿಗೆಲ್ಲಾ ಬಚ್ಚಲಮನಿಯಾಗ ಬರೊಬ್ಬರಿ ಒಂದು ದೊಡ್ಡ ಬಕೀಟ್ನಾಗ ಸುಡ್  ಸುಡೋ ನೀರು ಹೊಗಿಯಾಡತಿದ್ವು., ಆ ನೀರನ್ನ ನೋಡಿದ ಪಾರ್ವತಿ ಆಕಳಿಸಿಕಂತ ಮತ್ತೊಂದಿಷ್ಟು ತಣ್ಣೀರನ್ನ ಸುರುದು, ನೀರನ್ನ ಮೈ ತ್ವಕ್ಕಣಾ ಹದಕ್ಕ ತಂದಕಂಡು, ತನ್ನ ಮುಡಿಯಾಗ ಬಾಡಿದ್ದ ಮಲ್ಲಿಗಿ, ಕನಕಾಂಬ್ರಿ, ಗುಲಾಬಿ ಹೂಗಳನ್ನ ಹಿಡಕಂಡಿದ್ದ ಏರ್ ಪಿನ್ ತೆಗದು ಹೂವನ್ನ ಬಚ್ಚಲ ಮನಿಯಾಗಿನ ಒಂದು ಗುಣೇದಾಕ ವಗದಳು. ಇನ್ನೂ ಅದಾ ಹಳೇ ನಿದ್ದಿ ಮಂಪರಿನಾಗ ಬ್ರಷ್ ಮಾಡಿದ್ಲು. ಆಮೇಲೆ ಬಕೀಟ್ನಾಗಿಂದ ಒಂದು ಚೊಂಬು ನೀರು ತಗೊಂಡು ತಲಿಮ್ಯಾಗ ಸುರುಕೊಂಡಾಗ ಅಕೀ ತಲಿಮ್ಯಾಗಿಂದ ಹರದಿದ್ದು,
ಗಟ್ಟಿಗಿನ ಅರಿಷಿಣದ ನೀರು !
ಹೌದು. ಪಾರ್ವತಿ ಅದಾ ವಾರ ಮದುವಿಯಾಗಿದ್ದ ಹೊಸ ಮಧುಮಗಳು. ಇವತ್ತು ಅಕಿಯ ಕಡೇ ನೀರಿನ ಕಾರ್ಯ ನಡಿಯಾಕತೈತಿ. ಅಂದ್ರ ಇದು ಪಾರ್ವತಿಯ ಪ್ರಸ್ಥದ ದಿನ. ಅಷ್ಟತ್ತಿಗೆಲ್ಲಾ ಒಣ್ಯಾಗಿನ್ನ ಹೆಣ್ಮಕ್ಕಳೆಲ್ಲಾ ಬಂದು ಕಾರ್ಯಕಟ್ಟು ಅಂತಾ ಏನೇನಾ ಕೆಲ್ಸದಾಗ ಮುಣಿಗಿದ್ರು. ಈಗ ಪಾರ್ವತಿ ಒಬ್ಬಾಕಿ ರೆಡಿಯಾಗಿಬಿಟ್ರ, ಒಂದರ್ಧಗಂಟಿ ಮಧುಮಕ್ಕಳನ್ನ ಹಂದ್ರದ ತೆಳಗ ಕುಂದ್ರಿಸಿ, ಕಳಸ ಬೆಳಗಿ, ಓಣ್ಯಾನ ದೈವದೋರು, ಪಾರ್ವತಿ ಅಪ್ಪನ ಗೆಣೆಕಾರು ಎಲ್ಲಾರು ಪಂಕ್ತಿಲಿ ಕುಂತ್ಗಂಡು ಉಂಡೊಕ್ಕಾರ. ಆಮ್ಯಾಲೆ ಪಾರ್ವತಿ ಗೆಣತೀರು ಪಾರ್ವತೀನ ರೆಡಿ ಮಾಡಿ ಪ್ರಸ್ಥದ ಕ್ವಾಣಿಗೆ ಬಿಟ್ಟು ಹುಳ್ಳುಳ್ಳಗೆ ನಕ್ಕೋತ ಮನಿಗೊಕ್ಕಾರ. ಇದು ಇವತ್ತು ನಡಿಬೇಕಿರಾ ಕಾರ್ಯಕ್ರಮ. ಅದಕ್ಕಾಗಿನೇ ಅವರವ್ವ ಮಕ್ಕಂಡಿರಾ ಪಾರ್ವತಿಗೆ ಮೈ ತ್ವಕ್ಕಂಡು ಮನಿದೇವ್ರಿಗೆ ಎಲ್ಡು ಉದ್ನಿಕಡ್ಡಿ ಹಚ್ಚಾಕ ಅವಸ್ರ ಮಾಡಾಕತ್ತಿದ್ದು.
ಮನಿಯಾಗ ನಡಿಯಾಕತ್ತಿದ್ದ ಸಂತೋಷದ ಮಾತುಕತಿಗಳು, ಗೆಳತಿಯಾರ ಕಾಡರಟಿ, ಹಾಸ್ಯ, ಸೋಬಾನ ಪದಗಳನ್ನ ನೆಪ್ಪು ಮಾಡಿಕಣಾಕತ್ತಿದ್ದ ಮುದುಕ್ಯಾರ ಖುಷಿ, 'ತಗಳಲೇ ಕುಡುದು ನಿಷೇದಾಗ ಹಂಗಾ ಹೋಗಿ ಮಕ್ಕೋಬ್ಯಾಡ, ಉಂಡು ಹೋಗುವಂತೆ' ಅಂತ ಅವರಪ್ಪ ಯಾರಿಗೋ ಹೇಳಿತಿದ್ದ ಧ್ವನಿ ಎಲ್ಲದನ್ನೂ ಕೇಳಿಸ್ಕೋತ ಪಾರ್ವತಿ ಮೈ ತ್ವಕಣಾಕತ್ತಿದ್ಲು. ಅಕೀಗೆ ದೇವರ ಮನಿಯಾಗಿನ ಸೆಲ್ಪಿನ್ಯಾಗ ಇಟ್ಟಿದ್ದ ಬಾಟ್ಲಿಗಳ ಒಂದು ಕೇಸ್ ನೆನಪಾತು. ಓಣ್ಯಾನ ಕೆಲವು ಯಜಮಾನ್ರು, ತನ್ನಣ್ಣನ ಗೆಣೆಕಾರ್ರು ಎಲ್ಲಾರೂ ಸೇರಿ ತುಂಬಿಕಂಡಿದ್ದ ಕೇಸ್ನ ಖಾಲಿ ಮಾಡಾಕ ತುದಿಗಾಲಿಲೆ ಕುಂತಿದ್ದನ್ನ ನೆನಪು ಮಾಡಿಕಂಡ್ಲು. ಸುಡ್ ಸುಡೋ ನೀರು ಸುರಕೋತನೇ ಇದ್ಲು. ಇನ್ನೇನು ತಲೀಗೆ ಹಚ್ಚಿಗಣಾಕ ಶಾಂಪುಗೆ ಕೈ ಹಾಕಬೇಕು, ಅವನು ನೆಪ್ಪಾಗಿಬಿಟ್ಟ. ಜೀವದ ಗೆಳೆಯ. ಹೆಸ್ರು
ಶಂಕರ !

'ಏನಿವತ್ತು ? ಟಿವ್ಯಾಗ ತೋರಿಸಾ ಅಡವಿಟೇಜು ವರ್ಕೌಟ್ ಆದಂಗೈತಿ? ಶಾಂಪು, ದುಬಾರಿ ಸೊಬ್ಬು, ಇದ್ಯಾವುದೋ ಸೆಂಟು, ಉಗುರುತುಂಬಾ ಉಗಿರಿಂದಾ ಬಣ್ಣ ಹೋಲಾಂತ ಪಾಲಿಷ್ಷು, ಮಖಕ್ಕ ಇದ್ಯಾವುದೋ ಘಂ ಅನ್ನಾಂತ ಕ್ರೀಮು. ದೊಡ್ಡ ಕತಿ ಐತಿ ಬುಡು' ಊರಿಂದ ಒಂದಾ ಒಂದು ಕಿಲೋಮೀಟ್ರು ದೂರದಾಗಿರಾ ಸಣ್ಣ ಗುಡ್ಡದ ಮ್ಯಾಗಿನ ಒಂದು ಕಲ್ಲಿನ ಮ್ಯಾಗ ಕುಂತ್ಗಂಡು ನಕ್ಕೋತ ಹೇಳತಿದ್ದ. ಅವನಿಗೆ ಈ ಆಧುನಿಕ ಅಡವಿಟೇಜುಗಳ ಮ್ಯಾಗ ಸಿಕ್ಕಾಪಟ್ಟೆ ಸಿಟ್ಟಿತ್ತು. ಅವಾಗೆಲ್ಲಾ ಶಂಕ್ರನ ಮಾತು ಕೇಳಿ ತಲಿ ತಗ್ಗಸಿ 'ನಾನೊಳ್ಳೇ ಕಾಡಿನ ಸವಾಸ ಮಾಡಿಬಿಟ್ಯ' ಅಂತೇಳಿ ನಕ್ಕೋತ ಅವನ ಬುಜಕ್ಕ ತಲಿಕೊಡ್ತಿದ್ದಾಕಿ, ಶಾಂಪೂ ಕಡೆ ಹೋದ ಕೈಯನ್ನ  ಇವತ್ತು ಛಕ್ಕನಂಗ ಹಿಂದಕ್ಕ ತ್ಯಕ್ಕಂಡು, ಅದ್ರ ಮಗ್ಗಲದಾಗಿದ್ದ ಸೀಗೆಕಾಯಿ ಪುಡಿನಾ ತಲಿಗೆ ಹಾಕ್ಕೊಂಡ್ಲು. ಸೊಬ್ಬಿನ ಕಡೀಗ್ಯ ತಿರಿಗೀನೂ ನೋಡದಂಗ ಒಂದು ಬಟ್ಟಲದಾಗಿದ್ದ ಕಡಲೆ ಹಿಟ್ಟನ್ನೇ ಮೈಗೆ ಹಚ್ಚಿಕಂಡ್ಳು.. ಅದರ್ಾ ಮಣಕೈವರಿಗೂ ತುಂಬಿಕಂಡಿದ್ದ ಹಸುರು ಬಳಿನಾ ಒಮ್ಮಿ ನೋಡಿಕಂಡು ಯಾಕಾ ಕಣ್ಣೀರು ಹಾಕಿದ್ಲು. ಇನ್ನೂ ಹೊಸವಾ ಆಗಿದ್ದ ಕಾಲಚೈನು ತಿಕ್ಕೋಬೇಕಾದ್ರ ತನ್ನ ಕಣ್ಣೀರ ಹನಿ ಆ ಚೈನಿನ ಮ್ಯಾಕ ಬಿದ್ದುಬಿಟ್ವು. ಅಂಥಾ ಸಂದರ್ಭದಾಗೂ ಹುಕ್ಕಿ ಬಂದ ದುಕ್ಕಕ್ಕ ಆಕಿ ತನ್ನ ಕಳದೋದ ದಿನಗಳಿಗೆ ಜಾರಿಬಿಟ್ಲು.
ಅವತ್ತು ಆ ಊರಾಗ ಜಾತ್ರಿಯಿತ್ತು. ಜಾತ್ರಿ ಮಾಡಾನು ಅಂತೇಳಿ ಗೆಳತ್ಯಾರ ಜೊತಿಗೆ ಪಾರ್ವತಿ ಹೋದಾಗ ಗೆಣೆಕಾರ ಜತಿಗ್ಯ ಜಗತ್ತನ್ನಾ ಗೆದ್ದಂಥಾ ಕಲ್ಮಷನಾ ಇಲ್ಲದಂಥಾ ಖುಷಿಯೊಳಗ ಬರುತಿದ್ದ ಶಂಕರನ್ನ ನೊಡಿ ನಾಚಿ ತಲಿ ಬಗ್ಗಿಸಿದ್ದಳು. ಅವನೇನೂ ಇಕಿಕಡಿಗ್ಯ ನೋಡಿರಲಿಲ್ಲ. ಆದ್ರ ಇಡೀ ಊರಿಗ್ಯಾ 'ಬಾಳ ಒಳ್ಳೇನು, ಜಿದ್ದಿಗೆ ಬಿದ್ರ ಅವನು ಏನು ಬೇಕಾರ ಧಕ್ಕಿಸ್ಕಂತನ. ಅದ್ಕ ಅವನ್ನ ಯಾರೂ ಎದ್ರಕ್ಕಬ್ಯಾಡ್ರಲೇ' ಅಂತಾನಾ ಹೆಸ್ರಾಗಿದ್ದ ಶಂಕ್ರನಿಗ್ಯ ಪಾರ್ವತಿ ಕಳದೋಗಿದ್ಳು. ಪುಣ್ಯಕ್ಕ ಅವತ್ತು ಆ ಶಂಕ್ರನ ಗೆಣೆಕಾರರ ಗುಂಪಿನಾಗ ಪಾರ್ವತಿ ಗೆಳತಿಯ ಅಣ್ಣನಿದ್ದ. ಹಿಂದೆಲೆ ಒಂದು ಐಡ್ಯಾ ಮಾಡಿದ ಪಾರ್ವತಿ, ತನ್ನ ಗೆಳತಿ ಮಂಜುಳಾಗ,  'ಲೇ ಮಂಜಿ, ನಾವು ಇಲ್ಲಿ ಬಳಿ ತಗಾಣಾನು ಹೆಣ್ಮಕ್ಕಳಿಗೆ ಅಂಗಡಿಯೋರು ರೇಟು ಬಾಯಿಗೆ ಬಂದಂಗ ಹೇಳ್ತಾರ, ಬಳಿ ಇಕ್ಕಾ ನ್ಯವಾದಾಗ ಮುಂಗೈನ ಬೇಕಂತ್ಲ ಹಿಚುಕಿ ಹಿಂಸೆ ಮಾಡ್ತಾರ. ಅದ್ಕಾ ಅಲ್ಲಿ ನಿಮ್ಮಣ್ಣ ಅದಾನಲ್ಲ ಕರಿ ಒಂದೀಟು' ಅಂತ ಹೇಳಿದ್ದು ಸರಿ ಅನ್ನಿಸಿ ಮಂಜುಳ ಕೂಗಿ ಅವರ ಅಣ್ಣನ್ನ ಕರದ್ರ, ಔನು 'ಬಾರಲೇ ಶಂಕ್ರಿ ಅವ್ರೇನಾ ತಗಂತಾರಂತ್ಯ, ಕೊಡಿಸಿ ಕಳಸಾನು' ಅಂತಂದು ಶಂಕ್ರಿನೂ ಜೊತಿಗೆ ಕರಕಂಡು ಪಾರ್ವತಿ ಗುಂಪಿನತ್ರ ಬಂದು ನಿಂತಾಗ, ಶಂಕ್ರಿಯ ಮಗ್ಗುಲು ಸರದ ಪಾರ್ವತಿ, 'ಶಂಕ್ರು, ಯಾವ ಬಳಿ ಸೂಟ್ ಅಕ್ಕಾವು ಹೇಳು ಪ್ಲೀಜ್' ಕಿವಿಗ್ಯ ಹತ್ರದಾಗ ನಿಂತ್ಗಂಡು ತುಟಿನೂ ಅಡಿಸದಂಗ ಮೆಲ್ಲಕ ಕೇಳಿದ ಪಾರ್ವತಿ ಧ್ವನಿಗೆ ಕಕ್ಕಾಬಿಕ್ಕಿಯಾದ ಶಂಕ್ರ, ಇಷ್ಟಗಲಾ ಕಣ್ಣಗಲಿಸಿ ಪಾರ್ವತೀನಾ ನೋಡಿದಾಗ. ಪಾರ್ವತಿ ಮಖದಾಗ ಮೂಡಿದ್ದ ತಂಗಾಳಿ ಚಂದಪ್ಪನ್ನ ಕಂಡಂಗಾಗಿ ಹಸುರು ಬಳಿಕಡಿಗೆ ಬೊಟ್ಟು ತೋರಿಸಿದ್ದ. ಬರಬ್ಬರಿ ಎಲ್ಡು ಡಜನ್ ಬಳಿ ತಗಂಡು ಕೈ ತುಂಬಾ ತೊಟ್ಕೊಂಡು ದೂರದಾಗ ನಿಂತಿದ್ದ ಶಂಕ್ರಿಕಡಿಗೆ ತೋರಿಸಿ 'ಹೆಂಗದಾವು' ಅನ್ನಂಗ ಕಣ್ಣ ಹುಬ್ಬೇರಿಸಿದ್ಳು. ಮೀಸಿಯೊಳಗಾ ನಕ್ಕೊತ ಶಂಕ್ರಿ ಉದ್ದುದ್ದಾ ತಲಿಯಾಡಿಸಿದ್ದ.

ಅವತ್ತಿನವರಿಗೂ ಇಡೀ ಊರಾಗ ಶಂಕರನಿಗೆ ಅಟಕಂದು ಸದರದಿಲೆ ಮಾತಾಡಿದ ಮದ್ಲನೇ ಹುಡುಗಿನಾ ಪಾರ್ವತಿ. ಯಾಕಂದ್ರ ಶಂಕ್ರಿಗ್ಯ, ತನ್ನ ಊರಾಗಾತೂ, ತನ್ನ ಓಣ್ಯಾಗಾತು, ಸಣ್ಣೋರಿಂದ, ಹಣ್ಣಣ್ಣು ಮುದುಕ್ರುವರಿಗೂ ಎಲ್ಲರೂ ಬಾಳ ಪ್ರೀತಿಲಿಂದ ಕಾಣತಿದ್ರು. ಎಲ್ಲರೂ 'ಅವ್ನು ನಮ್ಮ ಮನಿ ಮಗ ಇದ್ದಂಗ್ರೀ' ಅಂತಂದು ಬಂದೋರ ಎದ್ರಿಗೆ ಹೇಳತಿದ್ರು.. ಶಂಕ್ರಿ ಓಣ್ಯಾಗಿನ ಯಾರ ಅಡಿಗಿ ಮನಿಗೆ ಬೇಕಾರೂ ಹೋಗಿ ಹೊಟ್ಟಿತುಂಬಾ ಉಂಡು ಬರ್ತಿದ್ದ. ಜನಾ ಅಷ್ಟು ಅವನ್ನ ಹಚ್ಚಿಕೊಂಡಿದ್ರು. ನೆಚ್ಚಿಗಂಡಿದ್ರು. ಇನ್ನು ,ಹುಡಿಗೇರಂತೂ ಅವನಿಗ್ಯ ಬಾಳ ಗೌರವ ಕೊಡ್ತಿದ್ರು. ಕೆಲವು ಹುಡುಗೀರು ಶಂಕರನ ಗುಣಕ್ಕ ಅವನನ್ನ ಕೈ ಹಿಡಿಬೇಕು ಅಂತ ಅಂದ್ಕೊಂಡೋರು ನೇರವಾಗಿ ಶಂಕ್ರಿ ಹತ್ರ ಮಾತಾಡಾ ಧೈರ್ಯ ಸಾಲ್ದಾಗಿ ಅವನ ಚಡ್ಡಿ ದೋಸ್ತ ರಾಘನ ಎದ್ರಿಗೆ 'ರಾಘಣ್ಣಾ, ನಾನು ಶಂಕರನ್ನ ಇಷ್ಟಪಟ್ಟಿನಿ, ಅತನ ಎದ್ರಿಗೆ ಹೇಳಾಕ ಧೈರ್ಯ ಬರವಲ್ದು ನೀನಾ ಹೇಳ್ತಿ ಇಲ್ಲಪಾ?' ಅಂತೇಳಿ ಅವನ ಖರ್ಚಿಗಿಷ್ಟು ರ್ವಕ್ಕ ಕೊಡೋರು. ರ್ವಕ್ಕ ತಗಂಡಮ್ಯಾಗ ರಾಘ 'ತಂಗೀ ಹೆಣ್ಮಕ್ಕಳು ಅಂದ್ರ ಒಂದು ಅಣ್ಣನ ಗಂಭೀರದಾಗ ನಿಂದ್ರ ಅವ್ನು ಈ ಇಳೇವ್ನ ಒಪ್ಪತಾನೋ ಏನು ನನ್ನ ಕೆರದಾಗ ಹೊಡಿತಾನೋ, ಅಂತೂ ಒಮ್ಮಿ ಕೇಳಿ ನೋಡ್ತಿನಿ' ಅಂತೇಳಿ ಶಂಕ್ರಿ ಹತ್ರ ಬಂದು ಅದೂ ಇದೂ ಮಾತಾಡಿ ಕೊನಿಗೆ ತನಿಗೆ ಬಂದಿರಾ ವೀಳ್ಯಾದ ವಿಷ್ಯಾನ ಹೇಳಿ ಮಖಾ ತೋಯುವಂಗ ಉಗುಳಿಸ್ಕೋತಿದ್ದ. ಅಂಥಾ ಶಂಕ್ರಿ ಮನಸಿನ್ಯಾಗ ಅವತ್ತು ಪಾರ್ವತಿ ಡೈರೆಕ್ಟ್ ಎಂಟ್ರಿ ಕೊಡಾಕ ಕಣ್ಣಾಗಾ ಒಪ್ಪಿಗಿ ಕೇಳಿಬಿಟ್ಟಿದ್ಲು. ಅವತ್ತು ಮದ್ಲನೇ ಸತಿ ಶಂಕ್ರಿ ಒಬ್ಬನಿಗೊಬ್ಬನಾ ನಗಾಕ ಚಾಲೂ ಮಾಡಿದ್ದ. ಮಗ್ಗಲದಾಗ ನಿಂತಿದ್ದ ಚಡ್ಡಿ ದೋಸ್ತ ರಾಘ 'ಲೇ ಶಂಕ್ರೀ ಇನ್ನು ನನಿಗ್ಯ ಕೆರದೇಟು ಕಮ್ಮಿ ಅಕ್ಕಾವು ಹೌದಿಲ್ಲು ?' ಅಂತ ಕೇಳಿದಾಗ ಜೋರು ನಕ್ಕಿದ್ರು ಇಬ್ರೂ.

ಅಲ್ಲಿಂದ ಶಂಕ್ರಿ ಪಾರ್ವತಿ ನಡುಕು, ಬಾಳ ಅಂದ್ರ ಬಾಳ ಒಳ್ಳೊಳ್ಳೇ ಘಟನಿಗಳು ನಡಿದಿದ್ವು. ಇತ್ತೀಚಿಗೆ ಶಂಕ್ರು ದಿನಾಲು ಆ ಪಾರ್ವತಿ ಮನಿ ಮಗ್ಗಲದಾಗಿನ ಶೆಡ್ಡಿನ ಅಂಗಡಿ ಮುಂದೇನಾ ನಿಂದ್ರತಿದ್ದ. ಕೊನಿಗೂ ಶಂಕ್ರಿಯ ಜೀವನದೊಳಗ ಒಂದು ಒಳ್ಳೇ ಘಳಿಗಿ ಕೂಡಿ ಬಂದಿತ್ತು. ಅವತ್ತು ದಸರಾ ಹಬ್ಬದ ರಾತ್ರಿ ಬನ್ನಿ ಕೊಡಾಂತ ದಿನವಾಗಿತ್ತು. ಅವತ್ತು ರಾತ್ರಿ ಶಂಕ್ರಿ ಮತ್ಯ ರಾಘ ಜತಿಗೆ ಸಾಲು ಹಿಡಿದು ಎಲ್ಲರ ಮನ್ಯಾಗಿನ್ನ ಹಿರಿಯಾರು, ಕಿರಿಯಾರು, ಎಲ್ಲರಿಗೂ ಬನ್ನಿಕೊಟ್ಟು ಕಾಲಿಗೆ ಬಿದ್ದುಕೋತ ಮನಿ ಮನಿ ತಿರಗಬೇಕಾದ್ರ ದಾರ್ಯಾಗ ಎದ್ರಿಗಾದ ಪಾರ್ವತಿ ಮದ್ಲು ರಾಘಗ ಬನ್ನಿ ಕೊಟ್ಟು 'ಬನ್ನಿ ತಗಂಡು ಬಂಗಾರದಂಗ ಇರಾನಣ್ಣಾ' ಅಂತೇಳಿ ಕಾಲಿಗೆ ಬೀಳಾಕ ಹೋದಾಗ 'ಹೇ ಬ್ಯಾಡ್ವಾ ತಂಗೀ, ನಾ ಏನ್ ಯಜಮಾನ ಮನಷ್ಯಾ ಏನು ? ಕೈ ಮುಕ್ಕೋಳಾನು ಸಾಕು' ಅಂತೇಳಿ ಕೈ ಕೈ ಮುಕ್ಕೊಂಡಿಂದೆ ಶಂಕ್ರಿ ಕಡಿಗೆ ತಿರುಗಿದ, ರಾಘ, 'ಲೇ ಶಂಕ್ರಿ, ಇಲ್ಲೇ ಅಂಗಡಿಗೋಗಿ ಎಲ್ಡು ಇಮಾಲ್ (ಗುಟ್ಕಾ) ತರ್ತೀನಿ ತಡಿ' ಅಂತಂದು ಅಲ್ಲಿಂದ ಜಾಗ ಖಾಲಿ ಮಾಡತಿದ್ದಂಗನಾ, ಶಂಕ್ರಿ ಕೈಗೆ ಬನ್ನಿ ಕೊಟ್ಟ ಪಾರ್ವತಿ 'ನಿನಿಗ್ಯ ಬನ್ನಿ ಕೊಟ್ಟೀನಿ, ನನಿಗ್ಯ ಬಂಗಾರದಂಥಾ ಬಾಳು ಕೊಡ್ತೀಯೇನಾ?' ಕಂಡೆಬಟ್ಟೆ ಧೈರ್ಯದಾಗಲೇ ಕೇಳಿದ್ಲು. ಶಂಕ್ರಿಗೆ ನೆಲಮುಗುಲು ಏಕ್ ಆದಂಗಾಗಿ ದಂಗು ಬಡದು ನಿಂತುಬಿಟ್ಟಿದ್ದ. ಇವನೌನು ಏನರಾ ಯಾಕಾ ಆಗ್ಲಿ ಅಂತಂದು ಧೈರ್ಯ ತಗಂಡು, 'ಈಗ ದುರ್ಗಮ್ಮನ ಗುಡಿತಾಗ ದೇವ್ರ ಕಾರ್ಯ ನಡಿತೈತಲ್ಲಾ ಅಲ್ಲಿಗೆ ಬಾಯಿಲ್ಲಿ ಹೇಳ್ತಿನಿ' ಅಂತೇಳತಿದ್ದಂಗನಾ, ಹುಡುಗಿ ಶಂಕ್ರಿಯ ಮುಂಗೈಗೊಂದು ಮುತ್ತು ಕೊಟ್ಟು ಬುಜಕ್ಕ ಬುಜ ತಾಗಿಸಿ ಶಂಕ್ರಿ ಮೈಗೆ ಮಿಂಚು ಹೊಡಿಸಿ ಹೋಗಿದ್ಳು.

ಅಂಗಡೀಗೆ ಹೋಗಿದ್ದ ರಾಘ ವಾಪಾಸ್ ಬಂದು 'ಏನಾತ್ಲೇ ಶಂಕ್ರಿ ? ಹಣ್ಣೋ ಕಾಯೋ?, ಮಗನಾ ತಾನಾಗೇ ಒಲುದು ಬಂದೈತಿ ಸುಮ್ಮನ ಒಪ್ಪಿಗಂಬಿಡು, ಅದನ್ನ ಬುಟ್ಟು ನಾನು ಬಾಳ ಒಳ್ಳೆನು, ಹಿಂಗೆಲ್ಲಾ ನಡ್ಕಬಾರ್ದು, ಹಂಗಾ ಹಿಂಗ ಅಂತ ಟಬುರು ಮಾತಾಡಿದ್ರ ಇಪಾಟು ನಾನಾ ನಿನ್ನ ಮೆಟ್ಟಿಲೆ ಹೊಡಿತೀನಿ ಹುಷಾರು' ಗೆಳೆಯ ಅನ್ನಾ ಸದರಕ್ಕ ಹಂಗೇಳಿದ್ದ. ನಕ್ಕೋತ ಶಂಕ್ರಿ ಅವನ ಹೆಗಲ ಮ್ಯಾಗ ಕೈ ಹಾಕಿ, 'ಈಗ ಗುಡಿತಾಕ ಬರಾಕೇಳಿನಿ ಬಾರ್ಲೇಪಾ' ಅಂತ ಹೇಳಿದ ಸ್ವಲ್ಪ ಹೊತ್ತಿನ ಮ್ಯಾಗ ಊರಿನ ದುರುಗಮ್ಮನ ಗುಡಿಯ ಹತ್ರ ಜನಾಂ ಜಾತ್ರಿ ಗದ್ಲದಾಗ ಪಾರ್ವತಿ ಒಂದು ಕಟ್ಟಿ ಮ್ಯಾಗ ತನ್ನ ಗೆಳತಿಯಾರ ಜೊತಿ ನಿಂತಕಂಡು ನಗುತಿದ್ದದ್ದನ್ನ ನೋಡಿದ ಶಂಕ್ರಿ ಸುಮ್ಮನ ದೇವ್ರಿಗೆ ಹೋಗಿ ಕೈ ಮುಗುದು ಹೊರಾಕ ಬರೊಷ್ಟತ್ಗೆ ಪಾರ್ವತಿನೂ ಅವನ ಜೊತಿಗೂಡಿದ್ಲು. 'ಇಲ್ಲಿ ಗದ್ಲೈತಿ ಅಕ್ಕಡಿ ಹೋಗಂಬಾ' ಪಾರ್ವತಿನೇ ಹೇಳಿದ್ದನ್ನ ಕೇಳಿದ ಶಂಕ್ರಿ ಎಲಾ ಇವ್ಳಾ ! ಅಂದ್ಕಂಡಿದ್ದ.
ಆಮ್ಯಾಲೆ ಅವರಿಬ್ರೂ ಗುಡಿ ಹಿಂದಿರಾ  ಸಾಲಿ ಗ್ರೌಂಡಿನಾಗ ನಿಂತಾಗ ಶಂಕ್ರಿ 'ನನ್ಯಾಕ ಇಷ್ಟು ಹಚ್ಚಿಕೊಂಡೀದಿ ? ಕತಿ ಏನರಾ ಇರ್ಲಿ, ನಿನ್ನ ಧೈರ್ಯಕ್ಕ ಮೆಚ್ಚಿದ್ನೆ ಬುಡು' ಅಂದ 'ನಿನ್ನಂಥಾ ಕಾಡಿಗೆ, ದೂರ ನಿಂತ್ಕಂಡು ಅವನಾ ಬಂದು ಹೇಳ್ತಾನ, ನನ್ನ ಕೈ ಹಿಡಿತಾನ ಅನ್ನಾದು ಕನಸಿನ ಮಾತಂತ ಗೊತ್ತಾತು. ನಿನ್ನ ಬಿಟ್ಟು ಇರಾಕೂ ಆಗದಂಗಾಗಿ ಹಿಂಗ ಧೈರ್ಯಬಂತು ನೋಡು' ಖುಷಿಲಿಂದ ಹೇಳಿದ ಪಾರ್ವತಿಯ ಕೈ ಹಿಡಿದು ಹಣಿಗೊಂದು ಮುತ್ತು ಕೊಟ್ಟು ದೇವ್ರ ಪ್ರಸಾದ ಅಂತ ಸಿಕ್ಕಿದ್ದ ಹೂವನ್ನ ಮುಡಿಗಿಟ್ಟಿದ್ದ. ಆಮ್ಯಾಗ ಇವರಿಬ್ರ ನಡುಕು ನಡದಿದ್ದು ಅದೊಂದು ದೊಡ್ಡ ಕತಿನಾ ಬಿಡ್ರಿ. ಒಂದು ಸುಗ್ಗಿ ಕಳಿಯಾತ್ಗೆ ಇಬ್ರೂ ಜೀವಕ್ಕ ಜೀವಾ ಕೊಡಾ ಜೊಡಿಗಳಾಗಿಬಿಟ್ಟಿದ್ರು. ವಿಷ್ಯ ಊರಿನೋರಿಗೂ ಗೊತ್ತಾತು, ಪಾರ್ವತಿ ಮನೆಯೋರಿಗೂ ಗೊತ್ತಾತು.
ವಿಷ್ಯ ಗೊತ್ತಾಗತಿದ್ದಂಗನಾ ಪಾರ್ವತಿ ಅಣ್ಣ ಒಂದಿನಾ ಶಂಕ್ರಿನಾ ವಾರಿಗೆ ಕರದು, 'ಶಂಕ್ರಿ ನಾನು ಕೇಳಿದ್ದು ಖರೆ ಐತೇನು? ನಮ್ಮ ತಂಗೀನಾ ನೀ ಪ್ರೀತಿ ಮಾಡ್ತಿಯಂತೇ ? ನಿನಿಗ್ಯ ಸುಳ್ಳು ಹೇಳಾಕ ಬರಲ್ಲ, ತಪ್ಪು ನಡದಿದ್ರ ಮುಚ್ಚು ಮರಿ ಇಲ್ಲದಂಗ ನೀ ಒಪ್ಪಿಗಂತೀ ಅನ್ನಾದು ನನಿಗಂತೂ ಗೊತೈತಿ. ಖರೇವೇಳು ಇದೆಲ್ಲಾ ಹೌದಿಲ್ಲೂ ?' ನೇರವಾಗಿ ಕೇಳಿದ ಪ್ರಶ್ನೆಗೆ ಶಂಕ್ರಿ ಒಂದೀಟು ಅಂಜಿಕಿಲೆ ಮದ್ಲನೇ ಸರತಿ ವಾರಿಗಿ ಗೆಳೆಯನ ಎದ್ರಿಗೆ ತಲಿ ತಗ್ಗಿಸಿ'ಖರೇವೈತಿ. ನಾನು ನಿಮ್ಮ ತಂಗಿನ ಇಷ್ಟ ಪಟ್ಟಿನಿ' ಹಿಂಗ ಹೇಳತಿದ್ದಂಗನಾ ಬಾಚಿ ಅಮಚಿಗಂಡುಬಿಟ್ಟಿದ್ದ ಪಾರ್ವತಿ ಅಣ್ಣ. 'ಹೌದ್ದಲೇ ಮಗನಾ, ಊರಾಗ ಎಂಥೆಂತೋರು ಮನಸು ಮಾಡಿದ್ರಲೇಪಾ ನಿನ್ನ ಮ್ಯಾಲೆ. ಅಂಥಾದ್ರಾಗ ನನ್ನ ತಂಗಿ ಅದೇನು ಮಾಟ ಮಾಡಿದ್ಲಲೇ ನಿನಿಗ್ಯ? ಮಾವ ಅನ್ನಬೇಕಪ್ಪಾ ಇಪಾಟು ನಿನಿಗ್ಯ?' ಖುಷಿಲಿಂದ ಹೇಳಿದ್ದ. ಇದೆಲ್ಲಾ ಆಗಿ ಒಂದಾ ವಾರದಾಗ ಪಾರ್ವತಿ ಮನಿಯೋರು, ಶಂಕ್ರಿಯ ಮನ್ಯಾರ ಜತಿಗೆ ಈ ಇಚಾರ ಮಾತಾಡಿದಾಗ 'ನೋಡ್ರಪಾ ಔರೇನೂ ದಡ್ಡರಲ್ಲ. ಇವನೂ ವಕೀಲಗಿರಿ ಟ್ರೈನಿಂಗ್ ಮಾಡಕತ್ಯಾನ, ಮತ್ಯ ಪಾರ್ವತಿನೂ ನಮ್ಮೂರ ಬ್ಯಾಂಕಿನಾಗ ಕೆಲ್ಸಾ ಮಾಡತಾಳ. ಔರೋರ ಇಷ್ಟ ಇದ್ರ ಹಣೆಬರದಾಗ ಇದ್ದಂಗಾಗ್ಲಿ ಮುಂದಿನ ವರ್ಸಕ್ಕ ಲಗ್ನ ಹಮ್ಮಿಕಣಾನುಬುಡು, ಇನ್ನೊಂದು ತಿಂಗಳು ಕಳದು ಚೊಲೋ ದಿನ ನೋಡಿ ಇಳೇವು ಹೊಡಿಯಾನಂತೆ' ಅಂತ ಸೀ ಸುದ್ದಿ ಕೊಟ್ಟಿದ್ರು. ಜೀವನ ಜೋಡಿಗಳಿಗೆ ಬಂಗಾರದಂತಾ ಬಾಳು ಕಟ್ಟಿಗಣಾಕ ಇನ್ನೇನು ಬೇಕು ? 'ಸ್ವರ್ಗ ಅನ್ನಾದು ಎಲ್ಲೂ ಇಲ್ಲ ಅದು ನಮ್ಮಿಬ್ರ ಹೃದಯದಾಗ ಐತಿ ಹೌದಿಲ್ಲು?' ಅಂತ ಶಂಕ್ರಿ ಪಾರ್ವತಿಯ ಜುಮುಕಿ ಕಿವಿಯೊಳಗ ಪಿಸುಗುಟ್ಟಿದ್ದ. ಮತ್ತೊಂದಿಷ್ಟು ದಿನಗಳು ಸರದೋದ್ವು. ಇನ್ನೇನು ಇವರಿಬ್ರ ಎಂಗೇಜ್ ಮೆಂಟ್ ಡೇಟ್ ಪಿಕ್ಸ್ ಮಾಡಬೇಕಿತ್ತು ನಡದೋತು ಒಂದು ಅನಾಹುತ !

