ಮತ್ತೊಮ್ಮೆ
ಕಾಲ ಮಿಂಚಿ ಹೋಗಿತ್ತು
ಅವತ್ತು, ಮುಗಿಲಿಂದ ಭರಗುಟ್ಟಿ ಮಳೆ ಹೊಯ್ಯುತ್ತಿತ್ತು. ಗ್ರಾಮದ ಎಲ್ಲಾ ಮನೆಗಳ
ಮಾಳಿಗೆಗಳಿಂದ ನೀರು ಝರಿಗಳೋಪಾದಿ ಗಟಾರ ಸೇರಿ, ಆ ಗಟಾರದ ನೀರು ದೊಡ್ಡ ಗಟಾರಕ್ಕೆ ಸೇರಿ
ಚಿಕ್ಕ ನದಿಯೋಪಾದಿ ಊರಾಚೆಯ ಕಾಲುವೆಯಲ್ಲಿ ಮಿಳಿತಗೊಳ್ಳುತ್ತಿತ್ತು. ಆ ಕಾಲುವೆ ನೇರ
ಗ್ರಾಮದ ಅನತಿ ದೂರದಲ್ಲಿಯ ಹೊಳೆಯ ಒಡಲು ಸೇರುತ್ತಿತ್ತು. ಅಂದು ಬೀಳುತ್ತಿದ್ದುದು ಕೇವಲ
ಮಳೆಯಲ್ಲ. ಅದು ಆಲೆಕಲ್ಲ ಸುರಿಮಳೆ. ಮಳೆಯ ರಭಸದ ಜೊತೆಗೆ ಹುಚ್ಚುಗಾಳಿ ಎದ್ದು ಗ್ರಾಮದ
ಬೃಹತ್ ಮರಗಳನ್ನು ಬಳ್ಳಿಗಳಂತೆ ವಾಲಾಡಿಸತೊಡಗಿತ್ತು. ಮುಗಿಲ ತುಂಬಾ ಮಿಂಚ ಬಳ್ಳಿ
ಎಂಥಹವರ ಕಂಗಳನ್ನೂ ಕೋರೈಸಿದರೆ, ಮನೆಗಳ ಹೊರಗೆ ದುಂಡಗೆ ನಿಂತಿದ್ದ ಸಾಕು ಪ್ರಾಣಿಗಳು,
ಮನೆಯ ಒಳಗೂ ದುಂಡಗೆ ಕುಳಿತ ಗ್ರಾಮಸ್ಥರ ಎದೆ ಝೆಲ್ ಎನ್ನುವಂತೆ ಗುಡುಗಿನ ಧ್ವನಿ
ಸಿಡಿಯುತ್ತಿದ್ದರಿಂದ, ಗ್ರಾಮದ ಎಲ್ಲಾ ಮನೆಗಳ ಕಿಟಕಿ ಬಾಗಿಲುಗಳು ಮುಚ್ಚಿಕೊಂಡು ಇಡೀ
ಗ್ರಾಮ ಮನೆಗಳೇ ಅಘೋಷಿತ ನಿಷೇಧಾಜ್ಞೆಯನ್ನು ಅಸ್ತಿತ್ವಕ್ಕೆ ತಂದುಕೊಂಡಿದ್ದವು.
ಮನೆಯ
ಹೊರಗೆ ಸುರಿಯುತ್ತಿರುವುದು ಕೇವಲ ಮಳೆಯಲ್ಲದೆ ಅದು ಹೊನ್ನ ಮಳೆಯಾದರೂ ಸರಿಯೇ ಯಾವುದೇ
ಕಾರಣಕ್ಕೂ ಮನೆಗಳ ಬಾಗಿಲು ತೆರೆಯದಂಥಾ ಬಿಕೋ ಎನ್ನುವ ಪರಿಸ್ಥಿತಿಯಲ್ಲಿ ತುಂಬಾ
ದಿಟ್ಟತನದಿಂದ ಆ ಹಣ್ಣಣ್ಣು ಮುದುಕ ಕೇವಲ ಒಂದು ಪ್ಲಾಸ್ಟಿಕ್ ಚೀಲವನ್ನು ತಲೆಗೆ ಹೊದ್ದು,
ಮನೆಯ ಹೊಸ್ತಿಲ ಹೊರಗೆ ತನ್ನ ಊರುಗೋಲನ್ನು ಊರುತ್ತಾ ಬೀದಿಗಿಳಿದಿದ್ದ. ತೀರಾ
ಅರವತ್ತೆಂಟರ ಆಸುಪಾಸಿನ ಆ ವೃದ್ಧ ಹಾಗೆ ಮಳೆ, ಗಾಳಿ, ಸಿಡಿಲು, ಗುಡುಗು, ಯಾವುದಕ್ಕೂ
ಲೆಕ್ಕಿಸದೆ ಮನೆಯಿಂದ ಹೊರಬಿದ್ದಾಗ ಆ ಮುದುಕನ ಪುಟ್ಟ ಪುಟ್ಟ ಮೊಮ್ಮಕ್ಕಳಿಬ್ಬರು ತನ್ನ
ತಂದೆಯ ಬುಜವನ್ನು ಅಲ್ಲಾಡಿಸಿ, 'ಅಪ್ಪಾ, ತಾತ ಮಳಿಯೊಳಗಾ ಎಲ್ಲಿಗ್ಯಾ ವಂಟಾನ. ಪಾಪ!
