ಬಿರಿದ ಮೊಗ್ಗು...
ಅವಳನ್ನು ನೋಡಿ ಇಡೀ ಸಮಾಜ ಒಳಗೊಳಗೇ ಹಾದರಗಿತ್ತಿ ಅಂತ ಕರೆಯುತ್ತಿತ್ತು. ಆದರೆ ಅವಳು ಪಾತರಗಿತ್ತಿಯಾಗಿರಲಿಲ್ಲ. ಸಮಾಜದ ಎದೆಯಲ್ಲಿನ ಈ ನಗ್ನತೆ ಇವಳಿಗೂ ಗೊತ್ತಿತ್ತು. ಆದರೆ ಇವತ್ತಿನವರೆಗೂ ಯಾರೂ ನೇರವಾಗಿ ತನ್ನೆದಿರು ಈ ವಿಷಯವನ್ನು ಪ್ರಸ್ತಾಪಿಸದ ಕಾರಣ ಇವಳೂ ಆ ಬಗ್ಗೆ ಗಂಭೀರವಾಗಿರಲಿಲ್ಲ. ಅಷ್ಟಕ್ಕೂ ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡನೇ ಇವಳ ನಡವಳಿಕೆ ಕುರಿತು ಮೆದುವಾಗಿದ್ದ. ಕಾರಣ ಅವನಿಗೆ ತನ್ನ ಹೆಂಡತಿಯ ಕವಲು ದಾರಿಯ ಪಯಣಕ್ಕೆ ನಿಖರ ಕಾರಣ ಗೊತ್ತಿತ್ತು. ಅದಕ್ಕೇ ನಡೆದ ತಪ್ಪಿಗೆಲ್ಲಾ ತೆಪ್ಪಗಿದ್ದ. ಹಾಗೆಂದ ಮಾತ್ರಕ್ಕೆ ಈಕೆ ತೀರಾ ಕೆಟ್ಟ ಹಾದಿಯನ್ನೋ, ಲಜ್ಜೆಗೆಟ್ಟ ಬದುಕನ್ನೋ ತುಳಿದವಳಲ್ಲ. ಆದರೂ ಸಮೂಹದಿಂದ ಹಗುರ ಯೋಗ್ಯತೆಯುಳ್ಳವಳೆನ್ನಿಸಿಬಿಟ್ಟಿದ್ದಳು. ಅವಳ ಹೆಸರು ಹೊನ್ನಮ್ಮ. ಈಕೆಯ ಗಂಡನ ಹೆಸರು ಪಾರಣ್ಣ. ಮದುವೆಯಾಗಿ ಆರು ವರ್ಷಗಳಾಗಿದ್ದವು ಮೂರು ವರ್ಷದ ಮಗನೊಬ್ಬನಿದ್ದ. ಪಾರಣ್ಣನಿಗೆ ಈ ಮಗುವಿನ ಮಿಡಿತ ನನ್ನದಲ್ಲವೆಂದು ಗೊತ್ತಿದ್ದೂ ಅಪ್ಪ ಎನ್ನಿಸಿಕೊಂಡಿದ್ದ. ಎಲ್ಲಾ ಗೊತ್ತಿದ್ದೂ ತನ್ನ ಮನೆಯೊಳಗೆ ಮಾತ್ರ ಖುಲ್ಲಾಂ ಖುಲ್ಲಾ ಜೀವನ ಸಾಗಿಸುತ್ತಿದ್ದ ಹೊನ್ನಮ್ಮ, ಸಮಾಜದಲ್ಲಿ ತಲೆತುಂಬ ಸೆರೆಗು ಹೊದ್ದು ಗಂಭೀರವಾಗಿ ನಡೆದುಕೊಳ್ಳುತ್ತಿದ್ದುದು ಗಂಡನಿಗೂ ಹೆಮ್ಮೆ ಎನ್ನಿಸಿತ್ತು. ಆದರೆ ಅದೊಂದು ದಿನ ನಸೀಬು ಕೆಟ್ಟಿತ್ತು.