ಇದ್ದಕ್ಕಿದ್ದಂಗ ಶಂಕ್ರಿ ಜ್ವರದಿಂದ ಬಳಲಾಕ ಶುರು ಮಾಡಿದ. ಇದ್ದೂರ ಆಸ್ಪತ್ರ್ಯಾಗ ಏಳಿಗಿ ಆಗಲಿಲ್ಲಾಂತ ತಾಲೂಕ ಆಸ್ಪತ್ರಿಗೆ ತೋರಿಸಿದಾಗ ಇದು ಇಲ್ಲಿ ಬಗೆಹರಿಯಲ್ಲ, ಜಿಲ್ಲಾಸ್ಪತ್ರಿಗೆ  ಹೋಗ್ರಿ ಅಂದಿದ್ರಂತ್ಯ ಡಾಕ್ಟ್ರು. ಜ್ವರ ಶಂಕ್ರಿಯ ಜೀವದ ಜತಿಗೆ ಆಟ ಆಡಾಕತ್ತಿದ್ವು. ಅವನ ಮಗ್ಗುಲು ಹೆತ್ತೋರು, ರಾಘ, ಪಾರ್ವತಿ ಅಣ್ಣ, ಎಲ್ಲರೂ ಇದ್ರು. ಅವನ ತಲಿಗ್ಯ ತನ್ನ ಮಡಿಲನ್ನ ಕೊಟ್ಟಾಕಿ ಪಾರ್ವತಿ. ಇನ್ನೇನು ಡಾಕ್ಟ್ರ ಮಾತು ಕೇಳಿ ಜಿಲ್ಲಾಸ್ಪತ್ರಿಗೆ ತಗಂಡೋಗಬೇಕು, ನಡೋ ದಾರ್ಯಾಗ, ಆಂಬುಲೆನ್ಸ್ ಒಳಗಾ ಶಂಕ್ರಿ ಇಲ್ಲವಾಗಿದ್ದ. ಅವನಿಗೆ ಬಂದಿದ್ದ ಜ್ವರ ಡೆಂಗ್ಯೂ ಜ್ವರವಾಗಿದ್ವು. ಇಡೀ ಊರಿಗೂರಾ ಹೊಟ್ಟಿಕಿಚ್ಚುಪಡುವಂಗ ಜೀವನ ಕಟ್ಟಿಕೊಳ್ಳಾನು ಅಂತೇಳಿದ್ದ ಶಂಕ್ರಿ, ತನ್ನ ನೆಚ್ಚಿಕಂಡಾರ ಹೊಟ್ಟಿಯೊಳಗ ದುಃಖದ ಕಡಲು ತುಂಬಿ ವಂಟೋಗಿದ್ದ. ನೆಲ ಮುಗುಲು ಏಕು ಆಗಂಗ ಅತ್ತುಬಿಟ್ಟಿದ್ಲು ಪಾರ್ವತಿ. ಹುಚ್ಚಿಯಾಗಿಬಿಟ್ಟಿದ್ಲು ಸ್ವಲ್ಪದಿನ. ಆದ್ರ ಕಾಲ ಎಲ್ಲದಕ್ಕೂ ಮದ್ದು ಕೊಡ್ತೈತಿ ನೋಡ್ರಿ. ಹಂಗಾಗಿ ಶಂಕ್ರ ಹೋದ ಒಂದುವರೆ ವರ್ಸದ ಮ್ಯಾಗ 'ನೀನು ಮದ್ವಿಯಾಗಲಿಲ್ಲಾಂದ್ರ ನಾವೂ ಸತ್ತು ಹೊಕ್ಕೀವಿ ಅಂತೇಳಿ ಮೈತುಂಬಾ ಚಿಮ್ನೆಣ್ಣಿ ಸುರುವಿಕಂಡು ನಿಂತಿದ್ದ ಹಡದೋರ ಹೊಟ್ಟಿ ತಣ್ಣಗಿರ್ಲಿ ಅಂತಂದು ಈ ಮದ್ವಿಗೆ ಒಪ್ಪಿಗಂಡಿದ್ಲು.
ಈಗ ಬಚ್ಚಲು ಮನಿಯಾಗ ಅರಿಷಿನದ ನೀರಿನ ಜತಿಗ್ಯ ಪಾರ್ವತಿಯ ಕಣ್ಣೀರೂ ಹರಿತಿದ್ವು.. 'ಹೊತ್ತು ಆತು ಬಾರಲೇ' ಅಂತ ಕೂಗಿದ ಧ್ವನಿ ಕೇಳಿ ಎಲ್ಲ ನೆಪ್ಪುಗಳಿಂದ ಹೊಳ್ಳಿಬಂದ ಪಾರ್ವತಿ. ಬ್ಯಾಡಾದ ಮನಸಿಲಿಂದ ಹೊರಗ ಬಂದು, ದೇವ್ರಿಗೆ ಪೂಜೆ ಮಾಡಿ, ಗೆಳತಿಯಾರಿಂದ ರೆಡಿ ಆಗಬೇಕಾದ್ರ ಮತ್ತೊಬ್ಬ ಗೆಳತಿ ಪಾರ್ವತಿಯ ಮಖ ನೋಡಿ ತಡಕಣದಾಗಲಾರದ, ಕಣ್ಣಾಗ ನೀರು ತುಂಬಿಕಂಡು 'ನಮ್ಮ ಶಂಕ್ರಣ್ಣ ನೆಪ್ಪು ಆಗ್ಯಾನಲ್ಲಾ?' ಕೇಳಿದ್ದಳು ಬರೇ ಪಾರ್ವತಿ ಮತ್ತ ಅಕಿ ಗೆಳತಿಯಾರು ಅಷ್ಟಾ ಇದ್ದ ಕ್ವಾಣಿಯೊಳಗ ಈ ಮಾತನ್ನ ಕೇಳತಿದ್ದಂಗನಾ ಗೆಳತೀನ ಅಮಚಿಗಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಲು ಪಾರ್ವತಿ. ಆಮ್ಯಾಲ ಸುಧಾರಿಸ್ಕಂಡು ರೆಡಿಯಾಗಿ ಬಂದು ಕಾರ್ಯ ಮುಗಿಸಿಕಂಡು ಊಟ ಮುಗಿಸಿ, ಹಾಲಿನ ಕಪ್ಪು ಹಿಡಕಂಡು ಪ್ರಸ್ಥದ ಕ್ವಾಣಿ ಕದ ತೆಗಿತಿದ್ದಂಗನಾ ಮಂಚದ ಮ್ಯಾಗ ಶಂಕ್ರಿನಾ ಅದಾನೇನಾ ಅಂತ ಪಾರ್ವತಿ ಕಣ್ಣುಗಳು ಹುಡುಕಿಬಿಟ್ವು. ಬನ್ನಿ ಮುಡಿಯಾ ಹಬ್ಬದಾಗ ಕೈ ಹಿಡಿದಿದ್ದ ಬಂಗಾರದಂಥಾ ಹುಡಗನ್ನ ಕಿತ್ತುಕೊಂಡ ದೇವರಿಗೆ ಹಿಡಿ ಶಾಪ ಹಾಕಿ, ಏನೂ ಗೊತ್ತಿಲ್ಲದ ಈ ಗಂಡನ ಕಡಿಗೆ ನೋಡಿ ಕಣ್ಣಿಂದ ಹನಿ ನೀರು ಹೊರಬಂತು. ಅದನ್ನ ನೋಡಿದ ಮದುಮಗ, 'ಪಾರೂ, ನಂಗೂ ನಿನ್ನ ಜೀವನದಾಗ ನಡದಿದ್ದು ಎಲ್ಲಾನು ಗೊತ್ತು. ದೇವರಂಥಾ ಶಂಕ್ರು, ನಿನ್ನ ಹೊಟ್ಟಿಯೊಳಗ ಮತ್ತೆ ಹುಟ್ಟಿ ಬರತಾನ, ನಿನ್ನ ಕೊನಿವರಿಗೂ ಕಾವಲು ಕಾಯ್ತಾನ,ಹೆದ್ರಬ್ಯಾಡ' ಅಂತೇಳಿದಾಗ ಪಾರ್ವತಿ ಕುಸಿದು ಕುಂತಳು.

