ಈ ಜುಲೈ ಏಳು ಅನ್ನೋ ಜುಲ್ಮಾನೆ ಕೇಳೋ ದಿನಾಂಕವಿದೆಯಲ್ಲಾ...!
ಈ ಜುಲೈ 7 ಬರುತ್ತಿದ್ದಂತೆಯೇ ನಾನು ಆ ಇಡೀ ದಿನ ನನ್ನೊಳಗೆ ನನ್ನನ್ನು ಮೌಲ್ಯಮಾಪನಕ್ಕೊಳಪಡಿಸಿಕೊಳ್ಳುತ್ತಲೇ ಇರುತ್ತೇನೆ. ಕರೆಕ್ಟಾಗಿ 8 ಜುಲೈ ಏಳುಗಳನ್ನ ಕಂಡಿದ್ದೇನೆ. ಪ್ರತಿ ಏಳರ ಆಸುಪಾಸು ನನ್ನ ಜೀವನದಲ್ಲಿ ಮರೆಯಲಾಗದ ಬದಲಾವಣೆಗಳಾಗಿವೆ. ಒಮ್ಮೊಮ್ಮೆ ಏಳ್ಗೆಯಿಂದ ಪಾತಾಳಕ್ಕೆ ಕುಸಿದಿದ್ದೇನೆ. ಮತ್ತೊಮ್ಮೆ ಮೇಲೆದ್ದು ಸುಧಾರಿಸಿಕೊಂಡಿದ್ದೇನೆ.
ಅದು 2011 ರ ಜುಲೈ ಮೊದಲವಾರ ಬಳ್ಳಾರಿಯ ಯಾವುದೋ ಪ್ರಾಜೆಕ್ಟ್ ಗೆ ಬಂದಿದ್ದ ಮಹಮದ್ ಹರ್ಷದ್ ಎನ್ನೋ ಅಣ್ಣ ನನ್ನ ಬರವಣಿಗೆಯನ್ನು ನೋಡಿ ‘ಲೋ ಮಗಾ ಇನ್ನೂ ಅಲ್ಲೇ ಲೋಕಲ್ ನಲ್ಲಿ ಬರೆಯೋದನ್ನ ಬಿಟ್ಟು ಬಾರೋ ಬೆಂಗಳೂರಿಗೆ ಲೈಪ್ ನಲ್ಲಿ ಸ್ವಲ್ಪನಾದ್ರೂ ಹಾಳಾಗ್ತಿಯ ನೀನು ನಂಗಂತೂ ಆ ಕಾನ್ಫಿಡೆಂಟ್ ಇದೆ. ನಿಂಗೆ ನೇರ ಮಾಧ್ಯಮದಲ್ಲಿಯೇ ಕೆಲಸ ಕೊಡಿಸ್ತೀನಿ ಅಂತೇನೂ ನಾ ನಿಂಗೆ ಪ್ರಾಮಿಸ್ ಮಾಡಲ್ಲ. ಆದರೆ ಹೊಟ್ಟೆಪಾಡಿಗೊಂದು ಕೆಲಸ ಕೊಡಿಸ್ತೀನಿ. ರೂಂ ವ್ಯವಸ್ಥೆ ಮಾತ್ರ ನೀನೇ ನೋಡ್ಕೋಬೇಕು. ಒಂದು ಕೆಲಸ ಮಾಡ್ತಾ ಮಾಡ್ತಾ ನಿಂಗೆ ಮಾಧ್ಯಮಕ್ಕೆ ಹೋಗಲು ಬೇಕಾದ ತಯಾರೀನೂ ಮಾಡ್ಕೋವಂತೆ’ ಅಂತ ದಿನಕ್ಕೆ ಆರೇಳುಬಾರಿ ಪೋನ್ ಮಾಡಿ ತಲೆ ತಿಂತಿದ್ದ.
