Shivu Morigeri

Friday, 26 July 2013

my imagination story 04

 ಚಿಂದಿ ಆಯುವವನ ಬಾಳು ಅಂಬರದಲ್ಲಿ ಮಿಂಚುತ್ತಿತ್ತು.


ಮುಲ್ಲಾಜೇ ಇಲ್ಲ ಚಿಂದಿ ಆಯೋದೇ ಅವನ ಕಾಯಕ. ಬೃಹತ್ ನಗರದಲ್ಲಿ ಅವನಿಗೆ ಒಂದು ಸೀಮಿತ ರೂಟ್ ಇದೆ. ತನ್ನ ಜೋಪಡಿಯಿಂದ ಬೆಳಗ್ಗೆ ಎಂಟಕ್ಕೆ ಮನೆಯಲ್ಲಿ ಇದ್ದುದೋ ಅಥವಾ ಕೆಲವೊಮ್ಮೆ ಬೀದಿ ಬದಿಯ ಡಬ್ಬಾ ಅಂಗಡಿಗಳಲ್ಲೋ ಕಡಿಮೆ ರೇಟಿಗೆ ಸಿಕ್ಕಿದ್ದನ್ನು  ಹೊಟ್ಟೆಗಿಷ್ಟು ಇಳಿಸಿ ಜೋಪಡಿಗೆ ಬಂದು ಹಳೆಯ ಚಿಂದಿಯಾದ ದೊಡ್ಡ ದೊಡ್ಡ ಚೀಲಗಳನ್ನು ತನ್ನ ಹೆಗಲೇರಿಸಿ ಹೊರಟನೆಂದರೆ ಒಟ್ಟು ಎರೆಡು ಏರಿಯಾಗಳ ಬೀದಿ ಬೀದಿಗಳಲ್ಲಿನ ಕಸದ ತೊಟ್ಟಿಗಳಲ್ಲಿಯೂ ತನಗೆ ಬೇಕಾದ ನಿಧಿಯನ್ನು ಹುಡುಕಿಕೊಂಡು ಬರುವಷ್ಟರಲ್ಲಿ ಒಂದು ಚೀಲ ಭತರ್ಿ ಸಾಮಾಗ್ರಿ ತುಂಬಿ ಇವನ ಮೊಗದಲ್ಲಿ ಅವನಿಗೇ ಅರಿವಿಲ್ಲದೆ ಒಂದು ನೆಮ್ಮದಿ ಉಮ್ಮಳಿಸಿರುತ್ತೆ. ಇನ್ನೇನು ಕೊನೆಯ ಕಸದ ತೊಟ್ಟಿಯನ್ನು ಜಾಲಾಡುತ್ತಲೇ ಅನತಿ ದೂರದಲ್ಲಿಯ ಗುಜರಿ ಅಂಗಡಿಗೆ ಹೋಗಿ ತನ್ನ ಭಾರದ ಚೀಲವನ್ನು ತೂಕಕ್ಕೆ ಹಾಕಿ ಸಿಕ್ಕ ಸದಾ ಹಸನ್ಮುಖಿ ಹತ್ತು, ಇಪ್ಪತ್ತು, ಐವತ್ತರ ಗಾಂಧಿ ನೋಟುಗಳನ್ನು ತನ್ನ ಮಾಸಲು ಪ್ಯಾಂಟಿಗಿಳಿಸಿ ಚಿಲ್ಲರೆ ಸಿಕ್ಕರೆ ಕ್ಷಣವೂ ತಡಮಾಡದೆ ಅದೇ ಬೀದಿಯಲ್ಲಿರುವ ಡಬ್ಬಾ ಅಂಗಡಿಯೊಂದರಲ್ಲಿ ಖಡಕ್ ಚಹಾ ಹೀರಿ ಮತ್ತೆ ಮುಂದಿನ ತನ್ನ ಸೀಮಿತ ನಾಲ್ಕು ಏರಿಯಾಗಳತ್ತ ತುಂಬು ನಿರೀಕ್ಷೆಯಿಂದ ಹೆಗಲ ಮೇಲೆ ಚೀಲಗಳನ್ನು ಹಾಕಿಕೊಂಡು ದೌಡಾಯಿಸುತ್ತಾನೆ.