Tuesday, 30 July 2013

my imagination story 08

 ಹರಾಮಿ ಹನುಮ

'ಹ್ಞೂಂ, ಬಂದ ನೋಡು ಲೋಪರ್ ಸುಳೇಮಗ, ಇವನೌನು ನಮ್ಮ ವಂಶದ ಮಾನ ಮರ್ಯಾದಿನ ಹಾಳು ಮಾಡಾಕಂತಾನಾ ಹುಟ್ಯಾನೇನ ಈ ಶನಿಮಾತ್ಮನಂಥೋನು. ಲೇ, ನಿನಿಗ್ಯ ತಟಗರಾ ಮಾನಾ, ಮರ್ಯಾದಿ, ಏನರಾ ಐತೇನ್ಲೇ ? ಬಟ್ಟಿಬಿಟ್ಟೋನಾ. ನಾಡ್ ಬಟ್ಟಿ ಬಿಟ್ಟೋನಾ. ಥೂ ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ. ಹೋಗು, ಅಡಿಗಿ ಮನಿಗೋಗಿ ಊರ ಸೂಳೇರ ಹೇಸಿಗಿ ಐತೇನಾ, ಗಂಟ್ಲಮಟ್ಟ ತಿಂದು, ಬೀದಿ ಸೂಳೇರ್ನ ನೋಡಿಕಂತ ತಿರುಗೋಗು. ಥತ್ ಮಾದ್ರಚೋದ್' ಹಿಂಗ ಒಂದಾ ಉಸಿರಿಗೇ ಅಂಬಣ್ಣ ತನ್ನ ಮನಿಯ ಪಡಸಾಲಿ ಮ್ಯಾಗ ಕುಂತ್ಕಂಡು, ಆವಾಗಿನ್ನ ಹಚ್ಚಿಗಂಡಿದ್ದ ಗಣೇಶ ಬೀಡಿನ, ನೆಲದ ಕಡಪಾ ಕಲ್ಲಿಗೆ ತಿಕ್ಕಿ ತನ್ನ ಹೊಟ್ಟ್ಯಾಗಿನ ಸಿಟ್ಟನ್ನೆಲ್ಲಾ ಕೊಡವಾದನ್ನ ಕೇಳಿನೂ ಕೇಳದಂಗ, ಧಡ್ ಬಡ್ ಧಡ್ ಬಡ್ ಅಂತ ಒಳಗೋದಾನು ಅಂಬಣ್ಣನ ಎಲ್ಡನೇ ಮಗ ಹನುಮಂತ.
ಒಳಗ ಹೋಗತಿದ್ದಂಗನಾ, ಅಡಿಗಿ ಮನ್ಯಾಗ ರೊಟ್ಟಿ ಸುಡಾಕತ್ತಿದ್ದ ಅವರವ್ವ ನಿಂಗಮ್ಮನ ಮುಂದೆ ಹೋಗಿ ಕುಕ್ಕರಗಾಲಿಲೆ ಕುಂತ್ಕಂಡ. ಕೊಣಗ್ಯಾಗಿನ ರೊಟ್ಟಿ "ಟ್ಟನ್ನ ಪಟ ಪಟ ತಟ್ಟಿಗಂತನಾ, 'ಎಲ್ಲಿಗೋಗಿದ್ಯಪಾ ಯಪ್ಪಾ ಪುಣ್ಯಾತ್ಮ ? ನಿನ್ನಿಚ್ಚಿಗ್ಯ ಇಟಾತ್ತನ ನಾನು ಮಖಾ ತ್ವಳಿಸ್ಗಂಡೀನಿ ನಿಮ್ಮಪ್ಪನ ಕುಟಾಗ. ಅಲ್ಲಲೋ, ಮುಂಜ ಮುಂಜಾಲೆ ಹಿಂಗ ಮನಿಬಿಟ್ಟು ತಿರಗಾಕ ಹೋಗಿ, ಸೀದಾ ಹತ್ತುವರಿಗೆ ಬರ್ತಿಯಲ್ಲ ? ಹೇಳಾರು ಕೇಳಾರು ಯಾರೂ ಇಲ್ಲೇನಾ ಈ ಹುಡ್ಗಗಾ ? ಯಾವಾಗ ನೋಡಿದ್ರೂ ನಾಯಿ ತಿರಿಗಿದಂಗ ತಿರಗತೈತಿ, ಅಂತೇಳಿ ಓಣ್ಯಾಳ ಜನ ನಮಿಗ್ಯ ತಿನ್ನವೋಟು ಇಕ್ಕತಾರೋಡಪಾ ಸಗಣೀನ. ಹೊಟ್ಟಿಗ್ಯ ಅನ್ನ ತಿನ್ನನಾದ್ರ ತಿಳ್ಕಬೇಕಲೋ ಒಂದೀಟು' ಅಂತಂದು ಅವ್ನೂ ಯಾಕಾ ಬ್ಯಾಸರಾ ಮಾಡಿಕಂಡು ಬೈಯಾದು ಕೇಳತಿದ್ದಂಗನಾ, ಆಗಷ್ಟಾ ಮಖದ ಮ್ಯಾಗ ಮೀಸಿ ಬಂದಿದ್ದ ಹನುಮಗ ಕಂಡೆಬಟ್ಟೆ ಸಿಟ್ಟು ಬಂದುಬಿಡ್ತು. ಎಷ್ಟಾ ಆಗ್ಲಿ ಹರೇದ ಸೊಕ್ಕು ಮೈ ತುಂಬಾ ತುಂಬಿರತೈತಿ ನೋಡ್ರಿ, ಹಂಗಾಗಿ, 'ನಾನೇನು ಮಾಡೀನ್ರಬೇ ಅಂಥಾದ್ದು ? ಯಾಕ ಸುಮ್ಮನ ನಾಯಿ ಬೊಗಳಿದಂಗ ಬೊಳತೀರಿ ನನಿಗ್ಯ' ಅಂತ ಕೊಡವ್ಯಾಬಿಟ್ಟ.
ಅಡಗಿ ಮನಿಲಿಂದ ಯಾವಾಗ ಈ ಅವಾಜ್ ಕೇಳಿದ್ನೋ ಪಡಸಾಲ್ಯಾಗ ಕುಂತಿದ್ದ ಅಂಬಣ್ಣ, ರೌಸಿಲೇ ಎದ್ದೋಗಿ, ಕುಕ್ಕರಗಾಲಿಲೆ ಕುಂತಿದ್ದ ಹನುಮನ ಮೈಮ್ಯಾಗ ಏರಿದಂಗ ನಿಂತ್ಕಂಡು 'ಏನಾ ಬೊಗಳಿದಲ್ಲಲೇ, ಬೊಗಳು ಇಪಾಟು ? ಮನ್ಯಾಗ ಮಾಡಿ ಹಾಕಿದ್ದು ತಿಂದು ತಿಂದು ಮುಕಳಾಗ ಸೊಕ್ಕು ಜಾಸ್ತಿ ಆಗೈತೇನ್ಲೇ ನಿನಿಗ್ಯ? ಅಂತೇಳಿಕಂತನಾ, ತೆಗತಾ ತೆಗದು ಎಲ್ಡೇಟು ಕಪಾಳಕ್ಕ ಗಾವನಾಗೇ ಹೊಡದುಬುಟ್ಟ. ಕೂಲಿ ನಾಲಿ ಮಾಡಿ, ಮೈಮುರುದು ದುಡಿದಿದ್ದ ಅಂಬಣ್ಣನ ಕಲ್ಲಿನಂಥಾ ಅಂಗೈ ಹೊಡ್ತಕ್ಕ, ಹನುಮನ ಕಪಾಳದ ಮ್ಯಾಗ ನಾಕ್ ನಾಕು ಬೊಳ್ಳು ಹಂಗಾ ಬಾಚಲು ಮೂಡಿದ್ವು. ಯಾವಾಗ ಅಪ್ಪನಲಿಂದ ಹನುಮಾ ಕಡುಬು ತಿಂದನೋ, ಔನು ರೌಸಿಲೇ ಮ್ಯಾಕ ಎದ್ದುದ್ದೂ, 'ಹೌದೂ, ಹಿಂದೂ ಮುಂದು ನೋಡದಂಗಾ ಹಿಂಗ ಕಪಾಳಕ್ಕ ಹೊಡದೆಲ್ಲಾ, ಏನು ಮಾಡಕ್ಕಿತ್ತು ನಾನು ಮನ್ಯಾಗಿದ್ದು ? ಅದಾ ಹೌದಿಲ್ಲು, ನಾಕೆಮ್ಮಿ ಸೆಗಣಿ ಬಳದು, ಎಲ್ಡೆಮ್ಮಿ ಕರಾ ಬಿಟ್ಕಂಡು, ಡೈರಿಗೆ ಹಾಲು ಹಾಕಿ ಬರಾದೊಂದು ದೊಡ್ಡ ಕೆಲ್ಸೇನು ? ಇರಾ ಅಷ್ಟು ಸಣ್ಣ ಕೆಲಸನಾ ನಾನಾ ಮಾಡಿದ್ರ, ನೀನೇನು ಬಿಳೇ ಅಂಗಿ ಹಾಕ್ಕೊಂಡು ಓಣಿತುಂಬಾ ಅಡ್ಡಾಡಾಕು ಅಂತ ಮಾಡಿದ್ದೇನು?' ಅಂತ ಹಡದಪ್ಪಗಾ ಎದುರು ಮಾತಾಡಿಬಿಟ್ಟ. 
 ಮಗ ಯಾವಾಗ ವಯಸ್ಸಿಗೆ ಮೀರಿದ ಮಾತನ್ನು ಅಪ್ಪಗಾ ಎದುರಾಡಿದ್ನೋ ಮತ್ತೋಟು ತಾಳ್ಮಿ ಕಳಕಂಡ ಅಂಬಣ್ಣ, ಮತ್ತೆ ಮಗನ ಮ್ಯಾಗ ಕೈ ಮಾಡಾಕ ಹೋದಾಗ ರೊಟ್ಟಿ ಸುಡಾಕತ್ತಿದ್ದ ನಿಂಗಮ್ಮ ಎದ್ದು ಇಬ್ಬರ ನಡುಕೂ ನಿಂತಗಂಡು 'ನಿಮಿಗ್ಯ ಕೈ ಮುಗಿತೀನ್ರಪ್ಪಾ ಯಪ್ಪಾ, ಜೋರು ಬಾಯಿಗದ್ಲ ಮಾಡಿ ಓಣ್ಯಾಗಿನ ಜನಗಳೆಲ್ಲಾ ಅಂಗಳದಾಗ ನಿಂದ್ರಂಗ ಮಾಡಿ ಮರ್ಯಾದಿ ತೆಕ್ಕಬ್ಯಾಡ್ರಿ' ಅಂತೇಳಿ ಎದಿ ಉಬ್ಬಿಸಿ ನಿಂತಿದ್ದ ಮಗ ಹನುಮನ ಬುಜಾನ ಉರಿಯುತ್ತಿದ್ದ ಒಲಿ ಕಡಿಗೆ ತಿರುಗಿಸಿ 'ಲೋ ಅಡ್ಬಿಟ್ಟಿ ಸುಮ್ಮನ ರೊಟ್ಟಿ ತಿಂದು ನೆಡಿ, ಎಲ್ಲಿಗೆ ಹೊಕ್ಕಿಯೋ ಹಾಳಾಗಿ ಹೋಗು ಅತ್ಲಾಗ' ಅಂತ ಹೇಳತಿದ್ದಂಗನಾ, ಅವ್ವನ ಕೈಲಿಂದ ಕೊಸರಿಕಂಡ ಹನುಮ 'ಯಾವನಿಗೆ ಬೇಕ್ರಬೇ ನಿಮ್ಮ ಕೂಳು. ನೀವಾ ಗಂಡ ಹೆಂಡ್ತಿ ತಿಂದು ಸಾಯ್ರಿ. ಇವನೌನು ನಾನು ಇಲ್ಲಿ ದುಡಿಯಾದಾ ಯಾದರ ಬ್ಯಾರೆ ಕಡೀಗೆ ದುಡದ್ರ, ನಾಕು ರುಪಾಯಿನರಾ ಕೊಡ್ತಾರ, ನೀವೇನು ಕೊಡ್ತೀರಿ ಮಣ್ಣು. ಮಗ ವಯಸ್ಸಿಗೆ ಬಂದಾನ, ಅವನಿಗೀಟು ಏನರಾ ದಂದೆಕ್ಕ ಹಚ್ಚಾನು ಅನ್ನಾದು ಬಿಟ್ಟು, ಹೊಲ ನೋಡ್ಕ್ಯ, ಮನ್ಯಾಗಿನ್ನ ಎಮ್ಮಿ ಮೇಯಿಸ್ಕಂಡಿರು ಅಂತಿರಲ್ಲಬೇ ಮನಷ್ಯಾರೇನು ನೀವು?' ಅಂತ ತನ್ನ ಬುದ್ದಿವಂತಿಕಿ ಮಾತುಗಳನ್ನ ಆಡಿದ.
ಈ ಮಾತುಗಳನ್ನ ಕೇಳಿಸ್ಕಂಡಿದ್ದ ಅಂಬಣ್ಣ, 'ಲೇ ಲೋಪರಾ, ನಿನ್ನಲಿಂದ ನಮಿಗೇನು ಆಗಬೇಕಾಗಿಲ್ಲ. ಈಗ ನಿನ್ನ ಗಂಟು ಮೂಟಿನೆಲ್ಲಾ ಕಟ್ಟಿಗಂಡು, ಮನಿಬುಡು ಮದ್ಲು. ಅಲ್ಲಿ ನೋಡು ಹೊಸಲಿ ಹೊರಗ ಮಕ್ಕಂಡೈತಲ್ಲ ಆ ನಾಯಿಗೂ, ನಿನಿಗೂ ಏನೂ ವ್ಯತ್ಯಾಸನಾ ಇಲ್ಲ. ನಾವು ದುಡದಿದ್ದನ್ನ ತಿನ್ನ ನಾಯಿಲೇ ನೀನು. ವಂಟುಬುಡು, ಮದ್ಲು ಮನಿಬುಡು ನೀನು. ನನಿಗಿನ್ನೂ ನಾಕು ಮಂದಿ ಮಕ್ಕಳು ಅದಾವು' ಅಂತೇಳಿದ. 
ಹೌದು. ಅಂಬಣ್ಣ ನಿಂಗಮ್ಮ ಗಂಡ ಹೆಂಡ್ತಿಗೆ ಒಟ್ಟು ಐದು ಜನಾ ಮಕ್ಕಳದಾರ. ಹಿರೇ ಮಗ ಅವರವಾ ಇಪ್ಪತ್ತು ಕುರಿಗುಳು ಅದಾವು ಅವನ್ನ ಕಾಯತಾನ. ಮೂರನೇ ಮಗಾ ಮನ್ಯಾಗಿರಾ ನಾಕೆಮ್ಮಿ, ಹೊಲದ ಕೆಲಸಾನ ನೋಡಿಕಂತಾನ. ನಾಕನೋನು ಅದಾ ಊರಾಗಿನ ಕಿರಾಣಿ ಅಂಗಡ್ಯಾಗ ಕೆಲಸ ಮಾಡತಾನ. ಕೊನೇದು ಹೆಣ್ಣುಡುಗಿ ಸಾಲಿಗೆ ಒಕ್ಕಾಳ. ಈಗ ಆ ಹುಡುಗಿ ಪಿಯುಸಿ ಮಾಡತಾಳ.
ಅಂಬಣ್ಣನ ತುಂಬಿದ ಮನಿಯಾಗ ಏನೂ ಕೆಲಸ ಮಾಡದಂಗ ಮೋಜು ಮಾಡಿಕಂಡು ತಿರಗಾದು ಅಂದ್ರ ಈ ಹನುಮ ಒಬ್ಬನಾ. ಮನಿಯಾಗ ಯಾರೂ ಓದಿದ್ದಿಲ್ಲ. ಇವನು ಒಂದಿಟು ಜಾಣ ಅದಾನ ಅಂತ ಸಾಲಿಗೆ ಕಳಿಸಿದ್ರ ಎಸೆಲ್ಸಿ ಫೇಲಾಗಿ ಅತ್ಲಾಗ ಕೆಲ್ಸಾನೂ ಮಾಡದಂಗ, ಇತ್ಲಾಗ ಓದಾದ್ನೂ ಮಾಡದಂಗ ಬರೆ ಒಣ ಟಬುರು ಮಾಡಿಕಂತ ಥರ್ಡ್ ಕ್ಲಾಸ್ ಗುಂಪು ಕಟ್ಟಿಗಂಡು ಊರುತುಂಬಾ ತಿರಗತಿದ್ದ. ಮನ್ಯಾರು ಏನರಾ ಕೇಳಿದ್ರ, "ರೇ ಮಗ ತನಿಗ್ಯ ಖರ್ಚಿಗೆ ಬೇಕಾದಾಗೆಲ್ಲಾ ಹೋತ ಮಾರಿಕಂತಾನ, ಸಣ್ಣಾರ ಪೈಕಿ ಒಬ್ಬನು ಹಾಲಿನ ಬಟವಾಡಿ ದಿನ ಖರ್ಚಿಗೆ ತೆಕ್ಕಂತಾನ. ಇನ್ನೊಬ್ಬಾನು, ಕಿರಾಣಿ ಅಂಗಡಿ ಸಂಬಳದಾಗ ರ್ವಕ್ಕ ಉಳಿಸ್ಗಂತಾನ. ಅವ್ರಿಗೆಲ್ಲ, ಬೇಸಿ ನೋಡ್ಕಂಡೀರಿ, ನನ್ನ ಮಾತ್ರ ಹಿಂಗ ಕೈ ಬಿಟ್ಟೀರಿ. ಅದ್ಕ ನಾನು ನಿಮ್ಮ ಮನಿ ಬಿಟ್ಟೋಗಿ ನನ್ನ ಜೀವನಕ್ಕ ನಾನಾ ದುಡಕಂತೀನಿ' ಅಂತಂದು ಎದ್ರಿಗೆ ಇದ್ದ ದೊಡ್ಡ ಹಂಡೇದಾಗ ಒಂದು ಚಂಬು ನೀರು ತಗಂಡು ಗಟ ಗಟ ಕುಡುದು ತನ್ನ ಲುಂಗಿ ಏರುಗಟ್ಟಿಕಂತ ಮನಿಬಿಟ್ಟು ಹೊರಗ ಹೋದ.
 ಮಗಾ ಸೆಟಗಂಡು ಹೋಗಿದ್ದನ್ನ ನೋಡಿದ ನಿಂಗಮ್ಮ ತನ್ನ ಗಂಡಗ ಕೇಳಂಗ 'ಉಣ್ಣಲಿಲ್ಲದಂಗ ಹಂಗಾ ಹೋದ ನೋಡು ಔನು. ಉಂಡಿಂದೆ ನಿಮುವು ಏನರಾ ಜಗಳ ಇರ್ಲಿ ಮಾಡ್ಕೋರಿ. ಹಿಂಗ ಅಪ್ಪ ಒಂದು ನಮೂನಿ, ಮಗ ಒಂದು ನಮೂನಿ ಸೆಟಗಂಡ್ರ ಬಾಳೆವು ಅಕ್ಕಾವೇನು' ಅಂತಂದ್ಲು. ಎಷ್ಟಾ ಆಗ್ಲಿ ಅದು ಅವ್ವನ ಹೃದಯಾ ಐತಲ್ರಿ. ಮಗ ಎಂಥಾನಾ ಆಗಿಲ್ರಿ, ತುತ್ತು ಉಂಡುಬುಟ್ರ ಅವ್ವನ ಹೊಟ್ಟಿ ತಣ್ಣಗ ಇರತೈತಿ. ನಿಂಗಮ್ಮನ ಮಾತು ಕೇಳತಿದ್ದಂಗನಾ ಅಂಬಣ್ಣ 'ಲೇ ಬಿಡಿಕಿ, ಔನೆಲ್ಲಿಗೆ ಒಕ್ಕಾನ, ಸುಮ್ಮನ ನೀನು ರೊಟ್ಟಿ ಸುಟ್ಟು ಮುಂದ್ಲ ಕೆಲ್ಸ ನೋಡ್ಕ. ಈಗ ಹೊಟ್ಟಿ ಹಸಿದ್ರ ತಾನಾ ನಾಯಿ ಬಂದಂಗ ಬರ್ತಾನ' ಅಂತೇಳಿ ಮನಿಲಿಂದ ಎದ್ದು ತಾನೂ ಹೊರಗೋದ.
ಅದಾಗ್ಲೆ ಮಧ್ಯಾಹ್ನ ಆಗಿತ್ತು. ನಿಂಗವ್ವ ಅಂಗಳದಾಗ ಒಂದು ಚಾಪಿ ಹಾಸಿಗಂಡು ಮುಂದೆ ಒಂದು ರಾಶಿ ಸುರುವಿಕಂಡು ಒಂದು ಮರದಾಗ ಜ್ವಾಳನ ಹಸನು ಮಾಡಕತ್ತಿದ್ಲು. ಅವಾಗ ಮತ್ಯ ಬಂದ ಹನುಮನ್ನ ನೋಡಿ 'ಉಣ್ಣೋಗಲೋ, ಯಾಕಂಗ ಮಾಡ್ತೀದಿ' ಅನ್ನದನ್ನ ಕೇಳಿಸ್ಕಂತನಾ ಮನಿ ಹೊರಗಿನ ಕಟ್ಟಿ ಹತ್ರ ಚಪ್ಪಲಿ ಬುಟ್ಟು ಒಳಗೋದ ಹನುಮ ರೊಟ್ಟಿ ತಟ್ಟಿಗೆ ಮುರುದು ಹಾಕ್ಕೊಂಡು ಬಂದು ಪಡಸಾಲ್ಯಾಗ ಕುಂತ್ಕಂಡು ಉಣ್ಣಾಕ ಚಾಲೂ ಮಾಡಿದ. ಅಕ್ಕಡೆ ಗ್ವಾಡಿ ಹತ್ರ ಅಂಬಣ್ಣ ತುಂಬ ಹೊಚ್ಚಿಗಂಡು ಮಕ್ಕಂಡಿದ್ದ 'ಒಂದು ಹಸೇಕಾಯಿ ಕೊಡ್ಲೇನಣ್ಣಾ ?' ಅಕ್ಕರೆಯಿಂದ ಕೇಳಿದಳು ತಂಗಿ. ಬ್ಯಾಡ ಅನ್ನಂಗೆ ತಲೆಯಾಡಿಸಿದ ಹನುಮ.
ಹನುಮನ ಪರಿಸ್ಥಿತಿಯನ್ನು ನೋಡಿ ಒಳಗೊಳಗೇ ನೊಂದುಕೊಂಡಿದ್ದ ತಂಗಿ ಮತ್ಯ ಮಾತಾಡಿದ್ಲು. 'ಯಾಕಣ್ಣಾ ಸುಮ್ಮನಾ ಜಗಳ ಮಾಡತೀದಿ ಮನ್ಯಾಗ. ನೋಡು ಅಣ್ಣಾರು ಒಬ್ರರಾ ಹಿಂಗ ಗದ್ಲ ಮಾಡತಾರೇನು? ಅವುರು ಇವತ್ತಿಗೂ ಅಪ್ಪಗ ಇದಿರು ಮಾತಾಡಿಲ್ಲ. ಅದಕ್ಕ ಔರು ಏಟು ರ್ವಕ್ಕನರಾ ಖರ್ಚು ಮಾಡ್ಲಿ ನೆಡಿತೈತಿ. ನೀನು ತಲಿನಾ ಬಗ್ಗಸಾಲ ಅಂತೀಯಪ್ಪಾ, ನೋಡಣ್ಣಾ ಮುಂದೆ ಯಾರಿಗೆ ಯಾರೂ ಆಗಲ್ಲ, ನೀನು ದುಡದ್ರ ನಿನಿಗ್ಯಾ ಅಕೈತಿ, ಇವತ್ತು ನಿನ್ನ ನೋಡಿದ ಕೂಡ್ಲೆ ಥೂ ಅಂತ ಉಗುಳಾ ಇವರಿಗೆಲ್ಲಾ ನೀನು ಬೇಸಿ ದುಡುದು ಉತ್ರ ಕೊಡಬೇಕು. ನಿನ್ನ ಕಂಡ್ರ ಮನ್ಯಾಗ ಎಲ್ಲರೂ ಮರ್ಯಾದಿ ಕೊಡಬೇಕು. ಹಂಗಿರಾಕಣ್ಣಾ. ನೀನೋಡಿದ್ರ ಯಡವಟ್ಟನಂಗಾಡ್ತಿದಪ್ಪಾ. 
 ಆ ಶಿಲ್ಪ ಅದಾಳಲ್ಲ ಆಕಿ 'ಏನ್ಲೇ ನಿಮ್ಮ ಹನ್ಮಣ್ಣಗ ಮನ್ಯಾಗ ಎಲ್ಲರೂ ಹಂಗ ಬೈತಾರಲ್ಲ. ಹಂಗ ಬೈಸ್ಕಣಾದಕ್ಕಿಂತ್ಲೂ ಎಲ್ಲೆರ ಹೋಗಿ ಬೇಸಿ ದುಡಕಂಡು, ರ್ವಕ್ಕ ಮಾಡಿಕಂಡು ಬಂದು, ಇಲ್ಲೆ ಏನರ  ಯಾಪಾರ ಮಾಡಿದ್ರ ಆಗಲ್ಲಂತೇನು' ಅಂತಂದ್ಲಣ್ಣಾ, ನನಿಗ್ಯ ಎಷ್ಟು ಅವಮಾನ ಆತು ಗೊತ್ತೇನು ಅವಾಗ' ಅಂತೇಳಿದ್ಲು. ಯಾವಾಗ ತಂಗಿಲಿಂದ ಇಂಥಾ ಮಾತುಗಳನ್ನ ಕೇಳಿದ್ನೋ ಹನುಮಗಾ ಮಿಂಚು ಹೊಡದಂಗಾಗೋತು. ಯಾಕಂದ್ರ ತನ್ನ ತಂಗಿ ಎದ್ರಿಗೆ ಹಂಗ ಮಾತಾಡಿದಾಕಿ ಹನುಮನ ಮನಸಿನ್ಯಾಗ ಮನಿ ಮಾಡಿದಾಕಿ ಆಗಿದ್ಲು. ಅದು ಅವನ ತಂಗಿಗೂ ಗೊತ್ತಿತ್ತು. ಈಗ ಈ ಮಾತುಗಳನ್ನ ಕೇಳತಿದ್ದಂಗನಾ ಹನುಮನ ಕಣ್ಣು ತುಂಬಿ ಬಂದ್ವು. ಅಲ್ಲಿಂದ ಒಂದು ತಿಂಗಳು ಬಾಳ ಸೈಲೆಂಟಾಗಿಬಿಟ್ಟ. ಮನಿಬಿಟ್ಟು ಎಲ್ಲಿಗೂ ಹೋಗದಂಗ ಮನ್ಯಾಗಿನ ಎಲ್ಲಾ ಕೆಲಸಗಳನ್ನು ಮಾಡಾಕತ್ತಿದ. ತನ್ನ ಥರ್ಡ್ ಕ್ಲಾಸ್ ಗುಂಪನ್ನ ಮರತಾಬಿಟ್ಟ. ಇದನ್ನೆಲ್ಲ ನೋಡತಿದ್ದ ಅಂಬಣ್ಣ ನಿಂಗಮ್ಮರಿಗೆ ಒಳಗೊಳಗೇ ಹಿಗ್ಗಾಗುತ್ತಿತ್ತು. ಮಗ ಇನ್ನೇನು ಹಾದಿಗೆ ಬಂದ ಅಂತ ಅವ್ರು ಖುಲಿಂದ ಇರುವಷ್ಟೊತ್ತಿಗೆ ಅವತ್ತೊಂದಿನ ಮದ್ಯಾಹ್ನ ಅಪ್ಪನ ಎದ್ರಿಗೆ ನಿಂತ್ಗಂಡ ಹನುಮಾ, ಕೈ ಕೈ ಹಿಚುಕಿಕೊಳ್ತಾ, ತಲೆತಗ್ಗಿಸಿ ನಿಂತ್ಗಂಡು 'ಯಪ್ಪಾ ನನಿಗೀಟು ರ್ವಕ್ಕ ಕೊಡು ನಾನು ಬೆಂಗಳೂರಿಗೆ ಒಕ್ಕೀನಿ ದುಡಿಯಾಕ' ಅಂದುಬುಟ್ಟ. 
ಸರಿದಾರಿಗೆ ಬಂದಿದ್ದ ಮಗಾ ಏಕಾ ಏಕಿ ಮನಿಬಿಡಾ ಮಾತಾಡಿದ್ಕ ಅಂಬಣ್ಣನ ಎದಿಯೊಳಗ ಮುಳ್ಳು ಚುಚ್ಚಿದಂಗಾತು 'ಹೇ ಹೋಗ್ಲೇ ಯಾ ಬೆಂಗ್ಳೂರಿಗೆ ಒಕ್ಕೀದಿ. ಯಾವೂರಿಗೂ ಹೋಗಬ್ಯಾಡೋಗು. ಇಲ್ಲೇ ಏನರಾ ಮಾಡಿಕಂಡಿರು. ನಿನ್ನ ಹಣೆಬರದಾಗ ಇದ್ದಂಗಾಕೈತೋಗು' ಅಂತ ಕಣ್ಣು ತುಂಬಿಕಂಡು ಹೇಳಿದ್ದ. ಆದ್ರ ಹನುಮ ತಾನು ಊರು ಬಿಡಾಕಬೇಕು ಅಂತ ತೀರ್ಮಾನ ಮಾಡಿದ್ದರಿಂದ ಹಟ ಮಾಡಿ ರ್ವಕ್ಕ ತಗಂಡು ಒಂದು ಜೊತಿ ಬಟ್ಟಿನ ಒಂದು ಚೀಲದಾಗ ತುಂಬಿಕಂಡು ಮನ್ಯಾಗಿನ ಎಲ್ಲರಿಗೂ ಹೇಳಿ ಮನಿಬಿಡಾಕರ, ಅಂಗಳದವರಿಗೂ ಬಂದ ಅವನ ತಂಗಿ 'ಯಣ್ಣಾ ಬೆಂಗ್ಳೂರಾಗ ಉಷಾರಿರು. ಜಾಸ್ತಿ ಖರ್ಚು ಮಾಡಬ್ಯಾಡ. ಮೂರ್ನಾಕು ದಿಸಕ್ಕೊಮ್ಮಿ ನಾನು ಶಿಲ್ಪಿಕುಟಾಗ ಪೋನ್ ಮಾಡ್ಸಿ ಮಾತಾಡಿಸ್ತೀನಿ. ಒಮ್ಮೆರೆ ನಮ್ಮೂರ ತೇರಿಗೆ ಬೇಸಿ ದುಡಕಂಡು ಬರಾಕುನೋಡು' ಅಂತೇಳಿದಾಗ ಅಕಿ ಕಣ್ಣಾಗ ನೀರು ತುಂಬಿಕಂಡಿತ್ತು. ಆ ಟೈಂನಾಗ ಹನುಮುಗೂ ಕಣ್ಣೀರು ಬಂದ್ರೂ ತೋರಿಸ್ಗಣದಂಗ 'ಆತು ಬುಡಬೇ ನಾ ಇನ್ನು ಬರ್ತೀನಿ' ಅಂತೇಳಿ ಬಸ್ ಸ್ಟ್ಯಾಂಡಿಗೆ ಸ್ವಲ್ಪ ದೂರ ಬರಾತ್ಗೆ ಅವನ ಹಿಂದೆ ಬಟ್ಟೆ ಗಂಟು ಹಿಡಕೊಂಡು ಶಿಲ್ಪ ಬರಾದನ್ನ ನೋಡಿ ನಿಂತ್ಕಂಡ. 
 ಅವಾಗ ಹತ್ರಕ್ಕ ಬಂದ ಶಿಲ್ಪ 'ಉಷಾರಾಗಿರು. ಅವಾಗವಾಗ ನಿಮ್ಮ ತಂಗೀಗೆ ಪೋನ್ ಮಾಡು. ಅವತ್ತು ನಾನ್ಯಾಕ ಹಂಗ ನಿಮ್ಮ ತಂಗಿ ಎದ್ರಿಗೆ ಅಂದೆನಂದ್ರ, ತನಗ  ಗಂಡ ಆಗೋನು ತನ್ನ ಮನ್ಯಾರೆದ್ರಿಗೇ ಕೈಲಾಗದೋನಂಗ ಕೈ ಕಟ್ಟಿಗಂಡು ನಿಂತ್ಗಂಡು ಬೈಸ್ಕಣಾದ್ನ ಯಾವ ಹುಡುಗಿ ನೋಡಾಕ ಬಗಸ್ತಾಳ ನೀನಾ ಹೇಳು? ಅದ್ಕಾ ಹಂಗಂದ್ಯ ತಪ್ಪು ತಿಳ್ಕಬ್ಯಾಡ' ಅಂತೇಳಿ ಅಕಿ ಮುಟುಗಿಯೊಳಗ ಮುಚ್ಚಿಗಂಡಿದ್ದ ಐನೂರುಪಾಯಿನ ಹನುಮನ ಬಕ್ಕಣಕ್ಕ ತುರುಕಿ, ಏನೂ ಮಾತಾಡದಂಗ ಕಣ್ಣೀರು ಸುರಿಸಿಕೋತ ಹೋಗಿಬಿಟ್ಲು. ಜೀವನದಾಗ ಅದಾ ಮದ್ಲನೇ ಸರತಿ ಹನುಮಗ ತನ್ನ ತಪ್ಪು ಅರುವಾಗಿತ್ತು. ತಾನೂ ನಾಕು ಮಂದಿಯಂಗ ಬೇಸಿ ಬದುಕಬೇಕು, ಕೈ ಹಿಡಿಯಾಕಿಕುಟಾಗೂ, ಹಡದೋರಕುಟಾಗೂ, ಊರಿನೋರಕುಟಾಗೂ ಒಳ್ಳೇನಪ್ಪಾ ಅನ್ನಿಸ್ಕಬೇಕು. ಕಳದೋದ ಮರ್ಯಾದಿನ ಹೊಳ್ಳಿ ಪಡೀಬೇಕು ಅನ್ನಂಥ ಪ್ರಣತಿ ಬೆಳಕು ಬೆಳಗಿತ್ತು.
ಹನುಮನ ಕಣ್ಣೀರು ಸುರಿಸೋದು ನೋಡಿ ಮಗ್ಗಲದಾಗ ಕುಂತಿದ್ದ ಬೆಂಗಳೂರಿನ ಒಬ್ಬ ಯಜಮಾನ 'ಯಾಕೋ ಮಗಾ ಊರು ನೆನಪಾಯ್ತಾ ?' ಕೇಳುತ್ತಲೇ ನೆನಿಕೆಯಿಂದ ವಾಸ್ತವಕ್ಕೆ ಬಂದ ಹನುಮ, ಅದಾಗಲೇ ಕೆನ್ನೆ ದಾಟುತಿದ್ದ ಕಣ್ಣೀರನ್ನ ಒರಿಸಿಕೋತ 'ಹಂಗೇನಿಲ್ಲ ಧಣಿ ನಾಡಿದ್ದು ಊರಾಗ ಹಬೈತಿ. ನಾಳೆ ಊರಿಗೆ ಹೋಗಬೇಕಲ್ಲ ಅದ್ಕ ಅಳೇದೆಲ್ಲ ನೆಪ್ಪಾತು' ಅಂತೇಳಿದ. ಈಗ ಹನುಮ ಬೆಂಗಳೂರಿಗೆ ಬಂದು ಬರೊಬ್ಬರಿ ನಾಕು ವರ್ಸ ಆಗಿದ್ವು. ಒಂದಾ ವರ್ಸಕ್ಕಾ ವಳ್ಳಿ ಬರ್ತೀನಿ ಅಂತೇಳಿ ಬಂದಿದ್ದವನಿಗೆ ಜೀವನದ ಸತ್ಯ ಗೊತ್ತಾಗಿ ತಾನೂ ಸಮಾಜದಾಗ ಒಂದು ಒಳ್ಳೇ ಸ್ಥಾನ ಪಡಕಂಡು, ನನ್ನ ಹೆತ್ತೋರು, ನನ್ನ ನೆಚ್ಚಿಕೊಂಡೋಳು, ಹೆಮ್ಮೆಯಿಂದ ನನ್ನ ಬಗ್ಗೆ ನಾಕು ಜನಕ್ಕ ಹೇಳಿಕಣಂಗ ಬದುಕಿ ತೋರಿಸ್ಬೇಕು ಅಂತೇಳಿ ಹಠಕ್ಕ ಬಿದ್ದು ಬೆಂಗಳೂರಿನ ಮಾರ್ಕೆಟ್ಟಿನಲ್ಲಿ ಮೊದ ಮೊದಲು ಮೂಟೆ ಹೋರತಿದ್ದೋನು ಕ್ರಮೇಣ ಒಂದು ಹಣ್ಣಿನ ಅಂಗಡಿಯಲ್ಲಿ ವ್ಯಾಪಾರ ಮಾಡೋ ಹುಡುಗನಾಗಿ ಹೆಚ್ಚುವರಿ ಖರ್ಚು ಏನೂ ಮಾಡದಾ ತನ್ನ ಖಾತಿಯೊಳಗ ಮೂರು ಲಕ್ಷದಾ ಇಪ್ಪತ್ತು ಸೌರ ಉಳಿಸಿದ್ದ.
ಹಳ್ಳಿಯಲ್ಲಿ ಹರಾಮಿ ಅನ್ನಿಸಿಕೊಂಡಿದ್ದ ಹನುಮನಿಗೆ ಈಗ ಜವಾಬ್ದಾರಿಯನ್ನ ರೋಮ ರೋಮದಲ್ಲೂ ತುಂಬಿಕೊಂಡ ಧೀಮಂತ ವ್ಯಕ್ತಿತ್ವದವನಾಗಿದ್ದ. ಇಷ್ಟೆಲ್ಲಾ ಘಟನೇನ ನೆನಪು ಮಾಡಿಕೊಂಡು ಮನಸ್ಸು ಅವ್ವಳಿಗೆ ಹಂಬಲಿಸೋ ಮಗುವಿನಂಗಾಗಿತ್ತು. ಹಂಗಾಗಿ ರಾತ್ರಿ ಊಟಾನೇ ಮಾಡದೆ ಹಂಗಾ ಮಕ್ಕೊಂಡು ಮುಂಜಾಲೆ ಎದ್ದು ಮದ್ಯಾಹ್ನದವರೆಗೂ ಹಣ್ಣಿನ ಅಂಗಡೀಲಿ ಕೆಲ್ಸ ಮಾಡಿ ಮದ್ಯಾಹ್ನ ಮಾರ್ಕೆಟ್ಟಿಗೆ ಹತ್ರದಲ್ಲಿರೋ ಎಟಿಎಂಗೋಗಿ ಹತ್ತು ಸಾವಿರ ರ್ವಕ್ಕ ಬಿಡಿಸಿಕಂಡು ಮನ್ಯಾರಿಗೆ ಎಲ್ಲರಿಗೂ ಬಟ್ಟಿ ತಗಂಡು, ತನ್ನ ಹುಡುಗೀಗೊಂದು ಸೀರೆ ತಗಂಡು ಬಂದು ಅಂಗಡಿ ಮಾಲಿಕಗ 'ಇನ್ನು ನಾ ಬೆಂಗಳೂರಿಗೆ ಬರಲ್ರೀ ಧಣೀ, ಇಷ್ಟು ದಿನ ನನ್ನ ಮನಿ ಮಗನಂಗ ನೋಡಿಕಂಡಿದ್ಕ ನಿಮ್ಮ ಋಣಾನ ನಾ ಸತ್ರೂ ಮರಿಯಲ್ಲ. ಮುಂದ್ಲ ಬಸಂಜಯಂತಿಗೆ ನನ್ನ ಮದ್ವಿ ಅಕೈತಿ, ನನ್ನ ಸಲುವಾಗಿ ನಮ್ಮ ಹಿರೇಅಣ್ಣನೂ ಮದ್ವಿಯಾಗಿಲ್ಲ. ತಂಗಿದೂ ಆಗಿಲ್ಲ. ಆಕಿ ಬಿಪಿಎಡ್ ಮಾಡಕತ್ಯಾಳಂತ್ಯ ನನ್ನ ಇನ್ನೊಬ್ಬ ತಮ್ಮಂದೂ ಸೇರಿ ಒಟ್ಟು ನಾಕೂ ಮಂದಿ ಲಗ್ನಾನ ಒಮ್ಮಿಗೇ ಹಮ್ಮಿಕಂತೀವಿ. ನಿಮಿಗೆ ಬಂದು ಲಗ್ನಪತ್ರ ಕೊಟ್ಟು ಹೊಕ್ಕೀನಿ ಲಗ್ನಕ್ಕ ಬರಬೇಕು ನೋಡ್ರೀ' ಪ್ರೀತಿಯಿಂದ ಹೇಳಿದ ಹನುಮನ.
ಹನುಮನ ಈ ಮಾತು ಕೇಳಿದ ಆ ಹಣ್ಣಿನ ಅಂಗಡಿ ಯಜಮಾನ ಕಣ್ಣು ತುಂಬಿಕಂಡು 'ನಿನ್ನ ಒಳ್ಳೇತನ ನಿನ್ನ ಎಲ್ಲಿದ್ರೂ ಕಾಪಾಡ್ತೈತಿ ಹೋಗು ಮಗಾ, ನೀನೇನೂ ಚಿಂತೆ ಮಾಡಬೇಡ. ನೀನು ಎಲ್ಲಿದ್ರೂ ಚೆನ್ನಾಗಿಯೇ ಇರ್ತೀಯಾ. ನಿಂಗೆ ಹಳ್ಳಿ ಒಗ್ಗಲಿಲ್ಲಾಂದ್ರೆ ಯೋಚ್ನೆನೇ ಮಾಡ್ಬೇಡ. ಹೆಂಡ್ತಿ ಸಮೇತ ಇಲ್ಲಿಗೇ ಬಂದುಬಿಡು, ನಮಗೂ ಹೆಂಗೂ ಮಕ್ಕಳಿಲ್ಲ. ನಮ್ಮನ್ನ ಮುಪ್ಪಿನ ಕಾಲಕ್ಕೆ ನೋಡಿಕೊಳ್ಳೋಕೆ ನಿನ್ನಂಥಾ ಮಗನ್ನ ಬಯಸೋದು ತಪ್ಪಾಗಲ್ಲ. ಬೆಕಿದ್ರೆ ನಮ್ಮ ಮನೆ, ಈ ಹಣ್ಣಿನ ವ್ಯಾಪಾರ ಎಲ್ಲವನ್ನೂ ನಿಂಗೆ ಬರೆದು ಕೊಡ್ತೀವಿ. ಯಾವುದಕ್ಕೂ ಹೆದ್ರಬೇಡ. ಹೋಗಿ ಬಾ' ಅಂತೇಳಿ ಪ್ರೀತಿಯಿಂದ ಹತ್ತು ಸಾವಿರ ರೂಪಾಯಿಗಳನ್ನ ಒಲ್ಲೆ ಒಲ್ಲೆ ಎಂದರೂ ಹನುಮನ ಜೇಬಿಗೆ ತುರುಕಿದರು. ಹನುಮನ ದಾರಿ ಕಾಯುತ್ತಾ ಶಿಲ್ಪ ತನಗೊಲಿದು ಬಂದಿದ್ದ ಆರು ಸಂಬಂಧಗಳನ್ನ ನಿಷ್ಟುರವಾಗಿ ತಿರಸ್ಕರಿಸಿದ್ದಳೆಂಬುದು ಹನುಮನ ಮನದಲ್ಲಿ ಹಾಗೇ ಅಚ್ಚೊತ್ತಿತ್ತು. ಅಷ್ಟೊತ್ತಿಗೆಲ್ಲ ಹೊತ್ತು ಮುಳುಗಿ ಕತ್ತಲಾಗಿತ್ತು. ಎರೆಡು ಭರ್ತಿ ತುಂಬಿದ ಬ್ಯಾಗ್ ಗಳೊಂದಿಗೆ ಹನುಮ ಮೆಜೆಸ್ಟಿಕ್ ಹತ್ತಿರ ಬಂದಾಗ ಅವನ ಹಳ್ಳಿಗೆ ಹೊರಡುವ ಬಸ್ ಬಂದು ನಿಂತಿತ್ತು.