ಯಾವುದೋ ಕಾರಣಕ್ಕೆ ರೇಗಿಬಿಟ್ಟ ಪಾರಣ್ಣ, 'ಇನ್ನು ಸತ್ತರೂ ನೀ ನನ್ನ ಮನೆಯ ಹೊಸ್ತಿಲು ತುಳಿಯದಿರು ನಡೆ ರಂಡೆ' ಎಂದು ಮನೆಯ ಒಳಗೆ ಕೂಗಾಡಿ ರಂಪಾ ಮಾಡಿ, ಹೊನ್ನಮ್ಮಳ ಮೈಯನ್ನು ಹೋಳಿಗೆಯ ಹೂರಣದಂತೆ ಮೆತ್ತಗಾಗಿಸಿದ್ದ. ಗಟ್ಟಿಗಿತ್ತಿ ಹೊನ್ನಮ್ಮಳಿಗೆ ತನ್ನ ಗಂಡನ ಹಕೀಕತ್ತು ಗೊತ್ತಿತ್ತು. ಯಾಕೆಂದರೆ ಅಂದು ಪಾರಣ್ಣ ಪುಲ್ ಲೋಡ್ ಆಗಿದ್ದ. ಮಂಪರಿನಲ್ಲಿ ಮನೆಗೆ ಬಂದು ರಾದ್ಧಾಂತ ಮಾಡಿ ಜೋಲಿ ಸಿಗದೇ ತೊಪ್ಪನೆ ಬಿದ್ದಾಗ ತಲೆಗೆ ಪೆಟ್ಟಾಗಿತ್ತು. ಗಂಡನ ಹೊಡೆತದಿಂದ ಬಾಸುಂಡೆಗಳನ್ನು ಅಳುತ್ತಾ ನೋಡಿಕೊಳ್ಳುತ್ತಿದ್ದ ಹೊನ್ನಮ್ಮಳೇ ದಿಢೀರನೆ ಎದ್ದು ಹೋಗಿ ಗಂಡನಿಗೆ ಚಾಪೆಯೊಂದನ್ನು ಹಾಸಿ ಗೋಡೆಗೊರಗಿ ಕುಳಿತು, ತನ್ನ ತೊಡೆಯನ್ನೇ ಗಂಡನಿಗೆ ದಿಂಬಾಗಿಸಿದ್ದಳು. ಮಡಿಲ ಮೇಲೆ ಎರಗಿದ್ದ ಪಾರಣ್ಣ ಏನೇನೋ ಕನವರಿಸುತ್ತಿದ್ದರೆ, ಹೊನ್ನಮ್ಮ ತನ್ನ ದುರ್ಗತಿಯನ್ನು ನೆನೆದು ಬಿಕ್ಕಳಿಸುತ್ತಿದ್ದಳು. ಯಾಕೋ ಬೇಡ ಬೇಡವೆಂದರೂ ನೆನಪಾಯಿತು ನಡೆದ ಪೂರ್ವಾಪರ.
ಯಾವುದೋ ಕಾರಣಕ್ಕೆ ರೇಗಿಬಿಟ್ಟ ಪಾರಣ್ಣ, 'ಇನ್ನು ಸತ್ತರೂ ನೀ ನನ್ನ ಮನೆಯ ಹೊಸ್ತಿಲು ತುಳಿಯದಿರು ನಡೆ ರಂಡೆ' ಎಂದು ಮನೆಯ ಒಳಗೆ ಕೂಗಾಡಿ ರಂಪಾ ಮಾಡಿ, ಹೊನ್ನಮ್ಮಳ ಮೈಯನ್ನು ಹೋಳಿಗೆಯ ಹೂರಣದಂತೆ ಮೆತ್ತಗಾಗಿಸಿದ್ದ. ಗಟ್ಟಿಗಿತ್ತಿ ಹೊನ್ನಮ್ಮಳಿಗೆ ತನ್ನ ಗಂಡನ ಹಕೀಕತ್ತು ಗೊತ್ತಿತ್ತು. ಯಾಕೆಂದರೆ ಅಂದು ಪಾರಣ್ಣ ಪುಲ್ ಲೋಡ್ ಆಗಿದ್ದ. ಮಂಪರಿನಲ್ಲಿ ಮನೆಗೆ ಬಂದು ರಾದ್ಧಾಂತ ಮಾಡಿ ಜೋಲಿ ಸಿಗದೇ ತೊಪ್ಪನೆ ಬಿದ್ದಾಗ ತಲೆಗೆ ಪೆಟ್ಟಾಗಿತ್ತು. ಗಂಡನ ಹೊಡೆತದಿಂದ ಬಾಸುಂಡೆಗಳನ್ನು ಅಳುತ್ತಾ ನೋಡಿಕೊಳ್ಳುತ್ತಿದ್ದ ಹೊನ್ನಮ್ಮಳೇ ದಿಢೀರನೆ ಎದ್ದು ಹೋಗಿ ಗಂಡನಿಗೆ ಚಾಪೆಯೊಂದನ್ನು ಹಾಸಿ ಗೋಡೆಗೊರಗಿ ಕುಳಿತು, ತನ್ನ ತೊಡೆಯನ್ನೇ ಗಂಡನಿಗೆ ದಿಂಬಾಗಿಸಿದ್ದಳು. ಮಡಿಲ ಮೇಲೆ ಎರಗಿದ್ದ ಪಾರಣ್ಣ ಏನೇನೋ ಕನವರಿಸುತ್ತಿದ್ದರೆ, ಹೊನ್ನಮ್ಮ ತನ್ನ ದುರ್ಗತಿಯನ್ನು ನೆನೆದು ಬಿಕ್ಕಳಿಸುತ್ತಿದ್ದಳು. ಯಾಕೋ ಬೇಡ ಬೇಡವೆಂದರೂ ನೆನಪಾಯಿತು ನಡೆದ ಪೂರ್ವಾಪರ.