 ಈ ಕೆಲಸ ಮತ್ತೂ ಎರೆಡು ಏರಿಯಾಗಳಲ್ಲಿ ನಡೆದು ಮೂರನೇ ಏರಿಯಾಕ್ಕೆ ಕಾಲಿಟ್ಟಾಗ ಅಲ್ಲೊಂದು ಪಾಳು ಮನೆಯಿದೆ. ಅಲ್ಲಿ ತನ್ನ ತುಂಬಿದ ಚೀಲವನ್ನು ಆ ಹಾಳು ಗೋಡೆಗೆ ತಾಕಿಸಿ ನಿಲ್ಲಿಸಿ, ಅದೇ ಏರಿಯಾದಲ್ಲಿನ ಮತ್ತೊಂದು ಸೋವಿ ಹೋಟೆಲ್ಲಿನಲ್ಲಿ ಪ್ಲೇಟ್ ಮಿಲ್ಸ್ ಹೊಡೆದು ಬರುತ್ತಾನೆ. ಹಾಗೆ ಊಟ ಮುಗಿಸಿ ಬರುವಷ್ಟರಲ್ಲಿ ಸಮಯ ಅದಾಗಲೇ ಎರಡರ ಗಡಿ ದಾಟಿರುತ್ತೆ. ಈ ಹುಡುಗನ ದೇಹವೂ ಅಷ್ಟೊತ್ತೂ ದಣಿದಿರುತ್ತದಾದ್ದರಿಂದ, ಆಗಷ್ಟೇ ಹೊಟ್ಟೆಗಿಷ್ಟು ಮೋಪು ಬಿದ್ದಿರುತ್ತಾದ್ದರಿಂದ ಕೊಂಚ ವಿಶ್ರಾಂತಿ ಬಯಸುತ್ತೆ. ಆಗ ಇವನು ತನ್ನ ಚೀಲಗಳನ್ನು ನಿಲ್ಲಿಸಿದ್ದ ಪಾಳು ಮನೆಯ ಹತ್ತಿರ ಬರುತ್ತಿದ್ದಂತೆಯೇ ಅಲ್ಲೊಂದು ನಾಗರ ಕಲ್ಲುಗಳಿರುವ ಅರಳಿ ಕಟ್ಟೆಯಿದೆ. ನೇರ ಅಲ್ಲಿಗೆ ಬಂದು ಆ ನೆರಳಿನಲ್ಲಿ ಅರೆಹೊತ್ತು ಸಕ್ಕರೆ ನಿದ್ದೆ ಮೆಲ್ಲುತ್ತಾನೆ.ಇಳಿಗಾಲ ಮೂರು ಅಥವಾ ಮೂರುವರೆಗೆಲ್ಲಾ ಏನನ್ನೋ ಜ್ಞಾಪಿಸಿಕೊಂಡವನಂತೆ ಛಕ್ಕನೆ ಎದ್ದು ತನ್ನ ಹೆಗಲ ಮೇಲಿರುವ ಟವಲ್ಲಿನಿಂದ ಮುಖವನ್ನು ಒರೆಸಿಕೊಳ್ಳುತ್ತಾ ಅದೇ ಏರಿಯಾದ ಬೇಕರಿಯೊಂದಕ್ಕೆ ಹೋಗಿ ಒಂದು ಟೀ ಕುಡಿದು ಮತ್ತದೇ ಕಟ್ಟೆಗೆ ಮರಳುತ್ತಾನೆ.

ಆಗ ಅವನಿಗೆ ಜ್ಞಾಪಕವಾಗೋದು ಬೆಳಗ್ಗೆಯಿಂದ ಚಿಂದಿ ಆಯುವಾಗ ತಾನು ಓದಲೆಂದು ಎತ್ತಿಟ್ಟುಕೊಂಡ ಕೆಲವು ಪತ್ರಿಕೆ,ಹಳೆಯ ಪುಸ್ತಕ ಹೀಗೆ ತನಗೆ ಇಷ್ಟವಾದ ಕೆಲವು ಹಾಳೆಗಳನ್ನು ತನ್ನ ಬಳಿ ಇರುವ ಚಿಕ್ಕ ಚೀಲದ ಹೊಟ್ಟೆಯಿಂದ ಆಚೆ ತೆಗೆದು ಮತ್ತದೇ ನಾಗರ ಕಟ್ಟೆಯಲ್ಲಿ ಕುಳಿತು ಓದುತ್ತಾನೆ. ತಾನು ಓದೋದು ಹಿಡಿಸಿದರೆ ಒಂದಷ್ಟು ಓದುತ್ತಾನೆ ಇಲ್ಲವಾದರೆ ಮುಖವನ್ನು ಸಿಂಡರಿಸಿಕೊಂಡು ಅವೆಲ್ಲವನ್ನೂ ಚಿಂದಿ ಚೀಲಕ್ಕೆಸೆದು ಮತ್ತೆ ಕೆಲಸಕ್ಕಿಳಿಯುತ್ತಾನೆ. ಅಂತೂ ಅವನಿಗೆ ಓದುವ ಹವ್ಯಾಸವಿದೆ. ಹೀಗೆ ವಿಚಿತ್ರ ಸಂಪನ್ನ ಗುಣವುಳ್ಳ ಮಳ್ಳನ ಹೆಸರು ಅಂಜನರಾಜ್.

ಹೀಗೆ ಪ್ರತಿದಿನ ಚಿಂದಿ ಆಯುತ್ತಲೇ ಸಾಹಿತ್ಯದ ರುಚಿ ನೋಡಿರುವ ಅಂಜನ್ ಗೆ ಹೆತ್ತವರ ನೆನಪಿಲ್ಲ. ಸಾಕಿದವರಾರೋ. ಬೆಳದದ್ದು ಹೇಗೋ ಅಂತೂ ಒಂದು ಜೋಪಡಿಯಲ್ಲಿದ್ದಾನೆ. ಅವನ ನೆನಪು ಬಲ್ಲಂತೆ ಒಂದು ಮುದುಕನ ಜೋಪಡಿಯಲ್ಲಿದ್ದ ಮತ್ತು ಆ ಮುದುಕ ತೀರಿ ಹೋಗಿ ಮೂನರ್ಾಲ್ಕು ವರ್ಷಗಳಾಗಿದ್ದವಷ್ಟೆ. ಅಲ್ಲಿಂದ ಅಂಜನರಾಜ್ ಸದಾ ಏಕಾಂತದಲ್ಲಿರೋ ಏಕಾಂಗಿ. ತನ್ನ ಪ್ರತಿದಿನದ ದಿನಚರಿಯಂತೆಯೇ ಅಂದೂ ಆ ನಾಗರ ಕಟ್ಟೆಯ ಮೇಲೆ ಕುಳಿತು ಕೆಲವು ಹಾಳೆಗಳನ್ನು ತಿರುವಿ ಹಾಕಿದ ಓದು ಯಾಕೋ ರುಚಿಸಲಿಲ್ಲ. ಥತ್ತೇರಿಕೆ ಎಂದುಕೊಂಡು ಎಲ್ಲವನ್ನೂ ಚಿಂದಿ ಚೀಲಕ್ಕೆಸೆದು ಆ ಹಾಳು ಗೋಡೆಗೆ ನಿಲ್ಲಿಸಿದ್ದ ಭತರ್ಿ ಚೀಲವನ್ನು ಅಲ್ಲಿಯೇ ಬಿಟ್ಟು ಅದರ ಪಕ್ಕದಲ್ಲಿದ್ದ ಮತ್ತೊಂದು ಖಾಲಿ ಚೀಲವನ್ನು ಹೆಗಲೇರಿಸಿ ಆ ಪಾಳು ಮನೆಯ ಪಕ್ಕದಲ್ಲಿಯ ಕಸದ ತೊಟ್ಟಿಯನ್ನು ತಡಕಾಡುತ್ತಲೇ ಇತರೆ ವಸ್ತುಗಳ ಜೊತೆಗೆ ಆ ಪತ್ರ ಸಿಕ್ಕಿತ್ತು.

ಅದು ಪ್ರೇಮ ಪತ್ರವಾಗಿತ್ತು !