ತಂಡಿ ಅಕೈತಿ ಒಳಾಕ ಕರೀಯಪ್ಪಾ' ಎಂದು ಮುಗ್ಧತೆಯಿಂದ ಹೇಳಿದಾಗ, 'ನಿಮ್ಮಜ್ಜಗ ಸೊಕ್ಕು
ಜಾಸ್ತಿ ಆಗೈತಿ, ಎಲ್ಲೆರ ಹೊತ್ಗಂಡು ಬಿದ್ರ ಗೊತ್ತಾಕೈತಿ ಸುಮ್ಮನಿರ್ರಲೇ, ಒಳಗಾ
ನಿಮ್ಮವ್ವ ಚಾ ಮಾಡ್ಯಾಳ ಸುಮ್ನ ಕುಡಿಯೋಗ್ರಿ' ಎಂದು ಮಕ್ಕಳಿಬ್ಬರನ್ನೂ ಅಡುಗೆ ಮನೆಯತ್ತ
ದಬ್ಬಿದ್ದ.
ಒಳಹೋದ ಮಕ್ಕಳು ಅವರ ಅವ್ವಳಿಗೆ 'ಅವ್ವಾ ತಾತ' ಎಂದು ಹೇಳುತ್ತಲೇ 'ಅಯ್ಯಾ
ಊರಾಗಿಲ್ಲದ ತಾತ ನಿಮಿಗೊಂದಾ ಇಲ್ಲ, ಸುಮ್ಮನ ಚಾ ಕುಡಿರಿ. ಅದಾ ಹುಚ್ಚು ಮಳಿ
ಹೊಡಿಯಾಕತೈತಿ ಮಾವಾ, ಯಾಕ ಹೊರಾಕ ಹೊಕ್ಕೀ? ಅಂತ ಕೇಳಿದ್ರ, ನಿನಿಗೇನು ಗೊತ್ತವ್ವಾ ?
ಸುಮ್ನಿರು. ಹಿಂಗ ಹೋಗಿ ಹಂಗ ಬಂದುಬುಡ್ತಿನಿ ಅಂತ ನನಿಗ್ಯೇ ಟಬುರು ಮಾತಾಡ್ತಾನ. ಇಂಥಾ
ಮಳಿಯಾಗ ಅದೆಲ್ಲಿಗೆ ಹಾಳಾಗಿ ಹೊಕ್ಕಾನೋ ಹೋಗ್ಲಿಬುಡು. ದಿನಾಲು ಮಾಡಿ ಹಾಕಿದ್ದು ತಿಂದೂ
ತಿಂದೂ ತಲಿಮ್ಯಾಗ ಎಲ್ಡು ಕೊಂಬು ಬಂದಾವು' ಅಂತೇಳಿ ಮತ್ತೊಂದು ಕಪ್ಪಿನಲ್ಲಿ ಬಿಸಿಬಿಸಿ
ಚಾ ಹಾಕ್ಕೊಂಡು ಬಂದು ಪಡಸಾಲಿಯಲ್ಲಿ ಕುಳಿತ ತನ್ನ ಗಂಡನಿಗೆ ಕೊಟ್ಟು ಒಳ ಹೋದಳು.