ದಿನಗಳುರುಳಿದವು. ಮನೆಯಲ್ಲಿ ಹೊನ್ನಮ್ಮಳ ಮದುವೆ ಪ್ರಸ್ತಾಪವಾಗಿ ಮದುವೆಗೆ ಪಾರಣ್ಣ ಒಪ್ಪಿಗೆ ಸೂಚಿಸುವುದಕ್ಕೂ ಮೊದಲು ಹೊನ್ನಮ್ಮ 'ಇಬ್ಬರೂ ಮನೆದೇವರಿಗೆ ಹೋಗಿ ಪ್ರಶ್ನೆ ಕೇಳಿಸಿಕೊಂಡು ಬರೋಣ' ಎಂದು ಪಾರಣ್ಣನೊಬ್ಬನನ್ನೇ ಕರೆದುಕೊಂಡು ಹೋಗಿ ಬೆಟ್ಟದ ಮೇಲಿದ್ದ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಆಚೆ ಬಂದು ಸುತ್ತು ಪರಿಸರ ನೋಡುತ್ತಾ, ತನ್ನ ಜೀವನದಲ್ಲಿ ನಡೆದದ್ದನ್ನು ಪ್ರಾಮಾಣಿಕವಾಗಿ ಹೇಳಿದ್ದಳು. ಇವಳ ದಿಟ್ಟತನಕ್ಕೆ ದಂಗಾಗಿದ್ದ ಪಾರಣ್ಣ. ಹೇಗೂ ತನ್ನದು ಎರಡನೆಯ ಸಂಬಂಧ. 'ಅಷ್ಟಕ್ಕೂ ನಾನೂ ನನ್ನ ಹರೆಯದಲ್ಲಿ ಕದ್ದು ಮೇದಿಲ್ಲವೇನು ?' ಎಂದುಕೊಳ್ಳುತ್ತಾ, ಹೊನ್ನಮ್ಮಳಿಗೆ ಧೈರ್ಯತುಂಬಿ ದೇವಸ್ಥಾನದಲ್ಲಿ ಮದುವೆಯಾಗಿದ್ದನು.
'ಕಾಲ ಸರಿದುಹೋಗಿ ಎಷ್ಟೋ ದಿನಗಳಾಗಿವೆ. ನನ್ನ ಈ ನಡವಳಿಕೆ ಇವತ್ತೇ ಏಕೆ ನನ್ನ ಗಂಡನಿಗೇಕೆ ಕೋಪ ತರಿಸಿತೋ?' ಎಂದುಕೊಳ್ಳುತ್ತಾ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮೆಲುಕಿನಿಂದ ವಾಸ್ತವಿಕಕ್ಕೆ ಹೊನ್ನಮ್ಮ ಮರಳುತ್ತಲೇ, ಮಡಿಲ ಮೇಲಿದ್ದ ಪಾರಣ್ಣ ವಿಲ ವಿಲ ಒದ್ದಾಡತೊಡಗಿದ. ಮುಗಿಲು ಕಳಚಿ ಬಿದ್ದವಳಂತೆ ಕಂಗಾಲಾದ ಹೊನ್ನಮ್ಮ, ಆ ರಾತ್ರಿಯಲ್ಲೂ ಗೋಳಾಡುತ್ತಾ ಅಕ್ಕಪಕ್ಕದವರ ನೆರವು ಪಡೆದು ಪಾರಣ್ಣನನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಳು. ವೈದ್ಯರು ಬೆಳಗ್ಗೆ ಅದೇನೋ ಆಪರೇಷನ್ ಮಾಡಬೇಕು ಎಂದೇಳಿ ಸದ್ಯಕ್ಕೆ ಗ್ಲುಕೋಸ್ ಹಾಕಿ ಹೋಗಿದ್ದರು. ಪಾರಣ್ಣನ ದೇಹದೊಳಗೆ ಯಾವ ಯಡವಟ್ಟಾಯಿತೇನೋ, ಬೆಳಗಿನ ಜಾವ ಐದುವರೆಯ ಸುಮಾರು ತನ್ನ ಹೆಂಡತಿಯನ್ನು ನೋಡುತ್ತಾ, ಅವಳ ಮುಂಗೈಯನ್ನು ಗಟ್ಟಿಯಾಗಿ ಹಿಡಿದು ಕಣ್ಣೀರಿಡುತ್ತಾ, ಪಕ್ಕದಲ್ಲಿ ನಿಂತಿದ್ದ ಮಗುವಿನ ಹಣೆಗೊಂದು ಮುತ್ತನಿಕ್ಕಿ ತನ್ನ ಬದುಕನ್ನು ಮುಗಿಸಿಕೊಂಡುಬಿಟ್ಟ.