ಆ ಪತ್ರವನ್ನು ಜೇಬಿಗೆ ತುರುಕಿ, ತೊಟ್ಟಿಯನ್ನೆಲ್ಲಾ ಜಾಲಾಡಿ ಇನ್ನೇನು ಮುಂದಿನ ಬೀದಿಗೆ ಹೋಗಬೇಕು. ತಡೆಯಲಾಗಲಿಲ್ಲ ಮನಸಿಗೇಕೋ. ಮತ್ತೆ ನಾಗರಕಟ್ಟೆಗೆ ಬಂದು ಆ ಪತ್ರವನ್ನು ಓದಿದರೆ ನಿಜ ಅದು ಆ ಸೌಂದರ್ಯದ ಗಣಿ  ರಾಶಿಯದ್ದೇ. ರಾಶಿ ಆ ಪಾಳು ಮನೆಯ ಪಕ್ಕದ ಎರಡನೆಯ ಮನೆಯ ಮಹಡಿ ಮೇಲಿರುವ ಸುಂದರಿ. `ಓಹೋ ಇವಳು ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಾಳಲ್ವಾ ?. ಏನು ಓದುತ್ತಾಳೋ ಯಾವಾನಿಗೆ ಗೊತ್ತು ? ಅಂತೂ ಈ ಪ್ರೇಮ ಪತ್ರವನ್ನಂತೂ ಓದಿದ್ದಾಳೆ' ಎಂದು ತನ್ನೊಳಗೆ ತಾನೇ ಗೊಣಗಿಕೊಳ್ಳುತ್ತಾ ಪತ್ರದಲ್ಲೇ ಕಳೆದು ಹೋಗಿದ್ದುದನ್ನು ಯಾವುದೋ ಕಾರಣಕ್ಕೆ ಹೊರಗೆ ಬಂದ ರಾಶಿ ನೋಡಿದಳು. ಎದೆ ಝೆಲ್ ಎಂದಿತವಳಿಗೆ. ತಕ್ಷಣ ಒಂದು ಕವರ್ ನಲ್ಲಿ ಹಾಳು ಮೂಳು ಸಾಮಾನುಗಳನ್ನೆಲ್ಲಾ ತುಂಬಿಕೊಂಡು ತೊಟ್ಟಿ ಹತ್ತಿರ ಬಂದವಳಂತೆ ನಟಿಸಿ ಕಟ್ಟೆಯ ಮೇಲಿದ್ದ ಅಂಜನ್ ಹತ್ತಿರ ಬಂದು `ಹೇಯ್ ಈ ಪತ್ರ ನಂದು ಪ್ಲೀಜ್ ಕೊಡು. ನಿಂಗೆ ಈ ಕವರ್ ತುಂಬಾ ಹೊಸ ವಸ್ಥುಗಳನ್ನೇ ತಂದಿದ್ದೇನೆ ತಗೋ' ಎಂದಾಗ ಇವಳನ್ನೇ ದಿಟ್ಟಿಸಿದ ಅಂಜನ್ `ಸ್ಸಾರಿ ಮೇಡಂ, ನಂಗೆ ನಿಮ್ಮ ಭಿಕ್ಷೆ ಬೇಕಿಲ್ಲ. ಆದ್ರೆ ಈ ಪತ್ರದಲ್ಲಿ ಒಳ್ಳೇ ಸಾಹಿತ್ಯದ ಸಾಲುಗಳಿದ್ದವು ಇಷ್ಟ ಆಯ್ತು ನಂಗಷ್ಟು ಸಾಕು. ಇನ್ನೊಬ್ಬರ ಪತ್ರವನ್ನು ಓದಬಾರದಾದರೂ ಕಸದ ತೊಟ್ಟಿಗೆ ಬಂದಾದಮೇಲೆ ಅದು ಸಾರ್ವಜನಿಕ ಸ್ವತ್ತು ಎಂದುಕೊಂಡು ಓದಿಬಿಟ್ಟೆ ಕ್ಷಮಿಸಿ' ಎಂದು ಹೇಳುತ್ತಾ ಪತ್ರವನ್ನು ಕೈಗಿಟ್ಟಾಗ, ರಾಶಿಯ ಮನಸ್ಸೇಕೋ ಉಳುಕಿದಂತಾಗಿ, `ನಿಂಗೆ ಓದೋಕೆ ಆಸೆನಾ ?' ಕೇಳಿದ್ದಳು. `ಒಂದೊತ್ತು ಊಟ ಬಿಟ್ಟೇನು' ಇಷ್ಟಗಲ ಕಂಗಳಲ್ಲಿ ಮಿಂಚು ಪೊರೆಯುತ್ತಾ ಹೇಳಿದವನ ಆತುರಕ್ಕೆ ದಂಗಾಗಿ ರಾಶಿ `ನಾಳೆ ನಿಂಗೊಂದು ಬುಕ್ ಕೊಡ್ತೀನಿ ಆಯ್ತಾ ?' ಎಂದು ಹೇಳಿ ಹೂ ನಗು ಚೆಲ್ಲಿ ಹೋಗಿದ್ದಳು. ಅಂಜನ್ ಎದೆಯೊಳಗೆ ಮಳೆಯಾದಂತಾಯ್ತು. ಅಂದಿನ ಕೆಲಸಕ್ಕೆ ಪಂಗನಾಮವಿಟ್ಟು ಆ ತುಂಬಿದ್ದ ಚೀಲವನ್ನು ಮತ್ತೆ ಗುಜರಿ ಒಡಲಿಗಿಟ್ಟು ಜೋಪಡಿಯಲ್ಲಿ ಬೆಳಗಾಗುವುದನ್ನೇ ಕಾಯುತ್ತಿದ್ದ. ಅಂತೂ ಬೆಳಗಾಯಿತು.

ಮಾರನೆಯದಿನ ಅದೇ ಸಮಯಕ್ಕೆ ಸರಿಯಾಗಿ ಒಂದು ಕವರ್ ಕೈಲಿಡಿದು ಬಂದ ರಾಶಿ, ಅಂಜನ್ ಗೆ ಒಂದು ಕಾದಂಬರಿ ಪುಸ್ತಕ ಕೈಗಿಟ್ಟು `ಇದು ನಿನ್ನಲ್ಲಿನ ಓದುವ ಹಂಬಲಕ್ಕೆ ನನ್ನ ಪುಟ್ಟ ಸಲಾಂ' ಎಂದು ಇನ್ನೇನು ಮರಳಬೇಕು `ಮೇಡಂ ಈ ಪುಸ್ತಕವನ್ನು ನಾಳೆ ವಾಪಾಸ್ ಮಾಡ್ತೀನಿ. ನಾಳೆ ನಂಗೆ ಇನ್ನೊಂದು ಪುಸ್ತಕ ಕೊಡ್ತೀರಾ ?' ಸಾರ್ವಜನಿಕ ಲೈಬ್ರರಿಯನ್ ರನ್ನು ಕೇಳಿದಂತೆ ಕೇಳಿದ್ದ. ಅವನ ಹಸಿವಿಗೆ ಅಚ್ಚರಿಗೊಂಡ ರಾಶಿ ನಕ್ಕು ಸರಿ ಎಂದೇಳಿ ಹೋದಳು, ಮಾರನೆಯ ದಿನ ರಾಶಿ ಮತ್ತದೇ ಕವರ್ ನಲ್ಲಿ ಒಂದು ಪುಸ್ತಕದೊಂದಿಗೆ ಬಂದಳು ಇವನು ನೆನ್ನೆಯ ಪುಸ್ತಕವನ್ನು ಮರಳಿಸುತ್ತಾ ಕಾದಂಬರಿಯ ಸಂಕ್ಷಿಪ್ತ ಕಥೆ ಹೇಳಿಬಿಟ್ಟ. ಆಗಲೇ ರಾಶಿ ಬದಲಾದದ್ದು.