ಸುರಿಯುತ್ತಿದ್ದ ಮಳೆಯಲ್ಲಿ ಕೊಂಚವೂ ಬದಲಾವಣೆಯಿಲ್ಲ. ಅದೇ ಏರು ಲಯದಲ್ಲೇ ಭರಗುಟ್ಟುತ್ತಿದೆ. ಮುಗಿಲೆಂಬೋ ಮುಗಿಲು ಭೂಮಿಗೆ ನೀರ ರೂಪದಲ್ಲಿ ಅಪ್ಪಳಿಸುತ್ತಿದೆ. ಒಟ್ಟಾರೆ ಎಂಥಹ ಎಂಟೆದೆಯ ಬಂಟನೂ ಆಚೆ ಬರದ ಸಂದಿಗ್ಧತೆಯ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕೇವಲ ಒಂದೇ ಒಂದು ಪ್ಲಾಸ್ಟಿಕ್ ಚೀಲ ಹೊದ್ದು ಆಚೆ ಬಂದಿದ್ದ ಆ ವೃದ್ಧನ ಊರುಗೋಲು ಒಂದೊಂದೇ ಹೆಜ್ಜೆಯನ್ನು ಕಿತ್ತಿಕ್ಕುತ್ತಿತ್ತು. ಸುಳಿವ ಸುಳಿಗಾಳಿಗೆ ಮುದುಡಿದ ಚರ್ಮ ಜೋಲಾಡುತಿತ್ತು. ಊರುಗೋಲನ್ನು ಹಿಡಿದ ಬಲಗೈ ವಿಪರೀತ ನಡುಗುತ್ತಿತ್ತು. ತಲೆಯ ಮೇಲಿನ ಪ್ಲಾಸ್ಟಿಕ್ ಚೀಲವನ್ನು ತನ್ನ ಗದ್ದದ ಕೆಳಗೆ ದುಂಡಗೆ ಕಿವಿಗೆ ಗಾಳಿ ಸೋಕದ ಹಾಗೆ ಹಿಡಿದಿದ್ದ ಎಡಗೈ ತನ್ನ ಸತ್ವವನ್ನೇ ಕಳೆದುಕೊಂಡಿತ್ತು. ಒಮ್ಮೊಮ್ಮೆ ಸುಳಿಗಾಳಿಗೆ ಮಳೆ ಹನಿಗಳು ಸುಳಿಸುಳಿದು ಮುದುಡಿದ ಮುಖಕ್ಕೆರಗಿದಾಗ ಸೋತು ಹೋದ ಕಂಗಳು ಮುಚ್ಚಿಕೊಂಡು ಮತ್ತೆ ಒತ್ತಾಯಪೂರ್ವಕವಾಗಿ ತೆರೆಯುತ್ತಿದ್ದವು. ಇಡೀ ದೇಹ ಗಡಗಡನೆ ನಡುಗುತ್ತಾ ತಪ್ಪು ತಪ್ಪು ಹೆಜ್ಜೆಗಳನ್ನು ಹಾಕುತ್ತಲೇ ಆ ವೃದ್ಧ ಹಾಗೂ ಹೀಗೂ ನಡೆದುಬಂದು ನೇರ ಗ್ರಾಮದಾಚೆಯ ಹೊಳೆಯ ದಡದಲ್ಲಿನ ಒಂದು ಬೃಹತ್ ಮರದ ಚಾಟಿಗೆ ನಿಂತು ತನ್ನ ಹಣೆಯ ಮೇಲೆ ಕೈಯಿಟ್ಟು ಹೊಳೆಯ ರಭಸವನ್ನೊಮ್ಮೆ ನೋಡುತಿದ್ದಂತೆಯೇ, ಅಂಥಾ ಪರಿಸ್ಥಿತಿಯಲ್ಲೂ ಕಂಗಳಿಂದ ಬಿಸಿನೀರು ಕೆನ್ನೆ ಜಾರತೊಡಗಿದ್ದವು. ಹಾಗೆ ಸುರಿವ ಮಳೆಯಲ್ಲೂ ಛಲದಿಂದ ಹೊಳೆಯತ್ತಿರ ಅಳುತ್ತ ನಿಂತ ವೃದ್ಧನ ಹೆಸರು ಸೋಮಜ್ಜ.
'ಹಾಳಾದ ಮಳೆ, ಇವತ್ತು ಮುಳಾಮುಂಜಾನಿಲಿಂದನಾ ಚಾಲೂ ಆಗಿದ್ದು, ಮುರಸಂಜಿ ಆದ್ರೂ ಬಿಡದಂಗ ಹೊಡಿಯಾಕತೈತಿ. ಏನು, ಕೈಲಾಸದಾಗ ದೇವತಿಗುಳಿಗೆ ಜಗಳ ನಡದೈತೋ, ಮಗ್ಗಲದಾಗ ಕುಂತ್ಕಂಡಿರಾ ಪಾರ್ವತಿ, ಶಿವನ ತಲಿಮ್ಯಾಗಿರಾ ಗಂಗಿಗೆ ಏನರಾ ನೆವ ಇಟ್ಟು ಚುಚ್ಚು ಮಾತಾಡಿದ್ಲೋ ಏನೋ, ಗಂಗವ್ವಗ ಸಿಟ್ಟು ಹತ್ತಿ ಶಿವನ ತಲಿಲಿಂದ ಒಂದಾ ಉಸುರಿಗೇ ಭೂತಾಯಿ ತವರುಮನಿಗೆ ಓಡಿ ಬಂದಾಳೋ ಒಂದೂ ತಿಳಿವಲ್ದು. ಅಂತೂ ಗಂಗವ್ವ ಸಿಟ್ಟಾದ್ಲು ಅಂದ್ರ ಲೋಕಕ್ಕ ಏನಾ ಕಾದೈತಿ ಅಂತಾನಾ ಅರ್ಥ. ಈ ಮಾತು ಸುಳ್ಳು ಅನ್ನಾದಾಗಿದ್ರ ನನ್ನ ಬಾಳು ಯಾಕ ಹಿಂಗಾ ಮೂರಾಬಟ್ಟಿ ಅಕ್ಕಿತ್ತು ?' ಅಂತ ತನ್ನೊಳಗೆ ತಾನೇ ಏನೇನೋ ತೊದಲುತ್ತಲೇ ಸೋಮಜ್ಜ ತನ್ನ ಕಳೆದು ಹೋದ ಕಹಿ ನೆನಪಿನತ್ತ ಜಾರಿ ಹೋದ.
ಅದು ಹೆಂಚಿನ ದಿಟ್ಟೆ ಅನ್ನೋ ಸುಂದರ ಊರು. ಊರು ಅಂದ್ರ ತೀರಾ ಮಧ್ಯಮ ಗಾತ್ರದ್ದೂ ಅಲ್ಲದ ಕೇವಲ ನೂರನ್ನೊಂದು ಮನೆಗಳ ಪುಟ್ಟ ಹಳ್ಳಿ. ಅನ್ಯೋನ್ಯತೆ, ಭ್ರಾತೃತ್ವ, ಸಹಮತ ಜೀವನ ಅನ್ನೋದು ಅವುಗಳ ಹೆಸರೂ ಗೊತ್ತಿಲ್ಲದೆ ಗ್ರಾಮದ ಪ್ರತಿ ವ್ಯಕ್ತಿಗಳ ಉಚ್ವಾಸ ನಿಸ್ವಾಸಗಳಾಗಿದ್ದವು. ಕೃಷಿ, ಹೈನುಗಾರಿಕೆ, ಗ್ರಾಮಕ್ಕೆ ಹಬ್ಬದ ಸಡಗರವನ್ನು ನೀಡಿದ್ದವು. ದ್ವೇಷಾಸೂಯೆ, ಜಾತಿ, ಮತ ಧಮರ್ಾಂಧತೆ, ಯಾವುದೆಂದರೆ ಯಾವುದೂ ಇಲ್ಲದ ನಿಕ್ಷಲ್ಮಷ ಹಳ್ಳಿಯಲ್ಲಿ ಅಲ್ಲೊಂದು ಮನೆಯಿತ್ತು. ಆ ಮನೆಯಲ್ಲೊಂದು ಚೆಲುವಿತ್ತು. ಆ ಚೆಲುವಿನ ಹೆಸರು ರತ್ನಮ್ಮಳಾಗಿತ್ತು. ಗುಂಗುರು ಮುಂಗುರುಳಿನ, ಮೂಗುತಿ ಚೆಲುವಿನ, ಬುಗುಡಿ ಕಿವಿಗಳ, ನವಿಲು ಕತ್ತಿನ, ತೋಳ್ಬಂದಿ ಬೆಳ್ಳಿ ನಗುವಿನ, ಹುಣ್ಣಿಮೆ ಕಂಗಳ ಟೋಪು ಮುಸುಕು ಸೀರೆಯ ನೀರೆಗೆ ಸೋಮಜ್ಜ ಫಿದಾ ಆಗಿಬಿಟ್ಟಿದ್ದ. ಈಗಿನಂತೆ ಆಗ ಸಂಪರ್ಕಕ್ಕೆ ಏನೆಲ್ಲಾ ಸಾಧನಗಳಿರಲಿಲ್ಲ. ಆದರೂ ತನ್ನೊಲವನ್ನು ಮುತ್ತಿನಂತ ರತ್ನಳೆದಿರು ಹೇಳುವುದಾದರೂ ಹೇಗೆ? ತಲೆಕೆಟ್ಟು ಕೊನೆಗೊಂದು ದಿನ ಪಕ್ಕದ ಮನೆಯ ಮುದುಕಿಯೊಬ್ಬಾಕೆಗೆ ತಾಂಬೂಲ ಕೊಡಿಸಿ ವಿಷಯದ ಗಂಭೀರತೆಯನ್ನು ತೋಡಿಕೊಂಡಾಗ ಮುದುಕಿ ತಲೆತುಂಬ ಹೊದ್ದ ಸೆರಗಿನ ಚುಂಗನ್ನು ತನ್ನ ತಾಂಬೂಲ ತುಂಬಿದ ಬೊಚ್ಚು ಬಾಯಿಗೆ ಅಡ್ಡ ಇಟ್ಟು ಮುಸಿ ಮುಸಿ ನಕ್ಕು,
ಸೋಮವಾರ ಸಂತೀಗೆ ಸುಕುಮಾರ ತಾ ಹೋಗಿ
ಸುಳುದು ಸೋತಾನೋ ಜಗಜಟ್ಟಿ ಹುರಿಯಾಳು
ಯಾವ ಮೋಡಿ ಮಾಡಿಯೇ ರತ್ನಿ ನಿನ್ನ ನಡು ಮುರಿಯಾ...
ಅಂತೇಳಿ ಒಂದು ಜನಪದದಲ್ಲೇ ತನ್ನ ಖುಷಿಯನ್ನು ತೋಡಿಕೊಂಡು ಸಮಯ ನೋಡಿ ವಿಷಯವನ್ನು ರತ್ನಳ ಹೆತ್ತವರಿಗೆ ತಿಳಿಸಿದಾಗ ಅವರೂ ಮದ್ವೆ ಮಾಡಿಕೊಡಲು ಒಪ್ಪಿದ್ದರು. ಅದೊಂದು ದಿನ ಆ ಘಾಟಿ ಮುದುಕಿಯ ಮನೆಯ ಅಂಗಳದಲ್ಲಿ ನಿಂತಿದ್ದ ರತ್ನಳನ್ನು ನೋಡಿದ ಸೋಮಜ್ಜ ಏನೋ ನೆಪದಲ್ಲಿ ಅಲ್ಲಿಗೆ ಹೋಗಿ ಪ್ರೀತಿಯಿಂದ ರತ್ನಳನ್ನು ಮಾತಿಗೆಳೆದು ತಮ್ಮ ಮದುವೆಗೆ ನಿನ್ನ ಒಪ್ಪಿಗೆ ಇದಿಯಾ ? ಎಂಬುದನ್ನು ಕೇಳಿದಾಗ 'ನೀನು ಈಟೆಲ್ಲಾ ರಂಪಾಟ ಮಾಡಬೇಕಿದ್ದಿಲ್ಲ. ಒಂದು ಮಾತು ನನ್ನಾ ಕೇಳಿದ್ರ, ನಿನ್ನ ಜೊತಿಯಾಕ್ಕಿದ್ಯ' ಅಂದದ್ದು ಈಗಲೂ ಅಜ್ಜನಿಗೆ ನೆನಪೈತಿ. ಆಮೇಲೆ ಮದ್ವೆಯಾಗಿ ಮಕ್ಕಳಾಗಿ ಜೀವನ ಮತ್ತೊಂದು ಮಗ್ಗುಲು ತಿರುವುತ್ತಲೇ ಅಂದು ಆ ವ್ಯಕ್ತಿ ಊರೊಳಗೆ ಕಾಲಿಟ್ಟಿದ್ದ. ಗ್ರಾಮದ ಎಲ್ಲರನ್ನೂ ಹನ್ಮಪ್ಪನ ಗುಡಿಯೊಳಗೆ ಸೇರಿಸಿ, ಆದಷ್ಟು ಬೇಗ ಊರನು ಬೆಟ್ಟದಾಚೆಗೆ ವಗರ್ಾಯಿಸಲು ಕೋರಿಕೊಂಡಿದ್ದ. ಇನ್ನೆರೆಡು ವರ್ಸದೊಳಗೆ ಈಗ ಇರುವ ಊರೆಲ್ಲಾ ನೀರಲ್ಲಿ ಹೇಳ ಹೆಸರಿಲ್ಲದೆ ಅಳಿದು ಹೋಗುತ್ತೆ ಅಂತ ಭವಿಷ್ಯ ನುಡಿದಿದ್ದ. ಅವನು ಯಾವಾಗಲೂ ಹೊಳೆಯೊಟ್ಟಿಗೇ ಕಾಲ ಕಳೆಯುತ್ತಿದ್ದ ವೃದ್ಧ ಮೀನುಗಾರನಾಗಿದ್ದ.