Monday, 29 July 2013

my imagination story 07

 ಕನಸಿನ ಸಮಾಜ
 ಅವನೊಬ್ಬ ವಿಚಿತ್ರ ವ್ಯಕ್ತಿ. ವಯಸ್ಸು ಇಷ್ಟೇ ಇರಬೇಕೆಂದು ಬಲ್ಲವರಿಲ್ಲ. ಸುಕ್ಕು ಸುಕ್ಕಾಗಿ ಹಸಿರು ಪಾಚಿಯಂತೆ ಬೆಳೆದ ತಲೆಗೂದಲಿಗೆ ನುರಿತ ಕ್ಷೌರಿಕನ ಮೊನಚು ಕತ್ತರಿಯೂ ಭಯಬೀಳುತ್ತಿತ್ತು. ಢಾಳು ಮಣ್ಣು ಮೆತ್ತಿದ್ದ ಕಪ್ಪಾತಿ ಕಪ್ಪು ವರ್ಣದ ಮುದುಡಿದ ಚರ್ಮದ ಮೇಲೆ ರಾಗಿ ಕಾಳನ್ನು ಎಸೆದು ಒಂದಷ್ಟು ನೀರು ಚೆಲ್ಲಿಬಿಟ್ಟರೆ ನಾಲ್ಕಾರು ದಿನಗಳಲ್ಲಿ ಮೊಳಕೆ ಗ್ಯಾರೆಂಟಿ. ಇಷ್ಟಗಲ ಕಿವಿಗಳ ಮೇಲೆ ಮೂರಿಂಚು ಉದ್ದದ ಬೆಳ್ಳಿ ಪೊದೆಗೂದಲು ಸುರುಳಿ ಸುತ್ತಿಕೊಂಡಿದ್ದವು. ನೆರೆತ ಹುಬ್ಬುಗಳ ಕೆಳಗೆ ಜೋತುಬಿದ್ದ ಅಮಲು ಕಣ್ಣುಗಳಲ್ಲಿ ಈ ಲೋಕವನ್ನು ನಾ ಬಲ್ಲೆ ಎಂಬ ಅರ್ಧ ಚಂದ್ರ ಇಣುಕುತ್ತಿತ್ತು. ನೀಳ ಮೂಗಿನ ಹೊಳ್ಳೆಯಿಂದ ಒಮ್ಮೆ ಉಸಿರು ಹೊರ ಬಂದರೆ ಆ ಮೂಗ ಕೆಳಗಿನ ಗಾಢ ಮೀಸೆಯ ಕೆಲವು ಕೂದಲುಗಳು ಕುಣಿದು ಕುಳಿತುಕೊಳ್ಳುತ್ತಿದ್ದವು. ಇನ್ನು ಆ ದಪ್ಪ ದಪ್ಪ ಮೀಸೆ ಬೆಳೆದು ಕಪ್ಪು ಮೇಲ್ದುಟಿಯ ಗಡಿದಾಟಿ ಕೆಳದುಟಿಯ ಹೆಬ್ಬಂಡೆ ಮೇಲೆ ಮೈಬಿಚ್ಚಿ ಮಲಗಿದಂತಿದ್ದವು. ಮಖದ ತುಂಬಾ ಗಡತ್ತಾಗಿ ಬೆಳೆದಿದ್ದ ಗಡ್ಡದ ಸೊಕ್ಕು, ತಾತನ ಮುದುಡಿದ ಎತ್ತರದ ಕತ್ತನ್ನೂ ಮುಚ್ಚಿಕೊಂಡು ಎದೆಯ ಮಧ್ಯದ ಗರಿಕೆ ಕೂದಲಿಗೆ ಮುತ್ತಿಡುತ್ತಿದ್ದವು. 
ಆರಡಿ ಎತ್ತರದ ಗರಡಿಯಲ್ಲಿ ಪಳಗಿದ ದೇಹಕ್ಕೆ ಮುಂಗೈಗಪ್ಪಿನ ಉದ್ದುದ್ದ ಬಿದ್ದಿದ್ದ ಜುಬ್ಬದ ಮೇಲೆ ಜಗತ್ತಿನ ಸಕಲ ತ್ಯಾಜ್ಯದ ಕಲೆಗಳು ಮೇಳೈಸಿದ್ದವು. ಅವನು ತೊಟ್ಟುಕೊಂಡಿದ್ದ ಪಂಜೆಯೊಳಗೆ ಅದೆಷ್ಟು ಕೂರಿಗಳಿದ್ದವೋ ಭಗವಂತ ಅಂತ ಇದ್ರೆ ಅವನೇ ಬಲ್ಲ. ಈ ತಾತನ ಕೈಕಾಲುಗಳಲ್ಲಿ ಬೆಳೆದ ಎರಡಿಂಚು ಉದ್ದದ ಕಪ್ಪು ಉಗುರುಗಳನ್ನು ನೋಡಿದ್ದರೆ ಆ ಅಂಗುಲಿ ಮಾಲ ಇವನ ಇಪ್ಪತ್ತು ಉಗುರುಗಳಿಂದ ಮೈತುಂಬಿಕೊಳ್ಳುವಂಥಹ ಸರವನ್ನೇ ಹಾಕಿಕೊಳ್ಳಬಹುದಿತ್ತು. ಇಂಥಹ ಸಕಲ ವಾಕರಿಕೆಯ ಮೇರು ವ್ಯಕ್ತಿಯ ಪಕ್ಕದಲ್ಲಿ ಒಂದು ನಜ್ಜುಗುಜ್ಜಾದ ಸಿಲ್ವರ್ ತಟ್ಟೆ, ಒಂದು ಆಧುನಿಕ ಯುಗದ ಮಗ್ ಮತ್ತೊಂದು ಹಳೇ ಕಾಲದ ಕಂಚಿನ ಲೋಟಗಳು ತಮಗಿಷ್ಟಬಂದಂತೆ ಬಿದ್ದಿರುತ್ತಿದ್ದವು. ತಾತನ ಉದ್ದುದ್ದ ಜುಬ್ಬದ ಒಂದು ಬಕ್ಕಣದಲ್ಲಿ ಒಂದು ಚಿಲುಮೆ, ಮತ್ತೊಂದು ಜೇಬಲ್ಲಿ ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಮೂರು ಮೈಲಿ ಘಂಗುಡುವ ಹೊಗೆಸೊಪ್ಪು ನಗು ಚೆಲ್ಲುತ್ತಿತ್ತು. ಈ ತಾತನಿಗೆ ವಿಶೇಷವಾಗಿ ಮನೆಯೇನೂ ಇರಲಿಲ್ಲ, ಅವನ ಒಂದು ಏರಿಯಾದಲ್ಲಿ ಒಂದು ಹರಟೆ ಕಟ್ಟೆಯ ಮರದ ಬುಡದಲ್ಲಿ ಆ ಮರಕ್ಕೆ ಬೆನ್ನುಕೊಟ್ಟು ತಗ್ಗಿಸಿದ ಹಣೆಗೆ ತನ್ನ ಒಂದು ಕೈಯನ್ನು ಆಸರೆ ಕೊಟ್ಟು ಸದಾ ಯಾವುದೋ ಬ್ರಾಂತುವಿನಲ್ಲಿ ಮುಳುಗಿರುತ್ತಿದ್ದವನಿಗೆ ಆ ಏರಿಯಾದಲ್ಲಿ ಮೊದಲು ಯಾರ ಮನೆಯಲ್ಲಿ ಬಿಸಿಯೂಟವಾದರೂ ಸರಿಯೇ ಮೊದಲು ಈ ತಾತನ ತಟ್ಟೆಗೆ ಪ್ರಸಾದದ ರೂಪದಲ್ಲಿ ಬಂದು ಇವನ ಹಸಿವಿಗೆ ತೇಪೆ ಹಾಕುತ್ತಿತು.
 ಇಂಥಹ ಅಜ್ಜನ ಸುತ್ತು ಏಳೆಂಟು ನಾಯಿಗಳು ತನ್ನ ನಡುವಿನಲ್ಲಿ ತನ್ನ ಮುಖಗಳನ್ನು ಮುಚ್ಚಿಕೊಂಡು ಮಲಗಿರುತ್ತಿದ್ದವು. ವಿಚಿತ್ರ ಅಂದ್ರೆ, ಸ್ವಲ್ಪ ದೃಷ್ಟಿ ದೋಷ ಪಡೆದಿದ್ದ ತಾತನ ತಟ್ಟೆಯಲ್ಲಿ ಅದೆಷ್ಟೇ ಆಹಾರವಿದ್ದರೂ ತಾತ ತಿಂದು ಉಳಿಸುವವರೆಗೂ ಅಲ್ಲಿಯ ಯಾವ ನಾಯಿಗಳು ದುಡುಕಿ ತಟ್ಟೆಗೆ ಬಾಯಿ ಹಾಕಿದ್ದನ್ನು ಇದುವರೆಗೂ ಯಾರೂ ನೋಡಿರಲಿಲ್ಲ. ಮತ್ತು ಆ ನಾಯಿಗಳು ಯಾವುದೇ ಸಂದರ್ಭದಲ್ಲೂ ಈ ತಾತನನ್ನು ಅಗಲಿ ಆಚೆ ಹೋದದ್ದನ್ನೂ ಕಂಡವರಿಲ್ಲ. ಯಾವಾಗಲೂ ಮಂಪರಿನಲ್ಲೇ ಇದ್ದಂತೆ ಕಾಣುತ್ತಿದ್ದನ ತಾತನ ಚೈತನ್ಯವೇ ಆ ಚಿಲುಮೆ. ತನಗೆ ಬೇಸರವಾದಾಗಲೆಲ್ಲಾ ಒಂದಷ್ಟು ಹೊಗೆಸೊಪ್ಪನ್ನು ಚಿಲುಮೆ ಜಠರಕ್ಕೆ ತುಂಬಿ ಶಿವ ಎನ್ನುತ್ತಾ ಕಡ್ಡಿಗೀರಿ ಎರಡು ಜುರುಮೆ ಜೋರಾಗಿ ಹೊಗೆ ಕುಡಿದನೆಂದರೆ ತಾತನ ಕಪ್ಪು ಗಲ್ಲದ ಮೇಲೆ ಕೆಂಡ ಕನಲುತಿತ್ತು. ವಿಪರೀತ ಹೊಗೆಸೊಪ್ಪು ಸೇದುವುದರ ಜೊತೆಗೆ ಹಲ್ಲುಗಳನ್ನು ಉಜ್ಜದೇ ಇದ್ದ ತಾತನ ಹಲ್ಲುಗಳು ಉಣಸೆ ಬೀಜದ ಬಣ್ಣಕ್ಕೆ ಸೆಡ್ಡು ಹೊಡೆದಿದ್ದವು. ಸ್ವಾದವನ್ನು ಕಳೆದುಕೊಂಡಂತಿದ್ದ ನಾಲಿಗೆಗೆ ಹಸಿರ ಹಾವನ್ನೂ ಅಣಕಿಸುವ ದೈರ್ಯವಿತ್ತು. ಇಷ್ಟೆಲ್ಲಾ 'ಗಲೀಜು'ಗಳ ಗಾರುಡಿಗನಿಗೆ ಗ್ರಾಮದ ಪ್ರತಿ ನರಪಿಳ್ಳೆಯೂ ಮರ್ಯಾದೆ ಕೊಡುತ್ತಿತ್ತು. ಅದಕ್ಕೆ ಬಲವಾದ ಕಾರಣವೂ ತುಂಬಿತ್ತು. ಇಷ್ಟೆಲ್ಲಾ ಇಂಟ್ರೆಸ್ಟಿಂಗ್ನ ಇಳಿವಯಸ್ಸಿಗನ ಹೆಸರು
ಸ್ವರ್ಣಾಕರ.
ಈ ಸ್ವರ್ಣಾಕರ ಹಗಲಿನಲ್ಲಿ ಮಾತ್ರ ಒಂದು ಕಟ್ಟೆಗೆ ಮೂರ್ತಿಯಾಗುತ್ತಿದ್ದ. ಆದರೆ ಕತ್ತಲು ಕಂಗಳನ್ನು ಮೆತ್ತುತ್ತಲೇ ಗ್ರಾಮದ ಸರಕಾರಿ ಶಾಲೆಯತ್ತ ನಡೆದುಬಿಡುತ್ತಿದ್ದ. ಅಲ್ಲಿ ಅವನ ಮೆತ್ತೆಗಳಿದ್ದವು ಬೆಳಗಿನವರೆಗೂ ಅವನ ವಾಸ್ತವ್ಯ ಅಲ್ಲೇ. ಜೊತೆಗೆ ಏಳೆಂಟು ನಾಯಿಗಳ ಸಾಥ್ ಬೇರೆ ಇದ್ದೇ ಇರುತ್ತಿತ್ತು. ಅಷ್ಟಕ್ಕೂ ಈ ಸ್ವರ್ಣಾಕರನಿಗೆ ಆ ಗ್ರಾಮದ ಜನತೆ ಮರ್ಯಾದೆ ಕೊಡಲು ಹಲವು ಕಾರಣಗಳಿದ್ದವು. ಅವನ ದೇಹ ಮಾತ್ರ ಗಲೀಜಾಗಿತ್ತು. ಆದರೆ ತಾತನ ಜೀವನಾನುಭವದ ಮಾನವೀಯ ನಿಲುವುಗಳಿಗೆ ಇವತ್ತಿನ ಸಮಾಜ ಸುಧಾರಕರು, ಪ್ರಜ್ಞಾವಂತರು, ಚಿಂತಕರು, ಊರಲ್ಲಿನ ದೊಡ್ಡೋರು ಅನ್ನಿಸಿಕೊಂಡೋರು, ಸಮಾನತೆಗೆ ಹವಣಿಸೋ, ಹೊಸ ಸಮಾಜದ ಕನಸ ಕಂಗಳೋರು, ಹೀಗೆ ಸಮಾಜದಲ್ಲಿನ ಒಟ್ಟು ವರ್ತುಲದ ಎಲ್ಲರೆಂದರೆಲ್ಲರೂ ತಲೆದೂಗಿ ಅವನ ವಿದ್ವತ್ತಿನ ಮುಂದೆ ನಮ್ಮ ಸರ್ಟಿಫಿಕೆಟ್ ಜ್ಞಾನ ಸುಟ್ಟ ಬದನೇಕಾಯಿ ಎಂಬುದನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಿದ್ದರು. ಇಂಥಹ ವಿಶಿಷ್ಟ ತಾತನಿಗೆ, ಗ್ರಾಮದಲ್ಲಿ ಒಂದೇ ಒಂದು ಕುಟುಂಬದಲ್ಲಿ ಬಿರುಕು ಕಾಣಿಸದ ಹಾಗೆ ಕೂತಲ್ಲಿಂದಲೇ ಕಾವಲು ಕಾಯೋ ವಿಧ್ಯೆ ದೇಹದ ರೋಮ ರೋಮಕ್ಕೂ ಕರಗತವಾಗಿತ್ತು.
 ಗ್ರಾಮದಲ್ಲಿ ಯಾರಾದರೂ ಹೊಸ ಉದ್ಯೋಗಕ್ಕೆ ಕೈ ಹಾಕಿದರೆ, ಹೊಸ ಕೆಲಸಕ್ಕೆ ಅರ್ಜಿ ಹಾಕಿದರೆ, ಹೊಸ ಸಂಬಂಧಗಳಿಗೆ ಕೈ ಚಾಚಿದರೆ, ಹೊಸದಾಗಿ ಮಳೆಬಿದ್ದ ಹೊಲಗದ್ದೆಗಳಿಗೆ ಭರವಸೆಯ ಬೀಜಗಳನ್ನು ಬಿತ್ತಬೇಕೆಂದಿದ್ದರೆ, ಲೋಕವರಿಯದ ಮಕ್ಕಳಿಗೆ ನಾಮಕರಣ ಮಾಡಬೇಕಿದ್ದರೆ, ಒಟ್ಟಾರೆಯಾಗಿ ಯಾವುದೇ ಹೊಸ ತಿರುವಿಗೆ ಈ ತಾತನ ಒಂದು ಹಾರೈಕೆಗಾಗಿ ಇಡೀ ಗ್ರಾಮ ಕಾದು ಕುಳಿತುಕೊಳ್ಳುತ್ತಿತ್ತು. ಒಂದು ಲೆಕ್ಕದಲ್ಲಿ ತಾತ ಆ ಗ್ರಾಮದ ಹೈಕಾನ್ ಆದರೂ ವಾಸ್ತವದಲ್ಲಿ ಸಾಧ್ಯವೇ ಇಲ್ಲವೇನೋ ಎಂಬಂಥಹ ಕಲ್ಪನೆಯ ಹೀರೋ ಆಗಿದ್ದರೂ, ಅವನೊಳಗೊಂದು ಈ ಭಂಡ ಸಮಾಜದ ವಿರುದ್ಧ ಅಸಹನೆಯ ಅಗ್ನಿ ಬೆಳಗುತ್ತಲೇ ಇತ್ತು.
ತಾತ ಎಲ್ಲರೊಂದಿಗೂ ಯಾವುದೇ ಕ್ಷಣದಲ್ಲೂ ಸಲ್ಲುವವನಾಗಿದ್ದರೂ ಒಮ್ಮೊಮ್ಮೆ ಮಾತ್ರ ವಿಪರೀತ ಕೂಗಾಡುತ್ತಿದ್ದ. ಅವನೆದಿರು ಹೋಗಿ ನಿಂತ ಯಾವುದೇ ಪ್ರಶ್ನೆಗೆ ಇಡೀ ಲೋಕ ಒಪ್ಪುವ ಉತ್ತರ ಶತಸಿದ್ಧ. ಆದರೆ ಜಾತಿ, ಜನಾಂಗ, ಧರ್ಮ, ಮೂಢನಂಬಿಕೆ, ಅದರಲ್ಲೂ ದೇವರು, ಮೋಕ್ಷ, ಸ್ವರ್ಗ, ನರಕ, ಪಾಪ, ಪುಣ್ಯ, ಲೌಕಿಕ ಕಟ್ಟುಪಾಡುಗಳು, ಸೀಮಿತ ಎಲ್ಲೆಗಳು, ಗೊಡ್ಡು ಭಕ್ತಿ, ಗೋಸುಂಬೆ ಪರಿಹಾರ, ಇಂಥಹವುಗಳನ್ನು ನೆನೆದರಂತೂ ತಾತ ಅಕ್ಷರಸಹಃ ರುದ್ರನಾಗುತ್ತಿದ್ದ. ಭಯಂಕರನಾಗುತ್ತಿದ್ದ. ಕೆಲವು ಸಾವಿರ ವರ್ಷಗಳಿಂದ ಮಾನವನಿಗೆ ಅಂಟಿದ ಘೋರ ಜಾಡ್ಯಗಳು ಇವುಗಳಲ್ಲದೆ ಮತ್ತೇನೂ ಅಲ್ಲ ಎಂಬುದನ್ನರಿತೇ ತಾತ ಇಡೀ ಹಳ್ಳಿಯಲ್ಲಿ ತನ್ನದೇ ಆದ ಒಂದು ವ್ಯವಸ್ಥೆಯನ್ನು ಕಟ್ಟಿ ಮಾನವೀಯತೆಯ ಕಳಶವನ್ನಿಟ್ಟಿದ್ದ. ಅಸಲಿಗೆ ಸ್ವರ್ಣಾಕರನ ಗ್ರಾಮದಲ್ಲಿ ಯಾರನ್ನು ಹೋಗಿ ಕೇಳಿದರೂ ಯಾರೆಂದರೆ ಯಾರೊಬ್ಬರೂ ತಮ್ಮ ಜಾತಿ, ಧರ್ಮಗಳ ಬಗ್ಗೆ ಉಸಿರು ಎತ್ತುತ್ತಿರಲಿಲ್ಲ. ಅಲ್ಲಿ ಲಿಂಗಬೇಧವಿರಲಿಲ್ಲ. ಮೇಲು ಕೀಳುಗಳಿರಲಿಲ್ಲ. ಹರಿಷಡ್ವರ್ಗಗಳು ತಮ್ಮ ಮಿತಿಯಾಚೆ ಒಂದಿಂಚೂ ಕೈಕಾಲು ಚಾಚಿರಲಿಲ್ಲ. ಅಲ್ಲಿನ ಪ್ರತಿ ಮರದಿಂದ ಬೀಸುವ ಗಾಳಿಗೆ ಹೇಗೆ ಎಲ್ಲರೂ ಅರ್ಹರೋ ಹಾಗೇ ಅವರಿಚ್ಛೆಯಂತೆ ಬದುಕೋಕ್ಕೂ ಅರ್ಹರೇ. ಅಲ್ಲಿ ದೊಡ್ಡವರು ಅನ್ನಿಸಿಕೊಳ್ಳೋ ಹುಂಬತನಕ್ಕೆ ಯಾರೂ ಹೋಗಿರಲಿಲ್ಲ.
 ಅಷ್ಟಕ್ಕೂ ಈ ತಾತ ಹಿಟ್ಲರ್ ಅಂತೂ ಅಲ್ಲವಲ್ಲ ? ಅವನಿಗ್ಯಾಕೆ ಇಷ್ಟೊಂದು ಸ್ಕೋಪು ? ಎಲ್ಲರೂ ಅವನಿಗ್ಯಾಕೆ ಸೊಪ್ಪಾಕಬೇಕು ? ಇಡೀ ಗ್ರಾಮದಲ್ಲಿನ ಕೆಲವೇ ಕೆಲವರು ದುರ್ಮನಸ್ಸು ಮಾಡಿದರೆ, ಏಳೆಂಟು ನಾಯಿಗಳಿಗೆ ಬನ್ಗಳನ್ನು ಬಿಸಾಕಿ, ತಾತನ ಉಸಿರು ನಿಲ್ಲಿಸೋದು ಎಷ್ಟೊತ್ತಿನ ಮಾತು ? ಆ ಗ್ರಾಮದ ಗಂಡಸರು ಕೈಗೆ ಬಳೆ ತೊಟ್ಟಿದ್ದರಾ ? ನರಸತ್ತ ನಾಯಿಯಂತೋರು. ಅಂತ ನಮಗನ್ನಿಸಬಹುದು ಆದರೆ ಆ ಗ್ರಾಮದಲ್ಲಿದ್ದ, ಯಾವ ಧರ್ಮಿಯರಿಗೂ ಅನ್ನಿಸುವಂತಿಲ್ಲ. ಯಾಕೆಂದರೆ ಆ ಇಡೀ ಗ್ರಾಮದ ಒಟ್ಟು ಆಸ್ತಿಯ ಮೂಲ ಒಡೆಯ ಈ ಸ್ವರ್ಣಾಕರ. ಭವಿಷ್ಯದ ಸಮಾಜದ ವಾಸ್ತವತೆಯನ್ನು ಅರಿತೋ ಏನೋ ತಾತ, ತನ್ನ ಎಲ್ಲಾ ಆಸ್ತಿಯನ್ನು ತನ್ನ ನಿಲುವುಗಳನ್ನು ಒಪ್ಪಿ ಬದುಕುವವರಿಗೆ ಧಾರೆಯೆರೆದಿದ್ದ. ಗ್ರಾಮದಿಂದ ಸುತ್ತು ಹದಿಮೂರು ಕಿಲೋಮೀಟರ್ ಆಸ್ತಿಯ ದೊರೆ ಅವನು. ಆ ವಿಸ್ತೀರ್ಣದೊಳಗಿನ ಬೆಟ್ಟ ಗುಡ್ಡಗಳ ಮಿತ್ರನವನು. ಅಲ್ಲಿ ಸ್ವರ್ಣಾಕರನ ಎದಿರು ಯಾವ ಅಸಾಮಿಯೂ ಕೆಮ್ಮಂಗಿಲ್ಲ. ಇದ್ದು ತಾತನ ಕಿಮ್ಮತ್ತು.
ತಾತನ ಗ್ರಾಮದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ, ಎಲ್ಲಾ ವಿಧದ ಮೀನುಗಳೂ ಅನ್ಯೋನ್ಯತೆಯಿಂದಲೇ ಬದುಕಿದ್ದವು. ಇಂಥಹ ವಿಭಿನ್ನ ಪರಿಸರಕ್ಕೆ ಒಂದು ದಿನ ಅವನು ಕಾಲಿಟ್ಟುಬಿಟ್ಟ. ಹೆಸರು ದುಷ್ಟ ರಾಜಕಾರಣಿ. ತಾತನಿಗೆ ರಾಜಕಾರಣ ಹೊಸತಲ್ಲ. ಆದರೆ ಈ ದುರುಳ ರಾಜಕಾರಣ, ನಂಬಿಸಿ ಕೈ ಹಿಡಿದು ಕಾಡಿಗೆ ಕರೆದೊಯ್ದು ನಂಬಿಕೆಯ ಶಿರದ ಮೇಲೆ ಚಪ್ಪಡಿಯೆಳೆಯುವ ಹೀನ ಬುದ್ಧಿ ಹೊಸತೆಂದರೆ ಹೊಸತು. ಮತ್ತಿದಕ್ಕೆ ಒಮ್ಮೆಲೆ ಬೆವೆತು ದುಂಡಗೆ ಮುದುಡುತ್ತಿದ್ದ. ಅಂಥಹ ವಿದೂಷಕ ಕಾಲಿಟ್ಟು ಮೊದಮೊದಲು ತಾತನಿಗಿಂತಾ ಒಳ್ಳೆಯವನಂತೆ, ನಾಲ್ಕು ದಿನಗಳ ಜಾತ್ರೆಗೆ ಬಂದ ದೇಹಕ್ಕೆ ಯಾಕೆ ಬೇಕು ಇಲ್ಲ ಸಲ್ಲದ ಆಚರಣೆಗಳು, ಎನ್ನುತ್ತಾ ಕ್ರಮೇಣ ಸಮಯ ಸಾಧಿಸುತ್ತಾ ಒಂದೊಂದೇ ಅಸ್ವಸ್ಥ ಮನಸ್ಸುಗಳಲ್ಲಿ ಹತಾಶೆಯ ಜೊತೆಜೊತೆಯೇ, ಅಹಂಕಾರವನ್ನೂ, ಸ್ವಪ್ರತಿಷ್ಠೆಯನ್ನೂ, ಕ್ರಮೇಣ ಧರ್ಮಾಂಧತೆಯನ್ನೂ ತುಂಬಿ ತಾತ ನೋಡ ನೋಡುತ್ತಿದ್ದಂತೆಯೇ ಇಡೀ ಗ್ರಾಮದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯಗಳಂಥಹ ಕೂಳ ಕೇಕೆಯನ್ನು, ತುಂಬಿಸಿ ಸಮಾಜದಲ್ಲಿ ವಿಷ ಗಾಳಿಯನ್ನು ತುಂಬಿಸಿ ಅದುವರೆಗೂ ತಾತ ಕಂಡುಕೊಂಡು, ಉಸಿರಾಗಿಸಿಕೊಂಡು ಬಂದಿದ್ದ ಸಮಾನ ಮನಸ್ಕ ಸಮಾಜದ ಗೋರಿಯ ಮೇಲೆ ಪೈಶಾಚಿಕ ವಾಸ್ತವಗಳು ಜಾತ್ರೆ ನಡೆಸುವಂತಾಗಿಹೋಯ್ತು.
 ಇಂದು ತಾತನ ಗ್ರಾಮದಲ್ಲಿ, ನಮ್ಹಾಜ್ನ ಧ್ವನಿ ಚೂರು ಜೋರಾದರೂ, ಗುಡಿಗಳ ಘಂಟೆಗಳಿಗೆ ಏನೋ ಒಂಥರಾ ಕೋಪ ಬರುತ್ತೆ. ಚರ್ಚಿನಲ್ಲಿ ಮೊಂಬತ್ತಿ ಬೆಳಗಿದರೂ, ಬುದ್ದನೆದಿರು ಧ್ಯಾನಕ್ಕೇರಿದರೂ, ಜಗವೇ ದಿಗಂಬರವೆಂದು ಸಾರಲು ಹೋದರೂ ಒಬ್ಬರನ್ನು ಕಂಡರೆ ಒಬ್ಬರಿಗಾಗದಂತೆ, ಅಷ್ಟೇ ಏಕೆ ? ಹೆತ್ತವರ ಮಾತನ್ನು ಹಸುಳೆಗಳೂ ಕೇಳದಂತೆ, ಬಿತ್ತಿದ ಬೀಜಗಳಿಗೆ ಭೂತಾಯಿಯೇ ಕೈ ಕೊಡುವಂತೆ ವ್ಯವಸ್ಥಿತ ಪತನ ತಾತನ ಕಂಗಳಲ್ಲಿ ನೀರುಕ್ಕಿಸುತ್ತೆ. ವಿಪರ್ಯಾಸವೆಂದರೆ, ಈಗಲೂ ತಾತ ಅದೇ ಕಟ್ಟೆಯ ಮೇಲೆ ಮತ್ತದೇ ದೈನೇಸಿ ಸ್ಥಿತಿಯಲ್ಲಿ ಕುಳಿತಿರುತ್ತಾನೆ. ಆದರೆ ಈಗವನ ತಟ್ಟೆ ತುಂಬೋದು ತಂಗಳು ಮಾತ್ರ. ಈಗ ಅವನೆದಿರು ಯಾರೂ ಯಾವ ಅಪ್ಪಣೆಗೂ ಕಾಯುತ್ತಿಲ್ಲ, ಕಾರಣ ಕಾನೂನಿನ ರಕ್ಷಣೆಯಲ್ಲಿ ಈಗ ಅಷ್ಟೂ ಆಸ್ತಿ ತಾತನದ್ದಲ್ಲವೇ ಅಲ್ಲ.
 ಆದರೆ ಈಗಲೂ ಆ ತಾತನಿಗೆ ಜೊತೆಯಿರೋದು ಆ ಏಳೆಂಟು ನಾಯಿಗಳು ಮತ್ತವನ ಚಿಲುಮೆ. ಎಂದಿನಂತೆ ಇಂದು ಕೂಡಾ ಗ್ರಾಮದ ಅನಕ್ಷರಸ್ಥೆಯಾದ ಚೊಚ್ಚಲ ಮಗುವಿನ ತಾಯಿ ಈ ತಾತನ ಬಳಿ ತನ್ನ ಮಗುವನ್ನೆತ್ತಿಕೊಂಡು ಬಂದು 'ತಾತಾ ನಿನ್ನ ಮೊಮ್ಮಗಳಿಗೊಂದು ಹೆಸರಿಡು, ಮುಂದೆ ನಿನ್ನ ಕನಸುಗಳನ್ನು ಇವಳು ಸಾಕಾರಗೊಳಿಸಲಂತ ಹಾರೈಸು. ಚಿಂತಿಸದಿರು ತಾತಾ, ಕತ್ತಲು ಬರೋದೇ ಹೊಸ ಬೆಳಗು ಕಾಣೋಕ್ಕೆ. ಇಡೀ ಜಗತ್ತು ಎಲ್ಲವನ್ನೂ ಮರೆತು ಸ್ವಾರ್ಥದೂಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದರೂ ಇಂದಿಗೂ ನಿನ್ನಂಥಹ ನಿಲುವಿನ ಕೆಲವು ಚಿಗುರುಗಳಿವೆ. ಕಾಲ ಸವೆಯುತ್ತಾ, ಆ ಸಂತತಿ ಹೆಚ್ಚಾಗಿ ಮತ್ತದೇ ನಿನ್ನ ಕನಸಿನ ಸಮಾಜ ಹುಟ್ಟಿಯೇ ತಿರುತ್ತೆ ಹೆಸರಿಡು ಒಂದು ಈ ನನ್ನ ಚೊಚ್ಚಲಿಗೆ. ಎಂದಾಗ ತಾತ ತೇಜಮ್ಮ... ಅಂತ ಆ ಮಗುವಿನ ಕಿವಿಯಲ್ಲಿ ಮೂರು ಬಾರಿ ಹೇಳುತ್ತಲೇ ಆ ಮಗುವಿನ ತಾಯಿ ತಾತನ ಕೈಗೆ ಹೋಳಿಗೆ ಕೊಟ್ಟು ಕಾಲಿಗೆ ಬಿದ್ದು , ಮಗುವನ್ನೂ ತಾತನ ಕಾಲಿಗೆ ಬೀಳಿಸಿ ಅವನ ಅಂಗಾಲ ಧೂಳನ್ನು ತೇಜುವಿನ ಹಣೆಗೆ ಹಚ್ಚಿ ಅಲ್ಲಿಂದ ಹೊರಟು ಹೋದಳು. ತುಂಬಾ ದಿನಗಳ ನಂತರ ತಾತನ ಸುಡುಗಾಡಿನಂತಾಗಿದ್ದ ಮನಸಲ್ಲಿ ಹೊಸ ಭರವಸೆಯ ನೆಮ್ಮದಿ ಕಂಡಿತ್ತು. ಹುಣ್ಣಿಮೆ ನಗುವಿನ ಸಾವಧಾನ ದಕ್ಕಿತ್ತು. ಯಾವಾಗ ದಿಲ್ ಖುಷ್ ಆಯ್ತೋ ತಾತ ತನ್ನ ಜುಬ್ಬಾದ ಜೇಬಿನಿಂದ ತನ್ನ ಚೈತನ್ಯದ ಚಿಲುಮೆಯನ್ನು ತೆಗೆದು ಮತ್ತದೇ ಮೂರು ಮೈಲಿ ಘಂಗುಡುವ ಹೊಗೆಸೊಪ್ಪು ತುಂಬಿ ಸಾವಿರ ಕನಸುಗಳ ಮದ್ದು ಗೀಚಿ ಶಿವಾ ಎಂದೊಮ್ಮೆ ನೆನೆದು ಗಾಢವಾಗಿ ಹೊಗೆಯನ್ನು ನುಂಗಿ ಖುಷಿಪಟ್ಟ...

Saturday, 27 July 2013

my imagination story 06

        ಹಾವ ಹೊಳೆ ಚೇಳ ಮಳೆ

ಆ ವೃದ್ಧ ಆಗಷ್ಟೇ ಊಟ ಮುಗಿಸಿ ವಿಶ್ರಾಂತಿಗೆಂದು ಕುಳಿತಿದ್ದ. ಆಗ ಎಲ್ಲಿದ್ದನೋ ಮೊಮ್ಮಗ ನಟರಾಜ. ಬಂದ ಬಂದವನೇ ತನ್ನ ತಾತನ ತೊಡೆಯ ಮೇಲೆ ಕುಳಿತು ನೇರ ಜೇಬಿಗೆ ಕೈ ಹಾಕಿದ. ನಸು ನಕ್ಕ ತಾತ 'ಏನೋ ಬೇಕು ನಿಂಗೆ ?' ಕೇಳಿದ 'ಅಜ್ಜೀನ ಹುಡುಕ್ತಾಯಿದಿನಿ' ತೊದಲುತ್ತಾ ನುಡಿದ ಮಗೂಗೆ ಆರು ವರ್ಷವಾ ? ಇನ್ನೂ ನಿಕ್ಕಿಯಾಗಿಲ್ಲ. ಆ ಮುಗ್ದ ಕೀಟಲೆಗೆ ಒಳಗೊಳಗೇ ಖುಷಿಯ ಶಿಖರವೇರಿದ ತಾತ, ಬೆಳ್ಳಿ ಮೇಸೆ ಆ ಹಾಲುಗೆನ್ನೆಗೆ ಚುಚ್ಚುವಂತೆ ಒಂದು ಮುತ್ತು ನೀಡಿ, 'ಲೇ ಕಳ್ಳಾ, ದೊಡ್ಡೋನಾಗಿಬಿಟ್ಟೆ ಕಣೋ ನೀನು' ಎಂದೇಳುತ್ತಾ 'ಮಹಡಿ ಮೇಲಿದಾಳೆ ನೋಡು. ಚಂದ್ರನ್ನ ನೋಡ್ತಾ ಅವಳೂ ಮಗುವಾಗ್ತಾಯಿದಾಳೆ' ಎನ್ನುತ್ತಲೇ ನಟರಾಜ ಮೆಟ್ಟಿಲುಗಳನ್ನು ದಡಬಡಾಯಿಸಿ ಏರತೊಡಗಿದ. ಅವನ ಅವಸರವನ್ನು ಕಂಡ ವೃದ್ಧ 'ಲೇ ಬಿದ್ದೀಯ ಕಣೋ, ಮೆಲ್ಲಗ್ಹೋಗು' ಎನ್ನುವ ಮಾತುಗಳನ್ನು ಕೇಳಿಸಿಕೊಂಡ ನಟರಾಜನ ತಾಯಿ ಟಿವಿ ನೋಡುವುದನ್ನು ಬಿಟ್ಟು ಹೊರ ಬಂದು, 'ಲೇಹ್, ಹೊತ್ತಾಯ್ತು ಮಲ್ಕೋ ಬಾರೋ' ಎಂದು ಕೂಗುತ್ತಲೇ ನಟರಾಜ ಬರಲ್ಲ ಎಂಬಂತೆ ಕೈಯಾಡಿಸುತ್ತಾ ಮೊಳಕಾಲಿನ ಮೇಲೆ ಕೈಗಳನ್ನು ಊರುತ್ತಾ ಮೆಟ್ಟಿಲುಗಳನ್ನೇರತೊಡಗಿದಾಗ, 'ಹಾಳಾದೋನು, ಪಾಪ ಈಗ ಅತ್ತೆ ಜೀವ ತಿಂತಾನೆ' ಎಂದುಕೊಳ್ಳುತ್ತಾ ಒಳಹೋಗಿ ಮತ್ತೆ ಟಿವಿ ನೋಡುವಲ್ಲಿ ತಲ್ಲೀನಳಾದಳು.
ಇತ್ತ ಮಾಳಿಗೆಯನ್ನೇರಿದ ನಟರಾಜ ಮುಗಿಲೆಡೆಗೆ ಮುಖಮಾಡಿ ಚಂದ್ರನ ಮುಖದಲ್ಲಿ ತನ್ನ ಕಂಗಳನ್ನದ್ದಿದ್ದ ಅಜ್ಜಿಯ ಕೈ ಬಳೆಗಳನ್ನು ತಟ್ಟಿ 'ಅಜ್ಜೀ' ಎನ್ನುತ್ತಲೇ ಮೊಮ್ಮಗುವನ್ನು ನೊಡಿದ ಅಜ್ಜಿ , ಒಂದೆಡೆ ಕುಳಿತಾಗ ಇವನೂ ಪಕ್ಕ ಕುಳಿತು ಮೆಲ್ಲಗೆ ತೊಡೆಗೆರಗಿದ. ಅಜ್ಜಿ ಮಗುವಿನ ತಲೆಯನ್ನು ನೇವರಿಸುತ್ತಿದ್ದಾಗ ' ಅಜ್ಜೀ ಒಂದು ಕಥೆ ಹೇಳು' ಮುಗ್ಧತೆಯಿಂದ ಕೇಳಿದ್ದ. ಅಜ್ಜಿಯ ಮನಸಲ್ಲಿ ಎಷ್ಟು ಕಥೆಗಳಿವೆಯೋ, ಒಂದೇ ಮಾತಿಗೆ ಕಥೆಯನ್ನು ಪ್ರಾರಂಭಿಸಿದಳು. 'ಸರಿ ಹೇಳ್ತೀನಿ ಕೇಳು' ಎನ್ನುತ್ತಲೇ ಎದ್ದು ಕುಳಿತ ನಟರಾಜ ಇಷ್ಟಗಲ ಕಂಗಳನ್ನಗಲಿಸಿ ಅಜ್ಜಿಯನ್ನೇ ನೋಡುತ್ತಾ ಕುಳಿತ. ಅಜ್ಜಿ ಕಥೆಯನ್ನು ಶುರುವಿಟ್ಟಳು.


'ಅಲ್ಲಿಯವರೆಗೂ ಅಲ್ಲೊಬ್ಬ ರಾಜನಿದ್ದ. ಅವನು ಅನಾಗರಿಕ ರಾಜನಾಗಿದ್ದ. ಲಂಪಟನಾಗಿದ್ದ. ಸದಾ ರಾಣಿಯ ಸೆರಗನ್ನು ಹಿಡಿದು ಅಲೆವ ಸ್ತ್ರೀಲೋಲನಾಗಿದ್ದ. ತನ್ನ ರಾಜ್ಯದಲ್ಲಿ ಯಾವುದೇ ಕೆಲಸಕ್ಕೆ ಹೋದರೂ ರಾಣಿಯನ್ನು ಜೊತೆಯಲ್ಲಿ ಕರೆದುಕೊಂಡೇ ಹೋಗುತ್ತಿದ್ದ. ಸದಾ ಮೋಜು ಮಾಡುತ್ತಾ ನರ್ತಕಿಯರ ನಾಟ್ಯಗಳಲ್ಲಿ, ಸುಂದರಾತಿಸುಂದರಿಯರ ಮೇಲೆ ಒಂದು ನಿಗಾ ಇಟ್ಟಿರುತ್ತಿದ್ದ. ಅವನಿಗೆ ರಾಜ್ಯದ ಜನತೆ ಹೇಗೆ ಜೀವನ ಸಾಗಿಸುತ್ತಿದ್ದಾರೆ, ರಾಜ್ಯದ ಪರಿಸ್ಥಿತಿ ಹೇಗಿದೆ, ರಾಜ್ಯದ ಆಡಳಿತಕ್ಕೆ ತೆರಿಗೆ ಎಷ್ಟು ಬರುತ್ತೆ, ತೆರಿಗೆ ಕಟ್ಟೋದಕ್ಕೆ ಪ್ರಜೆಗಳು ಎಷ್ಟು ಹಿಂಸೆ ಅನುಭವಿಸ್ತಾಯಿದಾರೆ, ಜನತೆಗೆ ಕಷ್ಟಸುಖಗಳೇನು, ಅವರ ಬೇಕು ಬೇಡಗಳೇನು, ಯಾವುದರ ಬಗ್ಗೆಯೂ ಚಿಂತಿಸದೇ ಈ ಎಲ್ಲಾ ಜವಾಬ್ದಾರಿಯನ್ನು ತನ್ನ ಆಸ್ಥಾನದ ಮಂತ್ರಿ ಮಹೋದಯರುಗಳಿಗೆ, ಸೇನಾಧಿಪತಿಗಳಿಗೆ, ಖುಷಿಮುನಿಗಳಿಗೆ ವಹಿಸಿಕೊಟ್ಟು ತಾನು ಮಾತ್ರ ಸದಾ ಅಮಲಿನಲ್ಲಿ ತೇಲುತಿದ್ದ. ಅವನಿಗೆ ಹೇಳೋರು ಕೇಳೋರಾದ್ರೂ ಯಾರೂ ಇರಲಿಲ್ಲ. ಅಷ್ಟೊಂದು ಪ್ರೀತಿಗೆ ಪಾತ್ರವಾಗಿದ್ದ ರಾಣಿಯೂ ಆಡಳಿತದ ವಿಚಾರದಲ್ಲಿ ಕಿಮಕ್ ಅನ್ನಂಗಿರಲಿಲ್ಲ.
ಅವನ ರಾಜ್ಯಾಡಳಿತದಲ್ಲಿ ಒಮ್ಮೆ ಪಕ್ಕದ ರಾಜ ಆಕ್ರಮಣ ಮಾಡಿ ಯುದ್ಧಕ್ಕೆ ಆಹ್ವಾನವಿತ್ತಾಗ ರಾಜೀ ಸೂತ್ರದ ದಾರಿಯನ್ನು ಹುಡುಕಿ ಪ್ರಜೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ ಅದನ್ನು ಕಪ್ಪವೆಂದು ಒಪ್ಪಿಸಿದ ತಲೆಹಿಡುಕನಾಗಿದ್ದ. ಈ ಘಟನೆ ನಡೆದ ಮರುವರ್ಷ ಅಲ್ಲಿ ಭೀಕರ ಕ್ಷಾಮ ತಲೆದೋರಿತು. ಇಡೀ ಸಾಮ್ರಾಜ್ಯದ ಜನತೆ, ಪ್ರಾಣಿ, ಪಕ್ಷಿ, ಎಲ್ಲಾ ಜೀವ ಸಂಕುಲಗಳಿಗೂ ಕುಡಿಯಲು ಹನಿ ನೀರು ಸಿಗದೆ, ಹೊಟ್ಟೆಗೆ ತುತ್ತು ಅನ್ನವೂ ಇಲ್ಲದೆ ಕಂಗಾಲಾದಾಗ, ಪರಿಸ್ಥಿತಿ ಆಸ್ಥಾನದ ಆಡಳಿತಾಧಿಕಾರಿಗಳ ಶಕ್ತಿ ಮೀರಿ ರಾಜನ ಬಳಿ ಹೋಗುವಷ್ಟರಲ್ಲಿ ಅರಮನೆಯ ಮುಂದೆ ಪ್ರಜೆಗಳೆಲ್ಲಾ ರಾಜನ ಸಹಾಯವನ್ನು ಕೇಳಲು ಜಮಾಯಿಸಿದಾಗ ಆಸ್ಥಾನದ ಮಹಡಿಯ ಮೇಲೆ ಪ್ರಜೆಗಳಿಗೆ ರಾಣಿಯೊಂದಿಗೆ ದರ್ಶನ ನೀಡಿದ ರಾಜ, ಈ ಎಲ್ಲಾ ಅವಗಢಗಳಿಗೆ ನನ್ನ ಸಾಮ್ರಾಜ್ಯದಲ್ಲಿರುವ ಅನ್ಯ ಧರ್ಮಿಯರು ನನ್ನ ಆಡಳಿತವನ್ನು ನೋಡಿ ಹೊಟ್ಟಿಕಿಚ್ಚಿಗೆ ನಡೆಸುತ್ತಿರುವ ವಾಮಾಚಾರ ಮಾಡುತ್ತಿದ್ದಾರೆ, ಅವರು ಸೈತಾನ್ ಸಹವಾಸ ಮಾಡಿದ್ದಾರೆ, ಅದಕ್ಕೇ ನಿಮಗೆಲ್ಲಾ ಈ ಕಷ್ಟಗಳು ಬಂದಿವೆ. ಇದಕ್ಕೆ ರಾಜ ಪುರೋಹಿತರು, ಗುರು ಗಣ್ಯರನ್ನು ಕರೆದು ಅರಮನೆಯಲ್ಲಿ ಯಜ್ಞಯಾಗಾದಿಗಳನ್ನು ಮಾಡಿಸಿ ಆ ದುಷ್ಟ ಶಕ್ತಿಗಳನ್ನು ದಮನಮಾಡಿ ನಿಮ್ಮನ್ನು ಕಾಪಾಡುತ್ತೇನೆ' ಎಂದ.
ಇಷ್ಟೊತ್ತೂ ಅಜ್ಜಿಯ ಕಥೆಯನ್ನು ಕೇಳುತ್ತಿದ್ದ ನಟರಾಜ ಮೆಲ್ಲಗೆ ಅಜ್ಜಿಯ ಕೈಯನ್ನು ಮುಟ್ಟಿ 'ಅಜ್ಜೀ ಧರ್ಮ ಅಂದ್ರೆ ಯಾರು ? ಕೆಟ್ಟ ದೇವರು ಎಲ್ಲಿದಾವೆ ?' ಎಂದು ಪ್ರಶ್ನಿಸಿದ್ದಕ್ಕೆ 'ಅದೊಂದು ದೊಡ್ಡ ಕಥೆನಪ್ಪಾ ಅದನ್ನ ನಾಳೆ ಹೇಳ್ತೀನಿ. ಈ ಕಥೇಲಿ ಆಮೇಲೇನಾಯ್ತು ಅಂದ್ರೆ...' ಅಂತೇಳಿ ಮತ್ತೆ ಉಳಿದ ಕಥೆಯನ್ನು ಅಜ್ಜಿ ಮುಂದುವರೆಸಿದಳು. 'ಯಾವಾಗ ರಾಜನ ಇಂಥಾ ತಲೆಬುಡವಿಲ್ಲದ ಮಾತುಗಳನ್ನು ಕೇಳಿದರೋ ಆಗಲೇ ಆ ಜನರಲ್ಲಿ ಒಂದು ಗುಂಪಿನ ಸ್ನೇಹಿತರೆಲ್ಲಾ ಸೇರಿ ಒಂದು ನಿರ್ಧಾರಕ್ಕೆ ಬಂದುಬಿಟ್ರು. ಅದೇನು ಅಂದ್ರೆ, ಇನ್ನು ಯಾವುದೇ ಕಾರಣಕ್ಕೂ ಈ ರಾಜ ನಮ್ಮ ಸಾಮ್ರಾಜ್ಯವನ್ನು ಆಳೋಕೆ ಲಾಯಕ್ಕಲ್ಲ. ನಾವು ಹೆಂಗಾದ್ರೂ ಮಾಡಿ ಈ ರಾಜನ ಕಥೆ ಮುಗಿಸಿ ನಮಗೊಬ್ಬ ಒಳ್ಳೆಯ ರಾಜನನ್ನು ಆರಿಸಿಕೊಳ್ಳಬೇಕು ಅಂತ ತೀರ್ಮಾನಿಸಿಕೊಳ್ಳುತ್ತಲೇ ಅವರಿಗೆ ಆ ತೇಜಸ್ಸಿನ ವ್ಯಕ್ತಿ ನೆನಪಾಗಿದ್ದ. ಹಾಗೆ ಅಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆನಪಾದ ತೇಜಸ್ಸಿನ ಹೆಸರು
ಕ್ರೋಧಾಘ್ನಿ !

ಮಗೂ, ಈ ಕ್ರೋಧಾಘ್ನಿ ಅನ್ನೋನು ಬೆಂಕಿಯಂಥಾ ಕಣ್ಣಿನೋನು. ಮಿಂಚಿನಂಗೆ ಹೋರಾಡೋನು. ಅವನು ಯುದ್ಧದ ಸಕಲ ವಿಧ್ಯೆಗಳನ್ನೂ ಸಕಲ ದೇವತೆಗಳ ಮುಖ್ಯ ಆಯುಧಗಳನ್ನೂ ತನ್ನ ಬತ್ತಳಿಕೆಗೆ ಬಳುವಳಿ ಪಡೆದೋನು. ಅವನು ಮನಸ್ಸು ಮಾಡಿದ್ದರೆ ಇಡೀ ಭೂಮಿಯನ್ನೇ ಆಳಬಹುದಿತ್ತು. ಆದ್ರೆ ಅಂಥಾ ಅಪ್ರತಿಮ ವೀರ ತಪಸ್ಸಿನ ಸಮಯದಲ್ಲಿ ಅದಾರೋ ಚಂಚಲೆಗೆ ಸೋತುಬಿಟ್ಟಿದ್ದನಂತೆ. ಆ ಚಂಚಲೆ ದೇವೇಂದ್ರನ ಮನೆಯಾಳಂತೆ. ಈ ಸತ್ಯವನ್ನು ತಿಳಿದ ಕ್ರೋಧಾಘ್ನಿ ತನಗಾದ ಮೋಸಕ್ಕೆ ಆ ಚಂಚಲೆಯ ಬೆನ್ನತ್ತಿ ಮುಂಗೈ ಹಿಡಿದು ಬರಸೆಳೆದನಂತೆ ತಕ್ಷಣ ಅವಳು  'ಮನುಕುಲದ ಸಾಮ್ರಾಜ್ಯವೊಂದರ ಅಂತ್ಯದಲ್ಲಿ, ಮಾನವೀಯತೆ ಕಾಪಾಡುವ ಸಂದಿಗ್ಧ ಬರುವವರೆಗೂ ನೀ ಕಾನನವಾಸಿಯಾಗು, ಎಲ್ಲಾ ಶಕ್ತಿಗಳಿಂದ ವಂಚಿತನಾದ ಸಾಮಾನ್ಯನಾಗು' ಎಂದು ಶಾಪವಿಟ್ಟಳಂತೆ. ತಕ್ಷಣ ಕೈಲಾಸದ ತ್ರಿಮೂರ್ತಿಗಳ ಅಪ್ಪಣೆ ಮೇರೆಗೆ 'ಧರೆಯಲ್ಲಿ ಮಾನವೀಯತೆ ಅಳಿವಿನಂಚಿಗೆ ಬಂದಾಗ ನಿನ್ನ ಹುಡುಕಿಕೊಂಡು ಬಂದ ಸಾಮಾನ್ಯರಲ್ಲೊಂದು ಹಣ್ಣಣ್ಣು ವೃದ್ಧೆಯ ಕಣ್ಣೀರನ್ನು ಕಂಡ ತಕ್ಷಣ ನಿನ್ನೆಲ್ಲಾ ಶಾಪ ವಿಮೋಚನೆಯಾಗಿ ನಿನ್ನೆಲ್ಲಾ ವಿದ್ಯೆಗಳನ್ನು ನೀ ಮರಳಿ ಪಡೆಯುತ್ತೀ' ಎಂದು ಶಾಪದೊಳಗಿನ ರಿಯಾಯ್ತಿಯನ್ನು ತಿಳಿಸಿ ಮಾಯವಾದಳಂತೆ. ಅವಳು ಹೇಳಿದ ಸಂದಿಗ್ಧತೆ ಈಗ ಬಂದಾಗಿತ್ತು.
ರಾಜನ ಉಡಾಪೆ ಮಾತುಗಳಿಂದ ರೊಚ್ಚಿಗೆದ್ದ ಪ್ರಜೆಗಳು ರಾಜನಿಗೆ ಮನದಲ್ಲಿ ಹಿಡಿ ಶಾಪ ಹಾಕುತ್ತಾ ಹಿಂದಿರುಗಿದಾಗ ರಾಜ್ಯದ ಸಾಕಷ್ಟು ಯುವಕರು ಸೇರಿ ಪಾಳು ದೇವಸ್ಥಾನವೊಂದರಲ್ಲಿ ಹಳೆಯ ಗೋಣಿಚೀಲದ ಮೇಲೆ ಬತ್ತಿ ಸೇದುತ್ತಾ ಕುಳಿತ ವೃದ್ಧನ ಬಳಿಬಂದು ನಡೆದುದನ್ನೆಲ್ಲಾ ಹೇಳಿ, ತಮಗೀಗ  ಆದರ್ಶ ನಾಯಕನೊಬ್ಬನ ಅನಿವಾರ್ಯವಿದೆ ಕರುಣೆತೋರು ತಾತಾ ಎಂದು ಕೇಳಿದಾಗ ನಾಳೆ ಬೆಳಗ್ಗೆ ಈ ಗುಡಿಯ ಮುಂದೆ ಒಂದು ಕುದುರೆ ಬಂದಿರುತ್ತೆ ನೀವು ಅದನ್ನು ಅನುಸರಿಸಿ ಹೋಗಿ ಅಲ್ಲಿ ಆ ಕ್ರೋಧಾಘ್ನಿ ಸಿಗುತ್ತಾನೆ ಆದರೆ ಹೋಗುವಾಗ ಸಾವು ಬದುಕಿನ ನಡುವೆ ಹೋರಾಡುವಂಥಾ ಒಬ್ಬ ಹಣ್ಣಣ್ಣು ಮುದುಕಿಯನ್ನು ಕರೆಯ್ದೊಯ್ಯಿರಿ, ಆ ಮುದುಕಿಯನ್ನೂ ಸೇರಿ ಕೇವಲ ಐದು ಜನರಿಗೆ ಮಾತ್ರ ಭೇಟಿಯ ಅವಕಾಶ. ಯಾವುದೇ ಕಾರಣಕ್ಕೂ ಕುದುರೆಯನ್ನು ಹಿಂಬಾಲಿಸುವ ಪ್ರಯಾಣದಲ್ಲಿ ಯಾವುದಕ್ಕಾದರೂ ಅಂಜಿ ಪ್ರಯಾಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದರೆ ಅವರು ಅಲ್ಲೇ ಕಲ್ಲಾಗುವರು ಎಂದು ಹೇಳಿ ಕಳಿಸುವನು.
ಅಂದು ರಾತ್ರಿ ಆ ನಗರದ ಎಲ್ಲಾ ಹಿರಿಯರು, ಕಿರಿಯರು, ವೃದ್ಧರು, ಮಹಿಳೆಯರು, ಯುವಕರು ಎಲ್ಲರೂ ಸೇರಿ ನಾಲ್ಕು ಜನ ಯುವಕರನ್ನೂ, ಒಬ್ಬ ಬಿಕಾರಿ ಮುದುಕಿಯನ್ನೂ ಪ್ರಯಾಣಕ್ಕೆ ನೇಮಿಸಿದಾಗ ಮುಗಿಲಲ್ಲಿ ಒಮ್ಮೆ ಮಿಂಚು ಕಾಣಿಸುತ್ತೆ. ಆ ಬೆಳಕು ಕಂಡ ಪ್ರಜೆಗಳು ತಮಗೆ ಒಳ್ಳೆಯ ಕಾಲ ಶುರುವಾಗಲಿದೆ ಎಂಬ ಹಿಗ್ಗಿನಿಂದ ರಾತ್ರಿ ಮಲಗೋದನ್ನೂ ಮರೆತು ಬೆಳಗು ಕಾಣುತ್ತಾರೆ. ಮಾರನೆಯ ದಿನ ಇಡೀ ನಗರದ ಪ್ರತಿ ಪ್ರಜೆಯೂ ಭಕ್ತಿ ಮತ್ತು ತುಂಬು ನಂಬುಗೆಯಿಂದ ಮತ್ತದೇ ಪಾಳು ದೇವಾಲಯದ ಹತ್ತಿರ ಬಂದು ಆ ವೃದ್ಧ ಸನ್ಯಾಸಿಯ ಕಾಲಿಗೆ ನಗರ ನೇಮಿಸಿದ ಐವರೂ ನಮಸ್ಕರಿಸುತ್ತಲೇ ಅಲ್ಲೊಂದು ಕುದುರೆ ಕಾಣಿಸುತ್ತೆ. ಆಗ ಒಬ್ಬ ಯುವಕ ಆ ಹಣ್ಣಣ್ಣು ಮುದುಕಿಯನ್ನು ತನ್ನ ಹೆಗಲಮೇಲೆ ಹೊತ್ತುಕೊಳ್ಳುತ್ತಾನೆ. ಅವನಿಗೆ ಸುಸ್ತಾದಾಗ ಅಜಿಯನ್ನ್ಜು ಇನ್ನೊಬ್ಬ ಯುವಕನ ಹೆಗಲಿಗೆ ಶಿಪ್ಟ್ ಮಾಡಿಕೊಂಡರಾಯಿತು ಎಂದು ನಿರ್ಧರಿಸಿಕೊಂಡು ಪ್ರಯಾಣ ಆರಂಭಿಸುತ್ತಾರೆ.

ಆ ಕುದುರೆ ನಗರವನ್ನು ದಾಟಿ ಬೆಟ್ಟವೊಂದನ್ನು ಹತ್ತಿಳಿದು ದಟ್ಟ ಕಾನನ ಹೊಕ್ಕಾಗ ಅಲ್ಲೊಂದು ಆಶ್ಚರ್ಯ ಕಾದಿರುತ್ತೆ ಅದೆಂದರೆ ಬರೊಬ್ಬರಿ ಒಂದು ನದಿಯಗಲ ಹಾವುಗಳು ಹರಿದಾಡುತ್ತಿರುತ್ತವೆ. ಈ ಕುದುರೆ ಆ ಹಾವ ಹೊಳೆಯಲ್ಲಿ ಲೀಲಾಜಾಲವಾಗಿ ನಡೆಯತೊಡಗುತ್ತೆ. ಆದರೆ ಈ ನಾಲ್ವರ ಪಾಡು ? ಆ ಹರಿವ ಹಾವುಗಳನ್ನು ನೋಡಿಯೇ ಜೀವ ಗಂಟಲಿಗೆ ಬಂದಿರುತ್ತೆ, ಇನ್ನು ಅವುಗಳ ಮೇಲೆ ಹೆಜ್ಜೆಯ ಮೇಲೆ ಹಜ್ಜೆಯನ್ನಿಟ್ಟ ಅವುಗಳನ್ನು ದಾಟಿ ಮುಂದೆ ಸಾಗೋದು ಸಾಧ್ಯನಾ ? ಛಕ್ಕನೆ ವೃದ್ಧ ಸನ್ಯಾಸಿಯ ಮಾತು ನೆನಪಾಗಿ ನಾವಿಲ್ಲಿಯೇ ಸತ್ತರೂ ಚಿಂತೆಯಿಲ್ಲ, ನಮ್ಮ ನಾಡಿಗೆ ಒಳ್ಳೆಯದಾಗಲಿ ಎಂದುಕೊಂಡು ಆ ಸನ್ಯಾಸಿಯನ್ನೊಮ್ಮೆ ನೆನೆದು ಹಾವ ಹೊಳೆಯನ್ನು ದಾಟುತ್ತಾರೆ. ಕುದುರೆ ಅದಾಗಲೇ ಮುಂದೆ ಹೋಗಿ ಇವರು ಬರುವವರೆಗೂ ಹುಲ್ಲು ಮೆಲ್ಲುತ್ತಿರುತ್ತೆ. 
ಇವರು ಧೈರ್ಯದಿಂದ ಹರಿವ ಹಾವುಗಳನ್ನು ದಾಟಿದ್ದನ್ನು ಕಂಡ ಕುದುರೆ ಮತ್ತೆ ಮುಂದೆ ಹೋಗುತ್ತೆ ಸ್ವಲ್ಪ ದೂರ ಹೋದ ನಂತರ ಮುಗಿಲಿಂದ ಚೇಳ ಮಳೆ ಸುರಿಯತೊಡಗುತ್ತೆ ನಮ್ಮ ಒಳ್ಳೆಯತನವೇ ಕಾಪಾಡಬೇಕು ನಮ್ಮನ್ನು ಎಂದುಕೊಂಡು ಆ ಭರಗುಟ್ಟುವ ಚೇಳ ಮಳೆಯಲ್ಲಿಯೇ ಪ್ರಯಾಣ ಮುಂದುವರೆಸುತ್ತಾರೆ. ಮುಗಿಲಿಂದ ಬೀಳುತ್ತಿರುವ ಚೇಳುಗಳು ಈ ಐವರ ಅಡಿಯಿಂದ ಮುಡಿಯವರೆಗೂ ಬೀಳುತ್ತಿರುತ್ತವೆ. ಕೋಟಿ ಕೋಟಿ ಚೇಳುಗಳು ಇವರುಗಳ ದಾರಿಯಲ್ಲಿ ಬಿದ್ದಿರುತ್ತವೆ. ಇವರು ಅವುಗಳನ್ನು ತುಳಿದುಕೊಂಡೇ ಪ್ರಯಾಣಿಸುತ್ತಾರೆ.

ಇನ್ನೂ ಸ್ವಲ್ಪ ಮುಂದೆ ಹೋದಾಗ ಅಲ್ಲೊಂದು ಗುಹೆಯೊಳಗೆ ಕುದುರೆ ಹೋಗುತ್ತೆ ಇವರೂ ಹಿಂಬಾಲಿಸುತ್ತಾರೆ. ಆ ಗುಹೆಯೊಳಗೆ ಕುದುರೆ ಮಾಯವಾಗುತ್ತೆ,. ಮತ್ತು ಅಲ್ಲಿ ಉಜ್ವಲ ಬೆಳಕೊಂದು ಮಿಂಚುತಿರುತ್ತೆ. ಆದರೆ ಅಲ್ಲಿ ಯಾರೂ ಇರೋದಿಲ್ಲ. ಇನ್ನು ಕ್ರೋಧಾಘ್ನಿಯನ್ನು ಹುಡುಕೋದು ಹೇಗೆ ? ದಿಕ್ಕು ಕಾಣದಂತಾಗಿ ಕಂಗಾಲಾಗಿ ತಾವು ಅಲ್ಲಿಯವರೆಗೂ ಪ್ರಯಾಣದುದ್ದಕ್ಕೂ ಅನುಭವಿಸಿದ ಯಾತನೆಯನ್ನೂ ನೆನೆದು ಅಜ್ಜಿಯನ್ನು ಆ ಗುಹೆಯಲ್ಲಿನ ಕಟ್ಟೆಯಂಥಹ ಕಲ್ಲೊಂದರ ಮೇಲೆ ಕೂರಿಸಿ, ಈ ನಾಲ್ವರೂ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. 
ಇನ್ನೇನು ಸಾವಿಗೆ ಹತ್ತಿರವಿದ್ದಂತಿದ್ದ ಆ ವೃದ್ಧೆ, ನಾಡಿನ ಒಳಿತಿಗಾಗಿ ಆ ನಾಲ್ಕೂ ಯುವಕರು ತನ್ನನ್ನು ಹೆಗಲಮೇಲೆ ಹೊತ್ತು ಪಟ್ಟ ಪಡಿಪಾಟಲನ್ನು ನೆನೆದು ಇಷ್ಟೊಂದು ಕಷ್ಟಪಟ್ಟು ಬಂದರೂ ಬಂದ ದಾರಿಗೆ ಸುಂಕವಿಲ್ಲದಂತಾಯ್ತಲ್ಲಾ, ಇನ್ನು ಮರಳಿ ಹೋಗುವುದಾದರೆ, ಆ ಚೇಳ ಮಳೆ, ಹಾವ ಹೊಳೆಯನ್ನು ದಾಟಿ ಗೆದ್ದು ಬದುಕಬಲ್ಲೆವಾ ನಾವು ? ಯೋಚಿಸುತ್ತ ಪಕ್ಕದಲ್ಲಿ ಮೂರ್ತಿಯಂಥಿದ್ದ ಕಲ್ಲಿನಲ್ಲಿದ್ದ ಬುಜದಾಕೃತಿಗೆ ತಲೆಗೊಟ್ಟು ಕಣ್ಣೀರಿಡುತ್ತಾಳೆ. ಮುದುಕಿಯ ಕಣ್ಣೀರು ಯಾವಾಗ ಆ ಕಲ್ಲಿಗೆ ಸೋಕುತ್ತೋ ಆಗ
ಜೀವ ಪಡೆಯುತ್ತೆ ಆ ಮೂರ್ತಿಗಲ್ಲು!   
ಹೌದು. ಆ ಮುದುಕಿ ಕಣ್ಣೀರು ಸುರಿಸಿದ್ದ ಬುಜಗಳೇ ಕ್ರೋಧಾಘ್ನಿಯ ಬುಜಗಳಾಗಿದ್ದವು. ಆ ಪಕ್ಕದಲ್ಲಿನ ಕಲ್ಲು ಮೂರ್ತಿಯೇ ಕ್ರೋಧಾಘ್ನಿಯಾಗಿದ್ದ. ಯಾವಾಗ ಅಜ್ಜಿಯ ಕಣ್ಣೀರಿನಿಂದ ಕಲ್ಲಿನ ಶಿಲ್ಪ ಜೀವ ಪಡೆದು ಕ್ರೋಧಾಘ್ನಿ ಮೂಡಿದನೋ, ತಕ್ಷಣ ಮುಗಿಲಲ್ಲಿ ಗುಡುಗು ಸಿಡಿಲುಗಳ ಸಪ್ಪಳವಾಗಿ ತನ್ನ ಕಳೆದುಹೋದ ಶಕ್ತಿಯೆಲ್ಲಾ ಮರಳಿಬಿಟ್ಟಿತು. ಅಲ್ಲಿಗೆ ಬಂದಿದ್ದ ಯುವಕ, ಅಜ್ಜಿಗೆ ಅತ್ಯಾಶ್ಚರ್ಯವಾದರೂ ಸಾವರಿಸಿಕೊಂಡು ತನ್ನ ವ್ಯಥೆಯನ್ನೆಲ್ಲಾ ಹೇಳಿದಾಗ ಅವರಿಗೆ ವಂದಿಸಿದ ಕ್ರೋಧಾಘ್ನಿ 'ನೀವುಗಳೇ ನನ್ನ ಪಾಲಿನ ದೇವತೆಗಳಿದ್ದಂತೆ. ಬನ್ನಿ ನನ್ನ ಜೊತೆ' ಎಂದು ಗುಹೆಯ ಆಚೆ ಬರುತ್ತಲೇ ಅಲ್ಲೊಂದು ರಥವು ಸಿದ್ಧವಾಗಿತ್ತು. 
ಎಲ್ಲರೂ ಆ ರಥದಲ್ಲಿ ಕೂಡುತ್ತಲೇ ಕೆನೆಯುತ್ತ ರಥದ ಕುದುರೆಗಳು ಆ ಲಂಪಟ ರಾಜನ ಸಾಮ್ರಾಜ್ಯದತ್ತ ನೆಗೆದವು. ಈಬಾರಿ ಚೇಳ ಮಳೆ ಬೀಳುವ ದಾರಿಯಲ್ಲಿ ಮಲ್ಲಿಗೆ ಮಳೆ ಸುರಿಯುತ್ತಿತ್ತು. ರಥದಲ್ಲಿ ಕುಳಿತ ಈ ಐವರ ಆಶ್ಚರ್ಯಕ್ಕೆ ಎಲ್ಲೆಯೇ ಇಲ್ಲದಂತೆ ಇದೊಂದು ಕನಸೇನೋ ಎಂಬಂತೆ ದಿಭ್ರಾಂತರಾಗಿ, ನಡೆಯುತ್ತಿರುವುದನ್ನೆಲ್ಲಾ ಅನುಭವಿಸುತ್ತಿದ್ದರು. ರಥ ಇನ್ನೂ ಸ್ವಲ್ಪ ಮುಂದೆ ಹೋದಾಗ ಆ ಹಾವ ಹೊಳೆ ಇದ್ದ ಜಾಗದಲ್ಲಿ ಗುಲಾಬಿ ಪಕಳೆಗಳು ಗಾಳಿಗೆ ಒಂದೇ ದಿಕ್ಕಿಗೆ ಹಾರುತ್ತಿದ್ದವು. ಈಗ ಮತ್ತೂ ಆಶ್ಚರ್ಯದಿಂದ ದಂಗಾಗಿದ್ದ ಈ ಐವರೂ ಆ ಪಾಳುಗುಡಿಯ ಸನ್ಯಾಸಿಯನ್ನೊಮ್ಮೆ ಮನದಲ್ಲಿ ನೆನೆದು ಕೈ ಮುಗಿಯುತ್ತಿದ್ದಂತೆಯೇ ಅಕ್ಷರಸಹಃ ಕ್ರೋಧಾಘ್ನಿಯ ರಥ ಆ ಸನ್ಯಾಸಿಯ ಮುಂದಿತ್ತು!
ಯಾವುದೋ ಲೋಕಕ್ಕೆ ಹೋಗಿ ಬಂದ ಅನುಭವದಲ್ಲಿದ್ದ ಐವರೂ ರಥದಿಂದಿಳಿದು ಆ ಸನ್ಯಾಸಿಯ ಪಾದಕ್ಕೆರಗಿದರು. ಕ್ರೋಧಾಘ್ನಿಯೂ ಆ ಸನ್ಯಾಸಿಯ ಪಾದಕ್ಕೆರಗಿದಾಗ 'ಕ್ರೋಧಾಘ್ನಿ ನಿನ್ನ ಆಡಳಿತದ ಶಕೆ ಇಂದಿನಿಂದಲೇ ಶುರುವಾಗಲಿ ನನ್ನ ಕರ್ತವ್ಯವಿಲ್ಲಿಗೆ ಮುಗಿಯಿತು  ವಿಜಯೀಭವ' ಎಂದಾಗ ಆ ಗುರುವಿನ ಪ್ರಾಣ ಪಕ್ಷಿ ಹಾರಿಹೋಯಿತು. ಈ ಐವರ ದಾರಿಯನ್ನೇ ಎದಿರು ನೋಡುತ್ತಾ ಆ ಪಾಳುಗುಡಿಯ ಬಳಿಯೇ ಜಮಾಯಿಸಿದ್ದ ನಗರದ ಎಲ್ಲರ ಕಂಗಳುತುಂಬಿ ಬಂದವು. ಗುರುಗಳ ಅಂತಿಮ ಕಾರ್ಯ ಮುಗಿಸುತ್ತಿದ್ದಂತೆಯೇ ಕ್ರೋಧಾಘ್ನಿ ರಾಜನ ವಿರುದ್ಧ ರಣವೀಳ್ಯವನ್ನು ಕಳಿಸಿದಾಗ ನೊದಲೇ ಯುದ್ಧದ ಲವಲೇಶವೂ ತಿಳಿಯದ ರಾಜ, ತನ್ನ ಪ್ರಜೆಗಳೇ ನನ್ನ ವಿರುದ್ಧ ನಿಂತರಲ್ಲಾ ಎಂಬ ಸಿಟ್ಟಿಗೆ ರಣರಂಗಕ್ಕೆ ಬಂದ ಕ್ರೋಧಾಘ್ನಿ ರಾಜನನ್ನು ಸಂಹರಿಸಿದ. 
ಆಗ ಮುಗಿಲು ಕಳಚಿ ಅಪ್ಪಳಿಸಿದಷ್ಟು ಮಳೆಯಾಯಿತು. ಮಸೀದಿಯಲ್ಲಿ ನಮ್ಹಾಜ್ ನಡೆಯುತ್ತಿತ್ತು. ನಗರದ ಚರ್ಚಿನಲ್ಲಿ ಪ್ರಾರ್ಥನೆ ನಡೆದಿತ್ತು. ದೇವಾಲಯಗಳಲ್ಲಿ ಪೂಜೆ ನಡೆದಿತ್ತು. ಸಾಮ್ರಾಜ್ಯದ ಪ್ರತಿಯೊಂದು ಗುಡಿಸಲಲ್ಲಿ ಪ್ರಣತಿ ಬೆಳಗಿತ್ತು. ಅಲ್ಲಿಂದ ಆ ರಾಜ್ಯ ಸುಭಿಕ್ಷವಾಗಿ ಬಾಳು ನಡೆಸತೊಡಗಿತು'. ಎಂದು ಹೇಳುತ್ತಾ ಅಜ್ಜಿ ತನ್ನ ಕತ್ತನ್ನು ಕೆಳಗಿಳಿಸಿ ನೋಡಿದರೆ ಅದಾಗಲೇ ನಟರಾಜ ಅಜ್ಜಿಯ ಮಡಿಲಲ್ಲಿ ನಿದ್ರಿಸುತ್ತಿದ್ದ. 'ಅಯ್ಯೋ ಕರ್ಮವೇ ಇವನಾಗಲೇ ಮಲಗಿಬಿಟ್ಟನಾ ? ಕಥೆಯನ್ನ ಎಷ್ಟು ಕೇಳಿದನೋ ಏನೋ, ನಾಳೆ ಮತ್ತೆ ಅಜ್ಜೀ ನೀನು ನೆನ್ನೆ ಕಥೆಯನ್ನ ಅರ್ಧಕ್ಕೇ ನಿಲ್ಲಿಸಿದ್ದೆ ಇವತ್ತು ಪೂರ್ತಿ ಹೇಳು ಅಂತ ಕ್ಯಾತೆ ತೆಗೀತಾನೆ. ಮತ್ತೊಮ್ಮೆ ನಾನು ಇದೇ ಕಥೆಯನ್ನೇ ಹೇಳಬೇಕು. ಒಳ್ಳೇ ಹುಡ್ಗ ಇವ್ನು' ಎಂದೇಳುತ್ತಾ ಮಲಗಿದ್ದ ನಟರಾಜನನ್ನು ಅಜ್ಜಿ ಹೆಗಲಿಗೆ ಹಾಕಿಕೊಂಡು ಮೆಲ್ಲಗೆ ಮೆಟ್ಟಿಲುಗಳನ್ನಿಳಿದು ಕೆಳಗೆ ಬಂದು ನಟರಾಜನನ್ನು ಅವನಮ್ಮನ ಪಕ್ಕಕ್ಕೆ ಮಲಗಿಸಿ, ತಾನೂ ಹೋಗಿ ನಿದ್ರೆಗೆ ಜಾರಿದಳು.