ಸಾಕಿನ್ನು ಈ ಗ್ಯಾಪು. ಕಟ್ಟಲೇಬೇಕಿನ್ನು ನಾನು ಗಂಟುಮೂಟೆಯನ್ನು ಎಂದುಕೊಂಡು 2011 ರ ಜುಲೈ ಏಳಕ್ಕೆ ಜೇಬಲ್ಲಿ 1500 ರೂಗಳನ್ನಿಟ್ಟುಕೊಂಡು ಜೊತೆಗೆ ನನ್ನ ಚಿಕ್ಕಪ್ಪನ ಮಗನನ್ನು ಕಟ್ಟಿಕೊಂಡು , ಇಂಟ್ರನಲ್ ಮಾರ್ಕ್ಸ್ ಇಲ್ಲದ ಎಂ ಎ ಪತ್ರಿಕೋದ್ಯಮದ ಅಂಕಪಟ್ಟಿಗಳ್ನನು ತುಂಬಿಕೊಂಡು ಹುಟ್ಟೂರಿಗೆ ಬೆನ್ನುಮಾಡಿ ಬೆಂಗಳೂರಿಗೆ ಬರೋಕ್ಕೂ ಮುಂಚೆ ದೊಮ್ಮಸಂದ್ರದಲ್ಲಿ ‘ಸರಸ್ವತಿ ವಿದ್ಯಾನಿಕೇತನ’ ಅನ್ನೋ ಶಾಲೆಯಲ್ಲಿ ದೈಹಿಕ ಶಿಕ್ಷನಾದ ನನ್ನ ಅಳಿಯ ಶ್ರೀನಿವಾಸ್ ಗೆ ಕಾಲ್ ಮಾಡಿ ರೂಂನ ವ್ಯವಸ್ಥೆ ಕೇಳಿಕೊಂಡಿದ್ದೆ. ಅಷ್ಟೊತ್ತಿಗೆಲ್ಲಾ ನಾನು 4 ಮೊಬೈಲ್ ಗಳ್ನನು ಹಾಳು ಮಾಡಿಕೊಂಡಿದ್ದೆ. ಇನ್ನೇನು ಮನೆಯಿಂದ ಆಚೆ ಬರಬೇಕು ನನ್ನನ್ನು ಒಳಗೆ ಕರೆದ ನನ್ನಣ್ಣ ವಿನಯ್ 500 ರೂ ಕೈಗಿತ್ತು, ‘ಅಲ್ಲಿ ಎಂಟಿಎಸ್ ಸೆಟ್ ಸಿಗ್ತವಲ್ಲಾ ಬೆಂಗಳೂರಿಗೆ ಹೋದ ತಕ್ಷಣ ಮೊದಲು ಮೊಬೈಲ್ ತಗೊಂಡು ನಂಗೊಂದು ಫೋನ್ ಮಾಡು’ ಅಂದಿದ್ದ.
ಸರಿ, 2011ರ ಜುಲೈ 8 ಕ್ಕೆ ನಾನು ಬೆಂಗಳೂರಿನ ದೊಮ್ಮಸಂದ್ರದಲ್ಲುಳಿದುಕೊಂಡು ಮೊದಲು ಅಣ್ಣಗೊಂದು ಫೋನ್ ಮಾಡಿ ‘ಕೆಲಸ ಹುಡುಕ್ತೀನಿ, ಸಿಕ್ಕ ತಕ್ಷಣ ನಿಂಗೆ ಫೋನ್ ಮಾಡ್ತೀನಿ’ ಅಂದೆ. ನಂಗೆ ಫೋನ್ ಮಾಡಿದ್ದನಲ್ಲಾ ಮಹಮ್ಮದ್ ಹರ್ಷದ್, ನಾನಿಲ್ಲಿ ಬಂದಮೇಲೆ ನಾಲ್ಕುದಿನ ನಾಪತ್ತೆ. ಫೋನ್ ಗೂ ಸಿಗಲಿಲ್ಲ. ಐದನೇ ದಿನ ಜೇಬಲ್ಲಿದ್ದದ್ದು 50 ರೂ ಅಷ್ಟೆ. ನಂಗಾಗಲೇ ದುಗುಡ ಹುಟ್ಟಿತ್ತು. ಮತ್ತೂ ಫೋನ್ ಮಾಡಿದೆ. ಪುಣ್ಯಕ್ಕೆ ಕಾಲ್ ರಿಸೀವ್ ಆಯ್ತು. ‘ನೇರ ಜಯನಗರದ 3 ನೇ ಬ್ಲಾಕಿನ ಒಂದು ಪೋಸ್ಟ್ ಪೇಡ್ ವೊಡಾಪೋನ್ ಸಿಮ್ ಕಾರ್ಡ್ ಮಾರೋ ಕೆಲಸಕ್ಕೆ ಇಂಟ್ರ್ಯೂ ಹೋಗಂತ’ ಹೇಳಿದ. ನಾನಿಲ್ಲಿ ಬದುಕಲೇಬೇಕಿತ್ತು. ನಾ ರೆಡಿಯಾದೆ. ನನ್ನ ತಮ್ಮ ಒಪ್ಪಲಿಲ್ಲ, ಅವನಿಗಷ್ಟು ಬೈದು ಇಂಟ್ರ್ಯೂ ಹೋದೆವು. ‘ಫಾಮಲ್ಸ್ ಷೂ ಇಲ್ಲದೆ ಕೆಲಸ ಸಿಗಲ್ಲ ಮಗಾ’ ಮಿಕ್ಕಿದ ಇಂಟ್ರ್ಯೂ ಉಪ್ಪಿನಕಾಯಿ ಹಾಕ್ಕೊಂಡು ನೆಕ್ಕೊಬೇಕು ಬಿಡು ಎಂದುಕೊಂಡೆ. ಮತ್ತೆ ಹರ್ಷದ್ ಗೆ ಫೋನ್ ಮಾಡಿ ‘ದುಡ್ಡಿಲ್ಲಣ್ಣಾ’ ಅಂದೆ. ‘ಮಗಾ ನಂಗೂ ಸ್ಯಾಲರಿ ಆಗಿಲ್ಲ, ನಿಮ್ಮ ಅಳಿಯನ್ನೇ ಕೇಳು ಒಂದು ವಾರ ಬಿಟ್ಟು ಕೊಡ್ತೀನಿ’ ಅಂದ.
ಊಟ ರೂಂನ ಜೊತೆಗೆ ಆ ಟೀಚರ್ ಸಾಲಾನೂ ಕೊಟ್ಟ. ನಂಗೆ ಕೆಲಸ ಹೆಂಗೆ ಅಂತಾನೂ ಗೊತ್ತಿರಲಿಲ್ಲ. ಮೂರನೇ ದಿನಕ್ಕೆ ಕೋರಮಂಗಲದಲ್ಲಿನ ಯಾವುದೋ ಒಂದು ಕಂಪನಿಯ ಗೇಟ್ ಮುಂದೆ ನನ್ನ ನಿಲ್ಲಿಸಿ ಕೈಗೆ ಪಾಂಪ್ಲೆಟ್ ಕೊಟ್ಟಾಗಲೇ ಮನಸ್ಸು ಕಣ್ಣೀರಿಟ್ಟಿತ್ತು. ಒಂದು ಹದಿನೈದು ದಿನ ಪೇಚಾಡೋಣ. ಒಂದು ದಿಂಗಳ ಪಗಾರ ತಗೊಂಡು ಬಿಟ್ಟುಬಿಡೋಣ ಅಂತ ನನ್ನ ತಮ್ಮಂಗೆ ಪುಸಲಾಯಿಸಿ ಹದಿನೈದು ದಿನ ಹೆಣಗಿದೆ. ಬೆಳಗ್ಗೆ ಆರಕ್ಕೆ ದೊಮ್ಮಸಂದ್ರ ಬಿಡೋದು ರಾತ್ರಿ ಏಳಕ್ಕೆ ಕೋರಮಂಗಲ ಬಿಡೋದು. ಈ ಹದಿನೈದು ದಿನಗಳ ಪಾಸ್ ಗೆ ಊಟಕ್ಕೆ ಅಂತ ಮತ್ತೂ ಮೂರು ಸಾವಿರ ಸಾಲ ಪಡೆದೆ. ಕೊಟ್ಟೋನೂ ನನ್ನ ಅಳಿಯನೇ. ಅಂದು ದಿಢೀರ್ ನನ್ನ ತಮ್ಮಂಗೆ ಏನಾಯ್ತೋ ಏನೋ ? ‘ಅಣ್ಣಾ ನಾ ಊರಿಗೆ ಹೊಕ್ಕೀನಿ ನಂಗೆ ಬಸ್ ಚಾರ್ಜ್ ಕೊಟ್ಟುಬಿಡು. ನೀನು ಮೀಡಿಯಾಕ್ಕೆ ಸೇರ್ತೀಯಲ್ಲಾ ? ಅವಾಗ ಬರ್ತೀನಿ. ನನ್ನ ಐಟಿಐ ಮಾರ್ಕ್ಸ್ ಕಾರ್ಡೂ ತರ್ತೀನಿ. ಯಾವುದಾದ್ರೂ ಫ್ಯಾಕ್ಟ್ರೀಲಿ ಕೆಲ್ಸ ನೋಡಿಕೊಂಡು ಹೋಗ್ತಿನಿ’ ಅಂತ ಬೆಳಂಬೆಳಗ್ಗೆ ವತಾರ ತೆಗೆದ.
ತುಂಬಾನೇ ರೇಗಿಬಿಟ್ಟೆ ನಾನವತ್ತು. ‘ಹಾಳಾಗಿ ಹೋಗ್ಲಿ ಈ ಕೆಲ್ಸಾನೇ ಬೇಡ. ಸಂಬಳಾನೂ ಬೇಡ. ಬೇರೆ ಕೆಲ್ಸ ನೋಡೋಣ ಇಲ್ಲೇ ಇರು’ ಅಂದೆ. ಅವನ ಸ್ನೇಹಿತರಾರೋ ವೈಟ್ ಫೀಲ್ಡ್ ನ ಕಾಲ್ ಸೆಂಟರ್ ನಲ್ಲಿ ಇಂಟ್ರ್ಯೂ ಹೋಗಿದಾರೆ. ನಾವೂ ಟ್ರೈ ಮಾಡೋಣ ಅಂದ. ನಾನು ನೇರ ಎಂಟಿಎಸ್ ಟ್ರೈನಿಯಾದೆ. ಅವನಿಗೆ ರಿಲಾಯನ್ಸ್ ಬ್ಯಾಚ್ ಗೆ ಹಾಕಿದ್ರು. ನಾಲ್ಕನೇ ದಿನದ ಟ್ರೈನಿಂಗ್ ಮುಗಿಸಿ ಬರೋವಾಗ ಮತ್ತೆ ‘ನಂಗೆ ಬಸ್ ಚಾರ್ಜ ಕೊಡಣ್ಣಾ, ದೇವರಾಣೆ ನಾನು ನಾಳೆ ಊರಿಗೆ ಹೋಗ್ತಿನಿ.ಟ್ರೈನಿಂಗ್ನಲ್ಲಿ ಮಾತಾಡೋ ಇಂಗ್ಲಿಷ್ ನಂಗೆ ಅರ್ಥ ಆಗ್ತಿಲ್ಲ. ಇವ್ರು ಒಂದು ತಿಂಗಳು ಟ್ರೈನಿಂಗ್ ಕೊಟ್ಟಾದಮೇಲೆ ಸೆಲೆಕ್ಟೋ, ರಿಜೆಕ್ಟೋ ಹೇಳ್ತಾರಂತೆ. ರಿಜೆಕ್ಟ್ ಆದ್ರೆ ಸಂಬಳೂನೂ ಇಲ್ಲ, ಏನೂ ಇಲ್ಲ.ನಾನು ರಿಜೆಕ್ಟ್ ಆಗಿ ಮತ್ತೆ ನಿಂಗ್ಯಾಕೆ ಪ್ರಾಬ್ಲಮ್ಮು ? ಸುಮ್ಮನೆ ನಾನು ಊರಿಗೆ ಹೋಗ್ತೀನಿ’ ಅಂತ ರಾತ್ರಿ ಊಟ ಬಿಟ್ಟು ಕುಳಿತ. ಹಾಳಾಗಿ ಹೋಗಲಿ ಅಂತ ಮತ್ತೆ ದುಡ್ಡು ಕೊಟ್ಟು ಊರಿಗೆ ದಬ್ಬಿದೆ. ಆಮೇಲೆ ಮೂರು ತಿಂಗಳು ನಾನು ಎಂಟಿಎಸ್ ಕಸ್ಟಮರ್ ಕೇರ್ ಆಗಿ ಧ್ವನಿಗೂಡಿಸಿದೆ.