ವಿಚಿತ್ರ ಅಂದ್ರೆ, ಗ್ರಾಮದ ಯಾರೊಬ್ಬರೂ ಆ ಮುದುಕನ ಮಾತಿಗೆ ಬೆಲೆ ಕೊಡಲೇ ಇಲ್ಲ. ಆದರೆ ಸೋಮಜ್ಜ ಸುಮ್ಮನಿರಲಿಲ್ಲ. ಅವನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡು ತನ್ನ ರತ್ನಳಿಗೆ ಹೇಳಿ ಹಗಲೂ ಇರುಳೂ ಸೇರಿ ಒಂದು ಕಟ್ಟಿಗೆಯ ತೂಗು ಸೇತುವೆ ನಿಮರ್ಾಣಕ್ಕೆ ಚಾಲನೆ ನೀಡಿದ್ದ. ಮೊದಲು ಸೋಮಜ್ಜನ ಈ ಕೃತ್ಯಕ್ಕೆ ಗ್ರಾಮದ ಎಲ್ಲರೂ ಲೇವಡಿ ಮಾಡಿದರು. 'ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸೋದು ನಿನ್ನಂಥೋರಲೇ ಸೋಮಾ' ಎಂದು ನಗಾಡಿದ್ದರು. ಅದಾವುದೂ ಸೋಮಜ್ಜನಿಗೆ ಬೇಕಿರಲಿಲ್ಲ. ತನ್ನ ಕೆಲಸದಲ್ಲಿ ತಾ ತಲ್ಲೀನನಾಗಿದ್ದ. ಮುದ್ದು ಮಡದಿ ಜೊತೆಗಿದ್ದಳು. ಅಜ್ಜನ ಕೆಲಸಕ್ಕೆ ಹೆಗಲು ಕೊಟ್ಟಿದ್ದಳು. ಮಧ್ಯಮ ಗುಣಮಟ್ಟದ ತೂಗು ಸೇತುವೆ ಪೂರ್ಣಗೊಳ್ಳಲು ಒಂದುವರೆವರ್ಷ ಬೇಕಾಯಿತು. ಆ ವರ್ಷ ಸೋಮಜ್ಜನ ಹೊಲಗಳಲ್ಲಿ ಬೆಳೆಗಳು ಕಡಿಮೆ ಫಸಲು ನೀಡಿತ್ತು. ಬೆಳೆಗಳ ಯೋಗಕ್ಷೇಮ ನೋಡಿಕೊಳ್ಳಲು ದಂಪತಿಗಳಿಗೆ ಸಮಯ ಸಿಕ್ಕಿರಲಿಲ್ಲ. ಅವರ ಚಿತ್ತದ ತುಂಬಾ ಕೇವಲ ಸೇತುವೆ ತುಂಬಿತ್ತು.
ಹೊಲಕ್ಕೆ ಬೀಜ ಸುರಿದು
ಬಂದದ್ದಷ್ಟೇ, ಸಿಕ್ಕಷ್ಟೇ ಸಿಗಲೆಂದು ಸೀದಾ ಕೋಯ್ಲಿಗೆ ಹೋಗಿ ಹೊಲದಲ್ಲಿ ನಿಂತಿದ್ದ.