my imagination story 05

 ಮತ್ತೊಮ್ಮೆ ಕಾಲ ಮಿಂಚಿ ಹೋಗಿತ್ತು 

ಅವತ್ತು, ಮುಗಿಲಿಂದ ಭರಗುಟ್ಟಿ ಮಳೆ ಹೊಯ್ಯುತ್ತಿತ್ತು. ಗ್ರಾಮದ ಎಲ್ಲಾ ಮನೆಗಳ ಮಾಳಿಗೆಗಳಿಂದ ನೀರು ಝರಿಗಳೋಪಾದಿ ಗಟಾರ ಸೇರಿ, ಆ ಗಟಾರದ ನೀರು ದೊಡ್ಡ ಗಟಾರಕ್ಕೆ ಸೇರಿ ಚಿಕ್ಕ ನದಿಯೋಪಾದಿ ಊರಾಚೆಯ ಕಾಲುವೆಯಲ್ಲಿ ಮಿಳಿತಗೊಳ್ಳುತ್ತಿತ್ತು. ಆ ಕಾಲುವೆ ನೇರ ಗ್ರಾಮದ ಅನತಿ ದೂರದಲ್ಲಿಯ ಹೊಳೆಯ ಒಡಲು ಸೇರುತ್ತಿತ್ತು. ಅಂದು ಬೀಳುತ್ತಿದ್ದುದು ಕೇವಲ ಮಳೆಯಲ್ಲ. ಅದು ಆಲೆಕಲ್ಲ ಸುರಿಮಳೆ. ಮಳೆಯ ರಭಸದ ಜೊತೆಗೆ ಹುಚ್ಚುಗಾಳಿ ಎದ್ದು ಗ್ರಾಮದ ಬೃಹತ್ ಮರಗಳನ್ನು ಬಳ್ಳಿಗಳಂತೆ ವಾಲಾಡಿಸತೊಡಗಿತ್ತು. ಮುಗಿಲ ತುಂಬಾ ಮಿಂಚ ಬಳ್ಳಿ ಎಂಥಹವರ ಕಂಗಳನ್ನೂ ಕೋರೈಸಿದರೆ, ಮನೆಗಳ ಹೊರಗೆ ದುಂಡಗೆ ನಿಂತಿದ್ದ ಸಾಕು ಪ್ರಾಣಿಗಳು, ಮನೆಯ ಒಳಗೂ ದುಂಡಗೆ ಕುಳಿತ ಗ್ರಾಮಸ್ಥರ ಎದೆ ಝೆಲ್ ಎನ್ನುವಂತೆ ಗುಡುಗಿನ ಧ್ವನಿ ಸಿಡಿಯುತ್ತಿದ್ದರಿಂದ, ಗ್ರಾಮದ ಎಲ್ಲಾ ಮನೆಗಳ ಕಿಟಕಿ ಬಾಗಿಲುಗಳು ಮುಚ್ಚಿಕೊಂಡು ಇಡೀ ಗ್ರಾಮ ಮನೆಗಳೇ ಅಘೋಷಿತ ನಿಷೇಧಾಜ್ಞೆಯನ್ನು ಅಸ್ತಿತ್ವಕ್ಕೆ ತಂದುಕೊಂಡಿದ್ದವು. 
ಮನೆಯ ಹೊರಗೆ ಸುರಿಯುತ್ತಿರುವುದು ಕೇವಲ ಮಳೆಯಲ್ಲದೆ ಅದು ಹೊನ್ನ ಮಳೆಯಾದರೂ ಸರಿಯೇ ಯಾವುದೇ ಕಾರಣಕ್ಕೂ ಮನೆಗಳ ಬಾಗಿಲು ತೆರೆಯದಂಥಾ ಬಿಕೋ ಎನ್ನುವ ಪರಿಸ್ಥಿತಿಯಲ್ಲಿ ತುಂಬಾ ದಿಟ್ಟತನದಿಂದ ಆ ಹಣ್ಣಣ್ಣು ಮುದುಕ ಕೇವಲ ಒಂದು ಪ್ಲಾಸ್ಟಿಕ್ ಚೀಲವನ್ನು ತಲೆಗೆ ಹೊದ್ದು, ಮನೆಯ ಹೊಸ್ತಿಲ ಹೊರಗೆ ತನ್ನ ಊರುಗೋಲನ್ನು ಊರುತ್ತಾ ಬೀದಿಗಿಳಿದಿದ್ದ. ತೀರಾ ಅರವತ್ತೆಂಟರ ಆಸುಪಾಸಿನ ಆ ವೃದ್ಧ ಹಾಗೆ ಮಳೆ, ಗಾಳಿ, ಸಿಡಿಲು, ಗುಡುಗು, ಯಾವುದಕ್ಕೂ ಲೆಕ್ಕಿಸದೆ ಮನೆಯಿಂದ ಹೊರಬಿದ್ದಾಗ ಆ ಮುದುಕನ ಪುಟ್ಟ ಪುಟ್ಟ ಮೊಮ್ಮಕ್ಕಳಿಬ್ಬರು ತನ್ನ ತಂದೆಯ ಬುಜವನ್ನು ಅಲ್ಲಾಡಿಸಿ, 'ಅಪ್ಪಾ, ತಾತ ಮಳಿಯೊಳಗಾ ಎಲ್ಲಿಗ್ಯಾ ವಂಟಾನ. ಪಾಪ! ತಂಡಿ ಅಕೈತಿ ಒಳಾಕ ಕರೀಯಪ್ಪಾ' ಎಂದು ಮುಗ್ಧತೆಯಿಂದ ಹೇಳಿದಾಗ, 'ನಿಮ್ಮಜ್ಜಗ ಸೊಕ್ಕು ಜಾಸ್ತಿ ಆಗೈತಿ, ಎಲ್ಲೆರ ಹೊತ್ಗಂಡು ಬಿದ್ರ ಗೊತ್ತಾಕೈತಿ ಸುಮ್ಮನಿರ್ರಲೇ, ಒಳಗಾ ನಿಮ್ಮವ್ವ ಚಾ ಮಾಡ್ಯಾಳ ಸುಮ್ನ ಕುಡಿಯೋಗ್ರಿ' ಎಂದು ಮಕ್ಕಳಿಬ್ಬರನ್ನೂ ಅಡುಗೆ ಮನೆಯತ್ತ ದಬ್ಬಿದ್ದ. 
ಒಳಹೋದ ಮಕ್ಕಳು ಅವರ ಅವ್ವಳಿಗೆ 'ಅವ್ವಾ ತಾತ' ಎಂದು ಹೇಳುತ್ತಲೇ 'ಅಯ್ಯಾ ಊರಾಗಿಲ್ಲದ ತಾತ ನಿಮಿಗೊಂದಾ ಇಲ್ಲ, ಸುಮ್ಮನ ಚಾ ಕುಡಿರಿ. ಅದಾ ಹುಚ್ಚು ಮಳಿ ಹೊಡಿಯಾಕತೈತಿ ಮಾವಾ, ಯಾಕ ಹೊರಾಕ ಹೊಕ್ಕೀ? ಅಂತ ಕೇಳಿದ್ರ, ನಿನಿಗೇನು ಗೊತ್ತವ್ವಾ ? ಸುಮ್ನಿರು. ಹಿಂಗ ಹೋಗಿ ಹಂಗ ಬಂದುಬುಡ್ತಿನಿ ಅಂತ ನನಿಗ್ಯೇ ಟಬುರು ಮಾತಾಡ್ತಾನ. ಇಂಥಾ ಮಳಿಯಾಗ ಅದೆಲ್ಲಿಗೆ ಹಾಳಾಗಿ ಹೊಕ್ಕಾನೋ ಹೋಗ್ಲಿಬುಡು. ದಿನಾಲು ಮಾಡಿ ಹಾಕಿದ್ದು ತಿಂದೂ ತಿಂದೂ ತಲಿಮ್ಯಾಗ ಎಲ್ಡು ಕೊಂಬು ಬಂದಾವು' ಅಂತೇಳಿ ಮತ್ತೊಂದು ಕಪ್ಪಿನಲ್ಲಿ ಬಿಸಿಬಿಸಿ ಚಾ ಹಾಕ್ಕೊಂಡು ಬಂದು ಪಡಸಾಲಿಯಲ್ಲಿ ಕುಳಿತ ತನ್ನ ಗಂಡನಿಗೆ ಕೊಟ್ಟು ಒಳ ಹೋದಳು.


ಸುರಿಯುತ್ತಿದ್ದ ಮಳೆಯಲ್ಲಿ ಕೊಂಚವೂ ಬದಲಾವಣೆಯಿಲ್ಲ. ಅದೇ ಏರು ಲಯದಲ್ಲೇ ಭರಗುಟ್ಟುತ್ತಿದೆ. ಮುಗಿಲೆಂಬೋ ಮುಗಿಲು ಭೂಮಿಗೆ ನೀರ ರೂಪದಲ್ಲಿ ಅಪ್ಪಳಿಸುತ್ತಿದೆ. ಒಟ್ಟಾರೆ ಎಂಥಹ ಎಂಟೆದೆಯ ಬಂಟನೂ ಆಚೆ ಬರದ ಸಂದಿಗ್ಧತೆಯ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕೇವಲ ಒಂದೇ ಒಂದು ಪ್ಲಾಸ್ಟಿಕ್ ಚೀಲ ಹೊದ್ದು ಆಚೆ ಬಂದಿದ್ದ ಆ ವೃದ್ಧನ ಊರುಗೋಲು ಒಂದೊಂದೇ ಹೆಜ್ಜೆಯನ್ನು ಕಿತ್ತಿಕ್ಕುತ್ತಿತ್ತು. ಸುಳಿವ ಸುಳಿಗಾಳಿಗೆ ಮುದುಡಿದ ಚರ್ಮ ಜೋಲಾಡುತಿತ್ತು. ಊರುಗೋಲನ್ನು ಹಿಡಿದ ಬಲಗೈ ವಿಪರೀತ ನಡುಗುತ್ತಿತ್ತು. ತಲೆಯ ಮೇಲಿನ ಪ್ಲಾಸ್ಟಿಕ್ ಚೀಲವನ್ನು ತನ್ನ ಗದ್ದದ ಕೆಳಗೆ ದುಂಡಗೆ ಕಿವಿಗೆ ಗಾಳಿ ಸೋಕದ ಹಾಗೆ ಹಿಡಿದಿದ್ದ ಎಡಗೈ ತನ್ನ ಸತ್ವವನ್ನೇ ಕಳೆದುಕೊಂಡಿತ್ತು. ಒಮ್ಮೊಮ್ಮೆ ಸುಳಿಗಾಳಿಗೆ ಮಳೆ ಹನಿಗಳು ಸುಳಿಸುಳಿದು ಮುದುಡಿದ ಮುಖಕ್ಕೆರಗಿದಾಗ ಸೋತು ಹೋದ ಕಂಗಳು ಮುಚ್ಚಿಕೊಂಡು ಮತ್ತೆ ಒತ್ತಾಯಪೂರ್ವಕವಾಗಿ ತೆರೆಯುತ್ತಿದ್ದವು. ಇಡೀ ದೇಹ ಗಡಗಡನೆ ನಡುಗುತ್ತಾ ತಪ್ಪು ತಪ್ಪು ಹೆಜ್ಜೆಗಳನ್ನು ಹಾಕುತ್ತಲೇ ಆ ವೃದ್ಧ ಹಾಗೂ ಹೀಗೂ ನಡೆದುಬಂದು ನೇರ ಗ್ರಾಮದಾಚೆಯ ಹೊಳೆಯ ದಡದಲ್ಲಿನ ಒಂದು ಬೃಹತ್ ಮರದ ಚಾಟಿಗೆ ನಿಂತು ತನ್ನ ಹಣೆಯ ಮೇಲೆ ಕೈಯಿಟ್ಟು ಹೊಳೆಯ ರಭಸವನ್ನೊಮ್ಮೆ ನೋಡುತಿದ್ದಂತೆಯೇ, ಅಂಥಾ ಪರಿಸ್ಥಿತಿಯಲ್ಲೂ ಕಂಗಳಿಂದ ಬಿಸಿನೀರು ಕೆನ್ನೆ ಜಾರತೊಡಗಿದ್ದವು. ಹಾಗೆ ಸುರಿವ ಮಳೆಯಲ್ಲೂ ಛಲದಿಂದ ಹೊಳೆಯತ್ತಿರ ಅಳುತ್ತ ನಿಂತ ವೃದ್ಧನ ಹೆಸರು ಸೋಮಜ್ಜ.
'ಹಾಳಾದ ಮಳೆ, ಇವತ್ತು ಮುಳಾಮುಂಜಾನಿಲಿಂದನಾ ಚಾಲೂ ಆಗಿದ್ದು, ಮುರಸಂಜಿ ಆದ್ರೂ ಬಿಡದಂಗ ಹೊಡಿಯಾಕತೈತಿ. ಏನು, ಕೈಲಾಸದಾಗ ದೇವತಿಗುಳಿಗೆ ಜಗಳ ನಡದೈತೋ, ಮಗ್ಗಲದಾಗ ಕುಂತ್ಕಂಡಿರಾ ಪಾರ್ವತಿ, ಶಿವನ ತಲಿಮ್ಯಾಗಿರಾ ಗಂಗಿಗೆ ಏನರಾ ನೆವ ಇಟ್ಟು ಚುಚ್ಚು ಮಾತಾಡಿದ್ಲೋ ಏನೋ, ಗಂಗವ್ವಗ ಸಿಟ್ಟು ಹತ್ತಿ ಶಿವನ ತಲಿಲಿಂದ ಒಂದಾ ಉಸುರಿಗೇ ಭೂತಾಯಿ ತವರುಮನಿಗೆ ಓಡಿ ಬಂದಾಳೋ ಒಂದೂ ತಿಳಿವಲ್ದು. ಅಂತೂ ಗಂಗವ್ವ ಸಿಟ್ಟಾದ್ಲು ಅಂದ್ರ ಲೋಕಕ್ಕ ಏನಾ ಕಾದೈತಿ ಅಂತಾನಾ ಅರ್ಥ. ಈ ಮಾತು ಸುಳ್ಳು ಅನ್ನಾದಾಗಿದ್ರ ನನ್ನ ಬಾಳು ಯಾಕ ಹಿಂಗಾ ಮೂರಾಬಟ್ಟಿ ಅಕ್ಕಿತ್ತು ?' ಅಂತ ತನ್ನೊಳಗೆ ತಾನೇ ಏನೇನೋ ತೊದಲುತ್ತಲೇ ಸೋಮಜ್ಜ ತನ್ನ ಕಳೆದು ಹೋದ ಕಹಿ ನೆನಪಿನತ್ತ ಜಾರಿ ಹೋದ.
ಅದು ಹೆಂಚಿನ ದಿಟ್ಟೆ ಅನ್ನೋ ಸುಂದರ ಊರು. ಊರು ಅಂದ್ರ ತೀರಾ ಮಧ್ಯಮ ಗಾತ್ರದ್ದೂ ಅಲ್ಲದ ಕೇವಲ ನೂರನ್ನೊಂದು ಮನೆಗಳ ಪುಟ್ಟ  ಹಳ್ಳಿ. ಅನ್ಯೋನ್ಯತೆ, ಭ್ರಾತೃತ್ವ, ಸಹಮತ ಜೀವನ ಅನ್ನೋದು ಅವುಗಳ ಹೆಸರೂ ಗೊತ್ತಿಲ್ಲದೆ ಗ್ರಾಮದ ಪ್ರತಿ ವ್ಯಕ್ತಿಗಳ ಉಚ್ವಾಸ ನಿಸ್ವಾಸಗಳಾಗಿದ್ದವು. ಕೃಷಿ, ಹೈನುಗಾರಿಕೆ, ಗ್ರಾಮಕ್ಕೆ ಹಬ್ಬದ ಸಡಗರವನ್ನು ನೀಡಿದ್ದವು. ದ್ವೇಷಾಸೂಯೆ, ಜಾತಿ, ಮತ ಧಮರ್ಾಂಧತೆ, ಯಾವುದೆಂದರೆ ಯಾವುದೂ ಇಲ್ಲದ ನಿಕ್ಷಲ್ಮಷ ಹಳ್ಳಿಯಲ್ಲಿ ಅಲ್ಲೊಂದು ಮನೆಯಿತ್ತು. ಆ ಮನೆಯಲ್ಲೊಂದು ಚೆಲುವಿತ್ತು. ಆ ಚೆಲುವಿನ ಹೆಸರು ರತ್ನಮ್ಮಳಾಗಿತ್ತು. ಗುಂಗುರು ಮುಂಗುರುಳಿನ, ಮೂಗುತಿ ಚೆಲುವಿನ, ಬುಗುಡಿ ಕಿವಿಗಳ, ನವಿಲು ಕತ್ತಿನ, ತೋಳ್ಬಂದಿ ಬೆಳ್ಳಿ ನಗುವಿನ, ಹುಣ್ಣಿಮೆ ಕಂಗಳ ಟೋಪು ಮುಸುಕು ಸೀರೆಯ ನೀರೆಗೆ ಸೋಮಜ್ಜ ಫಿದಾ ಆಗಿಬಿಟ್ಟಿದ್ದ. ಈಗಿನಂತೆ ಆಗ ಸಂಪರ್ಕಕ್ಕೆ ಏನೆಲ್ಲಾ ಸಾಧನಗಳಿರಲಿಲ್ಲ. ಆದರೂ ತನ್ನೊಲವನ್ನು ಮುತ್ತಿನಂತ ರತ್ನಳೆದಿರು ಹೇಳುವುದಾದರೂ ಹೇಗೆ? ತಲೆಕೆಟ್ಟು ಕೊನೆಗೊಂದು ದಿನ ಪಕ್ಕದ ಮನೆಯ ಮುದುಕಿಯೊಬ್ಬಾಕೆಗೆ ತಾಂಬೂಲ ಕೊಡಿಸಿ ವಿಷಯದ ಗಂಭೀರತೆಯನ್ನು ತೋಡಿಕೊಂಡಾಗ ಮುದುಕಿ ತಲೆತುಂಬ ಹೊದ್ದ ಸೆರಗಿನ ಚುಂಗನ್ನು ತನ್ನ ತಾಂಬೂಲ ತುಂಬಿದ ಬೊಚ್ಚು ಬಾಯಿಗೆ ಅಡ್ಡ ಇಟ್ಟು ಮುಸಿ ಮುಸಿ ನಕ್ಕು,


ಸೋಮವಾರ ಸಂತೀಗೆ ಸುಕುಮಾರ ತಾ ಹೋಗಿ
ಸುಳುದು ಸೋತಾನೋ ಜಗಜಟ್ಟಿ ಹುರಿಯಾಳು
ಯಾವ ಮೋಡಿ ಮಾಡಿಯೇ ರತ್ನಿ ನಿನ್ನ ನಡು ಮುರಿಯಾ...
ಅಂತೇಳಿ ಒಂದು ಜನಪದದಲ್ಲೇ ತನ್ನ ಖುಷಿಯನ್ನು ತೋಡಿಕೊಂಡು ಸಮಯ ನೋಡಿ ವಿಷಯವನ್ನು ರತ್ನಳ ಹೆತ್ತವರಿಗೆ ತಿಳಿಸಿದಾಗ ಅವರೂ ಮದ್ವೆ ಮಾಡಿಕೊಡಲು ಒಪ್ಪಿದ್ದರು. ಅದೊಂದು ದಿನ ಆ ಘಾಟಿ ಮುದುಕಿಯ ಮನೆಯ ಅಂಗಳದಲ್ಲಿ ನಿಂತಿದ್ದ ರತ್ನಳನ್ನು ನೋಡಿದ ಸೋಮಜ್ಜ ಏನೋ ನೆಪದಲ್ಲಿ ಅಲ್ಲಿಗೆ ಹೋಗಿ ಪ್ರೀತಿಯಿಂದ ರತ್ನಳನ್ನು ಮಾತಿಗೆಳೆದು ತಮ್ಮ ಮದುವೆಗೆ ನಿನ್ನ ಒಪ್ಪಿಗೆ ಇದಿಯಾ ? ಎಂಬುದನ್ನು ಕೇಳಿದಾಗ 'ನೀನು ಈಟೆಲ್ಲಾ ರಂಪಾಟ ಮಾಡಬೇಕಿದ್ದಿಲ್ಲ. ಒಂದು ಮಾತು ನನ್ನಾ ಕೇಳಿದ್ರ,  ನಿನ್ನ ಜೊತಿಯಾಕ್ಕಿದ್ಯ' ಅಂದದ್ದು ಈಗಲೂ ಅಜ್ಜನಿಗೆ ನೆನಪೈತಿ. ಆಮೇಲೆ ಮದ್ವೆಯಾಗಿ ಮಕ್ಕಳಾಗಿ ಜೀವನ ಮತ್ತೊಂದು ಮಗ್ಗುಲು ತಿರುವುತ್ತಲೇ ಅಂದು ಆ ವ್ಯಕ್ತಿ ಊರೊಳಗೆ ಕಾಲಿಟ್ಟಿದ್ದ. ಗ್ರಾಮದ ಎಲ್ಲರನ್ನೂ ಹನ್ಮಪ್ಪನ ಗುಡಿಯೊಳಗೆ ಸೇರಿಸಿ, ಆದಷ್ಟು ಬೇಗ ಊರನು ಬೆಟ್ಟದಾಚೆಗೆ ವಗರ್ಾಯಿಸಲು ಕೋರಿಕೊಂಡಿದ್ದ. ಇನ್ನೆರೆಡು ವರ್ಸದೊಳಗೆ ಈಗ ಇರುವ ಊರೆಲ್ಲಾ ನೀರಲ್ಲಿ ಹೇಳ ಹೆಸರಿಲ್ಲದೆ ಅಳಿದು ಹೋಗುತ್ತೆ ಅಂತ ಭವಿಷ್ಯ ನುಡಿದಿದ್ದ. ಅವನು ಯಾವಾಗಲೂ ಹೊಳೆಯೊಟ್ಟಿಗೇ ಕಾಲ ಕಳೆಯುತ್ತಿದ್ದ ವೃದ್ಧ ಮೀನುಗಾರನಾಗಿದ್ದ.
ವಿಚಿತ್ರ ಅಂದ್ರೆ, ಗ್ರಾಮದ ಯಾರೊಬ್ಬರೂ ಆ ಮುದುಕನ ಮಾತಿಗೆ ಬೆಲೆ ಕೊಡಲೇ ಇಲ್ಲ. ಆದರೆ ಸೋಮಜ್ಜ ಸುಮ್ಮನಿರಲಿಲ್ಲ. ಅವನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡು ತನ್ನ ರತ್ನಳಿಗೆ ಹೇಳಿ ಹಗಲೂ ಇರುಳೂ ಸೇರಿ ಒಂದು ಕಟ್ಟಿಗೆಯ ತೂಗು ಸೇತುವೆ ನಿಮರ್ಾಣಕ್ಕೆ ಚಾಲನೆ ನೀಡಿದ್ದ. ಮೊದಲು ಸೋಮಜ್ಜನ ಈ ಕೃತ್ಯಕ್ಕೆ ಗ್ರಾಮದ ಎಲ್ಲರೂ ಲೇವಡಿ ಮಾಡಿದರು. 'ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸೋದು ನಿನ್ನಂಥೋರಲೇ ಸೋಮಾ' ಎಂದು ನಗಾಡಿದ್ದರು. ಅದಾವುದೂ ಸೋಮಜ್ಜನಿಗೆ ಬೇಕಿರಲಿಲ್ಲ. ತನ್ನ ಕೆಲಸದಲ್ಲಿ ತಾ ತಲ್ಲೀನನಾಗಿದ್ದ. ಮುದ್ದು ಮಡದಿ ಜೊತೆಗಿದ್ದಳು. ಅಜ್ಜನ ಕೆಲಸಕ್ಕೆ ಹೆಗಲು ಕೊಟ್ಟಿದ್ದಳು. ಮಧ್ಯಮ ಗುಣಮಟ್ಟದ ತೂಗು ಸೇತುವೆ ಪೂರ್ಣಗೊಳ್ಳಲು ಒಂದುವರೆವರ್ಷ ಬೇಕಾಯಿತು. ಆ ವರ್ಷ ಸೋಮಜ್ಜನ ಹೊಲಗಳಲ್ಲಿ ಬೆಳೆಗಳು ಕಡಿಮೆ ಫಸಲು ನೀಡಿತ್ತು. ಬೆಳೆಗಳ ಯೋಗಕ್ಷೇಮ ನೋಡಿಕೊಳ್ಳಲು ದಂಪತಿಗಳಿಗೆ ಸಮಯ ಸಿಕ್ಕಿರಲಿಲ್ಲ. ಅವರ ಚಿತ್ತದ ತುಂಬಾ ಕೇವಲ ಸೇತುವೆ ತುಂಬಿತ್ತು. 
ಹೊಲಕ್ಕೆ ಬೀಜ ಸುರಿದು ಬಂದದ್ದಷ್ಟೇ, ಸಿಕ್ಕಷ್ಟೇ ಸಿಗಲೆಂದು ಸೀದಾ ಕೋಯ್ಲಿಗೆ ಹೋಗಿ ಹೊಲದಲ್ಲಿ ನಿಂತಿದ್ದ. ಅಂತೂ ಒಕ್ಕಲುತನವೂ ಮುಗಿದು ಕಾಳು ಮನೆಸೇರಿದ್ದವು. ಅದೇ ತಿಂಗಳು ಭವಿಷ್ಯ ನುಡಿದಿದ್ದ ಮೀನುಗಾರ ಮುದುಕ, ಹೊಳೆಯ ಬಳಿ ಸೋಮಜ್ಜನನ್ನು ಕರೆಸಿಕೊಂಡು, ನೀನು ಭವಿಷ್ಯದ ಒಂದು ಊರನ್ನೇ ಕಾಪಾಡಿದ್ದೀಯಾ. ಮುಂದಿನ ಮುಂಗಾರಿಗೆ ನಾ ಹೇಳಿದ ಅವಘಡ ಗ್ಯಾರೆಂಟಿ, ಆಗ ನೀನು ಎಚ್ಚರಿಕೆಯಿಂದಿದ್ದು, ಮೊದಲು ಗ್ರಾಮದ ಎಲ್ಲಾ ವೃದ್ಧರು, ಹಸುಳೆಗಳನ್ನು ಆಚೆಯ ಬೆಟ್ಟಕ್ಕೆ ಕಳಿಸು, ನಂತರ ಸಾಕು ಸಂಕುಲ ಹೋಗಲಿ, ಆಮೇಲೆ ಹರೆಯದವರ ತಾಕತ್ತು ತಿಳಿಯಲಿ, ನಿನ್ನ ಪುಣ್ಯ ಕಾರ್ಯ ನಿನ್ನ ಕೈ ಹಿಡಿಯುತ್ತೆ, ಅಂತೇಳಿ ಮೀನುಗಾರ ಉಸಿರು ಚೆಲ್ಲಿದ್ದ.


ಅದಾದ ಮೇಲೆ ಸೋಮಜ್ಜ, ಎಚ್ಚರವಾಗಿಬಿಟ್ಟಿದ್ದ, ಗ್ರಾಮದ ಎಲ್ಲಾ ಮಕ್ಕಳನ್ನು ಊರಾಚೆ ಹೋಗದಂತೆ ನೋಡಿಕೊಳ್ಳುತ್ತಿದ್ದ, ಕೊನೆಗೂ ಬಂತು ಮುಂಗಾರು. ಡೆಪನೆಟ್ಲಿ ಆ ಮೀನುಗಾರನ ಮಾತು ಸುಳ್ಳಾಗಲಿಲ್ಲ. ಹುಚ್ಚೆದ್ದು ಊರೆಡೆಗೆ ಮುಗಿಲೆತ್ತರ ತೆರೆಗಳೋಪಾದಿ ಬರುವ ಹೊಳೆಯನ್ನು ಕಂಡು ಇಡೀ ಗ್ರಾಮಸ್ಥರಿಗೆ ತಮ್ಮ ಉದಾಸೀನದ ಕುರಿತು ಪಾಪ ಪ್ರಜ್ಞೆ ಕಾಡಿತ್ತು. ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಅದಾಗಲೇ ಸಮಯ ಮಿಂಚಿತ್ತು. ಸೋಮಜ್ಜನನ್ನು ಆಗ ನೆನೆಯದವರೇ ಇಲ್ಲ. ತಕ್ಷಣ ಗ್ರಾಮದ ಎಲ್ಲರೂ ಸೋಮಜ್ಜನ ಮುಂದಾಳತ್ವದಲ್ಲಿ ಒಂದೆಡೆ ಸೇರಿ ಮೊದಲು ಎಲ್ಲಾ ಹಸುಳೆಗಳೊಟ್ಟಿಗೆ ವೃದ್ಧರನ್ನು ಸೇತುವೆ ಹತ್ತಿಸಿ, ಸೋಮಜ್ಜನೇ ಆಚೆಯ ಬೆಟ್ಟಕ್ಕೆ ಬಿಟ್ಟು ಬಂದ ಹೊಳೆ ಊರತ್ತ ಧಾವಿಸುತ್ತಲೇ ಇತ್ತು, ಕೊಂಚ ಎತ್ತರದ ಪ್ರದೇಶದಲ್ಲಿದ್ದ ಸೇತುವೆಯ ಬಳಿ ಇದ್ದವರಿಗೆ ಮೆಲ್ಲನೆ ಭಯ ಶುರುವಾಗಿತ್ತು. ಆಗ ಗ್ರಾಮದ ಎಲ್ಲಾ ಸಾಕು ಸಂಕುಲಗಳೂ ಹೊಳೆದಾಟಿದವು. ಕೊನೆಯದಾಗಿ ಯೂತ್ ಜನರೇಷನ್ ಸೇತುವೆ ದಾಟುವಾಗ ಭಾರ ಹೆಚ್ಚಾಗಿ ಸೇತುವೆ ಹಳ್ಳಿಯ ಪ್ರಾರಂಭದ ತುದಿಯಲ್ಲಿ ಕಳಚಿ ಬಿತ್ತು. ಆ ಕ್ಷಣದಲ್ಲಿ ಗ್ರಾಮದ ಯೂತ್ ಟೀಂನ ಮುಂದೆ ಸೋಮಜ್ಜನಿದ್ದ, ಗುಂಪಿನ ಕೊನೆಯ ತುದಿಯಲ್ಲಿ ಎಲ್ಲರಿಗೂ ಧೈರ್ಯತುಂಬುತ್ತಾ ರತ್ನಮ್ಮ ನಡೆಯುತ್ತಿದ್ದಳು. ಸೇತುವೆ ಕಳಚಿದ್ದರಿಂದ ಅರ್ಧದಷ್ಟು ಜನ ಹೊಳೆಯಲ್ಲಿ ಕೊಚ್ಚಿ ಹೋದರು. ಅದರಲ್ಲಿ ರತ್ನಮ್ಮಳೂ ಸೇರಿದ್ದಳು. 
ಸೋಮಜ್ಜನ ಸಹಿತ ಅರ್ಧಜನತೆ ನಿರುವಿಲ್ಲದೆ ಬೆಟ್ಟದಾಚೆ ಹೋದರು ಹೊಸ ಗ್ರಾಮವನ್ನು ಕಟ್ಟಿಕೊಂಡು 'ರತ್ನಾಪುರ' ಎಂದು ಹೆಸರಿಟ್ಟುಕೊಂಡು ಹೊಸ ಸಮಾಜ ಚಿಗುರತೊಡಗಿತು. ಈ ಘಟನೆ ನಡೆದು ಇಂದಿಗೆ ಐವತ್ತು ವರ್ಷಗಳಾಗಿದ್ದವು. ಆ ಹಳೆಯ ನೆನಪುಗಳು ಸೋಮಜ್ಜನನ್ನು ಹಿಡಿದು ಇಂಥಾ ಭೋರ್ಗರೆವ ಮಳೆಯಲ್ಲೂ ಹೊಳೆಯ ಬಳಿ ನಿಲ್ಲಿಸಿದ್ದವು. ಇಷ್ಟನ್ನೂ ತನ್ನ ಪ್ರೀತಿಯ ರತ್ನಾಳನ್ನು ನೆನೆಯುತ್ತಾ ವಾಸ್ತವಿಕಕ್ಕೆ ಬಂದ ಸೋಮಜ್ಜನ ದೇಹ ಆ ಥಂಡಿ ಪರಿಸಕ್ಕೆ ಹೊಗ್ಗದೆ ಪ್ರಾಣ ಕೈ ಕೊಡುವ ಹಂತಕ್ಕೇರಿತು. ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು ತಾತನಿಗೆ. ತಕ್ಷಣ ತನ್ನ ಸಾವನ್ನು ಅರಿತ ತಾತ ನೇರ ಹುಚ್ಚೆದ್ದು ಕುಣಿಯುತ್ತಿದ್ದ ಆ ಹೊಳೆಯ ದಡಕ್ಕೆ ಹೋಗಿ ದೊಪ್ಪನೆ ಬಿದ್ದು ಇಹಲೋಕದಿಂದ ಕಳೆದುಹೋದ.
ಅಂದು ರಾತ್ರಿ ಕಳೆದು ಬೆಳಗಾಯಿತು. ಹೊಳೆಯ ದಡದಲ್ಲಿ ಸೋಮಜ್ಜನ ದೇಹ ಕಂಡು ಇಡೀ ಹಳ್ಳಿಗೆ ನೆನ್ನೆಯ ವಿಶೇಷತೆಯನ್ನು ಮರೆತು ಕುಳಿತದ್ದಕ್ಕೆ ಮರುಕವುಂಟಾಗಿತ್ತು. ಆದರೆ ಮತ್ತೊಮ್ಮೆ ಕಾಲ ಮಿಂಚಿ ಹೋಗಿತ್ತು

Friday, 26 July 2013

my imagination story 04

 ಚಿಂದಿ ಆಯುವವನ ಬಾಳು ಅಂಬರದಲ್ಲಿ ಮಿಂಚುತ್ತಿತ್ತು.