ಚೂರು ಉಸಿರಾಡುವಂತಾದೆನಾ? ಕೇಳಿಕೊಳ್ಳುವಷ್ಟರಲ್ಲಿ ಎಂಟಿಎಸ್ ವೈಟ್ ಫೀಲ್ಡ್ ನಿಂದ ಬೊಮ್ಮನಳ್ಳಿಗೆ ಶಿಪ್ಟಾಯ್ತು. ನೀವು ಹೋಗೋರು ಅಲ್ಲಿಗೆ ಹೋಗಬಹುದು ಅಂತ ಅಧಿಕಾರಿಗಳು ಹೇಳಿದ್ರು. ದೊಮ್ಮಸಂದ್ರದಿಂದ ತುಂಬಾ ದೂರವಾಗುತ್ತೆ, ಬೇರೆಕಡೆ ಟ್ರೈ ಮಾಡೋಣ ಅಂತ. ಕೋರಮಂಗಲದಲ್ಲಿರೋ ಕಾಲ್ ಸೆಂಟರ್ ಗೆ ಕಾಲಿಟ್ಟೆ. ಅಷ್ಡರಲ್ಲಿ ನನ್ನ ಈ ನಾಯಿಪಾಡನ್ನು ಗಮನಿಸಿದ್ದ ನಮ್ಮ ರೂಂನ ಓನರ್ರು, ಮುತ್ತಾನಲ್ಲೂರು ಕ್ರಾಸ್ ನಲ್ಲಿರೋ ತಮ್ಮ ಮಗನ ಬೋರ್ವೆಲ್ ಷಾಪಲ್ಲಿ ಡೇಟಾ ಎಂಟ್ರಿ ಮಾಡ್ಕೊಂಡಿರು. ಊಟ ರೂಂ ಕೊಟ್ಟು 5000 ಕೊಡಿಸ್ತೀನಿ ಅಂತ ನಾನು ವಲ್ಲೆ ಅಂದ್ರೂ ಅಂಗಡಿಗೆ ದಬ್ಬಿಬಿಟ್ರು. ನಾನಗ ಆ ಕೆಲಸವನ್ನು ಒಪ್ಪಿಕೊಳ್ಳೋಕೆ ಮತ್ತೊಂದು ಕಾರಣವೇನಿತ್ತೆಂದರೆ ಆ ಅಂಗಡಿಯ ಬೋರ್ ವೆಲ್ ನಲ್ಲಿ ನಮ್ಮೂರಿನ 23 ಜನ ಕಾರ್ಮಿಕರಿದ್ದರು. ಮೊದಲು ನನ್ನನ್ನು ಅಲ್ಲಿ ನೋಡಿದಾಗ ಎಲ್ಲರಿಗೂ ಅಚ್ಚರಿ. ಅವತ್ತೊಂದು ರಾತ್ರಿ ಎಲ್ಲರೂ ನನ್ನ ಸುತ್ತೂ ಕುಳಿತು ‘ಸುಳ್ಳು ಹೇಳಬ್ಯಾಡ ಸಿವಪ್ಪಾ. ನಿಂಮನ್ಯಾಗ ನಿನಿಗೇನೈತಿ ತೊಂದ್ರಿ ? ಚೊಲೋ ಓದಿಕಂಡೀದಿ. ಅಲ್ಲೇ ಹಡಗಲ್ಯಾಗ ಪೇಪರ್ ಬರೀತಿದ್ಯಲ್ಲ. ಅದನ್ನಾ ಬರಕೊಂಡು ಹೋಗು. ನಿನಿಗ್ಯ ರ್ವಕ್ಕ ಬೇಕಾರ, ನಾವು ಎಲ್ಲರೂ ಪಟ್ಟಿ ಹಾಕಿ ಕೊಡ್ತೀವಿ. ಇಲ್ಲಾಂದ್ರ ಯಾವಕ್ಕೀನರಾ ಎತ್ತಾಕ್ಯಂದು ಬಂದಿಯೇನು ? ದೇವರಮ್ಯಾಲ ಆಣಿ ಮಾಡೇಳು’. ಅಂತ ಮಧ್ಯರಾತ್ರಿವರೆಗೂ ತಲೆ ತಿಂದ್ರು. ಅವರಿಗೆ ನನ್ನ ಟಾರ್ಗೆಟ್ ಅರ್ಥವಾಗಲೇ ಇಲ್ಲ. ಮತ್ತೂ ಮೂರು ತಿಂಗಳು ಅಲ್ಲೇ ಹೆಣಗಿದೆ. ಆ ಸುದ್ದಿಯನ್ನು ಮಾತ್ರ ಮನೆಗೆ ತಲುಪದಂತೆ ಎಚ್ಚರ ವಹಿಸಿದ್ದೆ.
ಬಿತ್ತಿದ ಬೀಜ ಮೊಳಕೆಯಾಗಲೇಬೇಕು ಅಲ್ವಾ ? ಕೊನೆಗೊಂದು ದಿನ ಮನೆಗೆ ಸುದ್ದಿ ಗೊತ್ತಾಯ್ತು. ‘ನೀನಾಗಿಯೇ ಊರಿಗೆ ಬರ್ತಿಯೋ, ಇಲ್ಲಾ ನಾನೇ ಬೆಂಗಳೂರಗೆ ಬಂದು ನಿನ್ನ ಕರ್ಕೊಂಬರ್ಬೇಕೋ’ ಅಂತ ನೊಂದುಕೊಂಡು ಪೋನ್ ನಲ್ಲಿ ಕೇಳಿದ್ದ ಅಪ್ಪಂಗೆ ಅಂದು ನಾನು ಹೇಳಿದ್ದು, ‘ಅಪ್ಪಾ, ನಾನು ಅಂದ್ಕೊಂಡ ಕೆಲ್ಸಕ್ಕೇ ಹೋಗ್ತಿನಿ ಸ್ವಲ್ಪ ಟೈಂ ಕೊಡು ನನ್ನ ಮೇಲೆ ನಂಗಿನ್ನೂ ನಂಬಿಕೆ ಐತೆ’ ಸುಮ್ಮನಾಗಿದ್ದ ಅಪ್ಪ.
ಆ ಅಂಗಡಿಯಲ್ಲಿ ವೆಂಕಟೇಶ್ ಅನ್ನೋ ಮ್ಯಾನೇಜರ್ ಇದಾರೆ. ನನ್ನ ವದ್ದಾಟ ಗಮನಿಸುತ್ತಲೇ ಅದೊಂದು ದಿನ. ‘ರೀ, ನಂಗೊಬ್ರು ಲೋಕಲ್ ಪೇಪರ್ ನೋರು ಪರಿಚಯ ಇದಾರೆ, ಇಷ್ಟರಲ್ಲೇ ನಂ ಅಂಗಡಿಗೆ ಬರ್ತಾರೆ. ಅವಾಗ ನಿಮ್ಮ ಕೆಲಸಕ್ಕೆ ಸಂಬಂಧಿಸಿದ್ದನ್ನ ಡಿಕ್ಲರ್ ಮಾಡ್ಕೋರೀ’ ಅಂತೇಳಿದ ವಾರವೇ ನಮ್ಮ ಅಂಗಡಿಗೆ ಬಂದದ್ದು, ಆನೆಕಲ್ ತಾಲೂಕಿನಲ್ಲಿಯ ‘ಕ್ರಾಂತಿ ದೃವ’ ವಾರ ಪತ್ರಿಕೆಯ ಸಂಪಾದಕ ಮಾದೇವಣ್ಣ. ವಿಷ್ಯ ಏನಂದ್ರೆ, ‘ಗಂಗಾಕಲ್ಯಾಣ ಯೋಜನೆಯಡಿ’ ಅವರ ಹೊಲಕ್ಕೊಂದು ಪಾಯಿಂಟ್ ಲೀಸ್ಟಲ್ಲಿತ್ತು. ಅದರ ವಿಚಾರಣೆಗೆ ಬಂದೋರಿಗೆ ನಾನು ಪರಿಚಯವಾದೆ.