ಅಂತೂ ಒಕ್ಕಲುತನವೂ ಮುಗಿದು ಕಾಳು ಮನೆಸೇರಿದ್ದವು. ಅದೇ ತಿಂಗಳು ಭವಿಷ್ಯ ನುಡಿದಿದ್ದ
ಮೀನುಗಾರ ಮುದುಕ, ಹೊಳೆಯ ಬಳಿ ಸೋಮಜ್ಜನನ್ನು ಕರೆಸಿಕೊಂಡು, ನೀನು ಭವಿಷ್ಯದ ಒಂದು
ಊರನ್ನೇ ಕಾಪಾಡಿದ್ದೀಯಾ. ಮುಂದಿನ ಮುಂಗಾರಿಗೆ ನಾ ಹೇಳಿದ ಅವಘಡ ಗ್ಯಾರೆಂಟಿ, ಆಗ ನೀನು
ಎಚ್ಚರಿಕೆಯಿಂದಿದ್ದು, ಮೊದಲು ಗ್ರಾಮದ ಎಲ್ಲಾ ವೃದ್ಧರು, ಹಸುಳೆಗಳನ್ನು ಆಚೆಯ
ಬೆಟ್ಟಕ್ಕೆ ಕಳಿಸು, ನಂತರ ಸಾಕು ಸಂಕುಲ ಹೋಗಲಿ, ಆಮೇಲೆ ಹರೆಯದವರ ತಾಕತ್ತು ತಿಳಿಯಲಿ,
ನಿನ್ನ ಪುಣ್ಯ ಕಾರ್ಯ ನಿನ್ನ ಕೈ ಹಿಡಿಯುತ್ತೆ, ಅಂತೇಳಿ ಮೀನುಗಾರ ಉಸಿರು ಚೆಲ್ಲಿದ್ದ.
ಅದಾದ ಮೇಲೆ ಸೋಮಜ್ಜ, ಎಚ್ಚರವಾಗಿಬಿಟ್ಟಿದ್ದ, ಗ್ರಾಮದ ಎಲ್ಲಾ ಮಕ್ಕಳನ್ನು ಊರಾಚೆ ಹೋಗದಂತೆ ನೋಡಿಕೊಳ್ಳುತ್ತಿದ್ದ, ಕೊನೆಗೂ ಬಂತು ಮುಂಗಾರು. ಡೆಪನೆಟ್ಲಿ ಆ ಮೀನುಗಾರನ ಮಾತು ಸುಳ್ಳಾಗಲಿಲ್ಲ. ಹುಚ್ಚೆದ್ದು ಊರೆಡೆಗೆ ಮುಗಿಲೆತ್ತರ ತೆರೆಗಳೋಪಾದಿ ಬರುವ ಹೊಳೆಯನ್ನು ಕಂಡು ಇಡೀ ಗ್ರಾಮಸ್ಥರಿಗೆ ತಮ್ಮ ಉದಾಸೀನದ ಕುರಿತು ಪಾಪ ಪ್ರಜ್ಞೆ ಕಾಡಿತ್ತು. ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಅದಾಗಲೇ ಸಮಯ ಮಿಂಚಿತ್ತು. ಸೋಮಜ್ಜನನ್ನು ಆಗ ನೆನೆಯದವರೇ ಇಲ್ಲ. ತಕ್ಷಣ ಗ್ರಾಮದ ಎಲ್ಲರೂ ಸೋಮಜ್ಜನ ಮುಂದಾಳತ್ವದಲ್ಲಿ ಒಂದೆಡೆ ಸೇರಿ ಮೊದಲು ಎಲ್ಲಾ ಹಸುಳೆಗಳೊಟ್ಟಿಗೆ ವೃದ್ಧರನ್ನು ಸೇತುವೆ ಹತ್ತಿಸಿ, ಸೋಮಜ್ಜನೇ ಆಚೆಯ ಬೆಟ್ಟಕ್ಕೆ ಬಿಟ್ಟು ಬಂದ ಹೊಳೆ ಊರತ್ತ ಧಾವಿಸುತ್ತಲೇ ಇತ್ತು, ಕೊಂಚ ಎತ್ತರದ ಪ್ರದೇಶದಲ್ಲಿದ್ದ ಸೇತುವೆಯ ಬಳಿ ಇದ್ದವರಿಗೆ ಮೆಲ್ಲನೆ ಭಯ ಶುರುವಾಗಿತ್ತು. ಆಗ ಗ್ರಾಮದ ಎಲ್ಲಾ ಸಾಕು ಸಂಕುಲಗಳೂ ಹೊಳೆದಾಟಿದವು. ಕೊನೆಯದಾಗಿ ಯೂತ್ ಜನರೇಷನ್ ಸೇತುವೆ ದಾಟುವಾಗ ಭಾರ ಹೆಚ್ಚಾಗಿ ಸೇತುವೆ ಹಳ್ಳಿಯ ಪ್ರಾರಂಭದ ತುದಿಯಲ್ಲಿ ಕಳಚಿ ಬಿತ್ತು. ಆ ಕ್ಷಣದಲ್ಲಿ ಗ್ರಾಮದ ಯೂತ್ ಟೀಂನ ಮುಂದೆ ಸೋಮಜ್ಜನಿದ್ದ, ಗುಂಪಿನ ಕೊನೆಯ ತುದಿಯಲ್ಲಿ ಎಲ್ಲರಿಗೂ ಧೈರ್ಯತುಂಬುತ್ತಾ ರತ್ನಮ್ಮ ನಡೆಯುತ್ತಿದ್ದಳು. ಸೇತುವೆ ಕಳಚಿದ್ದರಿಂದ ಅರ್ಧದಷ್ಟು ಜನ ಹೊಳೆಯಲ್ಲಿ ಕೊಚ್ಚಿ ಹೋದರು. ಅದರಲ್ಲಿ ರತ್ನಮ್ಮಳೂ ಸೇರಿದ್ದಳು.