ಮಾರನೆಯ ದಿನ ಮತ್ತೊಂದು ಕವರ್ ಜೊತೆ ನಾಗರ ಕಟ್ಟೆಗೆ ಬಂದ ರಾಶಿ `ನಿನ್ನ ಹೆಸರೇನು?' ಆತ್ಮೀಯವಾಗಿ ಕೇಳಿದ್ದಳು. ಅಂಜನ್ ನಾನೊಬ್ಬ ಅನಾಥ. ಜೋಪಡಿಯಲ್ಲಿದೀನಿ. ನಂಗೆ  ಅಷ್ಟಾಗಿ ಓದಿಲ್ಲ. ಆದ್ರೆ ಬರಿಯೋಕ್ಕೆ ಬರುತ್ತೆ. ನಾನೂ ಏನೇನೋ ಬರೆದಿದ್ದೀನಿ ಅಂತೆಲ್ಲಾ ಏನೇನೋ ಕನವರಿಸಿಬಿಟ್ಟ. `ದಯವಿಟ್ಟು ಬೇಡ ಅನ್ನಬೇಡ ತಗೋ' ಎಂದು ಕೈಗಿಟ್ಟ ಕವರ್ ನಲ್ಲಿ ಅಂಜನ್ ಗೆ ಹೊಸ ಬಟ್ಟೆಗಳಿದ್ದವು. ಅಚ್ಚರಿಗೊಂಡ ಅಂಜನ್ ಅವುಗಳ ನಡುವೆ ಒಂದು ಪುಸ್ತಕವಿರುವುದು ನೋಡಿ ನಿಟ್ಟುಸಿರು ಬಿಟ್ಟಿದ್ದ. `ನೀನು ಅದೇನೋ ಬರೆದಿದಿನಿ ಅಂದೆಯಲ್ಲಾ ? ಅದನ್ನ ನಾಳೆ ತಗೊಂಬಾ ನಾನು ಓದ್ತಿನಿ ಮರಿಬ್ಯಾಡ ಕಣೋ' ಆ ಧ್ವನಿಯಲ್ಲಿ ನಿಜಕ್ಕೂ ಒಲವಿತ್ತು. ಮೊದಲ ಬಾರಿಗೆ ಅಂಜನ್ ಕಂಪಿಸಿಬಿಟ್ಟಿದ್ದ. ಲೋಕವನ್ನೂ ಮರೆತು ರಾಶಿಯ ಅಮಲಿಗೇರಿಬಿಟ್ಟ. ಮನೆಗೆ ಹೋಗಿ ಬಟ್ಟೆಯನ್ನೊಮ್ಮೆ ಟ್ರಯಲ್ ನೋಡಿ ಖುಷಿಪಟ್ಟು ಕನ್ನಡಿಯಲ್ಲಿ ರಾಶಿಯ ಬಿಂಬವನ್ನೊಮ್ಮೆ ನೋಡಿ ಏನೇನೋ ಲೆಕ್ಕಾಚಾರದ ಕನಸು ಕಾಣುತ್ತಾ ಆ ಪುಸ್ತಕವನ್ನು ತೆರೆಯುತ್ತಲೇ ಗೋಚರಿಸಿದ್ದು ಒಂದು ಮೊಬೈಲ್ ನಂಬರ್ ! ನೋ ಡೌಟ್. ಅದು ರಾಶಿಯದ್ದೇ ನಂಬರ್ ಅಂಜನ್ ಗೆ ಅವಳ ಹುಚ್ಚು ನತ್ತಿಗೇರಲು ಇನ್ನೇನು ಬೇಕು ? ದಡಬಡಾಯಿಸಿ ಪುಸ್ತಕವನ್ನು ಓದಿಮುಗಿಸಿ ಅವಳನ್ನೇ ಅಳೆದೂ ಸುರಿದೂ ನೆನೆದು ಅರವತ್ತಾರು ಕವನಗಳನ್ನು ಗೀಚಿಬಿಟ್ಟ. ಅದ್ದು ಪ್ರೀತಿಗಿರೋ ತಾಕತ್ತು.