ಮುಲ್ಲಾಜೇ ಇಲ್ಲ ಚಿಂದಿ ಆಯೋದೇ ಅವನ ಕಾಯಕ. ಬೃಹತ್ ನಗರದಲ್ಲಿ ಅವನಿಗೆ ಒಂದು ಸೀಮಿತ ರೂಟ್ ಇದೆ. ತನ್ನ ಜೋಪಡಿಯಿಂದ ಬೆಳಗ್ಗೆ ಎಂಟಕ್ಕೆ ಮನೆಯಲ್ಲಿ ಇದ್ದುದೋ ಅಥವಾ ಕೆಲವೊಮ್ಮೆ ಬೀದಿ ಬದಿಯ ಡಬ್ಬಾ ಅಂಗಡಿಗಳಲ್ಲೋ ಕಡಿಮೆ ರೇಟಿಗೆ ಸಿಕ್ಕಿದ್ದನ್ನು  ಹೊಟ್ಟೆಗಿಷ್ಟು ಇಳಿಸಿ ಜೋಪಡಿಗೆ ಬಂದು ಹಳೆಯ ಚಿಂದಿಯಾದ ದೊಡ್ಡ ದೊಡ್ಡ ಚೀಲಗಳನ್ನು ತನ್ನ ಹೆಗಲೇರಿಸಿ ಹೊರಟನೆಂದರೆ ಒಟ್ಟು ಎರೆಡು ಏರಿಯಾಗಳ ಬೀದಿ ಬೀದಿಗಳಲ್ಲಿನ ಕಸದ ತೊಟ್ಟಿಗಳಲ್ಲಿಯೂ ತನಗೆ ಬೇಕಾದ ನಿಧಿಯನ್ನು ಹುಡುಕಿಕೊಂಡು ಬರುವಷ್ಟರಲ್ಲಿ ಒಂದು ಚೀಲ ಭತರ್ಿ ಸಾಮಾಗ್ರಿ ತುಂಬಿ ಇವನ ಮೊಗದಲ್ಲಿ ಅವನಿಗೇ ಅರಿವಿಲ್ಲದೆ ಒಂದು ನೆಮ್ಮದಿ ಉಮ್ಮಳಿಸಿರುತ್ತೆ. ಇನ್ನೇನು ಕೊನೆಯ ಕಸದ ತೊಟ್ಟಿಯನ್ನು ಜಾಲಾಡುತ್ತಲೇ ಅನತಿ ದೂರದಲ್ಲಿಯ ಗುಜರಿ ಅಂಗಡಿಗೆ ಹೋಗಿ ತನ್ನ ಭಾರದ ಚೀಲವನ್ನು ತೂಕಕ್ಕೆ ಹಾಕಿ ಸಿಕ್ಕ ಸದಾ ಹಸನ್ಮುಖಿ ಹತ್ತು, ಇಪ್ಪತ್ತು, ಐವತ್ತರ ಗಾಂಧಿ ನೋಟುಗಳನ್ನು ತನ್ನ ಮಾಸಲು ಪ್ಯಾಂಟಿಗಿಳಿಸಿ ಚಿಲ್ಲರೆ ಸಿಕ್ಕರೆ ಕ್ಷಣವೂ ತಡಮಾಡದೆ ಅದೇ ಬೀದಿಯಲ್ಲಿರುವ ಡಬ್ಬಾ ಅಂಗಡಿಯೊಂದರಲ್ಲಿ ಖಡಕ್ ಚಹಾ ಹೀರಿ ಮತ್ತೆ ಮುಂದಿನ ತನ್ನ ಸೀಮಿತ ನಾಲ್ಕು ಏರಿಯಾಗಳತ್ತ ತುಂಬು ನಿರೀಕ್ಷೆಯಿಂದ ಹೆಗಲ ಮೇಲೆ ಚೀಲಗಳನ್ನು ಹಾಕಿಕೊಂಡು ದೌಡಾಯಿಸುತ್ತಾನೆ.

 ಈ ಕೆಲಸ ಮತ್ತೂ ಎರೆಡು ಏರಿಯಾಗಳಲ್ಲಿ ನಡೆದು ಮೂರನೇ ಏರಿಯಾಕ್ಕೆ ಕಾಲಿಟ್ಟಾಗ ಅಲ್ಲೊಂದು ಪಾಳು ಮನೆಯಿದೆ. ಅಲ್ಲಿ ತನ್ನ ತುಂಬಿದ ಚೀಲವನ್ನು ಆ ಹಾಳು ಗೋಡೆಗೆ ತಾಕಿಸಿ ನಿಲ್ಲಿಸಿ, ಅದೇ ಏರಿಯಾದಲ್ಲಿನ ಮತ್ತೊಂದು ಸೋವಿ ಹೋಟೆಲ್ಲಿನಲ್ಲಿ ಪ್ಲೇಟ್ ಮಿಲ್ಸ್ ಹೊಡೆದು ಬರುತ್ತಾನೆ. ಹಾಗೆ ಊಟ ಮುಗಿಸಿ ಬರುವಷ್ಟರಲ್ಲಿ ಸಮಯ ಅದಾಗಲೇ ಎರಡರ ಗಡಿ ದಾಟಿರುತ್ತೆ. ಈ ಹುಡುಗನ ದೇಹವೂ ಅಷ್ಟೊತ್ತೂ ದಣಿದಿರುತ್ತದಾದ್ದರಿಂದ, ಆಗಷ್ಟೇ ಹೊಟ್ಟೆಗಿಷ್ಟು ಮೋಪು ಬಿದ್ದಿರುತ್ತಾದ್ದರಿಂದ ಕೊಂಚ ವಿಶ್ರಾಂತಿ ಬಯಸುತ್ತೆ. ಆಗ ಇವನು ತನ್ನ ಚೀಲಗಳನ್ನು ನಿಲ್ಲಿಸಿದ್ದ ಪಾಳು ಮನೆಯ ಹತ್ತಿರ ಬರುತ್ತಿದ್ದಂತೆಯೇ ಅಲ್ಲೊಂದು ನಾಗರ ಕಲ್ಲುಗಳಿರುವ ಅರಳಿ ಕಟ್ಟೆಯಿದೆ. ನೇರ ಅಲ್ಲಿಗೆ ಬಂದು ಆ ನೆರಳಿನಲ್ಲಿ ಅರೆಹೊತ್ತು ಸಕ್ಕರೆ ನಿದ್ದೆ ಮೆಲ್ಲುತ್ತಾನೆ.ಇಳಿಗಾಲ ಮೂರು ಅಥವಾ ಮೂರುವರೆಗೆಲ್ಲಾ ಏನನ್ನೋ ಜ್ಞಾಪಿಸಿಕೊಂಡವನಂತೆ ಛಕ್ಕನೆ ಎದ್ದು ತನ್ನ ಹೆಗಲ ಮೇಲಿರುವ ಟವಲ್ಲಿನಿಂದ ಮುಖವನ್ನು ಒರೆಸಿಕೊಳ್ಳುತ್ತಾ ಅದೇ ಏರಿಯಾದ ಬೇಕರಿಯೊಂದಕ್ಕೆ ಹೋಗಿ ಒಂದು ಟೀ ಕುಡಿದು ಮತ್ತದೇ ಕಟ್ಟೆಗೆ ಮರಳುತ್ತಾನೆ.

ಆಗ ಅವನಿಗೆ ಜ್ಞಾಪಕವಾಗೋದು ಬೆಳಗ್ಗೆಯಿಂದ ಚಿಂದಿ ಆಯುವಾಗ ತಾನು ಓದಲೆಂದು ಎತ್ತಿಟ್ಟುಕೊಂಡ ಕೆಲವು ಪತ್ರಿಕೆ,ಹಳೆಯ ಪುಸ್ತಕ ಹೀಗೆ ತನಗೆ ಇಷ್ಟವಾದ ಕೆಲವು ಹಾಳೆಗಳನ್ನು ತನ್ನ ಬಳಿ ಇರುವ ಚಿಕ್ಕ ಚೀಲದ ಹೊಟ್ಟೆಯಿಂದ ಆಚೆ ತೆಗೆದು ಮತ್ತದೇ ನಾಗರ ಕಟ್ಟೆಯಲ್ಲಿ ಕುಳಿತು ಓದುತ್ತಾನೆ. ತಾನು ಓದೋದು ಹಿಡಿಸಿದರೆ ಒಂದಷ್ಟು ಓದುತ್ತಾನೆ ಇಲ್ಲವಾದರೆ ಮುಖವನ್ನು ಸಿಂಡರಿಸಿಕೊಂಡು ಅವೆಲ್ಲವನ್ನೂ ಚಿಂದಿ ಚೀಲಕ್ಕೆಸೆದು ಮತ್ತೆ ಕೆಲಸಕ್ಕಿಳಿಯುತ್ತಾನೆ. ಅಂತೂ ಅವನಿಗೆ ಓದುವ ಹವ್ಯಾಸವಿದೆ. ಹೀಗೆ ವಿಚಿತ್ರ ಸಂಪನ್ನ ಗುಣವುಳ್ಳ ಮಳ್ಳನ ಹೆಸರು ಅಂಜನರಾಜ್.

ಹೀಗೆ ಪ್ರತಿದಿನ ಚಿಂದಿ ಆಯುತ್ತಲೇ ಸಾಹಿತ್ಯದ ರುಚಿ ನೋಡಿರುವ ಅಂಜನ್ ಗೆ ಹೆತ್ತವರ ನೆನಪಿಲ್ಲ. ಸಾಕಿದವರಾರೋ. ಬೆಳದದ್ದು ಹೇಗೋ ಅಂತೂ ಒಂದು ಜೋಪಡಿಯಲ್ಲಿದ್ದಾನೆ. ಅವನ ನೆನಪು ಬಲ್ಲಂತೆ ಒಂದು ಮುದುಕನ ಜೋಪಡಿಯಲ್ಲಿದ್ದ ಮತ್ತು ಆ ಮುದುಕ ತೀರಿ ಹೋಗಿ ಮೂನರ್ಾಲ್ಕು ವರ್ಷಗಳಾಗಿದ್ದವಷ್ಟೆ. ಅಲ್ಲಿಂದ ಅಂಜನರಾಜ್ ಸದಾ ಏಕಾಂತದಲ್ಲಿರೋ ಏಕಾಂಗಿ. ತನ್ನ ಪ್ರತಿದಿನದ ದಿನಚರಿಯಂತೆಯೇ ಅಂದೂ ಆ ನಾಗರ ಕಟ್ಟೆಯ ಮೇಲೆ ಕುಳಿತು ಕೆಲವು ಹಾಳೆಗಳನ್ನು ತಿರುವಿ ಹಾಕಿದ ಓದು ಯಾಕೋ ರುಚಿಸಲಿಲ್ಲ. ಥತ್ತೇರಿಕೆ ಎಂದುಕೊಂಡು ಎಲ್ಲವನ್ನೂ ಚಿಂದಿ ಚೀಲಕ್ಕೆಸೆದು ಆ ಹಾಳು ಗೋಡೆಗೆ ನಿಲ್ಲಿಸಿದ್ದ ಭತರ್ಿ ಚೀಲವನ್ನು ಅಲ್ಲಿಯೇ ಬಿಟ್ಟು ಅದರ ಪಕ್ಕದಲ್ಲಿದ್ದ ಮತ್ತೊಂದು ಖಾಲಿ ಚೀಲವನ್ನು ಹೆಗಲೇರಿಸಿ ಆ ಪಾಳು ಮನೆಯ ಪಕ್ಕದಲ್ಲಿಯ ಕಸದ ತೊಟ್ಟಿಯನ್ನು ತಡಕಾಡುತ್ತಲೇ ಇತರೆ ವಸ್ತುಗಳ ಜೊತೆಗೆ ಆ ಪತ್ರ ಸಿಕ್ಕಿತ್ತು.

ಅದು ಪ್ರೇಮ ಪತ್ರವಾಗಿತ್ತು !

ಆ ಪತ್ರವನ್ನು ಜೇಬಿಗೆ ತುರುಕಿ, ತೊಟ್ಟಿಯನ್ನೆಲ್ಲಾ ಜಾಲಾಡಿ ಇನ್ನೇನು ಮುಂದಿನ ಬೀದಿಗೆ ಹೋಗಬೇಕು. ತಡೆಯಲಾಗಲಿಲ್ಲ ಮನಸಿಗೇಕೋ. ಮತ್ತೆ ನಾಗರಕಟ್ಟೆಗೆ ಬಂದು ಆ ಪತ್ರವನ್ನು ಓದಿದರೆ ನಿಜ ಅದು ಆ ಸೌಂದರ್ಯದ ಗಣಿ  ರಾಶಿಯದ್ದೇ. ರಾಶಿ ಆ ಪಾಳು ಮನೆಯ ಪಕ್ಕದ ಎರಡನೆಯ ಮನೆಯ ಮಹಡಿ ಮೇಲಿರುವ ಸುಂದರಿ. `ಓಹೋ ಇವಳು ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಾಳಲ್ವಾ ?. ಏನು ಓದುತ್ತಾಳೋ ಯಾವಾನಿಗೆ ಗೊತ್ತು ? ಅಂತೂ ಈ ಪ್ರೇಮ ಪತ್ರವನ್ನಂತೂ ಓದಿದ್ದಾಳೆ' ಎಂದು ತನ್ನೊಳಗೆ ತಾನೇ ಗೊಣಗಿಕೊಳ್ಳುತ್ತಾ ಪತ್ರದಲ್ಲೇ ಕಳೆದು ಹೋಗಿದ್ದುದನ್ನು ಯಾವುದೋ ಕಾರಣಕ್ಕೆ ಹೊರಗೆ ಬಂದ ರಾಶಿ ನೋಡಿದಳು. ಎದೆ ಝೆಲ್ ಎಂದಿತವಳಿಗೆ. ತಕ್ಷಣ ಒಂದು ಕವರ್ ನಲ್ಲಿ ಹಾಳು ಮೂಳು ಸಾಮಾನುಗಳನ್ನೆಲ್ಲಾ ತುಂಬಿಕೊಂಡು ತೊಟ್ಟಿ ಹತ್ತಿರ ಬಂದವಳಂತೆ ನಟಿಸಿ ಕಟ್ಟೆಯ ಮೇಲಿದ್ದ ಅಂಜನ್ ಹತ್ತಿರ ಬಂದು `ಹೇಯ್ ಈ ಪತ್ರ ನಂದು ಪ್ಲೀಜ್ ಕೊಡು. ನಿಂಗೆ ಈ ಕವರ್ ತುಂಬಾ ಹೊಸ ವಸ್ಥುಗಳನ್ನೇ ತಂದಿದ್ದೇನೆ ತಗೋ' ಎಂದಾಗ ಇವಳನ್ನೇ ದಿಟ್ಟಿಸಿದ ಅಂಜನ್ `ಸ್ಸಾರಿ ಮೇಡಂ, ನಂಗೆ ನಿಮ್ಮ ಭಿಕ್ಷೆ ಬೇಕಿಲ್ಲ. ಆದ್ರೆ ಈ ಪತ್ರದಲ್ಲಿ ಒಳ್ಳೇ ಸಾಹಿತ್ಯದ ಸಾಲುಗಳಿದ್ದವು ಇಷ್ಟ ಆಯ್ತು ನಂಗಷ್ಟು ಸಾಕು. ಇನ್ನೊಬ್ಬರ ಪತ್ರವನ್ನು ಓದಬಾರದಾದರೂ ಕಸದ ತೊಟ್ಟಿಗೆ ಬಂದಾದಮೇಲೆ ಅದು ಸಾರ್ವಜನಿಕ ಸ್ವತ್ತು ಎಂದುಕೊಂಡು ಓದಿಬಿಟ್ಟೆ ಕ್ಷಮಿಸಿ' ಎಂದು ಹೇಳುತ್ತಾ ಪತ್ರವನ್ನು ಕೈಗಿಟ್ಟಾಗ, ರಾಶಿಯ ಮನಸ್ಸೇಕೋ ಉಳುಕಿದಂತಾಗಿ, `ನಿಂಗೆ ಓದೋಕೆ ಆಸೆನಾ ?' ಕೇಳಿದ್ದಳು. `ಒಂದೊತ್ತು ಊಟ ಬಿಟ್ಟೇನು' ಇಷ್ಟಗಲ ಕಂಗಳಲ್ಲಿ ಮಿಂಚು ಪೊರೆಯುತ್ತಾ ಹೇಳಿದವನ ಆತುರಕ್ಕೆ ದಂಗಾಗಿ ರಾಶಿ `ನಾಳೆ ನಿಂಗೊಂದು ಬುಕ್ ಕೊಡ್ತೀನಿ ಆಯ್ತಾ ?' ಎಂದು ಹೇಳಿ ಹೂ ನಗು ಚೆಲ್ಲಿ ಹೋಗಿದ್ದಳು. ಅಂಜನ್ ಎದೆಯೊಳಗೆ ಮಳೆಯಾದಂತಾಯ್ತು. ಅಂದಿನ ಕೆಲಸಕ್ಕೆ ಪಂಗನಾಮವಿಟ್ಟು ಆ ತುಂಬಿದ್ದ ಚೀಲವನ್ನು ಮತ್ತೆ ಗುಜರಿ ಒಡಲಿಗಿಟ್ಟು ಜೋಪಡಿಯಲ್ಲಿ ಬೆಳಗಾಗುವುದನ್ನೇ ಕಾಯುತ್ತಿದ್ದ. ಅಂತೂ ಬೆಳಗಾಯಿತು.

ಮಾರನೆಯದಿನ ಅದೇ ಸಮಯಕ್ಕೆ ಸರಿಯಾಗಿ ಒಂದು ಕವರ್ ಕೈಲಿಡಿದು ಬಂದ ರಾಶಿ, ಅಂಜನ್ ಗೆ ಒಂದು ಕಾದಂಬರಿ ಪುಸ್ತಕ ಕೈಗಿಟ್ಟು `ಇದು ನಿನ್ನಲ್ಲಿನ ಓದುವ ಹಂಬಲಕ್ಕೆ ನನ್ನ ಪುಟ್ಟ ಸಲಾಂ' ಎಂದು ಇನ್ನೇನು ಮರಳಬೇಕು `ಮೇಡಂ ಈ ಪುಸ್ತಕವನ್ನು ನಾಳೆ ವಾಪಾಸ್ ಮಾಡ್ತೀನಿ. ನಾಳೆ ನಂಗೆ ಇನ್ನೊಂದು ಪುಸ್ತಕ ಕೊಡ್ತೀರಾ ?' ಸಾರ್ವಜನಿಕ ಲೈಬ್ರರಿಯನ್ ರನ್ನು ಕೇಳಿದಂತೆ ಕೇಳಿದ್ದ. ಅವನ ಹಸಿವಿಗೆ ಅಚ್ಚರಿಗೊಂಡ ರಾಶಿ ನಕ್ಕು ಸರಿ ಎಂದೇಳಿ ಹೋದಳು, ಮಾರನೆಯ ದಿನ ರಾಶಿ ಮತ್ತದೇ ಕವರ್ ನಲ್ಲಿ ಒಂದು ಪುಸ್ತಕದೊಂದಿಗೆ ಬಂದಳು ಇವನು ನೆನ್ನೆಯ ಪುಸ್ತಕವನ್ನು ಮರಳಿಸುತ್ತಾ ಕಾದಂಬರಿಯ ಸಂಕ್ಷಿಪ್ತ ಕಥೆ ಹೇಳಿಬಿಟ್ಟ. ಆಗಲೇ ರಾಶಿ ಬದಲಾದದ್ದು.

ಮಾರನೆಯ ದಿನ ಮತ್ತೊಂದು ಕವರ್ ಜೊತೆ ನಾಗರ ಕಟ್ಟೆಗೆ ಬಂದ ರಾಶಿ `ನಿನ್ನ ಹೆಸರೇನು?' ಆತ್ಮೀಯವಾಗಿ ಕೇಳಿದ್ದಳು. ಅಂಜನ್ ನಾನೊಬ್ಬ ಅನಾಥ. ಜೋಪಡಿಯಲ್ಲಿದೀನಿ. ನಂಗೆ  ಅಷ್ಟಾಗಿ ಓದಿಲ್ಲ. ಆದ್ರೆ ಬರಿಯೋಕ್ಕೆ ಬರುತ್ತೆ. ನಾನೂ ಏನೇನೋ ಬರೆದಿದ್ದೀನಿ ಅಂತೆಲ್ಲಾ ಏನೇನೋ ಕನವರಿಸಿಬಿಟ್ಟ. `ದಯವಿಟ್ಟು ಬೇಡ ಅನ್ನಬೇಡ ತಗೋ' ಎಂದು ಕೈಗಿಟ್ಟ ಕವರ್ ನಲ್ಲಿ ಅಂಜನ್ ಗೆ ಹೊಸ ಬಟ್ಟೆಗಳಿದ್ದವು. ಅಚ್ಚರಿಗೊಂಡ ಅಂಜನ್ ಅವುಗಳ ನಡುವೆ ಒಂದು ಪುಸ್ತಕವಿರುವುದು ನೋಡಿ ನಿಟ್ಟುಸಿರು ಬಿಟ್ಟಿದ್ದ. `ನೀನು ಅದೇನೋ ಬರೆದಿದಿನಿ ಅಂದೆಯಲ್ಲಾ ? ಅದನ್ನ ನಾಳೆ ತಗೊಂಬಾ ನಾನು ಓದ್ತಿನಿ ಮರಿಬ್ಯಾಡ ಕಣೋ' ಆ ಧ್ವನಿಯಲ್ಲಿ ನಿಜಕ್ಕೂ ಒಲವಿತ್ತು. ಮೊದಲ ಬಾರಿಗೆ ಅಂಜನ್ ಕಂಪಿಸಿಬಿಟ್ಟಿದ್ದ. ಲೋಕವನ್ನೂ ಮರೆತು ರಾಶಿಯ ಅಮಲಿಗೇರಿಬಿಟ್ಟ. ಮನೆಗೆ ಹೋಗಿ ಬಟ್ಟೆಯನ್ನೊಮ್ಮೆ ಟ್ರಯಲ್ ನೋಡಿ ಖುಷಿಪಟ್ಟು ಕನ್ನಡಿಯಲ್ಲಿ ರಾಶಿಯ ಬಿಂಬವನ್ನೊಮ್ಮೆ ನೋಡಿ ಏನೇನೋ ಲೆಕ್ಕಾಚಾರದ ಕನಸು ಕಾಣುತ್ತಾ ಆ ಪುಸ್ತಕವನ್ನು ತೆರೆಯುತ್ತಲೇ ಗೋಚರಿಸಿದ್ದು ಒಂದು ಮೊಬೈಲ್ ನಂಬರ್ ! ನೋ ಡೌಟ್. ಅದು ರಾಶಿಯದ್ದೇ ನಂಬರ್ ಅಂಜನ್ ಗೆ ಅವಳ ಹುಚ್ಚು ನತ್ತಿಗೇರಲು ಇನ್ನೇನು ಬೇಕು ? ದಡಬಡಾಯಿಸಿ ಪುಸ್ತಕವನ್ನು ಓದಿಮುಗಿಸಿ ಅವಳನ್ನೇ ಅಳೆದೂ ಸುರಿದೂ ನೆನೆದು ಅರವತ್ತಾರು ಕವನಗಳನ್ನು ಗೀಚಿಬಿಟ್ಟ. ಅದ್ದು ಪ್ರೀತಿಗಿರೋ ತಾಕತ್ತು.

 ಅಂಜನ್ ಇದುವರೆಗೂ ಬರೆದಿದ್ದ ಪುಟ್ಟ ಬರಹಗಳು, ಹನಿಗವನಗಳ ಪುಸ್ತಕದಲ್ಲಿಯೇ ಇವುಗಳನ್ನೂ ನೊಂದಾಯಿಸಿದ್ದ. ಮಾರನೆಯ ದಿನ ಮತ್ತದೇ ಸಮಯಕ್ಕೆ ನಾಗರ ಕಟ್ಟೆಯ ಬಳಿ ನಿಂತಿದ್ದ. ಮತ್ತಾಕೆ ಬಂದಳೂ ಕೂಡಾ. ತುಂಬಾ ನಿರೀಕ್ಷೆಯಿಂದ ಬಂದವಳು ಅಂಜನ್ ನನ್ನು ನೋಡುತ್ತಲೇ ಅಚ್ಚರಿಗೊಂಡಿದ್ದಳು. ಯಾಕೆಂದರೆ ಅಂದು ಅಂಜನ್ ಚಿಂದಿ ಆಯುವ ಹುಡುಗನಾಗಿರದೆ ರಾಶಿ ಕೊಟ್ಟ ಬಟ್ಟೆಯನ್ನುಟ್ಟುಕೊಂಡು ತನ್ನ ಬರದಹ ನೋಟ್ ಪುಸ್ತಕವೊಂದನ್ನೇ ಕೈಲಿಡಿದು ಪಕ್ಕಾ ಲಲ್ವೀ ಲುಕ್ ನಲ್ಲಿ ನಿಂತಿದ್ದ. ಅಂದು ತನ್ನ ಪುಸ್ತಕ ನೀಡಿ ಮರುದಿನ ಬೆಳಗ್ಗೆ ಒಂದು ಕರೆ ಬಂತು ಆಚೆಯ ಧ್ವನಿ ರಾಶಿಯದ್ದು. `ಅಂಜು, ಇವಾಗ್ಲೇ ನೀ ನಮ್ಮ ಕಾಲೇಜ್ ಹತ್ರ ಬಾ ಪ್ಲೀಜ್' ಕಾಲ್ ಕಟ್ ಮಾಡಿದ ಅರ್ದ ಘಂಟೆಗೆಲ್ಲಾ ಅಂಜನ್ ರಾಶಿಯ ಕಾಲೇಜಿನ ಆವರಣದಲ್ಲಿದ್ದ. ತಕ್ಷಣ ಅಲ್ಲಿಂದ ರಾಶಿ ತನ್ನ ಸ್ಕೂಟಿಯಲ್ಲಿ ಅದಾವುದೋ ಕಾಲೇಜಿಗೆ ಕರೆಯ್ದೊಯ್ದಾಗ ಅಲ್ಲಿಯ ಪ್ರಿನ್ಸಿಪಾಲರು ಕೇಳಿದರು ನೀನು ಎಷ್ಟು ಓದಿದಿಯಪ್ಪಾ ? ಏಳನೇ ತರಗತಿಯನ್ನು ತನ್ನ ಸ್ಲಂನ ಹತ್ತಿರದಲ್ಲಿಯ ಸರಕಾರಿ ಶಾಲೆಯಲ್ಲಿ ಪಾಸಾಗಿ, ಎಂಟನೇ ತರಗತಿಯ ಫೀಜ್ ಗೆ ದುಡ್ಡಿಲ್ಲದೆ ಟಿಸಿ ಮಾಕರ್್ ಕಾಡರ್್ ಗಳನ್ನು ಶಾಲೆಯಲ್ಲೇ ಬಿಟ್ಟದ್ದು ನೆನಪಾಯಿತವನಿಗೆ. ತಕ್ಷಣ ಆ ಪ್ರಿನ್ಸಿಪಾಲರಿಗೆ ಕಥೆ ಹೇಳಿದ.

ರಾಶಿ ಅವತ್ತೇ  ಆ ಶಾಲೆಗೆ ಹೋಗಿ ಈ ಪುಣ್ಯಾತ್ಮನ ರೆಕಾಡ್ಸರ್್ ಎಲ್ಲವನ್ನೂ ತಂದು ಮತ್ತಿದೇ ಕಾಲೇಜಿನಲ್ಲಿ ಪಿ ಯು ಸಿ ಅಡ್ಮಿಷನ್ ಮಾಡಿಸಿದಳು. ಅದು ಓಪನ್ ಯೂನಿವಸರ್ಿಟಿ ಕಾಲೇಜಾಗಿತ್ತು. ಓದೋಕೆ ಪುಸ್ತಕಗಳು, ಬಟ್ಟೆ, ಗ್ರಂಥಾಲಯದ ಸದಸ್ಯತ್ವ ಹೀಗೆ ಅಂಜನ್ ನ ಜೀವನಕ್ಕೆ ಬೇಕಾದುದನ್ನೆಲ್ಲಾ ನೀಡಿ ಮತ್ತೆ ಸಿಗ್ತೀನಿ ಎಂದೇಳಿ ಮನೆಗೆ ಹೋಗಿ ರಾತ್ರಿ ಮತ್ತೆ ಕಾಲ್ ಮಾಡಿ `ಲೇ ಅಂಜೂ ನೀನು ಸಕ್ಕತ್ತಾಗಿ ಬರೀತೀಯ. ಎಲ್ಲೋ ಹಾಳಾಗೋಗಿದ್ದೆ ಇಷ್ಟು ದಿನ ?' ಪ್ರೀತಿಯಿಂದ ಕೇಳಿದ್ದಳು. ಇವಳ ಒಲುವೆಗೆ ಕರಗಿದ್ದ ಅಂಜು, ನಿನ್ನ ಮಡಿಲನ್ನು ಹುಡುಕುತ್ತಾ ಬೀದಿ ಬೀದಿ ಸುತ್ತುತ್ತಿದ್ದೆ ಎಂದು ಗದ್ಗದಿತನಾಗಿ ನುಡಿದುಬಿಟ್ಟ. ಕಂಪಿಸಿಬಿಟ್ಟಳು ರಾಶಿ.