ಪ್ರತಿ ರಾತ್ರಿ ಮಲಗೋಕ್ಕೂ ಮುಂಚೆ ಏನಾದ್ರೂ ಒಂದು ಪೇಜ್ ಬರಿಯೋ ಹುಚ್ಚಿರೋ ನಾನು ಗೀಚಿದ್ದೆಲ್ಲವನ್ನೂ ನನ್ನ ರೆಸ್ಯೂಮನ್ನೂ ಅವರೆದಿರುಗಿಟ್ಟೆ. ಅವರು ಆಗ ಫೋನ್ ಮಾಡಿದ್ದು, ‘ಸಂವಾದ’ ಸಂಸ್ಥೆಯ ಬದುಕು ಕಮ್ಯುನಿಟಿ ಕಾಲೇಜಿನ ಆರ್ಗನೇಜರ್ ಮುರುಳಿಮೋಹನ್ ಕಾಟಿಯವರಿಗೆ. ಅವರು ನನ್ನನ್ನ ಶೇಷಾದ್ರಿಪುರಂನ ಆಫೀಸಲ್ಲಿ ಭೇಟಿ ಮಾಡಿ ನನ್ನ ಬರವಣಿಗೆಯನ್ನು ನೋಡಿ 6 ತಿಂಗಳ ಪತ್ರಿಕೋದ್ಯಮ ಡಿಪ್ಲೋಮಾ ಕೋರ್ಸ್ ಗೆ ಫ್ರೀಯಾಗಿ ಸೆಲೆಕ್ಟ್ ಮಾಡಿದ್ರು. ಹಾಗೆ ನಾನು ಸೆಲೆಕ್ಟ್ ಆಗಿದ್ದೂ ಜುಲೈ ಮೊದಲವಾರ. ಆಮೇಲೆ 6 ತಿಂಗಳ ಕೋರ್ಸ್ ಮುಗಿತಿದ್ದಂಗೆ ನೇರ ‘ಅವಧಿ’ ಗೆ. ಈ ಜುಲೈ ಏಳು ಅನ್ನೋ ಜುಲ್ಮಾನೆ ಕೇಳೋ ದಿನಾಂಕವಿದೆಯಲ್ಲಾ...! ಅದು ಮತ್ತೆ ಬಂದಿದೆ. ನಾಲ್ಕು ದಿನದ ಹಿಂದೆಯಷ್ಟೇ ನಾನು ‘ಅವಧಿ’ಯಿಂದ ಬೀಳ್ಗೊಂಡು ಈಗ ‘ಚಾಲುಕ್ಯ ಪ್ರಭ’ ಮಾಸಿಕದಲ್ಲಿದ್ದೇನೆ. ಒಂದು ದೊಡ್ಡ ಲಾಸ್ ನಿಂದ ಚೇತರಿಸಿಕೊಳ್ಳೋಕ್ಕೆ ಮತ್ತಷ್ಟು ಸಮಯ ನಂಗೆ ಕಂಡಿತಾ ಬೇಕಿದೆ. ಚೂರು ಬೇಜಾರಂತೂ ಮನೆಮಾಡಿದೆ...
No comments:
Post a Comment