 ಅಂಜನ್ ಇದುವರೆಗೂ ಬರೆದಿದ್ದ ಪುಟ್ಟ ಬರಹಗಳು, ಹನಿಗವನಗಳ ಪುಸ್ತಕದಲ್ಲಿಯೇ ಇವುಗಳನ್ನೂ ನೊಂದಾಯಿಸಿದ್ದ. ಮಾರನೆಯ ದಿನ ಮತ್ತದೇ ಸಮಯಕ್ಕೆ ನಾಗರ ಕಟ್ಟೆಯ ಬಳಿ ನಿಂತಿದ್ದ. ಮತ್ತಾಕೆ ಬಂದಳೂ ಕೂಡಾ. ತುಂಬಾ ನಿರೀಕ್ಷೆಯಿಂದ ಬಂದವಳು ಅಂಜನ್ ನನ್ನು ನೋಡುತ್ತಲೇ ಅಚ್ಚರಿಗೊಂಡಿದ್ದಳು. ಯಾಕೆಂದರೆ ಅಂದು ಅಂಜನ್ ಚಿಂದಿ ಆಯುವ ಹುಡುಗನಾಗಿರದೆ ರಾಶಿ ಕೊಟ್ಟ ಬಟ್ಟೆಯನ್ನುಟ್ಟುಕೊಂಡು ತನ್ನ ಬರದಹ ನೋಟ್ ಪುಸ್ತಕವೊಂದನ್ನೇ ಕೈಲಿಡಿದು ಪಕ್ಕಾ ಲಲ್ವೀ ಲುಕ್ ನಲ್ಲಿ ನಿಂತಿದ್ದ. ಅಂದು ತನ್ನ ಪುಸ್ತಕ ನೀಡಿ ಮರುದಿನ ಬೆಳಗ್ಗೆ ಒಂದು ಕರೆ ಬಂತು ಆಚೆಯ ಧ್ವನಿ ರಾಶಿಯದ್ದು. `ಅಂಜು, ಇವಾಗ್ಲೇ ನೀ ನಮ್ಮ ಕಾಲೇಜ್ ಹತ್ರ ಬಾ ಪ್ಲೀಜ್' ಕಾಲ್ ಕಟ್ ಮಾಡಿದ ಅರ್ದ ಘಂಟೆಗೆಲ್ಲಾ ಅಂಜನ್ ರಾಶಿಯ ಕಾಲೇಜಿನ ಆವರಣದಲ್ಲಿದ್ದ. ತಕ್ಷಣ ಅಲ್ಲಿಂದ ರಾಶಿ ತನ್ನ ಸ್ಕೂಟಿಯಲ್ಲಿ ಅದಾವುದೋ ಕಾಲೇಜಿಗೆ ಕರೆಯ್ದೊಯ್ದಾಗ ಅಲ್ಲಿಯ ಪ್ರಿನ್ಸಿಪಾಲರು ಕೇಳಿದರು ನೀನು ಎಷ್ಟು ಓದಿದಿಯಪ್ಪಾ ? ಏಳನೇ ತರಗತಿಯನ್ನು ತನ್ನ ಸ್ಲಂನ ಹತ್ತಿರದಲ್ಲಿಯ ಸರಕಾರಿ ಶಾಲೆಯಲ್ಲಿ ಪಾಸಾಗಿ, ಎಂಟನೇ ತರಗತಿಯ ಫೀಜ್ ಗೆ ದುಡ್ಡಿಲ್ಲದೆ ಟಿಸಿ ಮಾಕರ್್ ಕಾಡರ್್ ಗಳನ್ನು ಶಾಲೆಯಲ್ಲೇ ಬಿಟ್ಟದ್ದು ನೆನಪಾಯಿತವನಿಗೆ. ತಕ್ಷಣ ಆ ಪ್ರಿನ್ಸಿಪಾಲರಿಗೆ ಕಥೆ ಹೇಳಿದ.

ರಾಶಿ ಅವತ್ತೇ  ಆ ಶಾಲೆಗೆ ಹೋಗಿ ಈ ಪುಣ್ಯಾತ್ಮನ ರೆಕಾಡ್ಸರ್್ ಎಲ್ಲವನ್ನೂ ತಂದು ಮತ್ತಿದೇ ಕಾಲೇಜಿನಲ್ಲಿ ಪಿ ಯು ಸಿ ಅಡ್ಮಿಷನ್ ಮಾಡಿಸಿದಳು. ಅದು ಓಪನ್ ಯೂನಿವಸರ್ಿಟಿ ಕಾಲೇಜಾಗಿತ್ತು. ಓದೋಕೆ ಪುಸ್ತಕಗಳು, ಬಟ್ಟೆ, ಗ್ರಂಥಾಲಯದ ಸದಸ್ಯತ್ವ ಹೀಗೆ ಅಂಜನ್ ನ ಜೀವನಕ್ಕೆ ಬೇಕಾದುದನ್ನೆಲ್ಲಾ ನೀಡಿ ಮತ್ತೆ ಸಿಗ್ತೀನಿ ಎಂದೇಳಿ ಮನೆಗೆ ಹೋಗಿ ರಾತ್ರಿ ಮತ್ತೆ ಕಾಲ್ ಮಾಡಿ `ಲೇ ಅಂಜೂ ನೀನು ಸಕ್ಕತ್ತಾಗಿ ಬರೀತೀಯ. ಎಲ್ಲೋ ಹಾಳಾಗೋಗಿದ್ದೆ ಇಷ್ಟು ದಿನ ?' ಪ್ರೀತಿಯಿಂದ ಕೇಳಿದ್ದಳು. ಇವಳ ಒಲುವೆಗೆ ಕರಗಿದ್ದ ಅಂಜು, ನಿನ್ನ ಮಡಿಲನ್ನು ಹುಡುಕುತ್ತಾ ಬೀದಿ ಬೀದಿ ಸುತ್ತುತ್ತಿದ್ದೆ ಎಂದು ಗದ್ಗದಿತನಾಗಿ ನುಡಿದುಬಿಟ್ಟ. ಕಂಪಿಸಿಬಿಟ್ಟಳು ರಾಶಿ.