ಮರುದಿನ ಮತ್ತೆ ರಾಶಿಯ ಕಾಲೇಜಿನ ಆವರಣದಲ್ಲಿ ಸೇರಿದ ಅಂಜನ್ ಗೆ `ನೀನು ಬರೆಯೋದನ್ನ ನಿಲ್ಲಿಸಬೇಡ ನಿಂಗೆ ನಾನು ಯಾವತ್ತೂ ಜೊತೆಯಿತರ್ೀನಿ. ನೀನು ಬೀದಿ ಬೀದಿ ಸುತ್ತುತ್ತಾ ಹುಡುಕುತಿದ್ದ  ನನ್ನ ಮಡಿಲು, ನಿನ್ನ ಮಗುವಿಗಿಷ್ಟು ಒಡಲು ಕಟ್ಟಿಟ್ಟಬುತ್ತಿ. ನಿನ್ನಂಥಹವನನ್ನೇ ಕಣೋ ನಾನು ಹುಡುಕ್ತಾಯಿದ್ದುದು. ಅಂದು ನೀನು ಓದಿದ್ದೆಯಲ್ಲಾ, ಅಂಥಾ ಹೈಟೆಕ್ ಪ್ರೇಮ ಪತ್ರಗಳು, ಐಷರಾಮಿ ಪ್ರೇಮಿಗಳಿಂದ ನಂಗೇನೂ ಕಡ್ಮೆ ಪ್ರಪೋಜ್ ಗಳಲ್ಲ ಬಂದದ್ದು ಆದ್ರೆ ನಂಗೆ ಬೇಕಿದ್ದುದು  ನಿನ್ನಂಥೋನು. ಕೊನೆಗೂ ಸಿಕ್ಕೆಯಲ್ಲಾ ಮಾರಾಯಾ' ಎಂದೇಳಿದಾಗಿನಿಂದ ಇಬ್ಬರ ನಡುವೆ ನಡೆದದ್ದೆಲ್ಲಾ ಜಾತ್ರೆ ಸಂಭ್ರಮ. ಒಂದೆಡೆ ಅಂಜನ್ ಬರೆಯುತ್ತಾ ಹೋದ ಆ ಬರವಣಿಗೆಯನ್ನು ಮೂರ್ತರೂಪ ಕೊಡಿಸುತ್ತಾ ಅವನ ಗೆಲುವಿಗೆ ರಾಶಿ ಹಗಲಿರುಳೂ ನಿಂತಳು. ವಿಷಯ ರಾಶಿಯ ಮನೆಯವರಿಗೆ ಗೊತ್ತಾಗಿ ಅಂಜನ್ ಮೇಲೆ ದೂರು ದಾಖಲಿಸಿ ದೊಡ್ಡ ರಂಪಾಟವಾದಾಗ ನೇರ ಠಾಣೆಗೆ ಹೋದ ರಾಶಿ ಅಂಜುನನ್ನು ಆಚೆ ತಂದಿದ್ದಳು.

ಅಷ್ಟೊತ್ತಿಗೆಲ್ಲಾ ಅಂಜುವಿನ ಕೆಲವು ಕೃತಿಗಳು ಬಿಡುಗಡೆಗೊಂಡು ಅವನಿಗೂ ಸಮಾಜದಲ್ಲಿ ಒಂದು ಸ್ಥಾನ ಸೃಷ್ಟಿಯಾಗುತ್ತಿತ್ತು. ಅಂದೇಕೋ ಗಂಭೀರವಾಗಿದ್ದ ರಾಶಿ ಹೇಳಿದಳು. `ನೋಡು ನನ್ನ ಮಟ್ಟಿಗೆ ಕೊರಳಲ್ಲಿ ನೀನು ಕಟ್ಟುವ ತಾಳಿ ಮಾತ್ರ ಇಲ್ಲ.  ಮಿಕ್ಕಂತೆ ನಾವು ಆಗಲೇ ಆದರ್ಶ ದಂಪತಿಗಳೇ. ನೀನು ನಿನ್ನ ಬರವಣಿಗೆಯತ್ತ ಗಮನಕೊಡು ಇನ್ನೇನು ನನ್ನ ಎಂಬಿಬಿಎಸ್ ಮುಗಿಯೋದರಲ್ಲಿದೆ. ಕೋಸರ್್ ಮುಗಿದ ತಕ್ಷಣ ಮದ್ವೆಯಾಗೋಣ. ನೀ ಕಟ್ಟೋ ಹರಿಷಿನದ ದಾರಕ್ಕೆ ಸಮಾಜ ಗಪ್ ಚುಪ್ ಆಗುತ್ತಲ್ಲಾ ಅಷ್ಟುಸಾಕು ನಂಗೆ. ನಮ್ಮ ಜೀವನ ನಮ್ಮ ಕೈಲಿದೆ ಕಣೋ. ಹೆದರಬೇಡ' ಹೀಗೆ ಹರಳು ಉರಿದವಳಂತೆ ಹೇಳಿದ್ದ ರಾಶಿ ಕೋಸರ್ು ಮುಗಿಯುತ್ತಲೇ ಮನೆಯವರೆಲ್ಲರ ವಿರೋಧದ ನಡುವೆ ದೇವಸ್ಥಾನದಲ್ಲಿ ಅಂಜುವಿಗೆ ಜೊತೆಯಾಗಿ, ಖಾಸಗೀ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿಕೊಂಡು  ಅದೇ ನಗರದಲ್ಲಿ ಬಾಡಿಗೆ ಮನೆಯೊಂದು ಮಾಡಿ ಅಂಜುವಿನ ಜೀವನಕ್ಕೆ ಅಮೃತವಾಗಿದ್ದಳು.

ರಾಶಿಯ ನಂಬುಗೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಓಪನ್ ಯುನಿವಸರ್ಿಟಿಯಲ್ಲಿ ಪದವಿ ಪಡೆದ ಅಂಜು ಖಾಸಗೀ ಶಾಲೆಯೊಂದರ ಶಿಕ್ಷಕನಾಗಿದ್ದ ಕಾಲ ಕಳೆದೂ ಕಳೆದೂ ಚಿಂದಿ ಆಯುವವನ ಬಾಳು ಅಂಬರದಲ್ಲಿ ಮಿಂಚುತ್ತಿತ್ತು.

ರಾಶಿ ಕೆಲಸಮಾಡುವ ಆಸ್ಪತ್ರೆಯ ಹೆರಿಗೆ ಕೋಣೆಯ ಹೊರಗೆ ತನ್ನ ಬೊಗಸೆಯಲ್ಲಿ ಮುಖವನ್ನು ಮುಚ್ಚಿಕೊಂಡು ಕಂಗಳನ್ನು ತುಂಬಿಕೊಂಡು ಕುಳಿತ ಅಂಜನ ರಾಜ್ ಗೆ ದಿಢೀರನೇ ತಾನು ನಡೆದುಬಂದ ಹಾದಿ ನೆನಪಾಗಿ ರಾಶಿಯ ದೈವತ್ವಕ್ಕೂ ಮಿಗಿಲಾದ ಪ್ರೀತಿಯ ಕಾಳಜಿಯನ್ನು ನೆನೆದು ಗಂಟಲೊಡೆದು ಬಂದ ದುಃಖಕ್ಕೆ ಕಣ್ಣೀರ ಹನಿಗಳು ಕೆನ್ನೆ ದಾಟುವ ವೇಳೆಗೆ ಸರಿಯಾಗಿ ಹೆರಿಗೆ ಕೋಣೆಯಿಂದ ಹೊರ ಬಂದ ವೈಧ್ಯರು `ಕಂಗ್ರಾಟ್ಸ್ ಅಂಜು, ನಿಮಗೆ ಹೆಣ್ಣು ಮಗುವಾಗಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ' ಎಂದಾಗ ಅಂಜುವಿನ ಸಂತಸಕ್ಕೆ ಪಾರವೇ ಇರಲಿಲ್ಲ. `ದೇವರೇ ಈ ಭಿಕಾರಿಯ ಜೀವನಕ್ಕೆ ರಾಶಿಯನ್ನು ಕೊಟ್ಟ ನಿಂಗೆ ಕೋಟಿ ಶರಣು ಕಣೋ' ಎಂದುಕೊಳ್ಳುತ್ತಾ ಇನ್ನೇನು ತಾಯಿ ಮಗುವನ್ನು ನೋಡಲು ಕೋಣೆಯ ಒಳ ಹೋಗಬೇಕು, ಅಷ್ಟರಲ್ಲಿ ಎದಿರು ನಿಂತಿದ್ದರು ರಾಶಿಯ ಹೆತ್ತವರು. ಏನೊಂದನ್ನೂ ಮಾತನಾಡದ ರಾಶಿಯ ತಂದೆ ಭಾವುಕವಾಗಿ ಅಂಜುವನ್ನು ಬಿಗಿದಪ್ಪಿದರು. ಎಲ್ಲರೂ ಕೋಣೆಯ ಒಳ ಹೋದರು. ತನ್ನ ಪತಿಯ ಜೊತೆ ಹತ್ತವರನ್ನೂ ನೋಡಿದ ರಾಶಿ ಕಣ್ಣೀರಾದಳು. ತಾಯಿ ಅವಳನ್ನು ಸಮಾಧಾನಿಸುತ್ತಿದ್ದರೆ ತಂದೆ ಮತ್ತು ಅಂಜನ್ ಆ ಮಗುವನ್ನೇ ಪ್ರೀತಿಯಿಂದ ನಗುಮೊಗದಲ್ಲಿ  ದಿಟ್ಟಿಸುತ್ತಿದ್ದರು.

Wednesday, 24 July 2013

imagination story - 03

 ಬಿರಿದ ಮೊಗ್ಗು...

ಅವಳನ್ನು ನೋಡಿ ಇಡೀ ಸಮಾಜ ಒಳಗೊಳಗೇ ಹಾದರಗಿತ್ತಿ ಅಂತ ಕರೆಯುತ್ತಿತ್ತು. ಆದರೆ ಅವಳು ಪಾತರಗಿತ್ತಿಯಾಗಿರಲಿಲ್ಲ. ಸಮಾಜದ ಎದೆಯಲ್ಲಿನ ಈ ನಗ್ನತೆ ಇವಳಿಗೂ ಗೊತ್ತಿತ್ತು. ಆದರೆ ಇವತ್ತಿನವರೆಗೂ ಯಾರೂ ನೇರವಾಗಿ ತನ್ನೆದಿರು ಈ ವಿಷಯವನ್ನು ಪ್ರಸ್ತಾಪಿಸದ ಕಾರಣ ಇವಳೂ ಆ ಬಗ್ಗೆ ಗಂಭೀರವಾಗಿರಲಿಲ್ಲ. ಅಷ್ಟಕ್ಕೂ ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡನೇ ಇವಳ ನಡವಳಿಕೆ ಕುರಿತು ಮೆದುವಾಗಿದ್ದ. ಕಾರಣ ಅವನಿಗೆ ತನ್ನ ಹೆಂಡತಿಯ ಕವಲು ದಾರಿಯ ಪಯಣಕ್ಕೆ ನಿಖರ ಕಾರಣ ಗೊತ್ತಿತ್ತು. ಅದಕ್ಕೇ ನಡೆದ ತಪ್ಪಿಗೆಲ್ಲಾ ತೆಪ್ಪಗಿದ್ದ. ಹಾಗೆಂದ ಮಾತ್ರಕ್ಕೆ ಈಕೆ ತೀರಾ ಕೆಟ್ಟ ಹಾದಿಯನ್ನೋ, ಲಜ್ಜೆಗೆಟ್ಟ ಬದುಕನ್ನೋ ತುಳಿದವಳಲ್ಲ. ಆದರೂ ಸಮೂಹದಿಂದ ಹಗುರ ಯೋಗ್ಯತೆಯುಳ್ಳವಳೆನ್ನಿಸಿಬಿಟ್ಟಿದ್ದಳು. ಅವಳ ಹೆಸರು ಹೊನ್ನಮ್ಮ. ಈಕೆಯ ಗಂಡನ ಹೆಸರು ಪಾರಣ್ಣ. ಮದುವೆಯಾಗಿ ಆರು ವರ್ಷಗಳಾಗಿದ್ದವು ಮೂರು ವರ್ಷದ ಮಗನೊಬ್ಬನಿದ್ದ. ಪಾರಣ್ಣನಿಗೆ ಈ ಮಗುವಿನ ಮಿಡಿತ ನನ್ನದಲ್ಲವೆಂದು ಗೊತ್ತಿದ್ದೂ ಅಪ್ಪ ಎನ್ನಿಸಿಕೊಂಡಿದ್ದ. ಎಲ್ಲಾ ಗೊತ್ತಿದ್ದೂ ತನ್ನ ಮನೆಯೊಳಗೆ ಮಾತ್ರ ಖುಲ್ಲಾಂ ಖುಲ್ಲಾ ಜೀವನ ಸಾಗಿಸುತ್ತಿದ್ದ ಹೊನ್ನಮ್ಮ, ಸಮಾಜದಲ್ಲಿ ತಲೆತುಂಬ ಸೆರೆಗು ಹೊದ್ದು ಗಂಭೀರವಾಗಿ ನಡೆದುಕೊಳ್ಳುತ್ತಿದ್ದುದು ಗಂಡನಿಗೂ ಹೆಮ್ಮೆ ಎನ್ನಿಸಿತ್ತು. ಆದರೆ ಅದೊಂದು ದಿನ ನಸೀಬು ಕೆಟ್ಟಿತ್ತು.
ಯಾವುದೋ ಕಾರಣಕ್ಕೆ ರೇಗಿಬಿಟ್ಟ ಪಾರಣ್ಣ, 'ಇನ್ನು ಸತ್ತರೂ ನೀ ನನ್ನ ಮನೆಯ ಹೊಸ್ತಿಲು ತುಳಿಯದಿರು ನಡೆ ರಂಡೆ' ಎಂದು ಮನೆಯ ಒಳಗೆ ಕೂಗಾಡಿ ರಂಪಾ ಮಾಡಿ, ಹೊನ್ನಮ್ಮಳ ಮೈಯನ್ನು ಹೋಳಿಗೆಯ ಹೂರಣದಂತೆ ಮೆತ್ತಗಾಗಿಸಿದ್ದ. ಗಟ್ಟಿಗಿತ್ತಿ ಹೊನ್ನಮ್ಮಳಿಗೆ ತನ್ನ ಗಂಡನ ಹಕೀಕತ್ತು ಗೊತ್ತಿತ್ತು. ಯಾಕೆಂದರೆ ಅಂದು ಪಾರಣ್ಣ ಪುಲ್ ಲೋಡ್ ಆಗಿದ್ದ. ಮಂಪರಿನಲ್ಲಿ ಮನೆಗೆ ಬಂದು ರಾದ್ಧಾಂತ ಮಾಡಿ ಜೋಲಿ ಸಿಗದೇ ತೊಪ್ಪನೆ ಬಿದ್ದಾಗ ತಲೆಗೆ ಪೆಟ್ಟಾಗಿತ್ತು. ಗಂಡನ ಹೊಡೆತದಿಂದ ಬಾಸುಂಡೆಗಳನ್ನು ಅಳುತ್ತಾ ನೋಡಿಕೊಳ್ಳುತ್ತಿದ್ದ ಹೊನ್ನಮ್ಮಳೇ ದಿಢೀರನೆ ಎದ್ದು ಹೋಗಿ ಗಂಡನಿಗೆ ಚಾಪೆಯೊಂದನ್ನು ಹಾಸಿ ಗೋಡೆಗೊರಗಿ ಕುಳಿತು, ತನ್ನ ತೊಡೆಯನ್ನೇ ಗಂಡನಿಗೆ ದಿಂಬಾಗಿಸಿದ್ದಳು. ಮಡಿಲ ಮೇಲೆ ಎರಗಿದ್ದ ಪಾರಣ್ಣ ಏನೇನೋ ಕನವರಿಸುತ್ತಿದ್ದರೆ, ಹೊನ್ನಮ್ಮ ತನ್ನ ದುರ್ಗತಿಯನ್ನು ನೆನೆದು ಬಿಕ್ಕಳಿಸುತ್ತಿದ್ದಳು. ಯಾಕೋ ಬೇಡ ಬೇಡವೆಂದರೂ ನೆನಪಾಯಿತು ನಡೆದ ಪೂರ್ವಾಪರ.

ಹೊನ್ನಮ್ಮ ತನ್ನ ಹೆತ್ತವರಿಗೆ ಆರನೇ ಕುಡಿ. ತೀರಾ ಬಡತನವಲ್ಲದ ಮಧ್ಯಮ ವರ್ಗದ ಕುಟುಂಬದ ಹುಡುಗಿ. ಶಾಲೆಯ ಕಡೆ ಮೂಸಿಯೂ ನೋಡದೆ ಆಟವಾಡುತ್ತಾ, ಆಕಳುಗಳನ್ನು ಮೇಯಿಸುತ್ತಾ ಬೆಳೆದು ಬಂದವಳು. ಹಳೆಯ ಮಣ್ಣಿನ ಮಾಳಿಗೆಯ ಉದ್ದನೆ ಗವಿಯಂಥಾ ಮನೆಯಲ್ಲಿ ಹದಿನೆಂಟು ಸದಸ್ಯರ ಕುಟುಂಬದಲ್ಲಿ ಹದಿನೆಂಟನೇ ವರ್ಷಕ್ಕೆ ಕಾಲಿಟ್ಟದ್ದಳು ಕಪ್ಪು ಸುಂದರಿ. ಅಷ್ಟೊತ್ತಿಗೆಲ್ಲಾ ಈಕೆಯ ನಾಲ್ಕು ಅಕ್ಕಂದಿರ ಮದುವೆಯಾಗಿತ್ತು. ಅಣ್ಣನೊಬ್ಬ ಈಕೆಯ ಮದುವೆ ಮಾಡಿ ತಾನೂ ಮದ್ವೆಯಾಗುವ ಕನಸು ಹೊಂದಿದ್ದ. ಇನ್ನಿಬ್ಬರು ತಮ್ಮಂದಿರು ಚಿಕ್ಕವರಿದ್ದರು. ಇಡೀ ಕುಟುಂಬದಲ್ಲಿ ಓದಿಕೊಂಡವರಾರೂ ಇರಲಿಲ್ಲ. ಎಲ್ಲರೂ ಬೇರೆಯವರ ಹೊಲಗದ್ದೆಗಳಲ್ಲಿ ಕೂಲಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದರು. ಹೊಟ್ಟೆ ಬಟ್ಟೆಗೆ ಯಾವತ್ತೂ ಚಿಂತಿಸದ, ಉಪ್ಪು, ಹುಳಿ, ಖಾರವನ್ನು ಅಡುಗೆಗೆ ತುಸು ಜಾಸ್ತಿಯೇ ಹಾಕಿಕೊಂಡು ಉಣ್ಣುತ್ತಿದ್ದ ಕುಟುಂಬವದು. ಮನೆಯಲ್ಲಿ ಎಲ್ಲರೂ ದಷ್ಟಪುಷ್ಟ ಆರೋಗ್ಯ ಪಡೆದಿದ್ದರು. ಜೊತೆಗೆ ಹೊನ್ನಮ್ಮಳಿಗೆ ಆಗಷ್ಟೇ ಹರೆಯ ಆಕಳಿಸಿ ಎದ್ದು ಕುಳಿತಿತ್ತು. ಇವಳು ಕೂಡಾ ಗ್ರಾಮದ 'ಧಣಿ' ಯೊಬ್ಬರ ಹೊಲಕ್ಕೆ ಕಳೆ ಕೀಳಲು ಹೋಗುತಿದ್ದಳು. ಅದೊಂದು ದಿನ 'ಧಣಿ'ಯ ಮಕ್ಕಳಲ್ಲೊಬ್ಬ ಹೊನ್ನಮ್ಮಳ ರೂಪಕ್ಕೆ ಕಂಪಿಸಿಬಿಟ್ಟಿದ್ದ. ಅವನೂ ಏರು ಹರೆಯದವನೇ. ಇನ್ನೂ ಮದುವೆಯಾಗಿರಲಿಲ್ಲ. ಹೊಲದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೆಲಸಗಾರರು ಕಳೆ ಕೀಳುತ್ತಿದ್ದರೂ ಹುಡುಗ ಹೊನ್ನಮ್ಮಳಲ್ಲಿ ಕಳೆದು ಹೋಗುತಿದ್ದುದು ಇವಳಿಗೂ ಗೊತ್ತಾಯಿತು. ಕಬ್ಬಿಣದಂಥಾ ಮೈಕಟ್ಟಿನ, ಯಾವ ಆಚಾರ ವಿಚಾರಕ್ಕೂ ಕಿವಿಗೊಡದ, ಯೌವ್ವನದ ಅತಿರೇಖಕ್ಕೆ ಇವಳೂ ಅವನ ಕಣ್ಣಲ್ಲಿ ಕಣ್ಣಿಟ್ಟುಬಿಟ್ಟಳು. ಅಂದು ಸಂಜೆ 'ಧಣಿ'ಯ ಹೊಲದಲ್ಲಿ ತಳುಕು ನಾಗರ ಕಂಡು ಪೈರು ಮಿಂಚಿತ್ತು.
ದಿನಗಳುರುಳಿದವು. ಮನೆಯಲ್ಲಿ ಹೊನ್ನಮ್ಮಳ ಮದುವೆ ಪ್ರಸ್ತಾಪವಾಗಿ ಮದುವೆಗೆ ಪಾರಣ್ಣ ಒಪ್ಪಿಗೆ ಸೂಚಿಸುವುದಕ್ಕೂ ಮೊದಲು ಹೊನ್ನಮ್ಮ 'ಇಬ್ಬರೂ ಮನೆದೇವರಿಗೆ ಹೋಗಿ ಪ್ರಶ್ನೆ ಕೇಳಿಸಿಕೊಂಡು ಬರೋಣ' ಎಂದು ಪಾರಣ್ಣನೊಬ್ಬನನ್ನೇ ಕರೆದುಕೊಂಡು ಹೋಗಿ ಬೆಟ್ಟದ ಮೇಲಿದ್ದ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಆಚೆ ಬಂದು ಸುತ್ತು ಪರಿಸರ ನೋಡುತ್ತಾ, ತನ್ನ ಜೀವನದಲ್ಲಿ ನಡೆದದ್ದನ್ನು ಪ್ರಾಮಾಣಿಕವಾಗಿ ಹೇಳಿದ್ದಳು. ಇವಳ ದಿಟ್ಟತನಕ್ಕೆ ದಂಗಾಗಿದ್ದ ಪಾರಣ್ಣ. ಹೇಗೂ ತನ್ನದು ಎರಡನೆಯ ಸಂಬಂಧ. 'ಅಷ್ಟಕ್ಕೂ ನಾನೂ ನನ್ನ ಹರೆಯದಲ್ಲಿ ಕದ್ದು ಮೇದಿಲ್ಲವೇನು ?' ಎಂದುಕೊಳ್ಳುತ್ತಾ, ಹೊನ್ನಮ್ಮಳಿಗೆ ಧೈರ್ಯತುಂಬಿ ದೇವಸ್ಥಾನದಲ್ಲಿ ಮದುವೆಯಾಗಿದ್ದನು.

ಮದುವೆಯಾಗಿ ಗಂಡನ ಮನೆಗೆ ಬಂದಾಗಲೇ ಪಾರಣ್ಣನ ಅಸಲಿಯತ್ತು ಹೊನ್ನಮ್ಮಳಿಗೆ ಗೊತ್ತಾಗಿತ್ತು. ಹತ್ತೊಂಭತ್ತರ ಬಾಲೆಗೆ ನಲವತೈದು ವರ್ಷದ ಪಾರಣ್ಣ, ಮನೆಯೊಳಗೊಂದು ಹೆಣ್ಣಿರಲಿ ಎಂದು ನಾಮಕಾವಸ್ತೆ ಎಂಬಂತೆ ಮದುವೆಯಾಗಿದ್ದ. ಅವನ ಮೊದಲ ಹೆಂಡತಿಯೊಂದಿಗೆ ಪಂಚಾಯ್ತಿ ಸೇರಿ ಬಾಂಡಿನ ಮೇಲೆ ಬರೆದುಕೊಟ್ಟಿದ್ದೇಕೆಂದರೆ, 'ಪಾರಣ್ಣ ವಿಪರೀತ ಕುಡಿತಕ್ಕೆ ಒಳಗಾಗಿ ಮಿತಿ ಮೀರಿದ ಮಧ್ಯ ಸಹವಾಸ, ಮಧ್ಯ ವಯಸ್ಸಿಗೇ ಕಿಡ್ನಿ ದೌರ್ಬಲ್ಯಕ್ಕೊಳಗಾಗಿ ಸಾವು ಬದುಕಿನ ನಡುವೆ ಬದುಕುತಿದ್ದವನಾಗಿದ್ದ ನಾನೊಲ್ಲೆ' ಎಂದು ಹೇಳಿ ತವರು ಕಂಡಿದ್ದಳು. ಇನ್ನು ಹೆತ್ತವರೂ ಇಲ್ಲದ ಉತ್ತಮ ಆಸ್ತಿ ಹೊಂದಿದ್ದ ಪಾರಣ್ಣನಿಗೆ ಉತ್ತರಾಧಿಕಾರಿ ಬೇಕಲ್ಲ ? ಅದಕ್ಕೇ ಹೊನ್ನಮ್ಮಳ ಕೈ ಹಿಡಿದಿದ್ದ. ಈ ವಿಷಯ ಗೊತ್ತಾಗಿ ಮತ್ತೆ ನಾಲ್ಕು ವರ್ಷಗಳನ್ನು ಗೊಂದಲಗಳಲ್ಲೇ ತಳ್ಳಿದ ಹೊನ್ನಮ್ಮ, ಐದನೇ ವರ್ಷದ ಒಂದು ದಿನ ಗಟ್ಟಿ ನಿರ್ಧಾರ ಕೈಗೊಂಡ ಪ್ರತಿಫಲವೇ ಅದೇ ಓಣಿಯ ಕಾಲೇಜು ಹೈದನೊಬ್ಬನ ಮೈ ನರಗಳಲ್ಲಿ ರಕ್ತ ಏರುಪೇರಾಗಿ ಹರಿದಾಡಿತ್ತು. ಅದೇನಾದರಾಗಲಿ ನೋಡಿಯೇಬಿಡೋಣ ಎಂದು ಮೊದಲು ಈ ವಿಷಯವನ್ನು ತನ್ನ ಗಂಡನಿಗೆ ಹೇಳಿದ ಹೊನ್ನಮ್ಮಳನ್ನು ದಿಟ್ಟಿಸಿದ ಪಾರಣ್ಣ, ಏನೇನನ್ನೋ ನೆನೆದುಕೊಂಡು, ತುಂಬಾ ನೊಂದುಕೊಂಡು, ಕಣ್ಣೀರಿಡುತ್ತಾ 'ಗಾಡ್ರೇಜಲ್ಲಿ ನೂರುಪ್ಪಾಯಿ ತಗೊಂಬಾ' ಎಂದೇಳಿ ದುಡ್ಡು ತೆಗೆದುಕೊಂಡು ಹೋಗಿ ಮತ್ತೆ ಎಣ್ಣೆ ಇಳಿಸಿಕೊಂಡು ಬಂದು ಸುಮ್ಮನೆ ಮಲಗಿದ್ದವನ ಕಂಗಳಲ್ಲಿ ಯಾವಕಾರಣಕ್ಕೆ ನೀರಾಡಿತ್ತೋ.
'ಕಾಲ ಸರಿದುಹೋಗಿ ಎಷ್ಟೋ ದಿನಗಳಾಗಿವೆ. ನನ್ನ ಈ ನಡವಳಿಕೆ ಇವತ್ತೇ ಏಕೆ ನನ್ನ ಗಂಡನಿಗೇಕೆ ಕೋಪ ತರಿಸಿತೋ?' ಎಂದುಕೊಳ್ಳುತ್ತಾ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮೆಲುಕಿನಿಂದ ವಾಸ್ತವಿಕಕ್ಕೆ ಹೊನ್ನಮ್ಮ ಮರಳುತ್ತಲೇ, ಮಡಿಲ ಮೇಲಿದ್ದ ಪಾರಣ್ಣ ವಿಲ ವಿಲ ಒದ್ದಾಡತೊಡಗಿದ. ಮುಗಿಲು ಕಳಚಿ ಬಿದ್ದವಳಂತೆ ಕಂಗಾಲಾದ ಹೊನ್ನಮ್ಮ, ಆ ರಾತ್ರಿಯಲ್ಲೂ ಗೋಳಾಡುತ್ತಾ ಅಕ್ಕಪಕ್ಕದವರ ನೆರವು ಪಡೆದು ಪಾರಣ್ಣನನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಳು. ವೈದ್ಯರು ಬೆಳಗ್ಗೆ ಅದೇನೋ ಆಪರೇಷನ್ ಮಾಡಬೇಕು ಎಂದೇಳಿ ಸದ್ಯಕ್ಕೆ ಗ್ಲುಕೋಸ್ ಹಾಕಿ ಹೋಗಿದ್ದರು. ಪಾರಣ್ಣನ ದೇಹದೊಳಗೆ ಯಾವ ಯಡವಟ್ಟಾಯಿತೇನೋ, ಬೆಳಗಿನ ಜಾವ ಐದುವರೆಯ ಸುಮಾರು ತನ್ನ ಹೆಂಡತಿಯನ್ನು ನೋಡುತ್ತಾ, ಅವಳ ಮುಂಗೈಯನ್ನು ಗಟ್ಟಿಯಾಗಿ ಹಿಡಿದು ಕಣ್ಣೀರಿಡುತ್ತಾ, ಪಕ್ಕದಲ್ಲಿ ನಿಂತಿದ್ದ ಮಗುವಿನ ಹಣೆಗೊಂದು ಮುತ್ತನಿಕ್ಕಿ ತನ್ನ ಬದುಕನ್ನು ಮುಗಿಸಿಕೊಂಡುಬಿಟ್ಟ.
ಸುದ್ದಿ ತಿಳಿಯುತ್ತಲೇ ಹೊನ್ನಮ್ಮಳ ತವರು ಮನೆಯವರು ಜಿಲ್ಲಾ ಆಸ್ಪತ್ರೆಯಿಂದ ತಮ್ಮ ಹಳ್ಳಿಗೆ ಮೃತ ದೇಹವನ್ನು ಕರೆತಂದರು. ಅಲ್ಲಿಗೆ ಪಾರಣ್ಣನ ಮೊದಲ ಹೆಂಡತಿಯೂ ಸೇರಿದಂಸತೆ ಅವನಿಗೆ ಬೇಕಾದ ಸರ್ವರೂ ಸೇರಿ ಅಂತ್ಯ ಸಂಸ್ಕಾರ ಮಾಡಿದರು.
 
ಪಾರಣ್ಣನ ಮನೆಯಲ್ಲಿ ಈಗ ಉಳಿದಿರೋದು ಕೇವಲ ಹೊನ್ನಮ್ಮ ಮತ್ತಾಕೆಯ ಮಗು. ಕಾಲ ಸರಿಯುತ್ತಲೇ ಇತ್ತು. ಪಾರಣ್ಣನ ಸಕಲ ಆಸ್ತಿಯ ಲೇವಾದೇವಿಯನ್ನೂ ನೋಡಿಕೊಳ್ಳತೊಡಗಿದಳು ಹೊನ್ನಮ್ಮ ಅದೊಂದು ಮದ್ಯಾಹ್ನ ಹೊನ್ನಮ್ಮಳ ಓಣಿಯ ಆ ಕಾಲೇಜು ಹೈದ ಎದಿರು ನಿಂತು 'ಹೊನ್ನಮ್ಮಾ, ಇದುವರೆಗೂ ಅದೇನು ನಡೆದಿದೆಯೋ ಅದಿಷ್ಟೂ ನಂಗೆ ಗೊತ್ತು. ಈ ಸಮಾಜ ಏನನ್ನಾದರೂ ಹೋಯ್ದುಕೊಳ್ಳಲಿ ನಂಗದರ ದರ್ದೂ ಇಲ್ಲ. ಏಕೆಂದರೆ ನಂಗೆ ನೀನು ಗೊತ್ತು. ಈಗಾಗಲೇ ಒಂದು ವಾರದಿಂದ ಮೊಂಡು ಹಿಡಿದು ನನ್ನ ಹೆತ್ತವರನ್ನು ಒಪ್ಪಿಸಿ ಅವರ ಬೆಂಬಲದಿಂದಲೇ ನಾನೀಗ ಇಲ್ಲಿ ನಿಂತಿರೋದು. ವಿಷ್ಯ ಇಷ್ಟೇ, ಲೌಕಿಕ ಪ್ರಪಂಚದ ಎದಿರು  ನಾ ನಿನ್ನ ಮದ್ವೆಯಾಗ್ತೀನಿ. ಅಂದೆಂದೋ ನಂಗೆ ಮನಸ್ಸು ಕೊಟ್ಟಿರುವ ನೀನು ಇಂದು ನಂಗೆ ತಾಳಿ ಕಟ್ಟಲು ನಿನ್ನ ಕೊರಳು ಕೊಡು. ಯಾಕೆಂದರೆ ನೀನೂ ನನ್ನವಳೇ, ಈಗಿರುವ ಮಗುವೂ ನಂದೇ.. ಚಿಂತಿಸಬೇಡ ನಿಂಗೆ ನಾನಿದೀನಿ' ನಿಚ್ಚಳವಾಗಿ ತುಂಬಾ ಆತ್ಮವಿಶ್ವಾಸದಿಂದ, ದೃಢಚಿತ್ತದಿಂದ ಆ ಕಾಲೇಜು ಹೈದ ಎದೆಯುಬ್ಬಿಸಿ ಹೇಳುತ್ತಿದ್ದರೆ, ಹೊನ್ನಮ್ಮ ಮಿಂಚು ಕಂಗಳಲಿ ಆಶ್ಚರ್ಯ ಹೊರಡಿಸಿ ಇವನನ್ನೇ ನೋಡುತ್ತಿದ್ದಾಗ, ಅಂಗಳದಲ್ಲಿನ ಮಲ್ಲಿಗೆ ಗಿಡದಲ್ಲಿ ಆಗಷ್ಟೇ ಮೊಗ್ಗೊಂದು ಬಿರಿದು ನಗು ಚೆಲ್ಲುತ್ತಿತ್ತು ...