ಸುದ್ದಿ ತಿಳಿಯುತ್ತಲೇ ಹೊನ್ನಮ್ಮಳ ತವರು ಮನೆಯವರು ಜಿಲ್ಲಾ ಆಸ್ಪತ್ರೆಯಿಂದ ತಮ್ಮ ಹಳ್ಳಿಗೆ ಮೃತ ದೇಹವನ್ನು ಕರೆತಂದರು. ಅಲ್ಲಿಗೆ ಪಾರಣ್ಣನ ಮೊದಲ ಹೆಂಡತಿಯೂ ಸೇರಿದಂಸತೆ ಅವನಿಗೆ ಬೇಕಾದ ಸರ್ವರೂ ಸೇರಿ ಅಂತ್ಯ ಸಂಸ್ಕಾರ ಮಾಡಿದರು.
ಪಾರಣ್ಣನ ಮನೆಯಲ್ಲಿ ಈಗ ಉಳಿದಿರೋದು ಕೇವಲ ಹೊನ್ನಮ್ಮ ಮತ್ತಾಕೆಯ ಮಗು. ಕಾಲ ಸರಿಯುತ್ತಲೇ ಇತ್ತು. ಪಾರಣ್ಣನ ಸಕಲ ಆಸ್ತಿಯ ಲೇವಾದೇವಿಯನ್ನೂ ನೋಡಿಕೊಳ್ಳತೊಡಗಿದಳು ಹೊನ್ನಮ್ಮ ಅದೊಂದು ಮದ್ಯಾಹ್ನ ಹೊನ್ನಮ್ಮಳ ಓಣಿಯ ಆ ಕಾಲೇಜು ಹೈದ ಎದಿರು ನಿಂತು 'ಹೊನ್ನಮ್ಮಾ, ಇದುವರೆಗೂ ಅದೇನು ನಡೆದಿದೆಯೋ ಅದಿಷ್ಟೂ ನಂಗೆ ಗೊತ್ತು. ಈ ಸಮಾಜ ಏನನ್ನಾದರೂ ಹೋಯ್ದುಕೊಳ್ಳಲಿ ನಂಗದರ ದರ್ದೂ ಇಲ್ಲ. ಏಕೆಂದರೆ ನಂಗೆ ನೀನು ಗೊತ್ತು. ಈಗಾಗಲೇ ಒಂದು ವಾರದಿಂದ ಮೊಂಡು ಹಿಡಿದು ನನ್ನ ಹೆತ್ತವರನ್ನು ಒಪ್ಪಿಸಿ ಅವರ ಬೆಂಬಲದಿಂದಲೇ ನಾನೀಗ ಇಲ್ಲಿ ನಿಂತಿರೋದು. ವಿಷ್ಯ ಇಷ್ಟೇ, ಲೌಕಿಕ ಪ್ರಪಂಚದ ಎದಿರು ನಾ ನಿನ್ನ ಮದ್ವೆಯಾಗ್ತೀನಿ. ಅಂದೆಂದೋ ನಂಗೆ ಮನಸ್ಸು ಕೊಟ್ಟಿರುವ ನೀನು ಇಂದು ನಂಗೆ ತಾಳಿ ಕಟ್ಟಲು ನಿನ್ನ ಕೊರಳು ಕೊಡು. ಯಾಕೆಂದರೆ ನೀನೂ ನನ್ನವಳೇ, ಈಗಿರುವ ಮಗುವೂ ನಂದೇ.. ಚಿಂತಿಸಬೇಡ ನಿಂಗೆ ನಾನಿದೀನಿ' ನಿಚ್ಚಳವಾಗಿ ತುಂಬಾ ಆತ್ಮವಿಶ್ವಾಸದಿಂದ, ದೃಢಚಿತ್ತದಿಂದ ಆ ಕಾಲೇಜು ಹೈದ ಎದೆಯುಬ್ಬಿಸಿ ಹೇಳುತ್ತಿದ್ದರೆ, ಹೊನ್ನಮ್ಮ ಮಿಂಚು ಕಂಗಳಲಿ ಆಶ್ಚರ್ಯ ಹೊರಡಿಸಿ ಇವನನ್ನೇ ನೋಡುತ್ತಿದ್ದಾಗ, ಅಂಗಳದಲ್ಲಿನ ಮಲ್ಲಿಗೆ ಗಿಡದಲ್ಲಿ ಆಗಷ್ಟೇ ಮೊಗ್ಗೊಂದು ಬಿರಿದು ನಗು ಚೆಲ್ಲುತ್ತಿತ್ತು ...




No comments:
Post a Comment