ಮರುದಿನ ಮತ್ತೆ ರಾಶಿಯ ಕಾಲೇಜಿನ ಆವರಣದಲ್ಲಿ ಸೇರಿದ ಅಂಜನ್ ಗೆ `ನೀನು ಬರೆಯೋದನ್ನ ನಿಲ್ಲಿಸಬೇಡ ನಿಂಗೆ ನಾನು ಯಾವತ್ತೂ ಜೊತೆಯಿತರ್ೀನಿ. ನೀನು ಬೀದಿ ಬೀದಿ ಸುತ್ತುತ್ತಾ ಹುಡುಕುತಿದ್ದ  ನನ್ನ ಮಡಿಲು, ನಿನ್ನ ಮಗುವಿಗಿಷ್ಟು ಒಡಲು ಕಟ್ಟಿಟ್ಟಬುತ್ತಿ. ನಿನ್ನಂಥಹವನನ್ನೇ ಕಣೋ ನಾನು ಹುಡುಕ್ತಾಯಿದ್ದುದು. ಅಂದು ನೀನು ಓದಿದ್ದೆಯಲ್ಲಾ, ಅಂಥಾ ಹೈಟೆಕ್ ಪ್ರೇಮ ಪತ್ರಗಳು, ಐಷರಾಮಿ ಪ್ರೇಮಿಗಳಿಂದ ನಂಗೇನೂ ಕಡ್ಮೆ ಪ್ರಪೋಜ್ ಗಳಲ್ಲ ಬಂದದ್ದು ಆದ್ರೆ ನಂಗೆ ಬೇಕಿದ್ದುದು  ನಿನ್ನಂಥೋನು. ಕೊನೆಗೂ ಸಿಕ್ಕೆಯಲ್ಲಾ ಮಾರಾಯಾ' ಎಂದೇಳಿದಾಗಿನಿಂದ ಇಬ್ಬರ ನಡುವೆ ನಡೆದದ್ದೆಲ್ಲಾ ಜಾತ್ರೆ ಸಂಭ್ರಮ. ಒಂದೆಡೆ ಅಂಜನ್ ಬರೆಯುತ್ತಾ ಹೋದ ಆ ಬರವಣಿಗೆಯನ್ನು ಮೂರ್ತರೂಪ ಕೊಡಿಸುತ್ತಾ ಅವನ ಗೆಲುವಿಗೆ ರಾಶಿ ಹಗಲಿರುಳೂ ನಿಂತಳು. ವಿಷಯ ರಾಶಿಯ ಮನೆಯವರಿಗೆ ಗೊತ್ತಾಗಿ ಅಂಜನ್ ಮೇಲೆ ದೂರು ದಾಖಲಿಸಿ ದೊಡ್ಡ ರಂಪಾಟವಾದಾಗ ನೇರ ಠಾಣೆಗೆ ಹೋದ ರಾಶಿ ಅಂಜುನನ್ನು ಆಚೆ ತಂದಿದ್ದಳು.

ಅಷ್ಟೊತ್ತಿಗೆಲ್ಲಾ ಅಂಜುವಿನ ಕೆಲವು ಕೃತಿಗಳು ಬಿಡುಗಡೆಗೊಂಡು ಅವನಿಗೂ ಸಮಾಜದಲ್ಲಿ ಒಂದು ಸ್ಥಾನ ಸೃಷ್ಟಿಯಾಗುತ್ತಿತ್ತು. ಅಂದೇಕೋ ಗಂಭೀರವಾಗಿದ್ದ ರಾಶಿ ಹೇಳಿದಳು. `ನೋಡು ನನ್ನ ಮಟ್ಟಿಗೆ ಕೊರಳಲ್ಲಿ ನೀನು ಕಟ್ಟುವ ತಾಳಿ ಮಾತ್ರ ಇಲ್ಲ.  ಮಿಕ್ಕಂತೆ ನಾವು ಆಗಲೇ ಆದರ್ಶ ದಂಪತಿಗಳೇ. ನೀನು ನಿನ್ನ ಬರವಣಿಗೆಯತ್ತ ಗಮನಕೊಡು ಇನ್ನೇನು ನನ್ನ ಎಂಬಿಬಿಎಸ್ ಮುಗಿಯೋದರಲ್ಲಿದೆ. ಕೋಸರ್್ ಮುಗಿದ ತಕ್ಷಣ ಮದ್ವೆಯಾಗೋಣ. ನೀ ಕಟ್ಟೋ ಹರಿಷಿನದ ದಾರಕ್ಕೆ ಸಮಾಜ ಗಪ್ ಚುಪ್ ಆಗುತ್ತಲ್ಲಾ ಅಷ್ಟುಸಾಕು ನಂಗೆ. ನಮ್ಮ ಜೀವನ ನಮ್ಮ ಕೈಲಿದೆ ಕಣೋ. ಹೆದರಬೇಡ' ಹೀಗೆ ಹರಳು ಉರಿದವಳಂತೆ ಹೇಳಿದ್ದ ರಾಶಿ ಕೋಸರ್ು ಮುಗಿಯುತ್ತಲೇ ಮನೆಯವರೆಲ್ಲರ ವಿರೋಧದ ನಡುವೆ ದೇವಸ್ಥಾನದಲ್ಲಿ ಅಂಜುವಿಗೆ ಜೊತೆಯಾಗಿ, ಖಾಸಗೀ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿಕೊಂಡು  ಅದೇ ನಗರದಲ್ಲಿ ಬಾಡಿಗೆ ಮನೆಯೊಂದು ಮಾಡಿ ಅಂಜುವಿನ ಜೀವನಕ್ಕೆ ಅಮೃತವಾಗಿದ್ದಳು.