ಸೋಮಜ್ಜನ ಸಹಿತ ಅರ್ಧಜನತೆ ನಿರುವಿಲ್ಲದೆ ಬೆಟ್ಟದಾಚೆ ಹೋದರು ಹೊಸ
ಗ್ರಾಮವನ್ನು ಕಟ್ಟಿಕೊಂಡು 'ರತ್ನಾಪುರ' ಎಂದು ಹೆಸರಿಟ್ಟುಕೊಂಡು ಹೊಸ ಸಮಾಜ
ಚಿಗುರತೊಡಗಿತು. ಈ ಘಟನೆ ನಡೆದು ಇಂದಿಗೆ ಐವತ್ತು ವರ್ಷಗಳಾಗಿದ್ದವು. ಆ ಹಳೆಯ ನೆನಪುಗಳು
ಸೋಮಜ್ಜನನ್ನು ಹಿಡಿದು ಇಂಥಾ ಭೋರ್ಗರೆವ ಮಳೆಯಲ್ಲೂ ಹೊಳೆಯ ಬಳಿ ನಿಲ್ಲಿಸಿದ್ದವು.
ಇಷ್ಟನ್ನೂ ತನ್ನ ಪ್ರೀತಿಯ ರತ್ನಾಳನ್ನು ನೆನೆಯುತ್ತಾ ವಾಸ್ತವಿಕಕ್ಕೆ ಬಂದ ಸೋಮಜ್ಜನ ದೇಹ
ಆ ಥಂಡಿ ಪರಿಸಕ್ಕೆ ಹೊಗ್ಗದೆ ಪ್ರಾಣ ಕೈ ಕೊಡುವ ಹಂತಕ್ಕೇರಿತು. ಇದ್ದಕ್ಕಿದ್ದಂತೆ
ಉಸಿರಾಟದ ತೊಂದರೆ ಕಾಣಿಸಿಕೊಂಡಿತು ತಾತನಿಗೆ. ತಕ್ಷಣ ತನ್ನ ಸಾವನ್ನು ಅರಿತ ತಾತ ನೇರ
ಹುಚ್ಚೆದ್ದು ಕುಣಿಯುತ್ತಿದ್ದ ಆ ಹೊಳೆಯ ದಡಕ್ಕೆ ಹೋಗಿ ದೊಪ್ಪನೆ ಬಿದ್ದು ಇಹಲೋಕದಿಂದ
ಕಳೆದುಹೋದ.
ಅಂದು ರಾತ್ರಿ ಕಳೆದು ಬೆಳಗಾಯಿತು. ಹೊಳೆಯ ದಡದಲ್ಲಿ ಸೋಮಜ್ಜನ ದೇಹ ಕಂಡು ಇಡೀ ಹಳ್ಳಿಗೆ ನೆನ್ನೆಯ ವಿಶೇಷತೆಯನ್ನು ಮರೆತು ಕುಳಿತದ್ದಕ್ಕೆ ಮರುಕವುಂಟಾಗಿತ್ತು. ಆದರೆ ಮತ್ತೊಮ್ಮೆ ಕಾಲ ಮಿಂಚಿ ಹೋಗಿತ್ತು
ಅಂದು ರಾತ್ರಿ ಕಳೆದು ಬೆಳಗಾಯಿತು. ಹೊಳೆಯ ದಡದಲ್ಲಿ ಸೋಮಜ್ಜನ ದೇಹ ಕಂಡು ಇಡೀ ಹಳ್ಳಿಗೆ ನೆನ್ನೆಯ ವಿಶೇಷತೆಯನ್ನು ಮರೆತು ಕುಳಿತದ್ದಕ್ಕೆ ಮರುಕವುಂಟಾಗಿತ್ತು. ಆದರೆ ಮತ್ತೊಮ್ಮೆ ಕಾಲ ಮಿಂಚಿ ಹೋಗಿತ್ತು



No comments:
Post a Comment