ರಾಶಿಯ ನಂಬುಗೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಓಪನ್ ಯುನಿವಸರ್ಿಟಿಯಲ್ಲಿ ಪದವಿ ಪಡೆದ ಅಂಜು ಖಾಸಗೀ ಶಾಲೆಯೊಂದರ ಶಿಕ್ಷಕನಾಗಿದ್ದ ಕಾಲ ಕಳೆದೂ ಕಳೆದೂ ಚಿಂದಿ ಆಯುವವನ ಬಾಳು ಅಂಬರದಲ್ಲಿ ಮಿಂಚುತ್ತಿತ್ತು.

ರಾಶಿ ಕೆಲಸಮಾಡುವ ಆಸ್ಪತ್ರೆಯ ಹೆರಿಗೆ ಕೋಣೆಯ ಹೊರಗೆ ತನ್ನ ಬೊಗಸೆಯಲ್ಲಿ ಮುಖವನ್ನು ಮುಚ್ಚಿಕೊಂಡು ಕಂಗಳನ್ನು ತುಂಬಿಕೊಂಡು ಕುಳಿತ ಅಂಜನ ರಾಜ್ ಗೆ ದಿಢೀರನೇ ತಾನು ನಡೆದುಬಂದ ಹಾದಿ ನೆನಪಾಗಿ ರಾಶಿಯ ದೈವತ್ವಕ್ಕೂ ಮಿಗಿಲಾದ ಪ್ರೀತಿಯ ಕಾಳಜಿಯನ್ನು ನೆನೆದು ಗಂಟಲೊಡೆದು ಬಂದ ದುಃಖಕ್ಕೆ ಕಣ್ಣೀರ ಹನಿಗಳು ಕೆನ್ನೆ ದಾಟುವ ವೇಳೆಗೆ ಸರಿಯಾಗಿ ಹೆರಿಗೆ ಕೋಣೆಯಿಂದ ಹೊರ ಬಂದ ವೈಧ್ಯರು `ಕಂಗ್ರಾಟ್ಸ್ ಅಂಜು, ನಿಮಗೆ ಹೆಣ್ಣು ಮಗುವಾಗಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ' ಎಂದಾಗ ಅಂಜುವಿನ ಸಂತಸಕ್ಕೆ ಪಾರವೇ ಇರಲಿಲ್ಲ. `ದೇವರೇ ಈ ಭಿಕಾರಿಯ ಜೀವನಕ್ಕೆ ರಾಶಿಯನ್ನು ಕೊಟ್ಟ ನಿಂಗೆ ಕೋಟಿ ಶರಣು ಕಣೋ' ಎಂದುಕೊಳ್ಳುತ್ತಾ ಇನ್ನೇನು ತಾಯಿ ಮಗುವನ್ನು ನೋಡಲು ಕೋಣೆಯ ಒಳ ಹೋಗಬೇಕು, ಅಷ್ಟರಲ್ಲಿ ಎದಿರು ನಿಂತಿದ್ದರು ರಾಶಿಯ ಹೆತ್ತವರು. ಏನೊಂದನ್ನೂ ಮಾತನಾಡದ ರಾಶಿಯ ತಂದೆ ಭಾವುಕವಾಗಿ ಅಂಜುವನ್ನು ಬಿಗಿದಪ್ಪಿದರು. ಎಲ್ಲರೂ ಕೋಣೆಯ ಒಳ ಹೋದರು. ತನ್ನ ಪತಿಯ ಜೊತೆ ಹತ್ತವರನ್ನೂ ನೋಡಿದ ರಾಶಿ ಕಣ್ಣೀರಾದಳು. ತಾಯಿ ಅವಳನ್ನು ಸಮಾಧಾನಿಸುತ್ತಿದ್ದರೆ ತಂದೆ ಮತ್ತು ಅಂಜನ್ ಆ ಮಗುವನ್ನೇ ಪ್ರೀತಿಯಿಂದ ನಗುಮೊಗದಲ್ಲಿ  ದಿಟ್ಟಿಸುತ್ತಿದ್ದರು.

No comments:

Post a Comment